ಆಮೇರಿಕದ ನೆಲದಲ್ಲಿ ಹರಡುತ್ತಿರುವ ಕನ್ನಡದ ಕಂಪು

ಆಮೇರಿಕದ ನೆಲದಲ್ಲಿ ಹರಡುತ್ತಿರುವ ಕನ್ನಡದ ಕಂಪು

ಈ ಲೇಖನ ದಟ್ಸ್ ಕನ್ನಡ ಜಾಲತಾಣಕ್ಕೆಂದು ಬರೆದ್ದದ್ದು.

ಅಮೇರಿಕದ ನೆಲದಲ್ಲಿ ಹರಡುತ್ತಿರುವ ಕನ್ನಡದ ಕಂಪು
ಮಧು ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯ

ಹುಟ್ಟಿ ಬೆಳೆದ ಊರಿನಿಂದ ಸಾವಿರಾರು ಮೈಲಿ ದೂರ ಬಂದಾಗ, ನಮ್ಮ ಭಾಷೆ ಹಾಗು ನಮ್ಮ ನಡೆ-ನುಡಿಗಳ ಬಗ್ಗೆ ಅಭಿಮಾನ ಹೆಚ್ಚುವುದು ಮತ್ತು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆಂಬ ಹಂಬಲ ಉಂಟಾಗುವುದು - ಇವೆಲ್ಲ ಈಗಾಗಲೆ ಅನೇಕ ಕಡೆಗಳಲ್ಲಿ ಕಂಡುಬಂದುದಷ್ಟೇ ಅಲ್ಲದೆ ಅತ್ಯಂತ ಸಹಜ ಪ್ರಕ್ರಿಯೆಯೇನೊ ಎನ್ನುವಷ್ಟು ಸಾಮಾನ್ಯವಾಗಿಬಿಟ್ಟಿದೆ. ಅನಿವಾಸಿಗಳಲ್ಲಿ ಉಂಟಾಗುವ ಈ ಮನಸ್ಥಿತಿಗೆ ಕಾರಣ ಏನೇ ಇರಲಿ, ಕನ್ನಡದ ಮಟ್ಟಿಗೆ ಈ ಬೆಳವಣಿಗೆ ಬಹಳ ಮುಖ್ಯವಾದುದು ಮತ್ತು ಅನೇಕ ರೀತಿಗಳಲ್ಲಿ ಉತ್ತೇಜನಕಾರಿಯಾದುದು ಎನ್ನುವುದು ಸುಳಲ್ಲ.

ನಮ್ಮ ಕನ್ನಡ ಭಾಷೆ ನಮಗೆಲ್ಲ ನೀಡಲ್ಪಟ್ಟಿರುವ ಒಂದು ವರದಾನ. ಶತ ಶತಮಾನಗಳಿಂದಲೂ ಈ ವರವನ್ನು ಅನೇಕ ಧೀಮಂತ ಕನ್ನಡಿಗರು ಬಳಸಿ, ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಸಂವೃದ್ಧಗೊಳಿಸಿದ್ದಾರೆ. ಕನ್ನಡ ಭಾಷೆಯನ್ನು ಬಲ್ಲ ಸುದೈವದಿಂದ ನಾವೆಲ್ಲ ನಮ್ಮ ಭಾಷೆಯನ್ನು ಬಳಸಿ ಆನಂದ ಅನುಭವಿಸುತಲಿದ್ದೇವೆ. ನಮ್ಮ ಗುರುತರವಾದ ಸಾಹಿತ್ಯ ಮತ್ತು ಭವ್ಯ ಸಂಸ್ಕೃತಿ ಮತ್ತು ಕಲೆಯ ರಸಾನುಭವವನ್ನು ಹೊಂದಲು ಶಕ್ತರಾಗಿದ್ದೇವೆ. ನನ್ನ ಮಟ್ಟಿಗೆ ಹೇಳುವುದಾದರೆ, ಕನ್ನಡ ಸಾಹಿತ್ಯದಲ್ಲಿ ಅಭಿರುಚಿ ಉಂಟಾಗಿ ಅದನ್ನು ಸವಿಯುವ ಅವಕಾಶ ಒದಗಿಬಂದದ್ದು ಅಮೇರಿಕೆಗೆ ಬಂದ ನಂತರವೇ ಎನ್ನುವುದು ಸೋಜಿಗವೇ ಸರಿ.

ಭಾರತದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಗ ‘ಜೀವನದಲ್ಲಿ ಮುಂದೆ ಬರಲು ಏನು ಮಾಡಬೇಕು?’ ಎಂಬುದಷ್ಟೆ ನಮ್ಮ ಅಭಿಲಾಷೆಯನ್ನು ರೂಪಿಸುತ್ತಿದ್ದ ಅಂಶ. ಓದಿನಲ್ಲಿ ಯಶಸ್ವಿಯಾಗಿ ಯಾವುದಾದರು ಸ್ಕೋಪ್ ಇರುವ ವೃತ್ತಿಪರ ಶಿಕ್ಷಣ ಪಡೆಯುವುದೇ ನಮ್ಮಲ್ಲಿ ಅನೇಕರ ಧೇಯವಾಗಿತ್ತು. ಈ ಅವಾಂತರದಲ್ಲಿ ನಮ್ಮ ಭಾಷೆ, ಸಾಹಿತ್ಯ, ಕಲೆ ಮತ್ತು ಮಾನವೀಯ ಶಾಸ್ತ್ರಗಳ (Humanities) ಬಗ್ಗೆ ಆಸಕ್ತಿಯನ್ನು ಹೊಸಕಿಹಾಕಿಕೊಂಡೆವು ಎನಿಸುತ್ತದೆ. ಅಥವ ಅವೇ ಮನಸ್ಸಿನ ಯಾವುದೋ ಮೂಲೆಗೆ ಹೋಗಿ ಅಡಗಿಕೊಂಡು ಕೂತು ಬಿಟ್ಟಿರಲೂ ಸಾಧ್ಯ. ಈ ವೃತಿಪರವಲ್ಲದ ವಿಷಯಗಳ ಅರಿವಿನಿಂದ ಬರಬಹುದಾಗಿದ್ದ ಉಪಯುಕ್ತತೆಗಳನ್ನು ವಿನಾಕಾರಣ ತಳ್ಳಿಹಾಕಿದೆವೇನೊ ಎನಿಸುತ್ತದೆ. ಯಾವಾಗ ವೃತ್ತಿ ಜೀವನದ ಬಗ್ಗೆ ಅನಿಶ್ಚಿತತೆ ಕಡಿಮೆ ಆಯಿತೊ, ಈ ಅತೃಪ್ತ ಭಾವನೆ ಹೆಚ್ಚು ಕಾಡತೊಡಗಿದ್ದು ಸಹಜವೆನಿಸುತ್ತದೆ. ಅದರಲ್ಲೂ 'follow your passion' ಎನ್ನುತ್ತ ಜೀವನದಲ್ಲಿ ಸರ್ವೋತಮುಖ ಏಳಿಗೆ ಮತ್ತು ತೀವ್ರವಾದ ವಯ್ಯಕ್ತಿಕ ಬೆಳವಣಿಗೆ ಮತ್ತು ತೃಪ್ತಿಯನ್ನು ಬಯಸುವ ಅಮೇರಿಕ ಸಮಾಜದಲ್ಲಿ ಮುಳುಗೇಳುವಾಗ ಅನಿಸಿದ್ದು ‘ನಮ್ಮ ಬೇರುಗಳನ್ನು ಅರಸಿ ಹೋದರೆ ನಮ್ಮ ಪ್ಯಾಶನ್ ಏನು ಎಂದು ತಿಳಿಯಬಹುದೇನೊ’ ಎಂದು. ಸ್ವತಃ ಒಬ್ಬ ಅಮೇರಿಕ ನಿವಾಸಿ ಭಾರತೀಯನಾಗಿ ಈ ತುಡಿತವನ್ನು ಅನುಭವಿಸಿದ್ದೇನೆ.

ಅಧೃಷ್ಟವಶಾತ್, ಅನೇಕರಿಗೆ ಈ ತುಡಿತವನ್ನು ಕ್ರಿಯಾತ್ಮಕ ಚಟುವಟಿಕೆಗಳಾಗಿ ಸಾಕ್ಷಾತ್ಕರಿಸಲು ಬೇಕಾದ ಸ್ಪಷ್ಟ ಕಲ್ಪನೆ, ಕಲೆಗಾರಿಕೆ ಮತ್ತು ವ್ಯವಧಾನ ಲಭ್ಯವಿರುವುದು ಸಂತೋಷದ ಸಂಗತಿ. ಕೆಲಸ ಬದುಕಿನ ಜಂಜಡದಲ್ಲೂ ಉತ್ಸಾಹ ಮತ್ತು ಚೈತನ್ಯಗಳನ್ನು ಮೈಗೂಡಿಸಿಕೊಂಡು ಹೃನ್ಮನಗಳ ಅಭಿವ್ಯಕ್ತಿಯನ್ನು ಹರಡುತ್ತಿರುವ ಕನ್ನಡಿಗರ ಈ ಅದಮ್ಯ ಮಾನವೀಯ ಚೇತನವನ್ನು (indomitable human spirit) ಕಂಡಾಗ ಪುಳಕಿತನಾಗಿದ್ದೇನೆ.

ಕನ್ನಡಿಗರು ತಮ್ಮ ಭಾಷಾಪ್ರೇಮವನ್ನು ಮೆರೆಸಿರುವ ಉದಾಹರಣೆಗಳು ಅನೇಕ. ಈ ರೀತಿ ಗಣಕ ಯಂತ್ರದಲ್ಲಿ ಕನ್ನಡ ಬರೆಯಲು ಅನುವು ಮಾಡಿಕೊಟ್ಟ ಬರಹ-ವಾಸು, ಅಮೇರಿಕದಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ಕಲಪಿಸಿದ ಅಮೇರಿಕನ್ನಡ ಪತ್ರಿಕೆಯ ಹರಿಹರೇಶ್ವರ, ಅಕ್ಕ ಒಳಗೊಂಡಂತೆ ಅಮೇರಿಕದ ಅನೇಕ ಕನ್ನಡಕೂಟಗಳು, ಉತ್ತರ ಕ್ಯಾಲಿಫ಼ೋರ್ನಿಯದಲ್ಲಿ ಹುಲಿಕಲ್ ದಂಪತಿಗಳು ಏಳು ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಕನ್ನಡ ಸಾಹಿತ್ಯ ಗೊಷ್ಠಿ, ೨೦೦೪ರಲ್ಲಿ ಧಾಖಲಾಗಿ ಅಮೇರಿಕದ ವಿವಿಧ ಸ್ಥಳಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತ ವಿಶ್ವದ ಕನ್ನಡ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ಅನೇಕ ಕನ್ನಡ ಪುಸ್ತಕಗಳ ಪ್ರಕಟಣೆಗೆ ಪ್ರೋತ್ಸಾಹ ನೀಡುತ್ತಿರುವ ಕನ್ನಡ ಸಾಹಿತ್ಯ ರಂಗ, ಲಾಸ್ ಏಂಜಲಿಸ್ ಪ್ರದೇಶದ ವಳ್ಳೀಶ ಶಾಸ್ತ್ರಿ ಅವರ ಜನಪ್ರಿಯ ನಾಟಕ ತಂಡ, ಮೇರಿಲ್ಯಾಂಡಿನ ಭೂಮಿಕ ನಾಟಕ ಮತ್ತು ಸಾಹಿತ್ಯ ಸಂಸ್ಥೆ, ಅನೇಕ ಕನ್ನಡ ನಾಟಕಗಳನ್ನು ರಚಿಸಿ ಆಡಿಸಿರುವ ಅಲಮೇಲು ಅಯ್ಯಂಗಾರ್, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಪುಸ್ತಕಗಳನ್ನು ಪ್ರಕಟಗೊಳಿಸಿರುವ ಡಾ. ಮೈ. ಶ್ರೀ ನಟರಾಜ, ಡಾ. ಗುರುಪ್ರಸಾದ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸ್ ರಾವ್, ನಾಗ ಐತಾಳ, ಜ್ಯೋತಿ ಮಹದೇವ, ಸಂಧ್ಯಾ ರವೀಂದ್ರನಾಥ್, ದತ್ತಾತ್ರಿ ರಾಮಣ್ಣ, ಸುಕುಮಾರ್ ರಘುರಾಮ್, ದಟ್ಸ್‍ಕನ್ನಡದಲ್ಲಿ ತಮ್ಮ ರುಚಿಭರಿತ ವಿಚಿತ್ತ್ರಾನ್ನ ಉಣಿಸಿ ಈಗ ವಿಜಯಕರ್ನಾಟಕದಲ್ಲಿ ಪರಾಗಸ್ಪರ್ಶಿ ಆಗಿರುವ ಶ್ರೀವತ್ಸ ಜೋಶಿ, ಯಶಸ್ವಿ ವೈಚಾರಿಕ ಕನ್ನಡ ಪತ್ರಿಕೆ ವಿಕ್ರ್‍ಆಂತ ಕರ್ನಾಟಕದ ಸ್ಥಾಪಕ ರವಿ ಕೃಷ್ಣರೆಡ್ಡಿ, ಬೇ ಏರಿಯದ ‘ಕಟ್ಟೆ’ ನಾಟಕ ತಂಡ ಮತ್ತು ‘ರಾಗ’ ಕನ್ನಡ ವಾದ್ಯವೃಂದ - ಹೀಗೆ ನನಗೆ ಪರಿಚಯವಿರುವ ಮತ್ತು ನನ್ನ ನೆನಪಿಗೆ ಬಂದ ಕೆಲವು ಉದಾಹರಣೆಗಳು. ಹಾಗು ಇಲ್ಲಿ ಹೆಸರಿಸದ, ಆದರೆ ಇವರಷ್ಟೇ ಪ್ರಮುಖರೂ ಮತ್ತು ಯಶಸ್ವಿಗಳೂ ಆದ ಅನೇಕ ಸಂಸ್ಥೆಗಳು, ಲೇಖಕರು ಹಾಗು ಕನ್ನಡ ಸೇವೆ ಮಾಡುತ್ತಿರುವ ಉತ್ಸಾಹಿಗಳು ಅಮೇರಿಕದಲ್ಲಿ ಇದ್ದಾರೆ ಎನ್ನುವುದು ನಿರ್ವಿವಾದ.

ಆದರೆ ಭೌಗೋಳಿಕವಾಗಿ ದೂರ ದೂರದಲ್ಲಿದ್ದ ಕನ್ನಡಿಗರನ್ನು ಇಂಟರ್ನೆಟ್ ಮೂಲಕ ಹತ್ತಿರ ತರುವಲ್ಲಿ ಅತಿ ದೊಡ್ಡ ಪಾತ್ರ ವಹಿಸಿದ್ದು ದಟ್ಸಕನ್ನಡ ಎನ್ನುವುದು ಅತಿಶಯೋಕ್ತಿ ಅಲ್ಲ. ಈ ನಿಟ್ಟಿನಲ್ಲಿ ಸಂಪಾದಕರಾದ ಶ್ಯಾಮ್‍ಸುಂದರ್ ಮತ್ತು ಪ್ರಸಾದ್ ನಾಯಿಕ ಅವರ ಕೊಡುಗೆ ಅದ್ವಿತೀಯವಾದುದು.

ಅಮೇರಿಕದಲ್ಲಿರುವ ಇತರ ಭಾರತೀಯರು ತೋರುವ ತಮ್ಮ ಭಾಷಾಪ್ರೇಮಕ್ಕಿಂತಲು ಕನ್ನಡಿಗರ ಭಾಷಾಪ್ರೇಮ ತೀವ್ರವಾದುದು ಎಂಬುದು ನನ್ನ ಅಭಿಪ್ರಾಯ. ಕನ್ನಡಪರ ಚಟುವಟಿಕೆಗಳನ್ನು ನಡೆಸುವುದು, ಕನ್ನಡಿಗರೆಲ್ಲ ಸಂಘಟಿತರಾಗಿ ಒಂದೆಡೆ ಸೇರಿ ಕನ್ನಡ ಕಲರವದಲ್ಲಿ ತೊಡಗುವುದು - ಇವೆಲ್ಲ ಇಲ್ಲಿನ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಇಟ್ಟಿಕೊಂಡಿರುವ ಹೆಮ್ಮೆ ಮತ್ತು ಸ್ವಾಭಿಮಾನಕ್ಕೆ ಸಾಕ್ಷಿಯಾಗಿವೆ. ಈ ಹುಮ್ಮಸ್ಸು ಮತ್ತು ತಾಯ್ನಾಡು-ನುಡಿಯ ಬಗೆಗಿರುವ ಪ್ರೇಮವೇ ಕನ್ನಡಕೂಟಗಳಲ್ಲಿ, ಕನ್ನಡ ಸಂಸ್ಕೃತಿ ಮೇಳಗಳಲ್ಲಿ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಕಂಡು ಬರುವ ಅಗಾಧ ಶಕ್ತಿ. ಈ ಚಟುವಟಿಕೆಗಳಿಗೆ ಅಡಿಪಾಯ ಹಾಕಿ ಈಗ ಎಲೆ ಮರೆಯ ಕಾಯಿಗಳಾಗಿರುವವರನ್ನು ನೆನೆಯುವುದು ಇಲ್ಲಿ ಪ್ರಸ್ತುತವೆನಿಸುತ್ತದೆ. ಇಂಗ್ಲೀಶ್ ಗಾದೆಯೊಂದರಲ್ಲಿ ಕೇಳಿಬರುವಂತೆ "We all stand on the shoulders of gaints who came before us." ಐದಾರು ದಶಕಗಳ ಹಿಂದೆಯೆ ಈಗಿನ ಸವಲತ್ತುಗಳ ಅನುಕೂಲವಿಲ್ಲದೆಯೆ ಅಂದಿನ ಕನ್ನಡಿಗರು ಕನ್ನಡದ ಕೆಲಸಕ್ಕೆ ಭದ್ರ ಬುನಾದಿ ಹಾಕಿ ಬೆಳೆಸಿದ ಅನೇಕ ಕನ್ನಡ ಸಂಘಟನೆಗಳು ಇಲ್ಲಿನ ಕನ್ನಡಿಗರಿಗೆ ಮಾರ್ಗದರ್ಶಿಯಾಗಿವೆ.

ಕನ್ನಡದ ಕಂಪನ್ನು ಹೊರನಾಡುಗಳಲ್ಲಿ ಹರಡಲು ಕೈ ಹಚ್ಚಿರುವ ವಿಶ್ವ ಕನ್ನಡಿಗರೆಲ್ಲರು ಒಂದೆಡೆ ಸೇರಿ ಸಂವಾದ ಮಾಡುತ್ತ ಇತರ ಕನ್ನಡಿಗರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಉತ್ತೇಜಿಸುವ ಉದ್ದೇಶದಿಂದ ಅಮೇರಿಕದಲ್ಲಿ ಮೊದಲ ಬಾರಿಗೆ ಈ ಒಂದು ರೇಡಿಯೊ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂಟರ್ನೆಟ್ ಮೂಲಕ ಈ ಕಾರ್ಯಕ್ರಮವನ್ನು ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು. ಈ ಕಾರ್ಯಕ್ರಮ ವಿಶ್ವಕನ್ನಡಿಗರನ್ನು ಹತ್ತಿರ ತರುವಲ್ಲಿ ಯಶಸ್ವಿಯಾಗಲು ನಿಮ್ಮೆಲರ ಶುಭ ಹಾರೈಕೆಗಳನ್ನು ಕೋರಲಾಗಿದೆ.

ಕಾರ್ಯಕ್ರಮದ ವಿವರಗಳು:

ಅಮೇರಿಕದ ನೆಲದಲ್ಲಿ ಹರಡುತ್ತಿರುವ ಕನ್ನಡದ ಕಂಪು.
ಹೊರನಾಡ ಕನ್ನಡ ಪಟುಗಳ ಹರಟೆ ಕಟ್ಟೆಗೆ ನಿಮಗೆ ಸ್ವಾಗತ. ಈ ಬಾರಿ ಕನ್ನಡ ಸಾಹಿತ್ಯ, ಕಲೆ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವವರೊಂದಿಗೆ ಸಂದರ್ಶನ. ವಿಶ್ವದ ಮೂಲೆ ಮೂಲೆಯಲ್ಲಿರುವ ಕಲಾರಸಿಕ ಕನ್ನಡಿಗರೆಲ್ಲರಿಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ನಿಮ್ಮ ಕನ್ನಡ ಚಟುವಟಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ನಿಮಗೆ ಆದರದ ಸ್ವಾಗತ. ಕನ್ನಡ ಸಂಗೀತವನ್ನು ಸಹ ಈ ಕಾರ್ಯಕ್ರಮದಲ್ಲಿ ಕೇಳಬಹುದು. ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ದೂರವಾಣಿಯ ಸಂಖ್ಯೆಗೆ ಕಾಲ್ ಮಾಡಿ. 650-723-9010. ಈ ಸಂಖ್ಯೆಗೆ ಕಾರ್ಯಕ್ರಮದ ಸಮಯದಲ್ಲಿ ಮಾತ್ರ ಕರೆ ನೀಡಬೇಕೆಂದು ವಿನಂತಿ.

ದಿನಾಂಕ: 2009 ಮೇ 3 ಭಾನುವಾರ
ಸಮಯ: ಮದ್ಯಾಹ್ನ 3.00ರಿಂದ 6.00 ರವರೆಗೆ. (ಕ್ಯಾಲಿಫೋರ್ನಿಯ ಸಮಯ)
[ 3.00PM to 6.00 PM PST in California]
ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ಬಾನುಲಿ ಕೇಂದ್ರ: ಸ್ಟಾನ್‍ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‍ಫ್ರಾನ್‍ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ: http://kzsulive.stanford.edu/ (You will see 'On air KZSU-1'. On the right side please choose 128k or 56k based on your internet bandwidth. You can listen from any where in the world. There is a baseball match before this program. If you hear English commentary, please wait for it to finish)

ನಡೆಸಿಕೊಡುವವರು: ಮಧು ಕೃಷ್ಣಮೂರ್ತಿ

ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.rasikararajya.com or http://www.itsdiff.com/Kannada.html

ಭಾರತೀಯ ಕಾಲಮಾನ: ಭಾನುವಾರ ರಾತ್ರಿ/ಸೋಮವಾರ ಮುಂಜಾನೆ ೩.೩೦ ರಿಂದ ೬.೩೦

Rating
No votes yet