ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..

ರಾಜರ ಕಾಲದಲ್ಲಿ ಆನೆಗಳು ಯುದ್ಧಕ್ಕೆ, ಸರಕು ಸಾಗಿಸಲು ಬೇಕಾಗುತಿತ್ತು.
ಹಬ್ಬದ ಸಮಯದಲ್ಲಿ ಜನರಿಗೆ ತನ್ನ ಸೈನ್ಯಬಲ ತೋರಿಸಲು ಕುದುರೆ, ಆನೆಗಳೊಂದಿಗೆ ಮೆರವಣಿಗೆ ಹೋಗುವುದು ರಾಜರಿಗೆ ಹೆಮ್ಮೆಯ ವಿಷಯ.

ಅದೇ ಈಗ ವಿಜಯದಶಮಿಗೆ ಎಲ್ಲೋ ಇದ್ದ ಅರ್ಜುನ,ದ್ರೋಣ,ಬೀಷ್ಮ..ರನ್ನು ಒಟ್ಟುಗೂಡಿಸಿ ಮೆರವಣಿಗೆ ಮಾಡುವ ಅಗತ್ಯವಿದೆಯಾ?
ದೊಡ್ಡವಾಹನವನ್ನು ಸಿಂಗರಿಸಿ ದೇವಿಯ ಮೆರವಣಿಗೆ ಮಾಡಿದರಾಗದೆ? ಆನೆಯೊಂದನ್ನು ಬಿಟ್ಟು ಉಳಿದೆಲ್ಲಾ ಕುಣಿತ,ಮೆರವಣಿಗೆಗಳು ಇರಲಿ. ಬೇಕಿದ್ದರೆ ಬಿಳಿಯಾನೆಗಳನ್ನು ಮೆರವಣಿಗೆಯಲ್ಲಿ ಸೇರಿಸಲಿ.

ಆನೆಗಳು ಗುಂಪಿನಲ್ಲಿರುವ ಪ್ರಾಣಿ. ಈ ದೇವಸ್ಥಾನಗಳಲ್ಲಿ ಒಂದೊಂದನ್ನೇ ಸಾಕುವುದನ್ನು ನಿಷೇಧಿಸಬಾರದೇ? ನಾನು ಚಿಕ್ಕವನಿದ್ದಾಗ ನಮ್ಮ ಮನೆ ಸಮೀಪ ನದಿಗೆ ಸ್ನಾನಕ್ಕೆ ಆನೆಯನ್ನು ಮಾವುತ ತರುತ್ತಿದ್ದನು.ತಾಸುಗಟ್ಟಲೆ ನೀರಲ್ಲಿ ಅದು ಆಡುವುದನ್ನು ನೋಡುವುದೇ ಚಂದ. ನಂತರ ಹಿಂದಿರುಗಿ ಹೋಗುವಾಗ ನಮ್ಮ ಮನೆಯಲ್ಲಿದ್ದ- ಮಂಗಳೂರು ಸೌತೆ, ಬಾಳೆಗೊನೆ, ಬಾಳೆಗಿಡ,ಕಬ್ಬು, ಏನೂ ಸಿಗದಿದ್ದರೆ ಹಲಸಿನ ಎಲೆಗಳನ್ನಾದರೂ ಹಾಕುತ್ತಿದ್ದೆವು. ಬೀದಿಯ ಎಲ್ಲಾ ಮನೆಗಳವರೂ ಕೊಡುತ್ತಿದ್ದರು.ಅದರ ಹೊಟ್ಟೆಗೆ ಅದು ಯಾವ ಮೂಲೆಗೋ.
ಅದೇ ಈ ದೇವಸ್ಥಾನದ ಎದುರು ೧೦ ಅಡಿ ಉದ್ದಗಲದ ಸ್ಥಳದಲ್ಲಿ ನಿಂತ ಆನೆಗೆ ಭಕ್ತರು ಮಕ್ಕಳ ಕೈಯಿಂದ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಅದರ ಆಶೀರ್ವಾದವನ್ನು ಪಡೆಯುವದನ್ನು ನೋಡುವಾಗ ಬೇಸರವಾಗುವುದು.

ಬಹಳ ಹಿಂದೆ ಉಡುಪಿ ಪರ್ಯಾಯ ನೋಡಲು ಹೋಗಿದ್ದೆ. ರಥಬೀದಿ ಸುತ್ತ ಕಾಲಿಡಲು ಸ್ಥಳವಿಲ್ಲದಷ್ಟು ಜನವೋ ಜನ. ಮುಂದೆ ಆನೆ, ಹಿಂದೆ ಪಲ್ಲಕ್ಕಿಯಲ್ಲಿ ಸ್ವಾಮಿಗಳು-ಮೆರವಣಿಗೆ ಸಾಗಿತ್ತು. ಇದ್ದಕ್ಕಿದ್ದಂತೆ ಒಂದು ಆನೆಗೆ ಮದ ಬಂತು. ಸಿಕ್ಕಾಪಟ್ಟೆ ಓಡಲು ಸುರು. ಜನ ಚಲ್ಲಾಪಿಲ್ಲಿ. ಆ ಇಕ್ಕಟ್ಟಾದ ಸ್ಥಳದಲ್ಲಿ ಬೀದಿಯುದ್ದಕ್ಕೂ ಓಡಿದರೂ ಯಾರಿಗೂ ಆನೆ ತೊಂದರೆ ಕೊಡಲಿಲ್ಲ. ಸಾಕಿದ ಆನೆ ತೀರಾ ಸಾಧು.

ಆದರೆ ಕೆಲ ತಿಂಗಳ ಹಿಂದೆ ಆನೆಯೊಂದು ಮಾವುತನನ್ನು ಎತ್ತಿ,ಎತ್ತಿ,ಬಿಸಾಕಿ ಕೊಂದು ಹಾಕಿದ ದೃಶ್ಯ ಟಿ.ವಿ.ಯಲ್ಲಿ ನೋಡಿದ್ದೆ. ತನ್ನನ್ನು ಸಾಕಿದವನ ಮೇಲೆ ಅಷ್ಟು ಕೋಪ ಬರಬೇಕಿದ್ದರೆ ಆ ಮಾವುತ ಎಷ್ಟು ಹಿಂಸೆ ಕೊಟ್ಟಿರಬಹುದು.

ಈ ಸಾಕುವವರ/ಮಾವುತರ ಹಿಂಸೆ, ವೀರಪ್ಪನ್ ಹಿಂಸೆಗಿಂತ ಕಮ್ಮಿಯೇನಲ್ಲ.
ಆನೆಯನ್ನು ಅದರ ಪಾಡಿಗೆ ಕಾಡಲ್ಲಿ ಇರಲು ಬಿಡಬಾರದೆ?

Rating
No votes yet