ಆದರ್ಶ ತಾಯಿ

ಆದರ್ಶ ತಾಯಿ

       "ತಾಯಿ ಮಕ್ಕಳಿಗೆ ಮೊದಲ ಗುರು, ತಾಯಿ ದೇವರು, ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು" ಇಂತಹ ಮಾತುಗಳನ್ನು ನಾನು ನೀವೆಲ್ಲರೂ ಕೇಳಿದ್ದೇವೆ. ತಾಯಿ ದೇವರು, ಮಕ್ಕಳ ಒಳಿತನ್ನೇ ಬಯಸುತ್ತಾಳೆ ಆದರೂ ಕೆಟ್ಟ ಮಕ್ಕಳು ಏಕಿರುತ್ತಾರೆ? ಈ ವಿಷಯ ನನ್ನ ತಲೆಗೆ ಹೊಕ್ಕಾಗ ನನಗನಿಸಿದ್ದನ್ನು ಬರೆದಿದ್ದೇನೆ. ತಾಯಿ ಆದರ್ಶಳಾಗಿದ್ದರೆ ಆಕೆಗೆ ಮೇಲಿನ ಬಿರುದುಗಳು ಒಪ್ಪುತ್ತವೆ. ಹಾಗಾದರೆ ಆದರ್ಶ ತಾಯಿ ಯಾರು?

       ಹೆಣ್ಣು ತಾಯಿಯಾಗುವ ಮುನ್ನ ಸ್ವತಹ ಸಂಸ್ಕಾರವಂತಳಾಗಿದ್ದು, ತಾಯಿತನದ ತಿಳುವಳಿಕೆ ಹೊಂದಿರಬೇಕು. ಮಗುವನ್ನು ಪಡೆಯಲು ಉತ್ಸುಕಳಾಗಿರಬೇಕು.ಮಗುವನ್ನು ಪಾಲನೆ ಪೋಷಣೆ ಮಾಡಲು ಸಮರ್ಥಳೂ ಆಗಿರಬೇಕು. ಉದಾಹರಣೆಗೆ ಕುತೂಹಲದಿಂದ ದೂರ್ವಾಸರ ಮಂತ್ರದ ಶಕ್ತಿಯನ್ನು ಪರೀಕ್ಷಿಸಿ ಪಡೆದ ಕರ್ಣನಿಗೆ ಕುಂತಿ ಪ್ರಾಮಾಣಿಕ ತಾಯಿಯಾಗಲಿಲ್ಲ, ನಂತರ ಬಯಸಿ ಪಡೆದ ಧರ್ಮರಾಯ, ಭೀಮ, ಅರ್ಜುನ ಮತ್ತು ಸಾಕು ಮಕ್ಕಳಾದ ನಕುಲ, ಸಹದೇವರಿಗೆ ಆದರ್ಶ ತಾಯಿಯಾದಳು. ಕುಂತಿಗಿಂತ ಮೊದಲು ತನಗೆ ಮಕ್ಕಳಾಗಬೇಕೆಂದು ಅಸೂಯೆಯಿಂದ ಗಾಂಧಾರಿಯು ಪಡೆದ ೧೦೧ ಮಕ್ಕಳು ಏನಾದರು? ಕಣ್ಣಿದ್ದೂ ಕುರುಡಳಾಗಿ, ಗಂಡನ ಪುತ್ರವಾತ್ಸಲ್ಯದ ಪೊರೆ ಕಳಚದೆ ನಂತರ ಎಲ್ಲ ಮಕ್ಕಳನ್ನು ಕಳೆದುಕೊಳ್ಳುವ ದೌರ್ಭಾಗ್ಯಕ್ಕೆ ಒಳಗಾದಳು.
ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬ ನಾಣ್ಣುಡಿಯಂತೆ ನಡೆಯುವ ತಾಯಿ ಆದರ್ಶ ತಾಯಿಯಾಗುತ್ತಾಳೆ. ಮಗು ಗರ್ಭದಲ್ಲಿರುವಾಗಲೇ ಸದಾ ಒಳ್ಳೆಯದನ್ನೇ ಚಿಂತಿಸುತ್ತಾ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದರೆ ಹುಟ್ಟುವ ಮಗು ತನ್ನಲ್ಲಿಯೂ ಆ ಗುಣಗಳನ್ನು ಅಳವಡಿಸಿಕೊಳ್ಳುತ್ತದೆ. ಮಗು ಜನಿಸಿದ ನಂತರವೂ ಅದನ್ನು ಪ್ರೀತಿಯಿಂದ ಎದೆ ಹಾಲು ಕುಡಿಸಿ ಬೆಳೆಸಬೇಕು. ಮಗು ಬೆಳೆದಂತೆ ಅದಕ್ಕೆ ಒಳ್ಳೆಯ ನಡೆ ನುಡಿಗಳನ್ನು ಕಲಿಸಬೇಕು.ಮಗುವಿಗೆ ಆದರ್ಶ ಪುರುಷರ ಕಥೆಗಳನ್ನು ಹೇಳಬೇಕು. ಮಗು ಸದಾ ತಾಯಿಯನ್ನು ಅನುಸರಿಸಲು ಇಚ್ಚಿಸುತ್ತದೆ. ತಾಯಿ ಮಾಡುವ ಕೆಲಸವನ್ನು ತಾನೂ ಮಾಡಬೇಕೆಂದು ಹಂಬಲಿಸುತ್ತದೆ. ಆಗ ಆ ಮಗುವಿಗೆ ಏನು ತಿಳಿಯುತ್ತದೆ ಎಂದು ತಾತ್ಸಾರ ಮಾಡದೆ ಅದನ್ನು ಕಲಿಸಬೇಕು.
ನಾವಂತೂ ಈರೀತಿ ಕಷ್ಟಪಡಬೇಕಾಯಿತು, ನಮ್ಮ ಮಕ್ಕಳು ಸುಖವಾಗಿರಲಿ ಎಂದು ಹಾರೈಸುವುದು ಸಾಮಾನ್ಯ. ಆದರೆ ಚಿಕ್ಕವಯಸ್ಸಿನಲ್ಲಿ ಸ್ವಲ್ಪವೂ ಕಷ್ಟಪಡದಿದ್ದರೆ ಮುಂದೆ ದೊಡ್ಡವರಾದಾಗ ಸ್ವಲ್ಪ ಕಷ್ಟಬಂದರೂ ಅದನ್ನು ಎದುರಿಸಲಾಗದೆ ಸುಖಕ್ಕಾಗಿ ಕೆಟ್ಟ ಹಾದಿಯನ್ನು ತುಳಿಯುವ ಸಾಧ್ಯತೆಗಳಿರುತ್ತವೆ. ಚಿಕ್ಕಂದಿನಿಂದಲೇ ಕಷ್ಟಗಳನ್ನು ಎದಿರಿಸುವುದನ್ನು ಕಲಿತಿದ್ದರೆ, ಮುಂದೆ ಎಂತಹ ಕಷ್ಟಗಳು ಬಂದರೂ ಎದುರಿಸುವ ಆತ್ಮವಿಶ್ವಾಸ ಹೊಂದಿರುತ್ತಾರೆ. ಇಂತಹ ಆತ್ಮವಿಶ್ವಾಸವನ್ನು ತುಂಬುವವಳೇ ಆದರ್ಶ ತಾಯಿಯಾಗುತ್ತಳೆ.
        ಮಕ್ಕಳು ಅನಾರೋಗ್ಯ ಪೀಡಿತರಾದಾಗ, ಅಂಗವಿಕಲರಾದಾಗ, ಬುದ್ಧಿಮಾಂದ್ಯರಾದಾಗ ತಾಯಿಯಾದವಳು ಆ ಮಕ್ಕಳನ್ನು ತಾತ್ಸಾರಮಾಡದೆ ಸಮಾಧಾನವಾಗಿ ಆರೈಕೆಮಾಡಬೇಕು. ತನ್ನ ಆಸೆ ಆಕಾಂಕ್ಷೆಗಳನ್ನು, ಸಮಯವನ್ನು ಆ ಮಗುವಿಗಾಗಿ ತ್ಯಾಗಮಾಡುವವಳೇ ಆದರ್ಶ ತಾಯಿಯಾಗುತ್ತಳೆ. ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳು ಬುದ್ದಿವಂತರಾಗಿ, ಉನ್ನತ ಹುದ್ದೆಗಳ್ಳನ್ನು ಪಡೆದು ಹೆಚ್ಚು ಹಣ ಸಂಪಾದಿಸಬೇಕು ಎಂದು ಬಯಸುವುದು ಸಹಜ ಆದರೆ ತನ್ನ ಮಗುವಿನ ಅಭಿಲಾಷೆ, ಸಾಮರ್ಥ್ಯಗಳಿಗೆ ವಿರುದ್ದವಾಗಿ ತನ್ನ ಆಸೆಗಳನ್ನು ಮಗುವಿನ ಮೇಲೆ ಹೇರುವುದು ಎಷ್ಟು ಸರಿ? ಉದಾಹರಣೆಗೆ ಮಗು ವೈದ್ಯನಾಗು, ಇಂಜಿನಿಯರ್ ಆಗು ಎಂದಾಗ ಮಗು ನಾನು ಡ್ರೈವರ್ ಆಗುತ್ತೇನೆ ಎಂದರೆ ಶ್ರೀಕೃಷ್ಣನಂತ ಸಾರಥಿಯಾಗು ಎಂದು ಹುರಿದುಂಬಿಸುವವಳೇ ಆದರ್ಶ ತಾಯಿಯಾಗುತ್ತಾಳೆ.
        ಉಪದೇಶಕ್ಕಿಂತ ಉದಾಹರಣೆ ಲೇಸು ಎಂಬ ಗಾದೆಯಂತೆ ತಾಯಿ ಬರೀ ಉಪದೇಶಮಾಡದೆ ತಾನೇ ಮಾದರಿಯಾಗಬೇಕು. ಉದಾಹರಣೆಗೆ ಮಕ್ಕಳಿಗೆ ಟಿ.ವಿ ನೋಡಬೇಡ, ಓದು ಎಂದು ಹೇಳುವ ಬದಲು ತಾನೂ ಟಿ.ವಿ ನೋಡದೆ ಓದಲು ಕುಳಿತರೆ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬಾರದಿರುವುದಿಲ್ಲ. ಮಗುವಿಗೆ ಪ್ರೌಢವಯಸ್ಸು ಬರುವವರೆಗೆ ತಾಯಿ ಮಕ್ಕಳ ಎಲ್ಲಾ ಬೇಕು ಬೇಡಗಳನ್ನೂ ನೊಡಿಕೊಳ್ಳುತ್ತಾ ಹೆಚ್ಚಿನ ಸಮಯ ಅವರೊಡನೇ ಕಳೆಯಬೇಕು. ಆಗ ತಾಯಿ ಮಕ್ಕಳ ಬಾಂಧವ್ಯ ವೃದ್ಧಿಯಾಗುತ್ತದೆ. ಮುಂದೆ ವಯಸ್ಸಾದ ತಾಯಿಯನ್ನು ಬೆಳೆದ ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದ್ದರಿಂದ ಆದರ್ಶ ತಾಯಿಯಾದವಳು ಬರೀ ಮಕ್ಕಳ ಹೊಟ್ಟೆ ತುಂಬಿಸುವುದನ್ನು ಮಾತ್ರ ಮಾಡದೆ ಅವರ ಮನಸ್ಸು, ಭಾವನೆಗಳನ್ನು ಅರಿತು ಅವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾಳೆ . ಆಗ ತಾಯಿ ದೇವತೆಯಾಗುತ್ತಾಳೆ. ಶಂಕರಾಚಾರ್ಯರು ಹೇಳಿದಂತೆ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲಾರಳು ಇದು ಪೂರ್ಣ ಸತ್ಯವೇ? ಎಂದು ಯೋಚಿಸಬೇಕಾದದ್ದೆ. ಕೆಟ್ಟ ತಾಯಿ ಇರಲಾರಳು ಆದರೆ ಅಜ್ಞಾನಿ ತಾಯಿ ಕೆಟ್ಟ ಮಕ್ಕಳ ಜನನಕ್ಕೆ ಮತ್ತು ಬೆಳವಣಿಗೆಗೆ ಕಾರಣವಾಗಬಲ್ಲಳು ಎನ್ನಬಹುದಲ್ಲವೇ?
Rating
Average: 4 (1 vote)

Comments