ಆಧುನಿಕ ಕರ್ನಾಟಕ ಕಟ್ಟಿದ ಐವ್ವತ್ತು ಮಂದಿ ಮಹನೀಯರು

ಆಧುನಿಕ ಕರ್ನಾಟಕ ಕಟ್ಟಿದ ಐವ್ವತ್ತು ಮಂದಿ ಮಹನೀಯರು

ಆಧುನಿಕ ಕರ್ನಾಟಕ ಕಟ್ಟಿದ ಐವ್ವತ್ತು ಮಂದಿ ಮಹನೀಯರು
ನಿಜವಾಗಿ ಕರ್ನಾಟಕದ ಸುವರ್ಣ ಮಹೋತ್ಸವದ ಆಚರಣೆ ನಡೆಯಬೇಕಾಗಿದ್ದುದು, 2005ರ ನವೆಂಬರ್ 1ರಿಂದ 2006ರ ನವೆಂಬರ್ 1ರವರೆಗೆ. ಆದರೆ ಆ ಅವಧಿಯಲ್ಲಿದ್ದ ಸರ್ಕಾರ ತನ್ನ ಅಳಿವು- ಉಳಿವಿನ ಕಸರತ್ತಿನಲ್ಲೇ ತೊಡಗಬೇಕಾಗಿ ಬಂದಿದ್ದರಿಂದಾಗಿ ಅಧಿಕೃತವಾಗಿ ಘೋಷಿಸಲ್ಪಟ್ಟ ಆಚರಣೆ, ರಾಜಕೀಯ ಬಿರುಗಾಳಿಗೆ ಸಿಕ್ಕಿ ತತ್ತರಿಸಿತು. ಅದು ಆರಂಭೋತ್ಸವದೊಂದಿಗೇ ಅಂತ್ಯಗೊಂಡಿತು! ನಂತರ ಬಂದ ಹೊಸ ಸರ್ಕಾರ ಹೊಸ ಉತ್ಸಾಹದೊಂದಿಗೆ ಆಚರಣೆಯನ್ನು 2007ರ ನವೆಂಬರ್ವರೆಗೆ ವಿಸ್ತರಿಸುವ ಘೋಷಣೆ ಮಾಡಿತಾದರೂ, ಈ ಸರ್ಕಾರವೂ ರಾಜಕೀಯ ಬಿರುಗಾಳಿಗೆ ಸಿಕ್ಕಿ ಈ ಬಂಗಾರದ ಹಬ್ಬ ಹಿನ್ನೆಲೆಗೆ ಸರಿಯಿತು. ಹೀಗಾಗಿ ಆಧುನಿಕ ಕನ್ನಡ ರಾಜ್ಯ ಸ್ಥಾಪನೆಯ ಐವ್ವತ್ತು ವರ್ಷಗಳ ಸಂಭ್ರಮ, ರಾಜ್ಯ ರಾಜಕೀಯದ ಏಳುಬೀಳುಗಳ ನಡುವೆ ಕದಡಿ ಹೋಯಿತು. ಇದೆಲ್ಲದರ ಹಿಂದಿನ ನಿರಭಿಮಾನದ ಕಥೆಯನ್ನು ಗಳಗನಾಥರು ಬರೆದ ಕನ್ನಡಿಗರ ಕರ್ಮಕಥೆಗೆ ಸೇರಿಸಬಹುದಾದ ಒಂದು ಹೊಸ ಅಧ್ಯಾಯದಂತೆಯೂ ನೋಡಬಹುದಾಗಿದೆ! ರಾಜ್ಯ ಸರ್ಕಾರದ ಅಧಿಕೃತ ಪತ್ರಗಳ ಮೇಲೆ ಮತ್ತು ಅಧಿಕೃತ ಸಾರಿಗೆ ವಾಹನಗಳ ಮೇಲೆ ಸುವರ್ಣ ಕರ್ನಾಟಕದ ಮುದ್ರೆ ಹಾಕಿದುದರ ಹಾಗೂ ಅಲ್ಲಲ್ಲಿ ನಡೆದ ಹಾಡು - ಕುಣಿತಗಳ ಹಬ್ಬಗಳ ಹೊರತಾಗಿ; ಸುವರ್ಣ ಕರ್ನಾಟಕ ಆಚರಣೆಯಂತಹ ಐತಿಹಾಸಿಕ ಸಂದರ್ಭ, ಕನ್ನಡಿಗರ ಮನ -ಮನೆಗಳಲ್ಲಿ ನಡೆಯಬೇಕಾಗಿದ್ದ ಒಂದು ಸಾಂಸ್ಕೃತಿಕ ಹಿನ್ನೋಟ- ಮುನ್ನೋಟಗಳಿಗೆ ಆಸ್ಪದವೇ ಇಲ್ಲದಂತೆ ನಮ್ಮ ಕಣ್ಮುಂದೆಯೇ ಕಳೆದು ಹೋಗುತ್ತಿದೆ.

ನಮ ಸಂವಿಧಾನ ಅಧಿಕೃತವಾಗಿ ಏನೇ ಹೇಳಲಿ; ಭಾರತದ ರಾಜಕೀಯ ಹಾಗೂ ಸಾಂಸ್ಕೃತಿಕ ಇತಿಹಾಸ, ಕನ್ನಡವೂ ಒಂದು ರಾಷ್ಟ್ರೀಯತೆ ಎಂಬುದನ್ನು ಸಾರಿ ಹೇಳುತ್ತದೆ. ಕನ್ನಡವೆಂಬುದು ಒಂದು ಭಾಷೆ ಮಾತ್ರವಾಗಿರದೆ, ಒಂದು ರಾಜಕೀಯ- ಸಾಂಸ್ಕೃತಿಕ ಕುಲವಾಗಿ ತನ್ನ ರಾಷ್ಟ್ರೀಯತೆಯನ್ನು ಕಟ್ಟಿಕೊಂಡಿದೆ. ಅದರ ಆಧಾರದ ಮೇಲೇ, ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಕರ್ನಾಟಕ ಏಕೀಕರಣದ ಹೋರಾಟವೂ ನಡೆದು, ಕನ್ನಡ ರಾಜ್ಯ ಸ್ಥಾಪನೆಯಾದದ್ದು. ಆದರೆ ಕಳೆದ ಐವ್ವತ್ತು ವರ್ಷಗಳಲ್ಲಿ ಈ ಕನ್ನಡ ರಾಜ್ಯ ಸ್ಥಾಪನೆಯಾದುದರ ಉದ್ದೇಶಗಳನ್ನೇ ಮರೆತಂತೆ ಕನ್ನಡದ ಜನ ಹಾಗೂ ಅವರು ಆರಿಸಿದ ಸರ್ಕಾರಗಳು ಕನ್ನಡಕ್ಕೆ ಬಾಯುಪಚಾರ ಮಾತ್ರ ಮಾಡುತ್ತ, ಕನ್ನಡವನ್ನು ನಿರ್ಣಾಯಕವಾದ ಎಲ್ಲ ಜಾಗಗಳಲ್ಲಿ - ಶಿಕ್ಷಣ, ಆಡಳಿತ, ಅಭಿವೃದ್ಧಿ ಇತ್ಯಾದಿ- ಕೈ ಬಿಡುತ್ತಾ ಬಂದಿದೆ. ಹೀಗಾಗಿ ಕನ್ನಡ ಕುಲವೆಂಬುದು ಬೇರಿಲ್ಲದ ಒಂದು ಸಮುದಾಯವಾಗಿ ಮಾರ್ಪಡುತ್ತಿದ್ದು ಎಲ್ಲ ರಂಗಗಳಲ್ಲೂ ಆಳವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕ್ರಮಿಸಬೇಕಾದ ತನ್ನ ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆಯೇ ಇಲ್ಲದಂತೆ, ತನ್ನದೇ ಒಂದು ಸಾಂಸ್ಕೃತಿಕ ಇಚ್ಛಾಶಕ್ತಿ ಇಲ್ಲದಂತೆ ಹೊರಗಿನ ಶಕ್ತಿಗಳ ಎಳೆದಾಟಕ್ಕೆ ಸಿಕ್ಕಿ ಎತ್ತಂದರತ್ತ ಚಲಿಸುತ್ತಿದೆ.

ಸುವರ್ಣ ಕನರ್ಾಟಕದ ಈ ಸಂದಿಗ್ಧ ಹಿನ್ನೆಲೆಯಲ್ಲಿ ಆಧುನಿಕ ಕರ್ನಾಟಕವನ್ನು ಕಟ್ಟಲು ಶ್ರಮಿಸಿದ ಐವ್ವತ್ತು ಮಹನೀಯರನ್ನು ಆರಿಸಿ ಪರಿಚಯಿಸುತ್ತಿದ್ದೇವೆ. ಆ ಮೂಲಕವಾದರೂ ಹೊಸ ತಲೆಮಾರುಗಳ ಕನ್ನಡಿಗರಿಗೆ ತಮ್ಮ ಬೇರುಗಳ ನೆನಪಾಗಿ, ಅವರು ತಾವು ಹೂ ಬಿಡಬೇಕಾದ ಆಕಾಶದ ಸರಿಯಾದ ಕಲ್ಪನೆ ಮಾಡಿಕೊಳ್ಳಲಿ ಎಂಬ ಸದಾಶಯ ಈ ಆಯ್ಕೆ ಪ್ರಕ್ರಿಯೆಯ ಹಿಂದಿದೆ. ಈ ಆಯ್ಕೆ ಕನ್ನಡ ಸಂಸ್ಕೃತಿಯನ್ನು ಅದರ ಆಳಗಳಲ್ಲದೆ, ಅದರ ವಿಸ್ತಾರದಲ್ಲೂ ಬಿಂಬಿಸುವ ಉದ್ದೇಶ ಹೊಂದಿರುವುದರಿಂದ, ಕೆಲವರಿಗೆ ಬಹು ಮುಖ್ಯರೆನಿಸಿರಬಹುದಾದ ಸಾಧಕರ ಹೆಸರುಗಳು ಬಿಟ್ಟು ಹೋಗಿದ್ದರೂ ಆಶ್ಚರ್ಯವಿಲ್ಲ. ಅಲ್ಲದೆ ಯಾವುದೇ ನಿರ್ದಿಷ್ಟ ವಿಚಾರಧಾರೆಗೆ ಬದ್ಧವಾಗಿ ಈ ಆಯ್ಕೆ ಮಾಡಿಲ್ಲದಿರುವುದರಿಂದಾಗಿ; ವೈಚಾರಿಕ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡೂ, ಕನ್ನಡ ಪ್ರಜ್ಞೆಗೆ, ಕನ್ನಡ ಬದುಕಿಗೆ ನಿಜವಾದ ಕೊಡುಗೆ ಸಲ್ಲಿಸಿದವರೆಲ್ಲರನ್ನೂ ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ಹಾಗೆ ನೋಡಿದರೆ ಇದನ್ನು 'ವಿಕ್ರಾಂತ ಕರ್ನಾಟಕ' ಆಯೋಜಿಸಿರುವ 'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು' ಲೇಖನ ಮಾಲೆಯ ವಿಸ್ತರಣೆಯಾಗಿಯೂ ನೋಡಬಹುದಾಗಿದೆ!

1. ಫರ್ಡಿನೆಂಡ್ ಕಿಟ್ಟೆಲ್
19ನೇ ಶತಮಾನದಲ್ಲೇ ಕನ್ನಡ - ಇಂಗ್ಲಿಷ್ ನಿಘಂಟನ್ನು ಪ್ರ್ರಾಮಾಣಿಕವಾಗಿ ಹಾಗೂ ಶಾಸ್ತ್ರೀಯವಾಗಿ ರಚಿಸಿದ ಜರ್ಮನಿಯ ವಿದ್ವಾಂಸ. ಧರ್ಮ ಪ್ರಸಾರಕ್ಕಾಗಿ ಬಂದು ಕನ್ನಡ ಕಲಿತು ಅದನ್ನು ಕನ್ನಡ ನುಡಿ ಸೇವೆಗಾಗಿ ಮುಡಿಪಿಟ್ಟ ಸಾಹಸಿ. ಕಿಟ್ಟೆಲ್ರ ನಿಘಂಟು ಇಂದಿಗೂ ಕನ್ನಡ ಸಾಹಿತ್ಯ-ಸಂಸ್ಕೃತಿ ಅಧ್ಯಯನಕ್ಕೊಂದು ಮುಖ್ಯ ಆಕರಗ್ರಂಥ.

2. ಗಳಗನಾಥರು
ಕನ್ನಡ ಪ್ರಜ್ಞೆ ಎಂಬುದು ಇನ್ನೂ ಎಚ್ಚೆತ್ತುಕೊಳ್ಳುತ್ತಿದ್ದ 20ನೇ ಶತಮಾನದ ಆದಿಯಲ್ಲೇ ವಿಫುಲ ಹಾಗೂ ವೈವಿಧ್ಯಮಯ ಕನ್ನಡ ಸಾಹಿತ್ಯ ರಚಿಸಿ ಅವುಗಳನ್ನು ತಲೆಮೇಲೆ ಹೊತ್ತು ಊರೂರು ತಿರುಗಿ ಕನ್ನಡಿಗರ ವಾಚಾನಾಭಿರುಚಿಯ ಬೆಳವಣಿಗೆಗೆ ಅಸ್ತಿವಾರ ಹಾಕಿದರು. ಸರ್ಕಾರಿ ಸೇವೆ ತ್ಯಜಿಸಿ ಮುದ್ರಣಾಲಯ ಸ್ಥಾಪಿಸಿ, ಪತ್ರಿಕೆ ನಡೆಸುವ ಸಾಹಸ ಮಾಡಿದರು. ಇಂತಹ ಸಂಕಷ್ಟಮಯ ನುಡಿ ಸೇವೆಯಲ್ಲೇ ತಮ್ಮ ಜೀವ ತೇಯ್ದು, ಕೊನೆಗೆ ಕ್ಯಾನ್ಸರ್ಗೆ ತುತ್ತಾದರು.

3. ಆಲೂರು ವೆಂಕಟರಾಯರು
ಆಧುನಿಕ ಕರ್ನಾಟಕದ ಪರಿಕಲ್ಪನೆಯನ್ನು ಮಂಡಿಸಿ ಕನ್ನಡತ್ವ, ಕರ್ನಾಟಕತ್ವಗಳನ್ನು ಶಾಸ್ತ್ರೀಯವಾಗಿ ನಿರೂಪಿಸಿದ ಮೊದಲಿಗರು. ಸ್ವಾತಂತ್ರ್ಯ ಹೋರಾಟವಲ್ಲದೆ, ಕನ್ನಡ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಂಸ್ಥೆಗಳ ಮೂಲಕ ಅದಕ್ಕೊಂದು ತಾತ್ವ್ರಿಕತೆ ಒದಗಿಸಿದವರು. `ಕನ್ನಡಕುಲ ಪುರೋಹಿತ'ರೆಂದು ಹೆಸರಾದವರು

4. ಸರ್.ಎಂ.ವಿಶ್ವೇಶ್ವರಯ್ಯ
ಮೈಸೂರು ಸಂಸ್ಥಾನದ ದಿವಾನರಾಗಿ ಆಧುನಿಕ ಕರ್ನಾಟಕದ ಅಭಿವೃದ್ಧಿಗೆ ಭದ್ರವಾದ ಅಸ್ತಿವಾರ ಹಾಕಿದ ಮೇಧಾವಿ ತಂತ್ರಜ್ಞ ಹಾಗೂ ದಕ್ಷ ಆಡಳಿತಗಾರ. ಕೈಗಾರಿಕೆ, ನೀರಾವರಿ, ವಿದ್ಯುತ್, ಶಿಕ್ಷಣ, ಬ್ಯಾಂಕೋತ್ತಮ ಭಾಷೆ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳ ಕಡೆ ಗಮನವಿಟ್ಟು ಹೊಸ ಅಭಿವೃದ್ಧಿ ಪರಿಕಲ್ಪನೆಯನ್ನು ಪರಿಚಯಿಸಿ ಜಾರಿಗೆ ತಂದ ಧೀಮಂತ.
ಇವರ ಹಿಂದೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿದ್ದರೆ, ಮುಂದೆ ದಿವಾನ್ ಮಿರ್ಜಾ ಇಸ್ಮಾಯಿಲರಿದ್ದಾರೆ.

5. ಬಿ.ಎಂ.ಶ್ರೀಕಂಠಯ್ಯ
ತಮ್ಮ `ಇಂಗ್ಲಿಷ್ ಗೀತೆಗಳು' ಮೂಲಕ ಕನ್ನಡ ಸಾಹಿತ್ಯಗಳ ಆಧುನಿಕ ನೋಟ ಒದಗಿಸಿದ ಇಂಗ್ಲಿಷ್ ಅಧ್ಯಾಪಕ. ಕನ್ನಡ ಸಾಹಿತ್ಯ ಪಠ್ಯಕ್ರಮ ಹಾಗೂ ಬೋಧನೆಯಲ್ಲೂ ಹೊಸ ಹಾದಿ ತೆರೆದ ಆಧುನಿಕ ಗುರುವರ್ಯ. ಕನ್ನಡ ನಾಡಲ್ಲಿ ಕನ್ನಡ ತಲೆ ಎತ್ತಬೇಕಾದ ಅಗತ್ಯವನ್ನೂ, ಬಗೆಯನ್ನು ತಮ್ಮ ಅನಾರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಗಳ ನಡುವೆಯೂ ನಾಡಿನಾದ್ಯಂತ ಸಂಚರಿಸಿ ಪ್ರಚಾರ ಮಾಡಿದ ಕನ್ನಡದ ಕಟ್ಟಾಳು. ಸಾಹಿತ್ಯ ಪರಿಷತ್ತಿಗೊಂದು ದಿಕ್ಕು - ದೆಸೆ ನೀಡಿದ ಸಾಹಿತ್ಯ ಆಡಳಿತಗಾರ.

6. ಡಿ.ವಿ.ಗುಂಡಪ್ಪ
ಹಳೆಯ ಮೈಸೂರು ಸಂಸ್ಥಾನ ಹಾಗೂ ಆಧುನಿಕ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಆಡಳಿತ ಹಾಗೂ ರಾಜಕಾರಣ -ಈ ಎಲ್ಲ ಕ್ಷೇತ್ರಗಳಲ್ಲಿನ ತಮ್ಮ ಅನನ್ಯ ಪ್ರತಿಭೆ ಮತ್ತು ಪರಿಶ್ರಮಗಳ ಮೂಲಕ ಬಹುಮುಖ ವ್ಯಕ್ತಿತ್ವವಾಗಿ ರೂಪುಗೊಂಡಿದ್ದ ಡಿ.ವಿ.ಜಿ., ಮುಖ್ಯವಾಗಿ ತಮ್ಮ ಗೋಖಲೆ ಸಾರ್ವಜನಿಕ ಸಂಸ್ಥೆ, `ಮಂಕುತಿಮ್ಮನ ಕಗ್ಗ' `ಭಗವದ್ಗೀತಾ ತಾತ್ಪರ್ಯ' ಹಾಗೂ `ಜ್ಞಾಪಕ ಚಿತ್ರಶಾಲೆ' ಸಂಪುಟಗಳ ಮೂಲಕ ಕನ್ನಡವನ್ನು, ಕನ್ನಡಿಗನನ್ನು ಬೆಳೆಸಿದ್ದಾರೆ.

7. ಭಾಲ್ಕಿ ಚೆನ್ನಬಸವ ಪಟ್ಟದೇವರು
ಕಲ್ಯಾಣದ ನಾಡಲ್ಲಿ ಮರಾಠಿ - ಉರ್ದು ದಬ್ಬಾಳಿಕೆಗೆ ಸಿಕ್ಕಿ ಕನ್ನಡ ಅಳಿದೇ ಹೋಗುವ ಆತಂಕದಲ್ಲಿದ್ದಾಗ ಕನ್ನಡದ ಕೆಲಸವನ್ನು ಧರ್ಮದ ಕೆಲಸದಂತೆ ಕೈಗೊಂಡವರು ಭಾಲ್ಕಿಯ ಪಟ್ಟದೇವರು. ಇವರು, ತಮ್ಮ ಮಠದ ಸುಪರ್ದಿಯಲ್ಲಿ ಕನ್ನಡ ಶಾಲೆಗಳನ್ನು ತೆರೆದು ನಡೆಸುವ ಮೂಲಕ ಕರ್ನಾಟಕದ ಶಿರೋಭಾಗವನ್ನು ಕನ್ನಡಕ್ಕಾಗಿ ರಕ್ಷಿಸಿದ ಐತಿಹಾಸಿಕ ಸಾಹಸ ಮಾಡಿದ ತೆರೆಮರೆಯ ನುಡಿ ಸೇವಕರು.

8. ಗೋವಿಂದ ಪೈ
ತುಳು-ಕೊಂಕಣಿ-ಮಲೆಯಾಳ ಭಾಷಾ ಸಮುದಾಯಗಳ ಮಧ್ಯೆ ಹುಟ್ಟಿ ಬೆಳೆದರೂ, ಕನ್ನಡ ಅಭಿಮಾನವನ್ನು ತಮ್ಮ ಸಾಹಿತ್ಯಿಕ-ಸಾಂಸ್ಕೃತಿಕ ಸಂಶೋಧನೆಗಳ ಮೂಲಕ ಮೆರೆದ ಗೋವಿಂದ ಪೈಗಳು ಕನ್ನಡ ಭಾಷೆಯ ಮೊದಲ `ರಾಷ್ಟ್ರಕವಿ'. ಕನ್ನಡ ಭಾಷೆಯ ಪುರಾತನತೆ ಹಾಗೂ ಕನ್ನಡ ರಾಜರ ಇತಿಹಾಸವನ್ನು ತಮ್ಮದೇ ರೀತಿಯಲ್ಲಿ ಪುನಾರಚಿಸಿ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಿದ ಪೈಗಳು ತಾವು ಹುಟ್ಟಿ ಬಾಳಿದ ಮಂಜೇಶ್ವರ ಕರ್ನಾಟಕಕ್ಕೆ ಸೇರಿದ ಹೊಂದ ಗಾಢ ದುಃಖದಲ್ಲೇ ಮರಣ ಹೊಂದಿದರು.

9. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕನ್ನಡ ಸಣ್ಣಕತೆಗಳ ಪಿತಾಮಹ. ಅಷ್ಟೇ ಅಲ್ಲ, ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ಕಿರಿಯ ಸಾಹಿತಿಗಳಿಗೆ, ಕನ್ನಡ ನುಡಿ ಸೇವಕರಿಗೆ ಸರ್ವ ರೀತಿಯ ಸಹಾಯ ನೀಡಿ ಬೆಳೆಸಿದ ಹಿರಿಯರು. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕನ್ನಡನಾಡು ನುಡಿಯ ಉತ್ಕರ್ಷಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಜ್ಞಾನಪೀಠ ಪ್ರಶಸ್ತಿ ವಿಜೇತರು.

10. ಬೇಂದ್ರೆ
`ಅಂಬಿಕಾತನಯದತ್ತ'ನಾಗಿ ಕನ್ನಡ ಕಾವ್ಯಕ್ಕೊಂದು ಹೊಸ ಶೋಭೆ ತಂದುಕೊಟ್ಟ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಶಬ್ದ ಗಾರುಡಿಗ, ಸಹಜ ಕವಿ. ಕನ್ನಡದ ಅವಧೂತನಂತೆ ಕನ್ನಡ ಕಾವ್ಯ, ನಾಟಕ, ಮೀಮಾಂಸೆ ಹಾಗೂ ಅವೆಲ್ಲವುಗಳಿಗಿಂತ ಹೆಚ್ಚಾಗಿ ತಮ್ಮ ಮಾಂತ್ರಿಕ ಮಾತುಗಾರಿಕೆಯ ಮೂಲಕ ಕನ್ನಡ ಜನಮನವನ್ನು ಹುಚ್ಚೆಬ್ಬಿಸಿದ್ದ ಬೇಂದ್ರೆ, ಜ್ಞಾನಪೀಠ ಪ್ರಶಸ್ತಿ ಪಡೆದು ಅವರ ಗೌರವವನ್ನು ಹೆಚ್ಚಿಸಿದ್ದರು!
ಇವರೊಂದಿಗೇ ಒಂದಿಷ್ಟು ದೂರದಲ್ಲಿ ನೆನಪಾಗುವವರು ಇಂದಿನ ಕವಿ, ನಾಟಕಕಾರ ಚಂದ್ರಶೇಖರ ಕಂಬಾರರು.

11. ಕೆ.ಶಿವರಾಮ ಕಾರಂತ
ಕನ್ನಡ ವೈಚಾರಿಕತೆಯ ಧೀಮಂತ ಪ್ರತಿನಿಧಿಯಂತಿದ್ದ ಕಾರಂತರ ಬಾಳ್ವೆಯೇ ಒಂದು ಪ್ರಯೋಗಶಾಲೆಯಂತಿತ್ತು. ಆಧುನಿಕ ಮನುಷ್ಯ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದೋ ಸರಿ ಸುಮಾರು ಆ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಬಾಳ್ವೆಯೇ ಬೆಳಕೆಂದು ತನ್ನ ಅನುಭವಗಳ ಮೂಲಕವೇ ಕಂಡುಕೊಂಡ ನಮ್ಮ ಕಾಲದ ಚಾವರ್ಾಕ ಮುನಿ! ಸಹಜವಾಗಿಯೇ ತಮ್ಮ ಸಾಹಿತ್ಯ ಸಾಧನೆಗಾಗಿ - ವಿಶೇಷವಾಗಿ ಕಾದಂಬರಿಕಾರರಾಗಿ- ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಕಾರಂತರು, ಕನ್ನಡಿಗರಿಗೆ ಕನ್ನಡದ ಒಂದು ವಿಶಿಷ್ಟ ಬದುಕಿನ ಮಾದರಿಯಾಗಿ ಬಹುಕಾಲ ನೆನಪಿನಲ್ಲಿ ಉಳಿಯುವರು.

12. ಕುವೆಂಪು
ಆಧ್ಯಾತ್ಮಿಕತೆ ಹಾಗೂ ವೈಚಾರಿಕತೆಗಳು ಬೇರೆ ಬೇರೆಯೇ ಅಲ್ಲ ಎಂದು ತಮ್ಮ ಬದುಕು ಮತ್ತು ಬರಹಗಳು ಸಾಧಿಸಿ ತೋರಿಸಿದ ಆಧುನಿಕ `ಶೂದ್ರತಪಸ್ವಿ'ಯಾದ ಕೆ.ವಿ.ಪುಟ್ಟಪ್ಪ; ಕುವೆಂಪುವಾಗಿ ಮೈದಳೆದು ಕನ್ನಡಿಗರನ್ನು ಎಚ್ಚರಗೊಳಿಸಿದ ಬಗೆಯನ್ನೇ ಆಧುನಿಕ ಕನ್ನಡ ಸಂಸ್ಕೃತಿ ಚರಿತ್ರೆ ಎಂದು ಕರೆಯಬಹುದಾದಷ್ಟು ಯುಗಪ್ರವರ್ತಕವಾದ ಹೆಸರು. ಕನ್ನಡ ಪ್ರಜ್ಞೆ ಇವರ ಸಾಹಿತ್ಯ ನಿರ್ಮಾಣ ಮತ್ತು ವ್ಯಕ್ತಿತ್ವ ನಿರೂಪಣೆಯಿಂದ ಬಹುಮುಖಿ ಸತ್ಯ ಹಾಗೂ ಸತ್ವವನ್ನು ಪಡೆದುಕೊಂಡಿತು. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಎನಿಸಿದ ಕುವೆಂಪು ಅವರ `ರಾಮಾಯಣ ದರ್ಶನಂ' ಹಾಗೂ `ಮಲೆಗಳಲ್ಲಿ ಮದುಮಗಳು' ಆಧುನಿಕ ಕನ್ನಡ ಸಂಸ್ಕೃತಿಯ ನಿಜವಾದ ಮಹಾಕಾವ್ಯಗಳೆನಿಸಿಕೊಂಡಿವೆ.

13. ಬೆಳ್ಳಾವೆ ವೆಂಕಟ ನಾರಾಯಣಪ್ಪ:
ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದ ಇವರು ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಆದ್ಯ ಪ್ರವರ್ತಕರು. ವಿಜ್ಞಾನ ಸಾಹಿತ್ಯ ಪ್ರಚಾರಕ್ಕೆಂದು ಕಳೆದ ಶತಮಾನದ ಮುವ್ವತ್ತರ ದಶಕದಲ್ಲಿಯೇ 'ಕರ್ಣಾಟಕ ವಿಜ್ಞಾನ ಸಮಿತಿ'ಯನ್ನು ರಚಿಸಿಕೊಂಡು, ಒಂದು ವರ್ಷದ ಕಾಲ 'ವಿಜ್ಞಾನ' ಎಂಬ ಮಾಸಿಕವನ್ನು ನಡೆಸಿದರು. ಉನ್ನತ ವಿಜ್ಞಾನವನ್ನೂ ಕನ್ನಡದಲ್ಲಿ ಬರೆಯಬಹುದು; ಬೋಧಿಸಬಹುದು ಕೂಡಾ ಎಂದು ನಂಬಿದ್ದ ಬೆಳ್ಳಾವೆಯವರು ಸೇವಾ ಸ್ವಯಂ ನಿವೃತ್ತಿ ಪಡೆದು, ಕನ್ನಡದ ಈ ಕೆಲಸಕ್ಕೆ ತೊಡಗಿಕೊಂಡ ಹಿರಿಯ ನುಡಿ ಅಭಿಮಾನಿ.

14. ಗುಬ್ಬಿ ವೀರಣ್ಣ :
ಕನ್ನಡವೃತ್ತಿ ರಂಗಭೂಮಿಯನ್ನು ಆಧುನಿಕಗೊಳಿಸಿ ಅದಕ್ಕೊಂದು ಯಶಸ್ವಿ ವ್ಯಾಪಾರೋದ್ಯಮವನ್ನಾಗಿಯೂ ಬೆಳೆಸಿದ ಗುಬ್ಬಿ ವೀರಣ್ಣ ತಮ್ಮ ಶ್ರೀ ಚನ್ನಬಸವೇಶ್ವರ ನಾಟಕ ಮಂಡಲಿ ಮೂಲಕ ಅನೇಕ ಪ್ರತಿಭಾವಂತ ನಾಟಕಕಾರರು, ನಟ ನಟಿಯರು, ನಿರ್ದೇಶಕರು, ಸಂಗೀತಗಾರರು ಹಾಗೂ ರಂಗತಜ್ಞರನ್ನು ಬೆಳಕಿಗೆ ತಂದವರು. ಚಲನಚಿತ್ರ ರಂಗವನ್ನು ಪ್ರವೇಶಿಸಿ ಅದನ್ನು ಬೆಳಿಸದವರು. ಕರ್ನಾಟಕದಾದ್ಯಂತ ನಾಟಕ ಅಭಿರುಚಿಯನ್ನು ಒಂದು ಆಂದೋಲನವನ್ನಾಗಿ ಬೆಳೆಸಿದ ಕೀರ್ತಿ ವೀರಣ್ಣನವರಿಗೆ ಸಲ್ಲುತ್ತದೆ.
ಇವರೊಂದಿಗೆ ನೆನಪಾಗುವವರು ಮರಾಠಿ ರಂಗಮಂಚದ ಆಕರ್ಷಣೆಗಳೆದುರು ಕನ್ನಡ ಕಳೆದು ಹೋಗದಂತೆ ತಮ್ಮದೇ ನಾಟಕ ಮಂಡಳಿ ಕಟ್ಟಿ ಉತ್ತರ ಕರ್ನಾಟಕದಲ್ಲಿ ಕನ್ನಡ ರಂಗಭೂಮಿಯನ್ನು ಬೆಳೆಸಿದ ಏಣಗಿ ಬಾಳಪ್ಪ.

15. ಕೆ.ವೆಂಕಟಪ್ಪ :
ಚಿತ್ರಕಲೆ, ಶಿಲ್ಪ ಹಾಗೂ ವೀಣಾವಾದನ - ಈ ಮೂರೂ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆದ ಕೆ.ವೆಂಕಟಪ್ಪ ಹಲವಾರು ಶೈಲಿ - ಸಂಪ್ರದಾಯಗಳ ಕಲಾಭ್ಯಾಸ ಮಾಡಿದ್ದರೂ ಕನ್ನಡ-ಕರ್ನಾಟಕದ ಛಾಪನ್ನು ತಮ್ಮ ಅಭಿವ್ಯಕ್ತಿಯಲ್ಲಿ ಸಾಧಿಸಿಕೊಂಡು ಒಂದು ಪರಂಪರೆಯನ್ನೇ ಸೃಷ್ಟಿಸಿದವರು. ಹೊರಗಡೆಯ ಅನೇಕ ಆಹ್ವಾನಗಳನ್ನು ನಿರಾಕರಿಸಿ ಮೈಸೂರಿನಲ್ಲೇ ಉಳಿದು ಕರ್ನಾಟಕ ಚಿತ್ರಕಲೆಗೊಂದು ಹೊಸ ಆಯಾಮ ನೀಡಿದವರು.
ಇವರೊಂದಿಗೆ ನೆನಪಾಗುವವರು ಮುಂಬೈನಲ್ಲಿ ನೆಲೆಸಿದ್ದರೂ ಕನ್ನಡದ್ದೆನ್ನಬಹುದಾದ ಚಿತ್ರಕಲೆ ಬೆಳೆಸಿದ ಕೆ.ಕೆ. ಹೆಬ್ಬಾರರು.

16. ಕೆ. ವೆಂಕಟ ಲಕ್ಷ್ಮಮ್ಮ:
ಕರ್ನಾಟಕದ ನೃತ್ಯ ಪರಂಪರೆಯನ್ನು ತಮ್ಮ ಪ್ರತಿಭೆ - ಪರಿಶ್ರಮಗಳ ಮೂಲಕ ಉಳಿಸಿ ಬೆಳೆಸಿದ ಇವರು ಮೂಲತಃ ಲಂಬಾಣಿ ತಾಂಡ್ಯವೊಂದರಿಂದ ಬಂದವರು! ಆಗಿನ ಮೈಸೂರು ಸಂಸ್ಥಾನದಲ್ಲಿ ನಾಟ್ಯ ಸರಸ್ವತಿ ಎಂದೇ ಹೆಸರಾಗಿದ್ದ ಜೆಟ್ಟತಾಯಮ್ಮ ಅವರಲ್ಲಿ ನೃತ್ಯಾಭ್ಯಾಸ ಮಾಡಿದ ವೆಂಕಟ ಲಕ್ಷ್ಮಮ್ಮ ನಾಲ್ವಡಿ ಕೃಷ್ಣರಾಜ ಒಡೆಯರರ ಆಸ್ಥಾನ ವಿದುಷಿಯಾಗಿ, ಭರತ ನಾಟ್ಯಕಲೆಯ ಮೈಸೂರು ಸಂಪ್ರದಾಯವನ್ನು ಬೆಳೆಸಿದರು. ನಂತರ ತಮ್ಮದೇ ನಾಟ್ಯ ಶಾಲೆಯ ಮೂಲಕ, ತದನಂತರ ಲಲಿತಾ ಕಲಾ ಕಾಲೇಜಿನ ಅಧ್ಯಾಪಕಿಯಾಗಿ ಹಲವು ದೇಶಿ - ವಿದೇಶಿ ಶಿಷ್ಯ - ಶಿಷ್ಯೆಯರನ್ನು ತಯ್ಯಾರು ಮಾಡಿ ಕನ್ನಡ ನಾಟ್ಯ ಪರಂಪರೆಯನ್ನು ಊರ್ಜಿತಗೊಳಿಸಿದರು.
ಇವರೊಂದಿಗೆ ನೆನಪಾಗುವವರು ಮೈಸೂರಿನಲ್ಲಿ ನೆಲೆಸಿ, ತಾವು ಸ್ಥಾಪಿಸಿದ ಗುರುಕುಲ ಶೈಲಿಯ ಶಿಲ್ಪಶಾಲೆಯ ಮೂಲಕ ಕರ್ನಾಟಕದ ಶಿಲ್ಪ ಪರಂಪರೆಯನ್ನು ಉಳಿಸಿ ಬೆಳೆಸಿದ ಅಭಿನವ ಜಕಣಾಚಾರ್ಯರೆಂದೇ ಹೆಸರಾಗಿದ್ದ ಸಿದ್ಧಲಿಂಗ ಸ್ವಾಮಿಗಳು.

17. ರೆವರೆಂಡ್ ಉತ್ತಂಗಿ ಚೆನ್ನಪ್ಪ.:
ಕ್ರೈಸ್ತ ಮತ ಉಪದೇಶಕರಾಗಿದ್ದ ಇವರು, ಕನ್ನಡ ಕ್ರೈಸ್ತ ಸಂಸ್ಕೃತಿಯ ಅತ್ಯುತ್ತಮ ಪ್ರತೀಕದಂತಿದ್ದಾರೆ. ಕನ್ನಡ ಜನಜೀವನದಲ್ಲಿ ಹಾಸು ಹೊಕ್ಕಾಗಿ ಹೋಗಿರುವ ಸರ್ವಜ್ಞನ ವಚನಗಳನ್ನು ಮೊದಲ ಬಾರಿಗೆ ಶಾಸ್ತ್ರೀಯವಾಗಿ ಸಂಪಾದಿಸಿಕೊಟ್ಟ ಉತ್ತಂಗಿಯವರು, ಆ ಮೂಲಕ ಸರ್ವಜ್ಞನನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ಕನ್ನಡಿಗರಿಗೆ ಸಮಗ್ರವಾಗಿ ಪರಿಚಯ ಮಾಡಿಕೊಟ್ಟವರು. ತಿಳಿಗನ್ನಡದಲ್ಲಿ ಕ್ರೈಸ್ತ ಮತದ ತತ್ವವಿವೇಚನೆಯ ಹಾಗೂ ಇತಿಹಾಸ - ಪುರಾಣ ಗ್ರಂಥಗಳನ್ನು ರಚಿಸಿರುವ, ಅನುವಾದಿಸಿರುವ ಚೆನ್ನಪ್ಪ, ಆವರೆಗೆ ಅಪ್ರಖ್ಯಾತರಾಗಿದ್ದ ಹಲವು ಶಿವಶರಣರ ವಚನಗಳನ್ನೂ ಸಂಪಾದಿಸಿ ಕೊಟ್ಟಿದ್ದಾರೆ.

18. ಟಿ.ಪಿ. ಕೈಲಾಸಂ:
ಕನ್ನಡದ-ನಿದರ್ಿಷ್ಟವಾಗಿ ಹಳೇ ಮೈಸೂರಿನ ಕನ್ನಡಿಗರ - ಆಡು ಮಾತಿನ ಸೊಗಸನ್ನು ಸೂರೆ ಮಾಡಿದ ಇವರು ತಮ್ಮ ನಾಟಕ - ಪ್ರಹಸನ - ಹಾಡು - ಚಟಾಕಿ - ಭಾಷಣಗಳ ಮೂಲಕ ಕನ್ನಡಿಗರಲ್ಲಿ ಒಂದು ವಿಶಿಷ್ಟ ನೆಲೆಯ ಆಧುನಿಕತೆಯ ಅರಿವನ್ನು ಮೂಡಿಸಿದವರು. ಪಾಶ್ಚತ್ಯರ ವೈಚಾರಿಕತೆಯನ್ನು ಭಾರತೀಯ ಮೌಲ್ಯ ಪರಂಪರೆಯೊಂದಿಗೆ ಸಮನ್ವಯಿಸಿದ ಪ್ರಯತ್ನವೊಂದೆಂಬಂತೆ ತೋರುವ ಕೈಲಾಸಂರ ಕತರ್ೃತ್ವ ಶಕ್ತಿ, ಕನ್ನಡಕ್ಕೇ ಹೊಸದೆನ್ನುವಂತಹುದು.
ಇವರೊಂದಿಗೇ ನೆನಪಾಗುವವರು 'ಭಯಾಗ್ರಪಿ'ಯ ಬೀಚಿ ಹಾಗೂ ಸ್ವಲ್ಪ ದೂರದೆಲ್ಲಂಬಂತೆ 'ಕೊರವಂಜಿ'ಯ ರಾಶಿ ಮತ್ತು ಲಲಿತ ಪ್ರಬಂಧಕಾರ ಎ. ಎನ್. ಮೂರ್ತಿರಾಯರು.

19. ಗೊರೂರು ರಾಮಸ್ವಾಮಿ ಅಯ್ಯಂಗಾರ್ :
ಮುಖ್ಯವಾಗಿ ತಮ್ಮ ವಿನೋದ ಬರಹಗಳ ಮೂಲಕ ಕನ್ನಡ ಸಾಹಿತ್ಯಕ್ಕೊಂದು ಹೊಸ ಲವಲವಿಕೆ ತಂದುಕೊಟ್ಟ ಗೊರೂರರು ಆ ಮೂಲಕ ಕನ್ನಡಿಗರಲ್ಲಿ ವಾಚನಾಭಿರುಚಿಯನ್ನು ಬೆಳೆಸಿದವರು. ಹಾಗೇ ಗಾಂಧಿಯುಗದ ಮೌಲ್ಯಗಳನ್ನು ತಮ್ಮ ಬದುಕು ಬರಹದ ಮೂಲಕ ಕನ್ನಡ ಜನಜೀವನದಲ್ಲಿ ಬಿತ್ತಿದವರು. ಹಳೇ ಮೈಸೂರಿನ ಹಳ್ಳಿಯ ಬದುಕಿನ ಸೌಂದರ್ಯವನ್ನು, ಜನಪದ ಸಾಹಿತ್ಯದ ಶ್ರೀಮಂತಿಕೆಯನ್ನು ಕನ್ನಡಿಗರಿಗೆ ಪರಿಚಯಿಸಿದವರು.

20. ಎಸ್.ನಿಜಲಿಂಗಪ್ಪ:
ಆಧುನಿಕ ಕರ್ನಾಟಕದ ಪಿತಾಮಹರೆನಿಸಿದ ಸಿದ್ಧನಹಳ್ಳಿ ನಿಜಲಿಂಗಪ್ಪ, ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣಗಳೆರಡರಲ್ಲೂ ದುಡಿದು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಸರಳ ಬದುಕಿನ ರಾಜಕಾರಣಿ. ನಾಡು ನುಡಿಯ ಬಗ್ಗೆ ಅಪಾರ ಪ್ರೇಮವನ್ನಿಟ್ಟುಕೊಂಡಿದ್ದ ಇವರು ರಾಷ್ಟ್ರಮಟ್ಟದ ರಾಜಕಾರಣಿಯಾದರೂ, ಕನ್ನಡ ಸಂಸ್ಕೃತಿಯಲ್ಲಿ ಬೇರನ್ನಿಳಿಸಿಕೊಂಡವರು. ವೀರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆಯವರಂತಹ ಹೊಸ ಭರವಸೆಗಳ ರಾಜಕಾರಣಿಗಳನ್ನು ತಯ್ಯಾರು ಮಾಡಿದವರು.
ಇವರೊಂದಿಗೇ ನೆನಪಾಗುವವರು ಇವರ ರಾಜಕೀಯ ಶತ್ರುಗಳಂತಿದ್ದ ದಿಟ್ಟ ರಾಜಕಾರಣಿ ಕೆಂಗಲ್ ಹನುಮಂತಯ್ಯ ಹಾಗೂ ಸ್ವಚ್ಛ ರಾಜಕಾರಣಿ ಕಡಿದಾಳ್ ಮಂಜಪ್ಪ.

21. ಶಾಂತವೇರಿ ಗೋಪಾಲಗೌಡ :
ಮಲೆನಾಡಿನ ಮೂಲೆಯೊಂದರಲ್ಲಿ ದನಕಾಯುವ ಹುಡುಗನಾಗಿದ್ದ ಗೋಪಾಲ ಕರ್ನಾಟಕದ ಧೀಮಂತ ರಾಜಕಾರಣಿ ಶಾಂತವೇರಿ ಗೋಪಾಲಗೌಡರಾದ ಕಥೆಯೇ ಕರ್ನಾಟಕದ ಸಮಾಜವಾದಿ ಚಳುವಳಿಯ ಕಥೆಯೂ ಆಗಿದೆ ಎನ್ನುವಷ್ಟರ ಮಟ್ಟಿಗೆ ಇವರು ಆಧುನಿಕ ಕನ್ನಡ ಸಂಸ್ಕೃತಿಯ ದಂತಕಥೆಗಳಲ್ಲೊಬ್ಬರಾಗಿದ್ದಾರೆ. ತಮ್ಮದೊಂದು ಕಿರಿಯ ಗೆಳೆಯರ ಬಳಗದ ಮೂಲಕ ಸಮಾನತೆಯ ತತ್ವದ ಪರಿಮಳವನ್ನು ಕರ್ನಾಟಕದಾದ್ಯಂತ ಪಸರಿಸಿದ ಗೋಪಾಲಗೌಡರು ಕನ್ನಡದ ಜನಪದ ವಿವೇಕದ ಹಾಗೂ ಅದಮ್ಯ ಕ್ರಿಯಾಶೀಲತೆಯ ಪ್ರತೀಕವಾಗಿದ್ದಾರೆ.
ಇವರೊಂದಿಗೇ ನೆನಪಾಗುವವರು ಕರ್ನಾಟಕದ ದಿಟ್ಟ ಹಾಗೂ ಸ್ವಚ್ಛ ರಾಜಕಾರಣಿಗಳಾದ ಎಸ.ಶಿವಪ್ಪ ಹಾಗೂ ಜಗಳೂರು ಇಮಾಮ್.

22. ಡಿ.ದೇವರಾಜು ಅರಸು :
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಅತ್ಯಂತ ಪ್ರಗತಿಪರ ರಾಜಕಾರಣಿ. ಮುಖ್ಯಮಂತ್ರಿಯಾಗಿ ಕರ್ನಾಟಕವನ್ನು ಸರ್ವ ರೀತಿಯಲ್ಲಿ ಪ್ರಗತಿಪರವಾಗಿ ಮುನ್ನಡೆಸಿದ ಅರಸು, ಎಲ್.ಜಿ.ಹಾವನೂರರ ಸಹಕಾರದೊಂದಿಗೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ `ಸಾಮಾಜಿಕ ನ್ಯಾಯ'ದ ಹರಿಕಾರರೆನಿಸಿಕೊಂಡರು. ಗೋಪಾಲಗೌಡರು ಕಂಡ `ಉಳುವವನೇ ನೆಲದೊಡೆಯ' ಕನಸನ್ನು ದೊಡ್ಡ ಪ್ರಮಾಣದಲ್ಲಿ ನನಸು ಮಾಡಿದವರು. ಆದರೆ ಕೊನೆಯಲ್ಲಿ ಕರ್ನಾಟಕದ ಪ್ರಗತಿಪರ ರಾಜಕಾರಣದ ದುರಂತ ನಾಯಕನೆನೆಸಿಕೊಂಡರು.

23. ಬಿ.ಎನ್.ಗುಪ್ತ :
ಕನ್ನಡ ಪತ್ರಿಕೋದ್ಯಮಕ್ಕೆ ಜನಪರತೆಯ ಆಯಾಮ ನೀಡಿದ ಗುಪ್ತ `ಪ್ರಜಾಮತ', `ಜನವಾಣಿ' ಹಾಗೂ `ಜನಪ್ರಗತಿ'ಗಳ ಪ್ರಕಾಶಕರಾಗಿ / ಸಂಪಾದಕರಾಗಿ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯದ ಬೀಜ ಬಿತ್ತಿದವರು. ತಮ್ಮ ಪತ್ರಿಕೆಗಳ ಹೊಸ ಆಲೋಚನಾಕ್ರಮದಿಂದಾಗಿ ಬ್ರಿಟಿಷ್ ಪ್ರಭುತ್ವದಿಂದಲೂ, ಮೈಸೂರು ಸಂಸ್ಥಾನದ ಪ್ರಭುತ್ವದಿಂದಲೂ ಬೆದರಿಕೆಗಳನ್ನು ಎದುರಿಸಿದ ಗುಪ್ತ ಅನೇಕ ಪ್ರಗತಿಪರ ಚಿಂತನೆಯ ತರುಣ ಪತ್ರಕರ್ತರನ್ನು ತಯ್ಯಾರು ಮಾಡಿ ನವೀನ ರೀತಿಯ ಬರಹ ಹಾಗೂ ಅಂಕಣಗಳ ಮೂಲಕ ಹೊಸರುಚಿ ಅಭಿರುಚಿಗಳನ್ನು ಬೆಳೆಸಿ ಕನ್ನಡ ಪತ್ರಿಕೋದ್ಯಮವನ್ನು ಆರಂಭದಿಂದಲೂ ಆವರಿಸಿದ್ದ ಸಾಂಪ್ರದಾಯಿಕ ಜಡತೆಗೆ ಪಟ್ಟುಕೊಟ್ಟರು.

24. ಪಿ.ಕಾಳಿಂಗರಾವ್ :
ಕನ್ನಡ ಸುಗಮ ಸಂಗೀತದ ಹರಿಕಾರ. ಪ್ರಯೋಗಶೀಲ ಸಾಹಸಿ. ಸಾಹಿತ್ಯ, ಸಂಗೀತ ಸಮಾಜವಾದಗಳ ಹುಚ್ಚು ಹತ್ತಿಸಿಕೊಂಡ ಅಲೆಮಾರಿ. ಕನ್ನಡ ನವೋದಯ ಕಾವ್ಯಕ್ಕೆ ತಮ್ಮ ತುಂಬು ಕಂಠ ಹಾಗೂ ಪಾಶ್ಚಾತ್ಯ ಶೈಲಿಯ ವಾದ್ಯವೃಂದದ ಮೂಲಕ 'ಪೂರ್ಣಕುಂಭ' ಸ್ವಾಗತ ನೀಡಿದವರು! ಕನ್ನಡ ಜನಸಮುದಾಯದಲ್ಲಿ ಸಂಗೀತಕ್ಕಾಗಿ ಒಂದು ಹೊಸ ಮಧ್ಯಮ ವರ್ಗವನ್ನು ಸೃಷ್ಟಿಸಿದವರು. ಇಲ್ಲಿ ಇತರ ಸಹ ಹಾಡುಗಾರ್ತಿಯರಾದ ಮೋಹನ್ ಕುಮಾರಿ ಸೋಹನ್ ಕುಮಾರಿಯರನ್ನು ನೆನಪಿಸಿಕೊಳ್ಳಬೇಕು.
ಇವರೊಂದಿಗೆ ನೆನಪಾಗುವವರು ಸುಗಮ ಸಂಗೀತವನ್ನು ಕಟ್ಟಿದ ಮೈಸೂರು ಅನಂತಸ್ವಾಮಿ, ಎಚ್.ಆರ್.ಲೀಲಾವತಿ ಹಾಗೂ ಈಗ ಕನ್ನಡ ಸುಗಮ ಸಂಗೀತವನ್ನು ಒಂದು ಚಳುವಳಿಯಂತೆ ರೂಪಿಸುತ್ತಿರುವ ಸಿ.ಅಶ್ವತ್ಥ್!

25. ಅನಕೃ :
ಕನ್ನಡ ಸಾಹಿತ್ಯದ ಪ್ರಗತಿಶೀಲಘಟ್ಟದ ನಾಯಕತ್ವ ವಹಿಸಿದ್ದವರು. ಆ ಮೂಲಕ ಕನ್ನಡ ಸಾಹಿತ್ಯದೆ ಅನಗತ್ಯ ಮಡಿ - ಮೈಲಿಗೆಗಳನ್ನು ತೊಡೆದು ಹಾಕಿದವರು. ನೂರು ಕಾದಂಬರಿಗಳನ್ನು ಕನ್ನಡಕ್ಕೆ ಕೊಟ್ಟು `ಕಾದಂಬರಿ ಸಾರ್ವಭೌಮ'ರೆನಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಒಂದು ಮಧ್ಯಮವರ್ಗದ ಓದುಗರನ್ನು ಸೃಷ್ಟಿಸಿದವರು. ಉತ್ತಮ ವಾಗ್ಮಿ. ಕನ್ನಡ ಚಳುವಳಿಗೊಂದು ಸ್ಥೂಲ ಪ್ರಣಾಳಿಕೆ ಒದಗಿಸಿದವರು.
ಇವರೊಂದಿಗೆ ನೆನಪಿಸಿಕೊಳ್ಳಬೇಕಾದವರು ನಿರಂಜನ, ಬಸವರಾಜ ಕಟ್ಟೀಮನಿ, ತರಾಸು ಹಾಗೂ ಮ.ರಾಮಮೂರ್ತಿ.

26. ದಿನಕರ ದೇಸಾಯಿ:
ಉತ್ತರ ಕನ್ನಡದಲ್ಲಿನ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹೋರಾಟ, ಸಮಾಜವಾದಿ ಚಳುವಳಿ ಹಾಗೂ ರೈತ-ಕಾರ್ಮಿಕ ಸಂಘಟನೆಯ ದೊಡ್ಡ ಮುಂದಾಳಾಗಿದ್ದ ಇವರು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗೆ ಕಾರ್ಮಿಕರ ಪ್ರತಿನಿಧಿಯಾಗಿ ಹೋಗಿದ್ದವರು. ದೇಸಾಯಿಯವರು ಕನ್ನಡ ಪ್ರಜ್ಞೆಯನ್ನು ಪ್ರವೇಶಿಸಿರುವ್ಯದು, ಮುಖ್ಯವಾಗಿ ಹಲವು ನೆಲೆಗಳಲ್ಲಿ ಸಮಾಜದ ಆತ್ಮಸಾಕ್ಷಿಯನ್ನು ಕೆರಳಿಸುವ ಅವರ ಚುರುಕಾದ ಚುಟಕಗಳ ಮೂಲಕ. ಕನ್ನಡ ಚುಟುಕು ಸಾಹಿತ್ಯದ ಪಿತಾಮಹರೇ ಆಗಿರುವ ಇವರು ಉ.ಕ.ದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಮೂಲಕ ಶಿಕ್ಷಣ ಕ್ರಾಂತಿಗೆ ಕಾರಣರಾದವರು.

27. ಡಿ.ಸಿ.ಪಾವಟೆ :
ಅಪೂರ್ವ ಪ್ರತಿಭೆಯ ಗಣಿತ ಶಾಸ್ತ್ರಜ್ಞ ಹಾಗೂ ಶಿಕ್ಷಣ ತಜ್ಞ. ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ರ್ಯಾಂಗ್ಲರ್ ಆಗಿ ಉನ್ನತ ಶಿಕ್ಷಣ ಪಡೆದವರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯಾಗಿ ವಿಶ್ವವಿದ್ಯಾಲಯವನ್ನು ಶಿಸ್ತು ಮತ್ತು ದಕ್ಷತೆಯಿಂದ ಅಭಿವೃದ್ಧಿ ಪಡಿಸಿದವರು. ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿ ಪಂಜಾಬ್ ರಾಜ್ಯದ ರಾಜ್ಯಪಾಲರಾಗಿ ಸಾರ್ವಜನಿಕ ಆಡಳಿತ ವ್ಯವಹಾರದಲ್ಲೂ ತಮ್ಮ ಸಾಧನೆ ತೋರಿದವರು. ಕುವೆಂಪು ಅವರ ಒತ್ತಾಸೆಯ ಮೇರೆಗೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನ್ನಡದ ದೀಕ್ಷೆ ನೀಡಿದವರು.
ಇವರೊಂದಿಗೆ ನೆನಪಾಗುವವರು ವಿಚಾರವಾದ ಹಾಗೂ ಗಾಂಧಿವಾದಗಳನ್ನು ಮೇಳವಿಸಿ ಬಾಳಿದ ಎಚ್.ನರಸಿಂಹಯ್ಯನವರು.

28. ಶಂ.ಬಾ. ಜೋಷಿ:
ಕರ್ನಾಟಕ ಸಂಸ್ಕೃತಿ ಚರಿತ್ರೆಯನ್ನು ಹೊಸ ಆಕರಗಳ ಆಧಾರದ ಮೇಲೆ ಪುನಾರಚಿಸುವ ಮಹಾ ಸಾಹಸ ಮಾಡಿರುವ ಶಂಕರ ಬಾಳ ದೀಕ್ಷಿತ ಜೋಷಿ ಕನ್ನಡದ ಹಿರಿಯ ವಿದ್ರೋಹಿ ಚಿಂತಕರು ಹಾಗೂ ಸಂಶೋಧಕರೆನ್ನಿಸಿಕೊಂಡಿದ್ದಾರೆ. ಅರವಿಂದ, ರಾನಡೆಯಂತಹವರಿಂದ ಪ್ರಭಾವಿತರಾಗಿದ್ದರೂ, ಕನ್ನಡ ಜನಪದ ಸಂಸ್ಕೃತಿಯ ತಲಸ್ಪರ್ಶಿ ಆಧ್ಯಯನ ಮಾಡಿ, ಹೊಸ ಪ್ರತೀಕಗಳ ನೆರವಿನಿಂದ ಕನ್ನಡ ಭಾಷೆ, ಕುಲ, ಸಂಸ್ಕೃತಿಗಳಿಗೊಂದು ಹೊಚ್ಚ ಹೊಸ ನೆಲೆ ಒದಗಿಸಿ ಎಲ್ಲರ ಬೆರಗಿಗೆ ಕಾರಣರಾದವರು.

29.ಜಿ.ಬಿ.ಜೋಷಿ:
ಧಾರವಾಡದ ತಮ್ಮ `ಮನೋಹರ ಗ್ರಂಥಮಾಲೆ'ಯ ಅಟ್ಟದಲ್ಲಿ ಕನ್ನಡದ ಗುರುಕುಲವೊಂದನ್ನು ಕಟ್ಟಿ ನಡೆಸುತ್ತಿದ್ದ ಈ `ಜಡಭರತ', ತಾನು ಬರೆದದು ಕಡಿಮೆಯಾದರೂ ಇತರ ಪ್ರತಿಭಾವಂತರಿಂದ ಬರೆಸಿದ್ದು ಅಪಾರ, ಅಮೂಲ್ಯ. ಬೇಂದ್ರೆ ಆನಂದಕಂದರಂತಹ ಹಿರಿಯರಿಂದೊಡಗೂಡಿ ಆರಂಭವಾದ ಇವರ `ಗೆಳೆಯರ ಬಳಗ' ಕೀರ್ತಿನಾಥ ಕುರ್ತುಕೋಟಿ ಹಾಗೂ ಗಿರೀಶ್ ಕಾರ್ನಾಡರಂತಹ ಹೊಸ ತಲೆಮಾರಿನ ಪ್ರತಿಭಾವಂತರಿಗೆ ಜಾಗಮಾಡಿಕೊಟ್ಟಿತು. ಹೊಸ ಸಾಹಿತ್ಯಿಕ - ಸಾಂಸ್ಕೃತಿಕ ಸಂವಾದಗಳನ್ನು ಹುಟ್ಟು ಹಾಕಿತು.
ಇದೇ ಸಂದರ್ಭದಲ್ಲಿ ಮಧುರ ಚೆನ್ನ ಹಾಗೂ ಅವರು ಕಟ್ಟಿದ ಹಲಸಂಗಿ ಗೆಳೆಯರ ಬಳಗದ ಸಾಧನೆಗಳನ್ನು ನೆನಪಿಸಿಕೊಳ್ಳುವುದು ಉಚಿತವಾದೀತು.

30. ಮಲ್ಲಿಕಾರ್ಜುನ ಮನ್ಸೂರ್:
ರಂಗನಟನಾಗಿ ನಾಟ್ಯ ಸಂಗೀತದ ಮೂಕ ಹಿಂದೂಸ್ತಾನಿ ಸಂಗೀತದ ಅತ್ಯುನ್ನತ ಶಿಖರವನ್ನು ಮುಟ್ಟಿದ ಮನ್ಸೂರ್ ಅಚ್ಚ ಕನ್ನಡದ ಪ್ರತಿಭೆ. ಅವರು ಹಾಡಿರುವ ವಚನಗಳ ಸೊಬಗೇ ಇದಕ್ಕೆ ಸಾಕ್ಷಿ. ಅಭ್ಯಾಸಕ್ಕಾಗಿ, ಗಾಯನಕ್ಕಾಗಿ ಹೊರಗೆ ಹೋದರೂ ಮತ್ತೆ ತಮ್ಮ ಧಾರವಾಡದ ಗೂಡಿಗೆ ಮರಳುತ್ತಿದ್ದ ಸರಳ ಸಂತೃಪ್ತಿಯ ಮನ್ಸೂರರು ಸಂಗೀತದಲ್ಲಷ್ಟೇ ಅಲ್ಲ, ಲೋಕ ಜೀವನದಲ್ಲೂ ಆಧ್ಯಾತ್ಮಿಕ ಎತ್ತರಗಳನ್ನು ಮುಟ್ಟಿದ್ದ ನಿಜವಾದ ಸಾಧಕ ಶರಣ.
ಇವರೊಂದಿಗೇ ನೆನಪಾಗುವವರು 'ಸೊಗಸುಗಾರ' ಬಸವರಾಜ ರಾಜಗುರು ಹಾಗೂ ವಚನ ಗಾಯಕ ಸಿದ್ಧರಾಮ ಜಂಬಲದಿನ್ನಿ.

31. ಬಾಳಪ್ಪ ಹುಕ್ಕೇರಿ :
ಘಟಪ್ರಭೆಯ ವರಪುತ್ರನಂತಿದ್ದ ಬಾಳಪ್ಪ ಹುಕ್ಕೇರಿ ಕನ್ನಡ ಜನಪದ ಹಾಗೂ ಸುಗಮ ಸಂಗೀತದ ದೊಡ್ಡ ಘಟ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಗೀಗೀ ಪದ ಹಾಗೂ ಲಾವಣಿಗಳ ಮೂಲಕ ಸಂತೆ - ಜಾತ್ರೆಗಳಲ್ಲಿ ಜನರನ್ನು ಜಾಗೃತಗೊಳಿಸುತ್ತಿದ್ದ ಈ ಗಾಯಕ, ಸ್ವಾತಂತ್ರ್ಯಾನಂತರ ತನ್ನದೇ ಒಂದು ಗ್ರಾಮಾಂತರ ತಂಡ ಕಟ್ಟಿಕೊಂಡು ಕನ್ನಡ ಕಾವ್ಯವನ್ನು ತನ್ನ ಗಂಡು ಗಾಯನದ ಹಾಗೂ ನಾಟಕೀಯ ಭಾವ ಭಂಗಿಗಳ ಮೂಲಕ ಜನರಿಗೆ ಮುಟ್ಟಿಸಿದ ಸಂಸ್ಕೃತಿ ಸೇವಕ.
ಇವರೊಂದಿಗೆ ನೆನಪಾಗುವವರು ಬಳ್ಳಾರಿ ನಾಡಿನ ಗಮಕಿ ಜೋಳದರಾಶಿ ದೊಡ್ಡನಗೌಡ.

32. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ:
ಕೊಡಗಿನ ವೀರ ಸಂಪ್ರದಾಯದ ಅಧಿಕೃತ ಪ್ರತಿನಿಧಿಯಂತಿದ್ದ ಇವರು ಸ್ವತಂತ್ರ ಭಾರತದ ಸೇನೆಯ ಪ್ರಥಮ ದಂಡನಾಯಕರು. ಸೇನಾ ಶಿಕ್ಷಣ, ತರಬೇತಿ ಹಾಗೂ ಹೋರಾಟ - ಈ ಮೂರರಲ್ಲೂ ಪರಿಣತಿ ಪಡೆದಿದ್ದ ಕಾರ್ಯಪ್ಪ, ಕನ್ನಡದ ಯೋಧ ಪರಂಪರೆಯ ಹೆಮ್ಮೆಯ ಪ್ರತೀಕವೂ ಹೌದು. ಸೇನಾ ನಿವೃತ್ತಿಯ ನಂತರ ಆಸ್ಟ್ರೇಲಿಯಾ- ನ್ಯೂಜಿಲ್ಯಾಂಡ್ಗಳಲ್ಲಿ ಭಾರತದ ರಾಯಭಾರಿಯಾಗಿದ್ದ ಇವರು, ತಮ್ಮ ಜೀವನದ ಕೊನೆಯವರೆಗೂ ಯುವಜನರಿಗೆ ನಾಗರಿಕ ಶಿಸ್ತು, ಸಜ್ಜನಿಕೆ, ಧೈರ್ಯ - ಸಾಹಸ ಹಾಗೂ ದೇಶಪ್ರೇಮದ ಪಾಠಗಳನ್ನು ತಮ್ಮ ಕರ್ತವ್ಯವೆಂಬಂತೆ ಹೇಳುತ್ತಲೇ ಇದ್ದರು.

33. ಪುಟ್ಟಣ್ಣ ಕಣಗಾಲ್:
ಕನ್ನಡ ಚಿತ್ರರಂಗ ಕಂಡ ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರಾದ ಇವರು ಮುಖ್ಯವಾಗಿ ಕನ್ನಡ ಸಾಹಿತ್ಯ ಕೃತಿಗಳನ್ನು ಆಧರಿಸಿ ಚಿತ್ರಗಳನ್ನು ನಿರ್ದೇಶಿಸಿ, ಅತಿ ಸಾಮಾನ್ಯ ಪ್ರೇಕ್ಷಕರಲ್ಲೂ ಸಾಹಿತ್ಯದ ರುಚಿ ಹುಟ್ಟಿಸಿದವರು. ಕನ್ನಡ ಭಾಷೆ - ಸಂಸ್ಕೃತಿಗಳ ಆವರಣದಲ್ಲಿ ಜೀವಂತಗೊಳ್ಳುತ್ತಿದ್ದ ಅವರೆಲ್ಲ ಚಿತ್ರಗಳು ತಮ್ಮ ಕಲಾತ್ಮಕತೆ ಹಾಗೂ ಜನಪ್ರಿಯ ಅಂಶಗಳ ಮೂಲಕ ಕನ್ನಡ ಚಲಚಿತ್ರರಂಗಕ್ಕೊಂದು ಹೊಸ ಪ್ರಭೆಯನ್ನು ಒದಗಿಸಿಕೊಟ್ಟವು.
ಇವರೊಂದಿಗೆ ನೆನಪಾಗುವವರೆಂದರೆ, ಪಂತಲು, ಎನ್. ಲಕ್ಷ್ಮೀನಾರಾಯಣ್, ಸಿದ್ಧಲಿಂಗಯ್ಯ ಹಾಗೂ ಕಲ್ಪನಾ.

34. ಎಂ. ಚಿನ್ನಸ್ವಾಮಿ:
ಕರ್ನಾಟಕದ ಕ್ರಿಕೆಟ್ ಕ್ಷೇತ್ರದ ಹಿರಿಯಜ್ಜ. ಹಲವಾರು ವರ್ಷಗಳ ಕಾಲ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರದಲ್ಲಿದ್ದು, ಕನರ್ಾಟಕ ರಾಷ್ಟ್ರೀಯ - ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಹೆಸರು ಗಳಿಸುವಂತೆ ಕ್ರೀಡೆಗೆ ಬೇಕಾದ ಮೂಲ ಸೌಲಭ್ಯಗಳನ್ನೂ ಪ್ರೋತ್ಸಾಹವನ್ನೂ ಒದಗಿಸಿದ ದಕ್ಷ ಹಾಗೂ ಜನಪ್ರಿಯ ಆಡಳಿತಗಾರ. ಇವರ ಈ ಸಾಮಥ್ರ್ಯದಿಂದಾಗಿಯೇ ಕುಂದರನ್, ಸುಬ್ರಮಣ್ಯಂ, ಚಂದ್ರಶೇಖರ್, ಪ್ರಸನ್ನ, ಜಿ.ಆರ್. ವಿಶ್ವನಾಥ್, ಕಿರ್ಮಾನಿಯವರಂತಹ ಪ್ರತಿಭೆಗಳು ಕರ್ನಾಟಕದ ಹೆಮ್ಮೆಗಳಾಗಿ ಪ್ರಕಾಶಿಸಲು ಸಾಧ್ಯವಾದದ್ದು!

35. ಬಿ.ವಿ.ಕಾರಂತ :
ಹವ್ಯಾಸಿ ಕನ್ನಡ ರಂಗಭೂಮಿಗೆ ತಮ್ಮ ವಿಶಿಷ್ಟ ನಿರ್ದೇಶನ ಪ್ರತಿಭೆಯ ಮೂಲಕ ಹೊಸ ಚಾಲನೆ ನೀಡಿದ ಬಿ.ವಿ.ಕಾರಂತರು, ಆಧುನಿಕ ನಾಟಕವನ್ನು ಪಾರಂಪರಿಕವಾಗಿ ಹಾಗೂ ಪಾರಂಪರಿಕ ನಾಟಕವನ್ನು ಆಧುನಿಕವಾಗಿ ಪ್ರಸ್ತುತ ಪಡಿಸುವ ಛಾತಿ ಹೊಂದಿದ್ದ ಅಂತಃಸ್ಫೂರ್ತಿಶಕ್ತಿಯ ರಂಗಕರ್ಮಿ. ನಾಟಕವೆಂದರೆ ಜನೋತ್ಸವವೆಂಬಂತೆ ಆಚರಿಸುತ್ತಿದ್ದ ಇವರು ಕನ್ನಡದ ಆಧುನಿಕ ರಂಗಭೂಮಿ ತನ್ನ ಪರಂಪರೆಯೊಂದಿಗೆ ಕಳೆದುಕೊಂಡಿದ್ದ ಸಂಬಂಧವನ್ನು ಪುನಃಸ್ಥಾಪಿಸಿದರು.

36. ಗೌರಮ್ಮ ಮಾದಾರ :
ಬಸವ ಹುಟ್ಟಿದ ನಾಡಿನ ಗೌರಮ್ಮ ಮಾದಾರ ತನ್ನ ಚೌಡಿಕೆಯೊಂದಿಗೆ `ಹುಟ್ಟಿ ಬಂದೀ ನೀ ಎಲ್ಲಮ್ಮನಾಗೀ...' ಎಂದು ಬಾಯಿ ಬಿಟ್ಟರೆ ಸಾಕು, ಎಲ್ಲಮ್ಮ ಕಣ್ಣ ಮುಂದೆ ಅವತರಿಸುತ್ತಿದ್ದಳು. ಆಕೆ ತನ್ನ ಸಂಗಡಿಗರೊಂದಿಗೆ ಹಾಡುತ್ತಿದ್ದ ಆವರಣ ಪುರಾಣ ಪುಳಕವಾದಂತೆ ಕಂಪಿಸುತ್ತಿತ್ತು. ಕನ್ನಡ ಸ್ತ್ರೀಶಕ್ತಿಯ ವರ್ತಮಾನದ ಸಂಕಟ - ಸಂಕಲ್ಪಗಳೆರಡನ್ನೂ ಹಾಡಾಗಿ ಹರಿಸುತ್ತಿದ್ದ ಗೌರಮ್ಮನನ್ನು ನೋಡಿದರೆ ನಮ್ಮ ಕಾಲದ ಎಲ್ಲಮ್ಮನನ್ನೇ ನೋಡಿದಂತಾಗುತ್ತಿತ್ತು!
ಇವರ ಜೊತೆಗೆ ನೆನಪಾಗುವವರು ಸಾವಿರ ಹಾಡುಗಳ ಸಿರಿಯಜ್ಜಿ.

37. ಪಿ. ಲಂಕೇಶ್ :
ಕನ್ನಡದ ಅನನ್ಯ ವಿಲಕ್ಷಣ ಪ್ರತಿಭೆ. ಲೇಖಕನಾಗಿ, ಪತ್ರಕರ್ತನಾಗಿ, ಸಿನಿಮಾ ನಿರ್ದೇಶಕನಾಗಿ ಕನ್ನಡ ಜನಮನದಲ್ಲಿ ಹೊಸ ಸಂಚಲನ ಉಂಟುಮಾಡಿದವರು. `ಲಂಕೇಶ್ ಪತ್ರಿಕೆ'ಯ ಮೂಲಕ ಕನ್ನಡ ಭಾಷೆ ಹಾಗೂ ಪತ್ರಿಕೋದ್ಯಮಕ್ಕೆ ಬಹುಕಾಲ ಉಳಿಯಬಲ್ಲ ಹೊಸದೊಂದು ಜೀವಂತಿಕೆಯ ಸ್ಪರ್ಶ ನೀಡಿದವರು. ಕನ್ನಡ ಜನರಲ್ಲಿ ಹೊಸ ರಾಜಕೀಯ ಪ್ರಜ್ಞೆ ಮೂಡಿಸಿದವರು.

38. ಎಸ್.ಕೆ.ಕರೀಂಖಾನ್ :
ಎಲ್ಲ ಅರ್ಥಗಳಲ್ಲಿ ನಿಜವಾದ ಮುಸ್ಲಿಂ ಕನ್ನಡಿಗನ ಪ್ರತೀಕ. ಆಫ್ಘನ್ ಮೂಲದ ಈ ಪಠಾಣ ಕನ್ನಡ ಕಲಿತು ಸೆಕ್ಯುಲರಿಸಂಗೆ ಆಧುನಿಕರು ನೀಡುವ ಅರ್ಥವನ್ನೇ ಅಣಕ ಮಾಡುವಂತೆ ತನ್ನ ನಡೆ ನುಡಿಗಳನ್ನು ರೂಢಿಸಿಕೊಂಡ ಅತ್ಯಾಧುನಿಕ. ಜಾನಪದ, ನಾಟಕ, ಸಿನಿಮಾ, ಸಾಹಿತ್ಯ, ಧರ್ಮ ಹೀಗೆ ಹಲವು ಕ್ಷೇತ್ರಗಳಲ್ಲಿ ಅಲೆಮಾರಿಯಾಗಿ ಕ್ರಿಯಾಶೀಲರಾಗಿದ್ದ ಕರೀಂಖಾನ್ ಗಾಂಧಿಯುಗದ ಕನ್ನಡ ಬದುಕಿನ ಅತ್ಯುತ್ತಮ ಮಾದರಿಗಳಲ್ಲಿ ಒಬ್ಬರು.
ಇವರೊಂದಿಗೆ ನೆನಪಾಗುವವರು ಜಾನಪದ 'ದಿಗ್ಗಜ' ಎಚ್.ಎಲ್.ನಾಗೇಗೌಡರು.

39. ಕೆ.ಎಸ್.ನರಸಿಂಹ ಸ್ವಾಮಿ:
ತಮ್ಮ ಸರಳ ಸುಂದರ ಆದರೆ ಮನೋಜ್ಞ ಕವನಗಳ ಮೂಲಕ ಕನ್ನಡದ ಜನ ಸಾಮಾನ್ಯರನ್ನು ಕಾವ್ಯದ ಹತ್ತಿರಕ್ಕೆ ಕರೆದುಕೊಂಡ ಈ 'ಮೈಸೂರು ಮಲ್ಲಿಗೆ'ಯ ಕವಿ ಎಲ್ಲ ಅರ್ಥದಲ್ಲಿ ಜನರ ಕವಿ. ಅರ್ಥ - ಪರಮಾರ್ಥಗಳೆರಡನ್ನೂ ಅತಿಗೆ ಒಯ್ಯದೆ; ಜನರ ದಿನ ನಿತ್ಯದ ತಾಪತ್ರಯಗಳ ನಡುವೆಯೂ ಅವರನ್ನು ಮುದಗೊಳಿಸುವ, ಸಾಂತ್ವನ ನೀಡುವ ಭರವಸೆಯ ಕಾವ್ಯವನ್ನು ಅವರ ಮಧ್ಯೆ ಕೂತೇ ರಚಿಸಿದಂತಿರುವ ಕೆ.ಎಸ್.ನ.ರ ಪದ್ಯಗಳು, ಸರಳ ಓದಿಗೂ ಸುಲಭ ಗಾಯನಕ್ಕೂ ಒದಗುವಷ್ಟು ಮೃದು ಮಧುರವಾದ ಕನ್ನಡದಲ್ಲಿ ಮೂಡಿ ಬಂದಿವೆ. ಕನ್ನಡ ಕಾವ್ಯಕ್ಕೆ ಒಂದು ಮಧ್ಯಮ ವರ್ಗವನ್ನು ಸೃಷ್ಟಿಸಿಕೊಟ್ಟ ಕವಿ ಇವರು.

40. ಕೆ.ವಿ.ಸುಬ್ಬಣ್ಣ :
ಮಲೆನಾಡಿನ ಕುಗ್ರಾಮ ಹೆಗ್ಗೋಡಿನಲ್ಲಿ ಇವರು ಕಟ್ಟಿ ಬೆಳೆಸಿದ `ನೀನಾಸಂ' ಕರ್ನಾಟಕದ ಒಂದು ದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಇಂದು ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಪ್ರತಿವರ್ಷ ಇಲ್ಲಿ ನಡೆಯುವ `ಸಂಸ್ಕೃತಿ ಶಿಬಿರ' ರಾಷ್ಟ್ರದ ಒಂದು ಅನನ್ಯ ಸಂಸ್ಕೃತಿ ಘಟನೆ ಎಂದೇ ಹೇಳಬೇಕು. ಹೊಸ ಸಿನಿಮಾ, ಹೊಸ ನಾಟಕ, ಹೊಸ ಸಾಹಿತ್ಯ, ಹೊಸ ವಿಚಾರ - ಹೀಗೆ ಹೊಸ ಹೊಸ ನೆಲೆಗಳಲ್ಲಿ ಕನ್ನಡವನ್ನು ಭಾರತದೊಂದಿಗೆ ಬೆಸೆಯುವ ಈ ಪ್ರಯತ್ನದ ಹಿಂದಿನ ಸ್ಫೂರ್ತಿ ಕೆ.ವಿ.ಸುಬ್ಬಣ್ಣ.

41. ರಾಜ್ಕುಮಾರ್ :
ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಹೆಸರು ಅನ್ನಿಸುವಷ್ಟರ ಮಟ್ಟಿಗೆ ಅದರ `ದಾತ'ರಾಗಿದ್ದ ರಾಜ್ಕುಮಾರ್, ತನ್ನ ಪೂರ್ವಾಶ್ರಮದ ಮುತ್ತುರಾಜ್ ಹಂತದಿಂದ ಕನ್ನಡಿಗರ ಕಣ್ಮಣಿ ರಾಜ್ಕುಮಾರ್ ಆಗಿ ಬೆಳೆದು ನಿಂತ ಕಥೆಯೇ ಒಂದು ಆಧುನಿಕ ಜನಪದ ಕಥೆಯಾಗಿ ಕನ್ನಡಿಗರ ಮನ-ಮನೆಗಳಲ್ಲಿ ಜನಜನಿತವಾಗಿದೆ. ರಾಜ್ಕುಮಾರ್ ತಮ್ಮ ಚಲನಚಿತ್ರಗಳ ಮೂಲಕ ಸೃಷ್ಟಿಸಿದ ಮೌಲ್ಯಗಳು, ಅಭಿರುಚಿಗಳು ಹಾಗೂ ಕನಸುಗಳು ಕನ್ನಡ ಬದುಕನ್ನು ಒಂದಲ್ಲ ಒಂದು ನೆಲೆಯಲ್ಲಿ ಕಟ್ಟಿವೆ. ಅವರು ಚಿತ್ರಗಳಲ್ಲಿ ಆಡುತ್ತಿದ್ದ ಕನ್ನಡ ಭಾಷೆಯ ಸೊಬಗೇ ಕನ್ನಡ ಭಾಷೆಯನ್ನು ಇನ್ನೂ ಎಷ್ಟೋ ತಲೆಮಾರುಗಳ ತನಕ ಉಳಿಸಬಲ್ಲದು'
ಇದೇ ಸಂದರ್ಭದಲ್ಲಿ ರಾಜ್ಕುಮಾರ್ ಜಾನಪದ ನಿರ್ಮಿಸಿದ ಲೀಲಾವತಿ, ಪಂಡರೀಬಾಯಿ, ಅಶ್ವಥ್, ನರಸಿಂಹರಾಜು, ಬಾಲಕೃಷ್ಣ ಹಾಗೂ ಚಿ.ಉದಯಶಂಕರ್, ಜಿ.ಕೆ.ವೆಂಕಟೇಶ್, ಜಿ.ವಿ.ಅಯ್ಯರ್ರನ್ನೂ ನೆನಪಿಸಿಕೊಳ್ಳಬೇಕು.

42. ಕೆ.ಪಿ.ಪೂರ್ಣಚಂದ್ರ ತೇಜಸ್ವಿ :
ಕನ್ನಡ ಸಾಹಿತ್ಯದ ಕಾಡು ಪ್ರತಿಭೆ. ಕನ್ನಡ ಲೇಖಕನೊಬ್ಬ ಈವರೆಗೆ ಅನ್ವೇಷಿಸದ ಅನುಭವ ಲೋಕವನ್ನು, ಸಾಹಿತ್ಯವೂ ಸೇರಿದಂತೆ ತಮ್ಮ ವೈವಿಧ್ಯಮಯ ಸೃಜನಶೀಲ ಚಟುವಟಿಕೆಗಳ ಮೂಲಕ ಕನ್ನಡ ಸಂವೇದನೆಯ ಒಂದು ಭಾಗವನ್ನಾಗಿ ಮಾಡಿದ ಪ್ರಯೋಗಶೀಲ. ವಿಶ್ವವಿದ್ಯಾಲಯಮಟ್ಟದ ಅಂತರ್ಶಿಸ್ತೀಯ ಅಧ್ಯಯನವನ್ನು ಅಣಕ ಮಾಡಿದಂತೆ ತತ್ವದರ್ಶನ, ರಾಜಕಾರಣ, ವಿಜ್ಞಾನ, ಕಲೆಗಳೆಲ್ಲವನ್ನೂ ಒಂದುಗೂಡಿಸಿದ ಬಹುಮುಖಿ ಬರವಣಿಗೆಯನ್ನು ಸಾಧಿಸಿದ ಲೇಖಕ.

43. ಸಿದ್ದಗಂಗೆ ಶ್ರೀಗಳು :
ಭಿಕ್ಷಾ ಸಂಪ್ರದಾಯವನ್ನು ಆಧುನಿಕ ಕಾಲದಲ್ಲೀ ಒಂದು ಪರಂಪರೆಯಾಗಿ ಬೆಳೆಸಿ ಸಾಮೂಹಿಕ ಅನ್ನ ಹಾಗೂ ಅಕ್ಷರ ದಾಸೋಹಗಳೆರಡನ್ನೂ ಕಳೆದೆಂಟು ದಶಕಗಳಿಂದಲೂ ನಡೆಸಿಕೊಂಡು ಬರುತ್ತಿರುವ ಶ್ರೀಗಳು, ಧರ್ಮಕ್ಕೆ ಹೊಸ ಕಾಲದ ಭಾಷ್ಯ ಬರೆದವರು. ಬಸವಣ್ಣನ ಕಾಯಕ ತತ್ವದ ಪುನರುಜ್ಜೀವನದ ಮೂಲಕ ಮಠವೆಂಬ ವ್ಯವಸ್ಥೆಗೆ ಹೊಸ ಘನತೆ ತಂದುಕೊಟ್ಟವರು. ಲಕ್ಷಾಂತರ ಅನಾಥ ಹಾಗೂ ಬಡ ಮಕ್ಕಳಿಗೆ ಗುರುವಾಗಿ, ಪೋಷಕರಾಗಿ, ಮಾರ್ಗದರ್ಶಿಯಾಗಿ ನಾಡನ್ನು ಕಟ್ಟುತ್ತಿರುವವರು.

44. ವೀರೇಂದ್ರ ಹೆಗ್ಗಡೆ:
ಧರ್ಮಸ್ಥಳವನ್ನು ತುಳು ಸಂಸ್ಕೃತಿಯ ಆಚರಣಾ ಕೇಂದ್ರವನ್ನಾಗಿ ಬೆಳೆಸಿ ಅದನ್ನು ಕನ್ನಡ ಸಂಸ್ಕೃತಿಯೊಂದಿಗೆ ಜೋಡಿಸುವ ಕೆಲಸ ಮಾಡುತ್ತಿರುವ ಈ ಧರ್ಮಾಧಿಕಾರಿ, ದೇವರ ಹೆಸರಲ್ಲಿ ಹರಿದು ಬರುತ್ತಿರುವ ಹಣವನ್ನು ಜನತೆಗಾಗಿ ವಿನಿಯೋಗಿಸುವ ಹಲವು ಜನ ಕಲ್ಯಾಣ ಯೋಜನೆಗಳ ಹರಿಕಾರರೂ ಆಗಿದ್ದಾರೆ. ವಿಭಿನ್ನ ಧಾರ್ಮಿಕ ಧಾರೆಗಳ ಸಂಗಮದಂತಿರುವ ಧರ್ಮಸ್ಥಳವನ್ನು ಒಂದು ಜಾತ್ಯತೀತ ಧಾರ್ಮಿಕ ಕೇಂದ್ರವನ್ನಾಗಿ ವಿಕಾಸಗೊಳಿಸುವಲ್ಲಿ ಹೆಗ್ಗಡೆಯವರು ತೋರಿರುವ ಪ್ರಬುದ್ಧತೆ, ಮುನ್ನೋಟ, ದಕ್ಷತೆ ಹಾಗೂ ಆಧುನಿಕ ಮನೋಭಾವ ರಾಜ್ಯಾದ್ಯಂತ ಜನರ ಗಮನ ಸೆಳೆದಿದೆ.

45. ಗಂಗೂಬಾಯಿ ಹಾನಗಲ್:
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಕನ್ನಡದ ಮತ್ತೊಂದು ಕೊಡುಗೆ. ಧಾರವಾಡದ ಗಂಡು ಮೆಟ್ಟಿನ ನೆಲದ ದಟ್ಟ ವಾಸನೆಯಲ್ಲಿ ಅರಳುವ ಇವರ ಅಪೂರ್ವ ಗಾಯನ ಕನ್ನಡ ಸಂಸ್ಕೃತಿಯ ಅಭಿರುಚಿ - ಆಯಾಮಗಳಲ್ಲೇ ಮೈದಳೆದದ್ದೆಂಬುದು ಒಂದು ವಿಶೇಷ. ಹಾಗಾಗಿಯೇ ಇವರು ಕನ್ನಡಕ್ಕೆ ಸಂಬಂಧಪಟ್ಟ ಎಲ್ಲ ಚಳುವಳಿ - ಹೋರಾಟಗಳೊಂದಿಗೂ ಗುರುತಿಸಿಕೊಂಡು ಕನ್ನಡದ ಮನೆಯ ಹಿರಿ ಮಗಳೆನಿಸಿಕೊಂಡಿದ್ದಾರೆ.
ಇವರೊಂದಿಗೆ ನೆನಪಾಗುವವರೆಂದರೆ ಪುಣೆಯಲ್ಲಿ ನೆಲೆಸಿದ್ದರೂ, ತುಂಬಿದ ಕೃಷ್ಣಾ ನದಿಯಂತೆ ಭೋರ್ಗರೆವ ಕಂಠದಲ್ಲಿ (ಕನ್ನಡಿಗರಿಗೆ ವಿಶೇಷವಾಗಿ ದಾಸರ ಪದಗಳನ್ನು) ಹಾಡುವ ಭೀಮಸೇನ ಜೋಷಿ ಹಾಗೂ ಮಧ್ಯ ಪ್ರದೇಶದಲ್ಲಿ ನೆಲೆಸಿ ಆಕಾಶ - ಭೂಮಿ ಒಂದಾಗುವಂತೆ ಹಾಡಿ 'ಕುಮಾರ ಗಂಧರ್ವ'ನೆನಿಸಿದ್ದ ಕನ್ನಡದ ಪ್ರತಿಭೆ ಶಿವಪುತ್ರಪ್ಪ ಕೊಂಕಾಳಿಮಠ.

46. ಜಿ.ಎಸ್.ಶಿವರುದ್ರಪ್ಪ:
ಕುವೆಂಪು ಪರಂಪರೆಯ ಉತ್ತರಾಧಿಕಾರಿಯೆನಿಸಿರುವ ಜಿಎಸ್ಸೆಸ್, ಕವಿಯಾಗಿ, ಕಾವ್ಯ ಮೀಮಾಂಸಕರಾಗಿ, ಅಧ್ಯಾಪಕರಾಗಿ ಹಾಗೂ ಸಾಹಿತ್ಯ ಆಡಳಿತಗಾರರಾಗಿ ಕನ್ನಡಿಗರಲ್ಲಿ ಸಾಹಿತ್ಯ - ಸಂಸ್ಕೃತಿಗಳ ಹೊಸ ರುಚಿ - ಅಭಿರುಚಿಗಳನ್ನು ಬೆಳೆಸಿದವರು. ರಾಜಕೀಯ - ಸಾಮಾಜಿಕ ವಿಚಾರಗಳಲ್ಲೂ, ಕನ್ನಡ ಪರವಾದ, ಜನಪರವಾದ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಾ, ಕನ್ನಡ ಸಮಾಜದ ಆಧುನೀಕರಣಕ್ಕೆ ಒಂದು ಸಾಂಸ್ಕೃತಿಕ ಸಂಯಮದ ಎಲ್ಲೆಯನ್ನು ಗುರುತಿಸಿರುವ ಹಿರಿಯ ಚಿಂತಕರು.

47. ಯು.ಆರ್.ಅನಂತಮೂರ್ತಿ:
ಕನ್ನಡದ ಬಹುಮುಖ್ಯ ಲೇಖಕ ಹಾಗೂ ಸಾರ್ವಜನಿಕ ಬುದ್ಧಿಜೀವಿಯೂ ಆದ ಅನಂತಮೂರ್ತಿಯವರು, ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಅನುಭವಗಳನ್ನು ಕನ್ನಡದ ಸಂವೇದನೆಗೆ ತಂದವರು. ಕಥನ, ಮಂಥನ, ಚಿಂತನ - ಈ ಮೂರೂ ನೆಲೆಗಳಲ್ಲಿ ಕನ್ನಡದ ಮನಸ್ಸನ್ನು ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ವಿಸ್ತರಿಸಿದವರು. ಆಧುನಿಕ ಕನ್ನಡ ಸಂಸ್ಕೃತಿಯ ಒಳ ಟೀಕಾಕಾರೂ ಆದ ಇವರು, ಶಿಕ್ಷಣ ಹಾಗೂ ರಾಜಕಾರಣದ ಬಗ್ಗೆಯೂ ಹೊಸ ತಿಳಿವಿನೊಂದಿಗೆ ಮಾತಾಡಬಲ್ಲವರು. ಜ್ಞಾನಪೀಠ ಪ್ರಶಸ್ತಿ ಪಡೆದವರು.

48. ಸಿ.ಎನ್.ಆರ್. ರಾವ್:
ನೋಬೆಲ್ ಪ್ರಶಸ್ತಿವರೆಗಿನ ಎಲ್ಲ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮ ಭೌತಶಾಸ್ತ್ರ ಸಂಶೋಧನೆಗಳಿಗಾಗಿ ಪಡೆದಿರುವ ಈ ಕನ್ನಡಿಗ, ನೋಬೆಲ್ ಪ್ರಶಸ್ತಿಗೆ ಅರ್ಹರಾದ ಭಾರತದ ಮಹಾ ಮೇಧಾವಿ ಎನಿಸಿಕೊಂಡಿದ್ದಾರೆ. ಇವರು ಕನ್ನಡ ಮಾಧ್ಯಮದಲ್ಲಿ ಓದಿದವರಷ್ಟೇ ಅಲ್ಲ, ಜಾಗತೀಕರಣದ ಈ ದಿನಗಳಲ್ಲೂ ಕನ್ನಡದ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಾಲಾ ಶಿಕ್ಷಣ ಒದಗಿಸಬೇಕೆಂದು ಬಲವಾಗಿ ಪ್ರತಿಪಾದಿಸುವವರು. ಇದಕ್ಕೆ ಸಮರ್ಥನೆಯಾಗಿ, ಆಗಾಗ್ಗೆ ಪ್ರಾಯೋಗಿಕವಾಗಿ ಕನ್ನಡದಲ್ಲಿ ವಿಜ್ಞಾನ ಪಾಠ ಮಾಡುವ ಮೇಷ್ಟ್ರು ಕೂಡಾ! ಆಧುನಿಕ ವೈಜ್ಞಾನಿಕ ಸಂಸ್ಕೃತಿಯೆದುರು ಕನ್ನಡ ಸೋತ ಭಾಷೆ ಎಂಬ ಜನಪ್ರಿಯ ನಂಬಿಕೆಗೆ ಜೀವಂತ ಸವಾಲಂತಿರುವ ರಾವ್, ಕನ್ನಡದ ನಿಜವಾದ ಹೆಮ್ಮೆ!

49. ಸಾರಾ ಅಬೂಬಕ್ಕರ್:
ಮುಸ್ಲಿಂ ಪುರೋಹಿತಶಾಹಿಯ ವಿರುದ್ಧ ಎತ್ತಲ್ಪಟ್ಟ ಕನ್ನಡದ ಮೊದಲ ದಿಟ್ಟ ಧ್ವನಿ. ಸಾರಾ ತಮ್ಮ 'ಚಂದ್ರಗಿರಿ ತೀರದಲ್ಲಿ' ಹಾಗೂ 'ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು' ಎಂಬ ಆರಂಭಿಕ ಕೃತಿಗಳ ಮೂಲಕ ಮುಸ್ಲಿಂ ಸಮಾಜದ ಒಳಕುದಿ - ಘನತೆಗಳೆರಡನ್ನೂ ಯಾವುದೇ 'ಪ್ರದರ್ಶನ'ವಿಲ್ಲದ ನಿರಾಡಂಬರ ಶೈಲಿಯಲ್ಲಿ ಕನ್ನಡ ಲೋಕಕ್ಕೆ ಪರಿಚಯಿಸಿದರು. ಇವರು ಬರೆಯಲಾರಂಭಿಸಿದ ಮೇಲೆ ಕನ್ನಡದಲ್ಲಿ ಬರೆಯುವ ಮುಸ್ಲಿಂ ಲೇಖಕ - ಲೇಖಕಿಯರ ಬರವಣಿಗೆಯ ಖದರೇ ಬದಲಾಗಿದೆ!

50. ಪಿ.ಬಿ.ಶ್ರೀನಿವಾಸ್:
ಜನತಾ ಕಾವ್ಯವೆಂದು ಕರೆಯಬಹುದಾದ ಚಿತ್ರಗೀತೆಗಳ ಮೂಲಕವೇ ಕನ್ನಡ ಜನತೆಗೊಂದು ಸರಳ ಸುಖ ನೀಡಿದವರು. ತಮ್ಮ ಮಧ್ಯಮ ತರಂಗಾಂತರದ ಆದ್ರ್ರ ಧ್ವನಿಯಲ್ಲಿ ಸಾವಿರಾರು ಚಿತ್ರಗೀತೆಗಳನ್ನು ಕನ್ನಡದ ತನಿ - ಬನಿಗಳೊಂದಿಗೆ ಹಾಡಿ ಸಾಮಾನ್ಯ ಕನ್ನಡಿಗರೆಲ್ಲರನ್ನೂ ಭಾವ ಪರವಶರನ್ನಾಗಿ ಮಾಡುವ ಮೂಲಕ ಅವರಲ್ಲಿ ಒಂದು ಜನಪ್ರಿಯ ನೆಲೆಯ ಭಾವ ಸಂಬಂಧವನ್ನು ಸೃಷ್ಟಿಸಿದವರು. ಪಿಬಿಎಸ್, ಕನ್ನಡ ಸಿನಿಮಾವೆಂಬುದು ಇರುವವರೆಗೂ ಕನ್ನಡಿಗರ ನೆನಪಿನಲ್ಲಿ ಉಳಿಯಬಲ್ಲ ಗಾಯಕ.
ಇವರೊಂದಿಗೆ ನೆನಪಾಗುವವರು ಸುಮಧುರ ಗಾಯಕಿ ಎಸ್.ಜಾನಕಿ.

ಅಂದಹಾಗೆ: ಈ ಐವ್ವತ್ತರ ಪಟ್ಟಿಗೆ ಸೇರಲೇ ಬೇಕಿದ್ದ; ಆದರೆ ಸೇರದೇ ಹೋದ ಮತ್ತು ಹಾಗೆ ಸೇರದಿರಲು ಕಾರಣವನ್ನೂ ಹೊತ್ತ ಹತ್ತು ಜನರ ಪಟ್ಟಿ ಇಲ್ಲಿದೆ:
1. ಟಿ.ಎಂ.ಎ.ಪೈ: ಬಡವರ ಹಣದಲ್ಲಿ ಬ್ಯಾಂಕ್ ಕಟ್ಟುವ ಸಾಹಸ ಮಾಡಿ, ಅದನ್ನು ಶ್ರೀಮಂತರಿಗೆ ಒಪ್ಪಿಸಿದವರು!
2. ಎಚ್.ಡಿ.ದೇವೇಗೌಡ: ರಾಜಕಾರಣದಲ್ಲಿ ಏನೆಲ್ಲ ಸಾಧನೆ ಮಾಡಿದ್ದರೂ, ಅದರ ಫಲವೆಲ್ಲ ತನ್ನ ಕುಟುಂಬಕ್ಕೇ ಸಲ್ಲತಕ್ಕದ್ದು ಎಂದು ನಂಬಿರುವವರು!
3. ದೇಜಗೌ: ಕುವೆಂಪು ಮಾತಿನಂತೆ ಕನ್ನಡಕ್ಕಾಗಿ ಕೈಯೆತ್ತಿ ಅದನ್ನು ಕಲ್ಪವೃಕ್ಷ ಮಾಡಿಕೊಂಡವರು!
4. ಪಾಟೀಲ ಪುಟ್ಟಪ್ಪ: ಮಾಡಿದ ಎಲ್ಲ ಒಳ್ಳೆಯ ಕೆಲಸವನ್ನೂ ಆಳುವವರ ಪರವಾಗಿ ಪಿಟೀಲು ಕೊಯ್ದು ಹಾಳು ಮಾಡಿಕೊಂಡವರು!
5. ಎಂ.ಡಿ.ನಂಜುಂಡಸ್ವಾಮಿ: ಬಹಳ ಸರಿಯಾದ ತಾತ್ವಿಕತೆಯೊಂದಿಗೆ ಕಟ್ಟಿದ್ದನ್ನು, ಬಹಳ ಸರಿಯಾದ ತಾತ್ವಿಕತೆಯೊಂದಿಗೇ ಕೆಡುವುವ ಕೌಶಲ್ಯ ಸಾಧಿಸಿದವರು!
6. ಬಿ.ಕೃಷ್ಣಪ್ಪ: ದೊಡ್ಡ ಸಂಘಟನೆ ಕಟ್ಟಿದವರು, ಅಷ್ಟೇ ದೊಡ್ಡದಾಗಿ ಯೋಚಿಸದೇ ಹೋದವರು!
7. ದೇವನೂರ ಮಹಾದೇವ: ಚಿಂತನೆಯಲ್ಲಿ ತುಂಬ ಎತ್ತರ ಮುಟ್ಟಿ, ಸುಸ್ತಾಗಿ ಅಲ್ಲೇ ಮಲಗಿದವರು!
8. ಡಿ.ಆರ್.ನಾಗರಾಜ್: ಇವರ ಅಸಾಧಾರಣ ಪ್ರತಿಭೆ ಗರಿ ಗೆದರಿದ್ದೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ರಾಜಕಾರಣದ 'ಸ್ಫೂರ್ತಿ'ಯಲ್ಲಿ ಎಂಬ ಗುಮಾನಿಗೆ ಒಳಗಾದವರು!
9. ಎನ್.ಆರ್. ನಾರಾಯಣ ಮೂರ್ತಿ: ಮಾಹಿತಿ = ಜ್ಞಾನ = ಹಣ = ನೆಮ್ಮದಿ ಎಂಬ ವಿಕ್ಷಿಪ್ತ ಸಮೀಕರಣದ ಯಶಸ್ವಿ ಪ್ರಚಾರಕ!
10. ವಾಟಾಳ್ ನಾಗರಾಜ್: ಇವರ ಕನ್ನಡ ಅಭಿಮಾನದ ವೈಶಾಲ್ಯ 110 ಎಕರೆಗಳು!

Rating
Average: 5 (1 vote)

Comments