ಆರಿದ್ರಮಳೆ ಹಬ್ಬದ ಬಿಂಗಿಕುಣಿತ

ಆರಿದ್ರಮಳೆ ಹಬ್ಬದ ಬಿಂಗಿಕುಣಿತ


 ಆರಿದ್ರ ಮಳೆಹಬ್ಬದ ಪ್ರಯುಕ್ತ  ರೈತರ  ಬಿಂಗಿ ಕುಣಿತ ಆಚರಣೆ ನಡೆಯುತ್ತದೆ.ಆರಿದ್ರ ಮಳೆಯ ಆರ್ಭಟದಿಂದ ನಲುಗಿದ ರೈತಾಪಿ ಜನಾಂಗ ತಮ್ಮ ಸಂಕಷ್ಟ ಪರಿಹಾರವಾಗಲಿ ಎಂದು ಕೃಷಿ ಕಾರ್ಯಗಳ ನಡುವೆ ಪ್ರತೀ ವರ್ಷ ಈ ಸಮಯದಲ್ಲಿ ಈ ಆರಿದ್ರಾಮಳೆ ಹಬ್ಬದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಸಾಮೂಹಿಕವಾಗಿ ಆಚರಿಸಲ್ಪಡುವ ಈ ಹಬ್ಬ ಕೆಂಡದಮೇಲಿನ ನಡಿಗೆಯಿಂದಾಗಿ ಜನಸಾಮಾನ್ಯರಿಗೆ  ಆಕರ್ಷಣೀಯವಾಗಿದೆ.
ತಾಳಗುಪ್ಪ ಸಮೀಪದ ಮಂಜಿನಕಾನಿನಲ್ಲಿ ಪ್ರತೀ ವರ್ಷ ವಿಜೃಂಭಣೆಯಿಂದ ಈ ಉತ್ಸವ ನಡೆಯುತ್ತದೆ. ಪ್ರಸ್ತುತ ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹಬ್ಬೈಲಿನಿಂದ ತಾಳಗುಪ್ಪ ಸಮೀಪದ ಮಂಜಿನಕಾನಿಗೆ ಮಗೆಕಾಯಿಮೂಲಕ ಬಂದು ಕುಂಬದ ಚೌಡಮ್ಮ ಎಂಬ ಹೆಸರಿನಿಂದ ಇಲ್ಲಿ ನೆಲೆ ನಿಂತಿದ್ದಾಳೆ ಎಂಬುದು ಇಲ್ಲಿನ ಹಿರಿಯರು ಹೇಳುತ್ತಾರೆ. ಆ ದೇವತೆಯನ್ನು ಪೂಜಿಸಿದರೆ ಆಕೆ ಕಾಪಾಡುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ. ಇಲ್ಲಿ ಹಲವಾರುವರ್ಷದಿಂದ ಆರಿದ್ರಾ ಮಳೆ ಹಬ್ಬದ ಆಚರಣೆ ಚಾಲ್ತಿಯಲ್ಲಿದ್ದು, ಹೆಚ್ಚಾಗಿ ಈಡಿಗ ಜನಾಂಗದ ರೈತಾಪಿ ಜನರು ಇದನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪೂಜೆಯ ಕೊನೆಯ ಹಂತವಾಗಿ ಕೆಂಡದ ಮೇಲೆ ನಡೆಯುವ ಬಿಂಗಿಕುಣಿತದಲ್ಲಿ ಮಕ್ಕಳು ಹಿರಿಯರಾದಿಯಾಗಿ ಪಾಲ್ಗೊಂಡು ಅವರು ನಂಬಿಕೊಂಡುಬಂದ ದೇವತೆಯ ಪ್ರೀತಿಗೆ ಪಾತ್ರರಾಗುತ್ತಾರೆ. ಕೆಂಡದ ಮೇಲೆ ಹಾಯುವುದರಿಂದ ಖಾಯಿಲೆಗಳು ದೂರವಾಗಿ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಪ್ರತೀವರ್ಷ ಇಲ್ಲಿಗೆ ಬರುವ  ಗೋಣೂರು, ಹಸುವಂತೆ ಕಾಸ್ಪಾಡಿ ಮುಂತಾದ ಊರುಗಳ ಭಕ್ತರ ನಂಬಿಕೆ. ಮಾತುಬಾರದವರಿಗೆ ಮಾತನ್ನು ದೇವಿ ಕರುಣಿಸುತ್ತಾಳೆ, ರಾತ್ರಿ ತಮ್ಮ ಮನೆಗಳನ್ನು ಕಾಪಾಡುತ್ತಾಳೆ, ಊರಿನ ತುಂಬಾ ಸಂಚರಿಸುತ್ತಾಳೆ,ತಾವು ಕೃಷಿ ಕಾರ್ಯಗಳಿಗೆ ಹೊಲಕ್ಕೆ ಹೋದಾಗ ತಮ್ಮ ಮನೆ ಮಕ್ಕಳನ್ನು ತಾನೇ ಖುದ್ದು ಹಾಜರಿದ್ದು ದೇವಿ ಕಾಪಾಡುತ್ತಾಳೆ  ಎನ್ನುವಂತಹ ಹಲವಾರು ದಂತಕಥೆಗಳನ್ನು ಆದರಿಸಿ ಆದ್ರಮಳೆ ಹಬ್ಬ ಹಾಗು ಕೆಂಡದಮೇಲೆ ನಡೆಯುವ ಬಿಂಗಿ ಕುಣಿತ ನೆರವೇರುತ್ತದೆ. ನೂರಾರು ಜನರು ಸೇರುವ ಈ ಆದ್ರಮಳೆ ಹಬ್ಬ ಪ್ರತೀ ವರ್ಷ ಆರಿದ್ರಾಮಳೆ ಪ್ರಾರಂಭವಾದ ನಂತರ ಬರುವ ಗುರುವಾರದಂದು ಆರಂಭವಾಗಿ ಮಾರನೆದಿನ ಶುಕ್ರವಾರದಂದು ಬಿಂಗಿಕುಣಿತದ ಮೂಲಕ ಸಮಾಪ್ತಿಗೊಳುತ್ತದೆ. ಅನಿವಾರ್ಯ ಕಾರಣಗಳಿಂದ ಹಬ್ಬವನ್ನು ಈ ಸಮಯದಲ್ಲಿ ಆಚರಿಸಲಾಗದಿದ್ದ ಸಂದರ್ಭದಲ್ಲಿ ಆರಿದ್ರಾ ಮಳೆಯ ನೀರನ್ನು ಮಡಿಕೆಯಲ್ಲಿ ಹಿಡಿದಿಟ್ಟುಕೊಂಡು ನಂತರದ ದಿನಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಯನೀರಿಗೆ ಮಹತ್ವ ನೀಡುವ ಪದ್ದತಿ ಗಮನಿಸಿದರೆ ಆರಿದ್ರಾ ಮಳೆಯ ನೀರಿನಲ್ಲಿ ಉತ್ತಮ ಔಷಧೀಯ ಗುಣಗಳು ಇವೆ ಎನ್ನುತ್ತಾರೆ.  ಹಿಂದೆ ನೂರಾರು ಕುರಿಗಳನ್ನು ಸಾಮೂಹಿಕವಾಗಿ ದೇವಿಗೆ ಬಲಿಕೊಡಲಾಗುತ್ತಿದ್ದು ಆದರೆ ಇಂದಿನ ತಲೆಮಾರಿನ ಯುವಕರು ಸಾಮೂಹಿಕ ಪ್ರಾಣಿಬಲಿಯನ್ನು ನಿಲ್ಲಿಸಿ ಸಾಂಕೇತಿಕವಾಗಿ ನೆರವೇಸುತ್ತಾರೆ. ರೈತರು ಕೃಷಿ ಕಾರ್ಯಗಳ ಮಾನಸಿಕ ಒತ್ತಡದಿಂದ ಬಿಡುಗಡೆ ಹೊಂದಲು ಇಂಥಹ ಹಬ್ಬದ ಆಚರಣೆಗಳು ಮೂಡಿಬಂದಿವೆ ಎನ್ನುತ್ತಾರೆ ಇಂದಿನವರು.

Rating
Average: 2 (1 vote)

Comments