ಆಯ್ದ ಸಂಸ್ಕೃತ ಸುಭಾಷಿತಗಳು (೨೨-೨೫)

ಆಯ್ದ ಸಂಸ್ಕೃತ ಸುಭಾಷಿತಗಳು (೨೨-೨೫)

೨೨. ಧರ್ಮದಲ್ಲಿ ಶೃದ್ಧೆ , ಮಾತಿನಲ್ಲಿ ಮಾಧುರ್ಯ , ದಾನದಲ್ಲಿ ಉತ್ಸಾಹ , ಗೆಳೆಯರಲ್ಲಿ ಮೋಸ ಮಾಡದಿರುವದು , ಗುರು ಹಿರಿಯರಲ್ಲಿ ವಿನಯ , ಗಂಭೀರ ಮನಸ್ಥಿತಿ , ಶುದ್ಧ ನಡವಳಿಕೆ , ಸದ್ಗುಣಗಳಲ್ಲಿ ಆಸಕ್ತಿ , ಶಾಸ್ತ್ರಗಳಲ್ಲಿ ಜ್ಞಾನ , ಸುಂದರ ರೂಪ , ದೇವರಲ್ಲಿ ಭಕ್ತಿ ಈ ಎಲ್ಲ ಗುಣಗಳು ಸಜ್ಜನರಲ್ಲಿಯೇ ಕಾಣಸಿಗುವವು.

ಧರ್ಮೇ ತತ್ಪರತಾ ಮುಖೇ ಮಧುರತಾ ದಾನೇ ಸಮುತ್ಸಾಹಿತಾ
ಮಿತ್ರೇ ಅವಂಚಕತಾ ಗುರೌ ವಿನಯಿತಾ ಚಿತ್ತೇ ಗಂಭೀರತಾ
ಆಚಾರೇ ಶುಚಿತಾ ಗುಣೇ ರಸಿಕತಾ ಶಾಸ್ತ್ರೇತಿ ವಿಜ್ಞಾನಿತಾ
ರೂಪೇ ಸುಂದರತಾ ಹರೌ ಭಜನಿತಾ ಸತ್ಸು ಏವ ಸಂದೃಶ್ಯತೇ ||

೨೩. ಪರನಾಡಿನಲ್ಲಿ ವಿದ್ಯೆಯೇ ಸಂಪತ್ತು , ಸಂಕಟ ಕಾಲದಲ್ಲಿ ಬುದ್ಧಿಯೇ ಸಂಪತ್ತು , ಪರಲೋಕದಲ್ಲಿ ಧರ್ಮಾಚರಣೆಯೇ ಸಂಪತ್ತು , ಶುದ್ಧ ನಡವಳಿಕೆ ಮಾತ್ರ ಎಲ್ಲೆಡೆಯೂ ಬೆಲೆಯುಳ್ಳದ್ದು .

ವಿದೇಶೇಷು ಧನಂ ವಿದ್ಯಾ ವ್ಯಸನೇಷು ಧನಂ ಮತಿ: |
ಪರಲೋಕೇ ಧನಂ ಧರ್ಮ: ಶೀಲಂ ಸರ್ವತ್ರ ವೈ ಧನಂ ||

೨೪. ದುರ್ಜನರು ವಿದ್ಯೆಯನ್ನು ವಿವಾದಕ್ಕೋಸ್ಕರ ಉಪಯೋಗಿಸುತ್ತಾರೆ , ಹಣವನ್ನು ಅಹಂಕಾರಕ್ಕೋಸ್ಕರ ಖರ್ಚು ಮಾಡುತ್ತಾರೆ , ಶಕ್ತಿಯನ್ನು ಇತರರನ್ನು ಪೀಡಿಸಲು ಬಳಸುತ್ತಾರೆ. ಸಜ್ಜನರಾದರೋ ವಿದ್ಯೆಯನ್ನು ಜ್ಞಾನಕ್ಕಾಗಿ , ಹಣವನ್ನು ದಾನಕ್ಕಾಗಿ , ಶಕ್ತಿಯನ್ನು ಇತರರ ರಕ್ಷಣೆಗಾಗಿ ಬಳಸುತ್ತಾರೆ.

ವಿದ್ಯಾ ವಿವಾದಾಯ ಧನಂ ಮದಾಯ
ಶಕ್ತಿ: ಪರಪೀಡನಾಯ
ಖಲಸ್ಯ ಸಾಧೋರ್ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ ||

Rating
Average: 5 (1 vote)