ಆಧುನಿಕತೆಯ ರೋಗಗಳು
'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ ಯಾಗಬೇಡವೇ? ಈಗಂತೂ 'ಅಹಂ ಪೋಷಣೆ' ಎನ್ನುವುದು ವ್ಯಾಪಾರೀಕರಣದ ಮೂಲಮಮಂತ್ರವೇ ಆಗಿರುವಾಗ, ಅದಕ್ಕೆ 'ಅಗತ್ಯವಾದ ಸರಕುಗಳೆಲ್ಲವೂ' ನಮ್ಮ ಮಾರುಕಟ್ಟೆಗಳಲ್ಲಿ, ಮಾಲು ಮಳಿಗೆಗಳಲ್ಲಿ ಕೈ ಗೆಟಕುವಂತಿರುವಾಗ, ನಾವೂ ಪ್ರಾಣಿಗಳೆಂಬುದು ನೆನಪಾಗುವುದಾದರೂ ಹೇಗೆ?
ನಾವಿಂದು ತಾಯಿ ಪೃಕೃತಿಯಿಂದ ಎಷ್ಟೊಂದು ವಿಮುಖರಾಗಿದ್ದೇವೆಂದರೆ, ನಮ್ಮ ಸುತ್ತುಮುತ್ತಲಿನ ನೈಸರ್ಗಿಕ ಆಗುಹೋಗುಗಳು ನಮ್ಮ ಅರಿವಿಗೆ ಬರುವುದೇ ಇಲ್ಲ, ನಮ್ಮ ಶರೀರವಂತೂ 'ನಾಗರಿಕತೆಯ ರೋಗಗಳ' ಗೂಡೇ ಆಗಿ ಬಿಟ್ಟಿದೆ. ಆದರೆ ನಾವೇನೂ ಹೆದರಬೇಕಾಗಿಲ್ಲ, 'ಜಾಗತಿಕ ಮಾರುಕಟ್ಟೆಯಲ್ಲಿ' ಈ ಎಲ್ಲಾ ಸಮಸ್ಯೆಗಳಿಗೂ ಸೂಕ್ತವಾದ ಪರಿಹಾರೋಪಾಯಗಳು ಯಾವತ್ತೂ ಲಭ್ಯವಿದ್ದೇ ಇರುತ್ತವೆ.
2004ರ ಸುನಾಮಿಯ ಪಾಠಗಳು: ಡಿಸಂಬರ್ 26, 2004ನ್ನು ಮನುಕುಲವೆಂದೂ ಮರೆಯದು, ಮರೆಯಲೂ ಬಾರದು. ಆಗ್ನೇಯ ಏಷ್ಯಾದಿಂದ ಆಫ್ರಿಕಾದ ತೀರದವರೆಗೆ ಬಡಿದಪ್ಪಳಿಸಿದ ಭಾರೀ ಅಲೆಗಳಲ್ಲಿ ಕೊಚ್ಚಿಹೋದ ಜೀವಗಳಿಗೆ ಲೆಕ್ಕವೇ ಇರದು. ಆಧುನಿಕತೆಯ ಸೋಗಿನಲ್ಲಿ, ತಂತ್ರ ಜ್ಞಾನದ ಗುಂಗಿನಲ್ಲಿ ಅಮಲೇರಿದವರಿಗೆ ಸುನಾಮಿ ಒಂದು ಬಲು ದೊಡ್ಡ ಪಾಠವನ್ನೇ ಕಲಿಸಿ ಹೋಯಿತು. ನೈಸರ್ಗಿಕ ಆಗುಹೋಗುಗಳನ್ನು ಮೊದಲೇ ಅರಿಯುವಲ್ಲಿ ನಾವಿನ್ನೂ ಅಲ್ಪ ಜ್ಞಾನಿಗಳಾಗಿದ್ದೇವೆ ಎನ್ನುವುದು ಮೊದಲನೇ ಪಾಠ. ಆ ದಿನ, ಆ ಹೊತ್ತಿನಲ್ಲಿ, ಸಾಗರದ ತೀರದಲ್ಲಿದ್ದ ಆಧುನಿಕ ಮಾನವರಿಗೂ, ಅವರು ಸಾಕಿದ ನಾಯಿಗಳಂತಹ ಪ್ರಾಣಿಗಳಿಗೂ ನೆಲ ಅದುರಿದಾಗಲಾಗಲೀ, ಸಾಗರದ ನೀರು ಒಮ್ಮಿಂದೊಮ್ಮೆಗೇ ಹಿಂದಕ್ಕೆ ಸರಿದಾಗಲಾಗಲೀ ಏನೂ ಅರ್ಥವಾಗದೇ, ಅವರೆಲ್ಲ ತದನಂತರ ಒಮ್ಮೆಗೇ ಅಪ್ಪಳಿಸಿದ ಅಲೆಗಳಲ್ಲಿ ಕೊಚ್ಚಿಹೋದರು
ಆದರೆ, ಅದೇ ಸಾಗರದ ತೀರದಲ್ಲಿ ಬರಿಗಾಲಲ್ಲಿ ಓಡಾಡುತ್ತಾ, ಅಲ್ಲಿ ಬೀಸುತ್ತಿದ್ದ ಗಾಳಿಗೆ ಮೈಯೊಡ್ಡಿ ಬದುಕುತ್ತಿದ್ದ 'ಕಾಡು ಮನುಷ್ಯರಿಗೂ', ಕಾಡು ಪ್ರಾಣಿಗಳಿಗೂ ಸುನಾಮಿಯ ಅಪಾಯವು ಮೊದಲೇ ತಿಳಿದು, ಎರಡು ದಿನ ಮೊದಲೇ ಅವರೆಲ್ಲ ಮೇಲಿನ ಗುಡ್ಡಗಳತ್ತ ಓಡಿ ಜೀವವುಳಿಸಿಕೊಂಡರು! ಈ ಜಾಗಳಲ್ಲಿದ್ದ ಮಾನವನಿರ್ಮಿತ ಕಟ್ಟಡಗಳು, ವೈಮಾನಿಕ ನೆಲೆಗಳು ಇತ್ಯಾದಿಗಳೆಲ್ಲ ನೀರಿನ ಅಬ್ಬರದಲ್ಲಿ ನೆಲಸಮವಾದರೆ, ಕಡಲತೀರದ ಮ್ಯಾನ್ ಗ್ರೋವ್ ಸಸ್ಯಗಳನ್ನೆಲ್ಲ ಕಿತ್ತು ಬೆಳೆಸಿದ ತೋಟಗಳು, 'ಸಿಗಡಿಕೃಷಿಯ ಫಾರ್ಮ್ ಗಳು ' ಕೊಚ್ಚಿಹೋದವು. ಆದರೆ, ಆಳವಾಗಿ ಬೇರೂರಿದ್ದ ಮ್ಯಾನ್ ಗ್ರೋವ್ ಸಸ್ಯಗಳನ್ನು ಹಾಗೆಯೇ ಉಳಿಸಿಕೊಂಡಿದ್ದವರನ್ನು ಅಲೆಗಳೆದುರು ಗಟ್ಟಿಯಾಗಿ ನಿಂತ ಈ ಮ್ಯಾನ್ ಗ್ರೋವ್ ಸಸ್ಯಗಳೇ ಕಾಪಾಡಿದವು.
ತನ್ನನ್ನು ಅರಿತವರನ್ನು, ತನ್ನನ್ನು ನಂಬಿದವರನ್ನು ತಾಯಿ ಪ್ರಕೃತಿಯು ಬಿಟ್ಟುಕೊಡಲಿಲ್ಲ. ತನ್ನ ಮೇಲೆ ಸವಾರಿ ಹೊರಟವರನ್ನು ಉಳಿಸಲು ನೆರವಾಗಲೂ ಇಲ್ಲ! ಇನ್ನೀಗ ಪ್ರಕೃತಿ ವಿಕೋಪಗಳನ್ನು ಮೊದಲೇ ಅರಿಯಲು ಕೋಟಿಗಟ್ಟಲೆ ಸುರಿದು ತಂತ್ರಜ್ಞಾನಗಳನ್ನು ಬೆಳೆಸಿ ಅಳವಡಿಸುತ್ತಾರಂತೆ! ಸುನಾಮಿ, ಭೂಕಂಪಗಳೂ ವ್ಯಾಪಾರಕ್ಕೊಂದು ಅವಕಾಶವಲ್ಲವೇ? ಈ ಮುನ್ನೆಚ್ಚರಿಕೆ ನೀದುವ (ನೀಡುತ್ತವೆಯೆಂದು ನಾವು ನಂಬುವ) ಯಂತ್ರಗಳನ್ನು ಸಾಗರದಾಳದಲ್ಲೋ ಭೂತಾಯಿಯ ಗರ್ಭದಲ್ಲೋ ಹೂತಿಟ್ಟು ನಾವು ಪಂಚತಾರಾ ಹೋಟಲುಗಳ ಹವಾನಿಯಂತ್ರಿತ ಕೋಣೆಗಳಲ್ಲೋ, ಐಷಾರಾಮದ ಪ್ರಯೋಗಶಾಲೆಯಲ್ಲೋ ಅಥವಾ ಇನ್ಯಾವುದೋ ದಂತಗೋಪುರದಲ್ಲೋ ಕುಳಿತುಬಿಟ್ಟರಾಯಿತು! ಅಂಡಮಾನದ 'ಕಾಡುಮನುಷ್ಯ'ನಿಗೂ, ಶ್ರೀಲಂಕೆಯ ಆನೆಗಳಿಗೂ ಇರುವ ಪ್ರಕೃತಿ ಪ್ರಜ್ಞೆ ನಮ್ಮ ಯಂತ್ರಗಳಿಗೂ ಬರಲಿ ಎಂದು ಕಾದು ಕುಳಿತರಾಯಿತು!
'ಆಧುನಿಕತೆಯ ರೋಗಗಳು': ತಾಯಿ ಪ್ರಕೃತಿಯ ಹೊಕ್ಕಳು ಬಳ್ಳಿ ಕಡಿದುಕೊಂಡು ತಾನು ಮಾಡಿದ್ದೆಲ್ಲವೂ ಸರಿಯೆಂದು ಬೀಗುತ್ತಿರುವ ಆಧುನಿಕ ಮಾನವನನ್ನು ಸುನಾಮಿಯೊಂದೇ ಶಿಕ್ಷಿಸಿದ್ದಲ್ಲ. ಅತಿ ಬುದ್ಧಿವಂತ ತಾನೆಂದು ಬೀಗುತ್ತಿರುವವನ ಶರೀರವಿಂದು ಹತ್ತು ಹಲವು ವಿಚಿತ್ರ ಕಾಹಿಲೆಗಳ ಗೂಡೇ ಆಗಿಬೆಟ್ಟಿದೆ. ಅದೆಂತೆಲ್ಲಿಂದ ಬಂದವೆಂದು ಎಷ್ಟು 'ಸಂಶೋಧಿಸಿದರೂ' ತಿಳಿಯದಷ್ಟು ವಿಚಿತ್ರವಾಗಿರುವ ಈ ಕಾಹಿಲೆಗಳು ಇಂದು ಮನುಕುಲದ ಮುಂದಿರುವ ಅತಿ ದೊಡ್ಡ ಸವಾಲಾಗಿ ಬಿಟ್ಟಿವೆ, ಮನುಕುಲದ ಸಂಪತ್ತನ್ನು ಅತಿ ಹೆಚ್ಚಾಗಿ ಕರಗಿಸುತ್ತಿರುವ ಜ್ವಾಲೆಗಳಾಗಿ ಹರಡುತ್ತಿವೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ವಿವಿಧ ಬಗೆಯ ಅರ್ಬುದ ರೋಗಗಳು, ಬೊಜ್ಜು, ಮೂಳೆಸವೆತ, ರಕ್ತದಲ್ಲಿ ಅತಿಕೊಬ್ಬು - ಒಂದೇ, ಎರಡೇ? ಈಯೆಲ್ಲ ರೋಗಗಳ ನಿರ್ದಿಷ್ಟ ಕಾರಣಗಳೇನೆಂಬುದು ಇನ್ನೂ ತಿಳಿದಿಲ್ಲವಾದರೂ, ಇವೆಲ್ಲವೂ 'ಆಧುನಿಕತೆಯ ರೋಗಗಳು' ಎಂಬ ಸತ್ಯವಾದರೂ ಅರ್ಥವಾಗಿದೆ. ಅಂಡಮಾನದ 'ಕಾಡು ಮನುಷ್ಯ'ನಾಗಲೀ, ಆರ್ಕಟಿಕದ ಎಸ್ಕಿಮೋಗಳಾಗಲೀ ಕಂಡರಿಯದ ಈ ರೋಗಗಳು ಗಗನಚುಂಬಿ ದಂತಗೋಪುರಗಳಲ್ಲಿ ವಾಸಿಸುವವರಲ್ಲಿಯೂ, ನಗರಗಳ ಜೀವನಕ್ಕೆ ಒಗ್ಗಿಕೊಂಡ ಜನಸಾಮಾನ್ಯರಲ್ಲೂ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದ್ದು, ಭೂತಾಕಾರದ ಪಿಡುಗುಗಳಾಗಿ ಬೆಳೆಯುತ್ತಿವೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರತ್ಯೇಕವಾಗಿ (ಅಂದರೆ ಬಹುರಾಷ್ಟ್ರೀಯ ದೈತ್ಯರ ಪ್ರಾಯೋಜನೆಯಿಲ್ಲದೆ) ನಡೆದಿರುವ ಸಂಶೋಧನೆಗಳಲ್ಲಿ, ನಾವು ತಿನ್ನುತ್ತಿರುವ ಆಹಾರಕ್ಕೂ, ನಮ್ಮ ಜೀವನಶೈಲಿಗೂ, ಈ ಎಲ್ಲಾ ಕಾಹಿಲೆಗಳಿಗೂ ನೇರವಾದ ಸಂಬಂಧವಿರುವುದನ್ನು ದೃಢವಾಗಿ ಗುರುತಿಸಲಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಮನೆಯಡಿಗೆಯ ಬದಲಾಗಿ ಮಾರುಕಟ್ಟೆ-ಮಾಲುಗಳಲ್ಲಿ ಪ್ರದರ್ಶಿಲ್ಪಡುತ್ತಿರುವ, ಜಾಹೀರಾತುಗಳಲ್ಲಿ ರಾರಾಜಿಸುತ್ತಿರುವ ಆಹಾರಗಳನ್ನೇ ಹೆಚ್ಚು ನೆಚ್ಚಿಕೊಂಡಿರುವವರಲ್ಲಿ ಈ ಎಲ್ಲಾ ರೋಗಗಳು ಅತಿ ಹೆಚ್ಚು ಕಂಡುಬರುತ್ತಿರುವುದನ್ನೂ ಗುರುತಿಸಲಾಗಿದೆ. ಇಂದು ಅಮೆರಿಕೆಯ ಮಕ್ಕಳಲ್ಲಿ (ಅಂದರೆ 'ಸಂಸ್ಕರಿತ ಆಹಾರ'ದ ಯುಗದಲ್ಲಿ ಹುಟ್ಟಿದವರಲ್ಲಿ) ಶೇ.40 ರಿಂದ 60ರಷ್ಟು ಮಂದಿ ಅತಿ ಬೊಜ್ಜನ್ನು ಹೊಂದಿದ್ದಾರೆ; ನಮ್ಮ ದೇಶದ ಕೆಲವು 'ಮಹಾ ನಗರಗಳಲ್ಲೂ' ಶೇ. 15 ರಿಂದ 30ರಷ್ಟು ಮಕ್ಕಳು ದಢೂತಿಕಾಯದವರಾಗಿದ್ದಾರೆ. ಐವತ್ತು ವರ್ಷ ವಯಸ್ಸಿನ ನಂತರವೇ ಸಾಮಾನ್ಯವಾಗಿದ್ದ ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕಾಹಿಲೆಗಳು ಇಂದಿನ ಪೀಳಿಗೆಯಲ್ಲಿ ಇಪ್ಪತ್ತರಲ್ಲೇ ಕಾಣಿಸಿಕೊಳ್ಳುತ್ತಿವೆ.
ಕೃಷಿಪದ್ಧತಿಯ ವಿಕಾಸದೊಂದಿಗೆ ಮಾನವನ ಆಹಾರಕ್ರಮವು ಪ್ರಾಕೃತಿಕ ಆಹಾರದಿಂದ ದೂರ ಸರಿಯಲಾರಂಭಿಸಿತೆನ್ನಬಹುದು. ಅಕ್ಕಿ, ಗೋಧಿ, ರಾಗಿ, ಜೋಳಗಳೇ ಮುಂತಾದ ಧಾನ್ಯಗಳು, ಹಾಲು ಹಾಗೂ ಮೊಸರು, ಮಜ್ಜಿಗೆಗಳಂತಹ ಹಾಲಿನ ಉತ್ಪನ್ನಗಳು, ಸಕ್ಕರೆ ಹಾಗೂ ಸಕ್ಕರೆಯಂತಹ ಇತರ ಸಿಹಿಕಾರಕಗಳು ಮತ್ತು ಅವನ್ನೊಳಗೊಂಡ ಸಿಹಿ ಭಕ್ಷ್ಯಗಳು ಮುಂತಾದುವೆಲ್ಲವೂ ಪ್ರಕೃತಿಸಹಜವಾದ ಆಹಾರಗಳಲ್ಲ. ಅಷ್ಟೇ ಅಲ್ಲ, 'ಕಾಡು ಮನುಷ್ಯರು', ಎಸ್ಕಿಮೋಗಳು ಮತ್ತು ಧಾನ್ಯಗಳನ್ನು ಬೆಳೆಯಲಾಗದ, ಹಾಲನ್ನು ಕುಡಿಯಲಾಗದ ಎಷ್ಟೋ ಜನಾಂಗಗಳು ಇವುಗಳನ್ನು ತಿನ್ನುವುದೂ ಇಲ್ಲ. ಹಾಲು, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳನ್ನು ತಿನ್ನದಿರುವವರಲ್ಲಿ ಮೇಲೆ ಹೇಳಿದ 'ಆಧುನಿಕ ರೋಗಗಳು' ಅತಿ ವಿರಳವೆಂದೇ ಹೇಳಬಹುದು. ಹಿಟ್ಟಿನಿಂದ ತಯಾರಿಸಿದ ಬ್ರೆಡ್ ಇತ್ಯಾದಿಗಳನ್ನು ಸೇವಿಸುತ್ತಿದ್ದ ಈಜಿಪ್ಟಿನ ಹಳೇ ನಾಗರಿಕತೆಯ ಕಾಲದಲ್ಲೇ ಮೂಳೆಸವೆತವಿದ್ದುದನ್ನು ಈಜಿಪ್ಟಿನ ಮಮ್ಮಿಗಳಲ್ಲಿ ಗುರುತಿಸಲಾಗಿದ್ದರೆ, ಅದಕ್ಕಿಂತ ಹಲವು ಸಹಸ್ರಮಾನಗಳ ಹಿಂದಿನ ಮಾನವ ಪಳೆಯುಳಿಕೆಗಳ ಎಲುಬುಗಳಲ್ಲಿ ಅಂತಹ ಲಕ್ಷಣಗಳು ಕಂಡುಬಂದಿಲ್ಲ ಎನ್ನುವುದನ್ನು ಗಮನಿಸಿದಾಗ, ನಮ್ಮ ಎಲುಬುಗಳು ಸವೆಯಲು ನಮ್ಮ ಆಹಾರಗಳ ಕೊಡುಗೆಯೆಷ್ಟು ಎನ್ನುವುದು ಅರಿವಾಗುತ್ತದೆ. ಮೂಳೆಸವೆತಕ್ಕೆ ಹಾಲು ಮತ್ತು ಕೋಲಾಗಳ ಕೊಡುಗೆಯೂ ಗಣನೀಯವೆನ್ನುವುದು ಸಂಶೋಧನೆಗಳಿಂದ ಕಂಡುಬಂದಿರುವ ಸತ್ಯವಾಗಿದೆ. ಅದೇ ರೀತಿ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಇವೇ ಮುಂತಾದ ರೋಗಗಳಿಗೆ ಹಾಲು, ಸಕ್ಕರೆ, ಧಾನ್ಯಗಳು, ಅದರಲ್ಲೂ ಧಾನ್ಯಗಳನ್ನು ಸಂಸ್ಕರಿಸಿ ಸಿದ್ಧಪಡಿಸಿದ ವಿವಿಧ ತಿನಿಸುಗಳು, ಸಂಸ್ಕರಿತ ಹಣ್ಣುಗಳು ಮತ್ತು ಫ್ರಕ್ಟೋಸ್ ಅತಿಯಾಗಿರುವ ಸಂಸ್ಕರಿತ ಆಹಾರಗಳು ಬಹಳಷ್ಟು ಮಟ್ಟಿಗೆ ಕಾರಣಗಳಾಗಿವೆಯೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ, ಶತಮಾನಗಳಿಂದ ಮನುಷ್ಯರು ಸೇವಿಸುತ್ತಿದ್ದ ತೆಂಗಿನೆಣ್ಣೆ, ಮೊಟ್ಟೆ ಇತ್ಯಾದಿಗಳಿಂದ ಕೊಲೆಸ್ತೆರಾಲ್ ಹೆಚ್ಚುತ್ತದೆಯೆಂದು ಬೊಬ್ಬಿರಿಯುವ ಮಾಧ್ಯಮಗಳು, ಕೋಲಾಗಳಿಂದಾಗಲೀ, ಸಂಸ್ಕರಿತ ಆಹಾರಗಳಿಂದಾಗಲೀ, ರಿಫೈನ್ಡ್ ಎಣ್ಣೆಯಿಂದಾಗಲೀ ಕಾಹಿಲೆಗಳು ಉಂಟಾಗಬಹುದೆಂದು ಯಾವತ್ತಾದರೂ ಹೇಳಿದ್ದಿದೆಯೇ? ಹಾಗೆ ಬರೆದರೆ ಅವುಗಳಿಗೆ ಜಾಹೀರಾತುಗಳು ದೊರೆತಾವೇ?
'ಆಹಾರ ಸಂಸ್ಕರಣೆ'ಯ ವ್ಯಾಪಾರವು ಜಾಗತೀಕರಣಗೊಂಡಂತೆಲ್ಲ ಹೊಸ ಹೊಸ 'ಉತ್ಪನ್ನಗಳು' ಅತ್ಯಾಕರ್ಶಕವಾಗಿ ಮಾರುಕಟ್ಟೆಗೆ ಬರಲೇ ಬೇಕಲ್ಲವೆ? ಅರುವತ್ತರ ದಶಕದಲ್ಲಿ ಖಾದ್ಯವಲ್ಲದ ತೈಲಗಳನ್ನು ಕುದಿಸಿ, ರಾಸಾಯನಿಕಗಳಿಂದ ಬಣ್ಣ ಬದಲಿಸಿ 'ಸಂಸ್ಕರಿತ ಖಾದ್ಯತೈಲ'ಗಳೆಂದು ಪಟ್ಟಿಯಂಟಿಸಿ ಮಾರುಕಟ್ಟೆಗೆ ತಂದಾಗ ಈ 'ತೈಲ ಸಂಸ್ಕರಣೆಯ' ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿದ ಕಂಪೆನಿಗಳು ತಮ್ಮ ಹೊಸ 'ಆವಿಷ್ಕಾರಕ್ಕೆ' ಮಾರುಕಟ್ಟೆಯನ್ನು ತೆರೆಯಲು ಮಾಡಿದ್ದೇನೆಂದರೆ, ಅದುವರೆಗೆ ಜನರು ನಿರಾತಂಕವಾಗಿ ಬಳಸುತ್ತಿದ್ದ ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆಯೆಂದೂ, ಅದರಿಂದ ಆರೋಗ್ಯಕ್ಕೆ ಅಪಾರವಾದ ಹಾನಿಯಿದೆಯೆಂದೂ ಗುಲ್ಲೆಬ್ಬಿಸಿದ್ದು! ಇದಕ್ಕೆ ಬೆಂಬಲ ನೀಡಲು ಬೇಕಾದ 'ಸಂಶೋಧನಾ ಪ್ರಬಂಧಗಳನ್ನು' ತಯಾರಿಸಲು ಮತ್ತವನ್ನು ಪ್ರಕಟಿಸಲು 'ಸಂಶೋಧಕರ' ಹಾಗೂ 'ಜರ್ನಲು'ಗಳ ಕೊರತೆಯೇನೂ ಉಂಟಾಗಲಿಲ್ಲ ಎನ್ನುವುದನ್ನು ಬೇರೆ ಹೇಳಬೇಕೆ? ದಿನನಿತ್ಯ ಬಳಸುವ ಎಣ್ಣೆಯನ್ನು ತಮ್ಮ ವಶಪಡಿಸಿಕೊಂಡಾದ ಮೇಲೆ, ಉಪ್ಪು ಹಾಗೂ ನೀರಿನ ಮೇಲೆ ಈ ಕಂಪೆನಿಗಳ ದೃಷ್ಟಿ ಬೀಳದಿದ್ದೀತೆ? ಸರಿ, ಜಗತ್ತಿನಾದ್ಯಂತ ಅಯೊಡಿನ್ ಲವಣದ ಕೊರತೆಯಿದೆಯೆಂದೂ, ಅದರ ಕೊರತೆಯಿಂದಾಗಿ ಹುಟ್ಟುವ ಮಕ್ಕಳ ಮೆದುಳಿಗೆ 'ಅಪಾರವಾದ ಹಾನಿ'ಯಾಗುವುದೆಂದೂ, ಅದನ್ನು ತಡೆಯಲು ಅತ್ಯಗತ್ಯವಾಗಿ ಅಡುಗೆ ಉಪ್ಪಿಗೆ ಅಯೊಡಿನ್ ಬೆರೆಸಬೇಕೆಂದೂ ಜಗತ್ತಿನೆಲ್ಲೆಡೆ 'ಸಂಶೋಧನಾ' ಪ್ರಬಂಧಗಳನ್ನು ಸಿದ್ದಪಡಿಸಿ ಪ್ರಕಟಿಸಲಾಯಿತು, ಸರಕಾರಗಳಲ್ಲಿದ್ದ ಅಧಿಕಾರಿಗಳು ಹಾಗೂ ಮಂತ್ರಿಗಳ ತಲೆ ಕೆಡಿಸಲಾಯಿತು, ಕಿಲೋ ಒಂದರ ಮೂವತ್ತು ಪೈಸೆಗೆ ದೊರೆಯುತ್ತಿದ್ದ ಉಪ್ಪಿಗೆ ನಾಲ್ಕು ರೂಪಾಯಿಯ ಬೆಲೆಯಾಯಿತು! ಇಂದು ಅಯೊಡಿನ್ ಇಲ್ಲದ ಉಪ್ಪನ್ನು ಮಾರುವುದು ಜೈಲು ಶಿಕ್ಷೆಯನ್ನೇ ಆಹ್ವಾನಿಸಿದಂತೆ! ಅಯೊಡಿನ್ ಯುಕ್ತ ಉಪ್ಪನ್ನು ಬಳಸುವುದರಿಂದ ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್ ಬರುತ್ತದೆಯೆಂಬ ವರದಿಗಳನ್ನು 'ಅಪಾಯಗಳಿಗಿಂತ ಪ್ರಯೋಜನಗಳೇ ಜಾಸ್ತಿ'ಯೆಂಬ ಸಬೂಬು ಒಡ್ಡಿ ಬದಿಗೊತ್ತಿ ಅಯೊಡಿನ್ ಯುಕ್ತ ಉಪ್ಪನ್ನು ಭರಾಟೆಯಿಂದ ಮಾರಲಾಗುತ್ತಿದೆ, ಇದಕ್ಕೆ ನಮ್ಮ ಸರಕಾರಗಳ ಆಶೀರ್ವಾದವಂತೂ ಇದ್ದೇ ಇದೆ!
ಫಸಲನ್ನು ಹೆಚ್ಚಿಸಲು ಫರ್ಟಿಲೈಸರ್ ಗಳು, ರೋಗಗಳನ್ನು ತಡೆಯಲು ಕೀಟನಾಶಕಗಳನ್ನು ಯಥೇಷ್ಟವಾಗಿ ಬಳಸಲು ಪ್ರೇರೇಪಿಸಿ ಅದರಿಂದಾಗುವ ಹಾನಿಗಳ ಬಗೆಗಿನ ವರದಿಗಳನ್ನೆಲ್ಲಾ ಮೂಲೆಗೆ ಸರಿಸಿಯಾದ ನಂತರ ಇದೀಗ 'ರೋಗಗಳೇ ಬರದಂತಹ' ಜಿಎಂ ತಳಿಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ, ಇನ್ನು ಕೆಲವೇ ದಿನಗಳಲ್ಲಿ ಇವು ನಮ್ಮ 'ಮಾರುಕಟ್ಟೆಗಳನ್ನು' ಪ್ರವೇಶಿಸಲಿವೆಯಂತೆ. ಅದನ್ನು ತಿನ್ನುವ ಮನುಷ್ಯರಿಗೆ ಮಾರಣಾಂತಿಕ ರೋಗಗಳು ಬಂದರೇನಂತೆ, ಗಿಡಗಳಿಗೂ, ಅವುಗಳ ಬೀಜಗಳನ್ನು ತಯಾರಿಸುವ ಕಂಪೆನಿಗಳ ಧಣಿಗಳಿಗೂ ರೋಗ ಬರದಿದ್ದರಾಯಿತು, ಅಲ್ಲವೇ?
ಈಯೆಲ್ಲ ಆಹಾರಗಳನ್ನು ತಿಂದು ರೋಗ ಪೀಡಿತರಾದರೆ ನಿಮಗೆ ಸಾಯುವವರೆಗೆ ಬದುಕಲು ಅಗತ್ಯವಾದ ಔಷಧಗಳನ್ನು ಇವೇ ಬಹುರಾಷ್ಟ್ರೀಯ ದೈತ್ಯರು ಒದಗಿಸುತ್ತಾರೆ, ನೀವೊಂದಿಷ್ಟು ಹಣ ತೆತ್ತರಾಯಿತು! ಇಂದು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮುಂತಾದ ಕಾಹಿಲೆಗಳು ಔಷಧ ತಯಾರಿಕಾ ಕಂಪೆನಿಗಳಿಗೆ ಶುಕ್ರದೆಸೆಯನ್ನೇ ತಂದಿವೆ. ಅದರ ಜೊತೆಗೆ, ಕೊಲೆಸ್ಟರಾಲ್ ನಂತಹ ಗುಮ್ಮಗಳನ್ನು ಕೂಡಾ ತೋರಿಸಿ ಇನ್ನೊಂದಷ್ಟು ಔಷಧಗಳನ್ನು ನಿಮ್ಮ ಹೊಟ್ಟೆಗೆ ಸೇರಿಸಲಾಗುತ್ತಿದೆ. ಈ 'ಹಲವು ರೋಗಗಳಿಗೆ' ಒಂದೇ ಮಾತ್ರೆಯೊಳಗೆ 'ಹಲವು ಔಷಧಗಳನ್ನು' ಬೆರೆಸಿ ನೀಡಬಲ್ಲ 'ಪಾಲಿ ಪಿಲ್ ' ಗಳ ಬಗೆಗೆ ಈಗ ಭರದಿಂದ 'ಸಂಶೋಧನೆ'ಗಳಾಗುತ್ತಿವೆ! ಕೃತಕ ಇನ್ಸುಲಿನ್ ಅನ್ನು 'ಮಾನವ ಇನ್ಸುಲಿನ್' ಎಂದು ಮಾರಾಟ ಮಾಡುತ್ತಿರುವ ಜಗತ್ತಿನ ನಂ. 1 ಇನ್ಸುಲಿನ್ ತಯಾರಕ ಕಂಪೆನಿಯ ಒಡೆಯ ಜಾರ್ಜ. ಡಬ್ಲ್ಯು. ಬುಷ್ ಆದರೆ, ಕೊಲೆಸ್ಟರಾಲ್ ಗೆ ನೀಡುವ ಔಷಧವನ್ನು ತಯಾರಿಸುವ ಕಂಪೆನಿಗೆ ಬಿಲ್ ಗೇಟ್ಸ್ ಎಂಬಾತ ಒಡೆಯನಾಗಿದ್ದಾನೆ. ನಿಮ್ಮನ್ನು ಮುಂದೊಂದು ದಿನ ಕೊಲ್ಲಬಹುದಾದ (ಅಥವಾ ಹಾಗೆಂದು ನಿಮ್ಮನ್ನೀಗ ಹೆದೆರಿಸಲಾಗುತ್ತಿರುವ) ಹಕ್ಕಿ ಜ್ವರಕ್ಕೆ ಯಾವುದೇ ಪ್ರಯೋಜನವಾಗದಿದ್ದರೂ ಕೊಡಲೇ ಬೇಕೆಂದು ಒತ್ತಾಯಿಸಲಾಗುತ್ತಿರುವ ಟಾಮಿಫ್ಲು ಎಂಬ ಔಷಧದ ಹಿಂದೆ ಡೊನಾಲ್ಡ್ ರಮ್ಸ್ ಫೆಲ್ಡ್ ಇದ್ದಾ ನೆ. ಇವರಿಂದೆಲ್ಲ ಬಚಾವಾಗುವುದಕ್ಕೆ ದಾರಿಯೇನಾದರೂ ಕಾಣುತ್ತಿದೆಯೇ?
ಬಹುರಾಷ್ಟ್ರೀಯ ದೈತ್ಯರು ಅಭಿವೃಧ್ಧಿಪಡಿಸಿದ ಬೀಜಗಳು, ಅದರಿಂದಾದ ಬೆಳೆಗಳು, ಅದಕ್ಕೆ ಅವರೇ ಪೂರೈಸುವ ಫರ್ಟಿಲೈಸರ್ ಗಳು ಮತ್ತು ಕೀಟನಾಶಕಗಳು, ಅವರ ಕೃಪೆಯಲ್ಲೇ ಜೀವಿಸುವ ವಿಜ್ಞಾನಿಗಳು, ಅವರ ಸಂಶೋಧನೆಗಳು ಮತ್ತು ಅವನ್ನು ಪ್ರಕಟಿಸಲು ಇದೇ ಕಂಪೆನಿಗಳ ಸಹಯೋಗದ ಪತ್ರಿಕೆಗಳು, ಈ ಕಂಪೆನಿಗಳು ತಯಾರಿಸುವ 'ಆಹಾರಗಳು', ಇವೆಲ್ಲದರಿಂದ ರೋಗಗಳೇನಾದರೂ ಬಂದರೆ ಈ ದೈತ್ಯರೇ ತಯಾರಿಸಿದ ಔಷಧಗಳು - ಭಲೇ, ಈ ಜಗತ್ತು ಭಯಪಡಲೇ ಬೇಕಾಗಿಲ್ಲ, ಇಲ್ಲಿ ಎಲ್ಲವೂ ಸುರಕ್ಷಿತ! ಇಲ್ಲಿ 'ಆಸಕ್ತಿಗಳ ತಾಕಲಾಟ'ವಿಲ್ಲ, 'ಮೇಳೈಸುವಿಕೆಯಿದೆ' ಎನ್ನೋಣವೇ?
ಒಂದು ಸುನಾಮಿ ಬಡಿದು ಪ್ರಕೃತಿಮಾತೆಯನ್ನು ನಂಬದವರನ್ನೆಲ್ಲ ಕೊಚ್ಚಿಕೊಂಡು ಹೋಯಿತು. ಪ್ರಕೃತಿಯಿಂದ ವಿಮುಖರಾಗಿ, 'ಮಾರುಕಟ್ಟೆಗೆ' ಮಾರುಹೋಗಿ, ರೋಗಗಳ 'ಸುನಾಮಿ'ಗೆ ಬಲಿಯಾಗುತ್ತಿರುವ ನಮಗೆಲ್ಲ ರಕ್ಷಣೆಯೆಂತು?