ಆರು ಹುಸಿ ವಿದ್ಯೆಗಳು
ಕನ್ನಡಕಂದರು ಆರು ಬಗೆಯ ಹುಸಿವಿದ್ಯೆಗಳ ಬಗ್ಗೆ ಸಂಸ್ಕೃತ ಸುಭಾಷಿತಗುಚ್ಛವೊಂದನ್ನು ಹಾಕಿದ್ದರು. ನನಗೆ ಅರ್ಥವಾದ ಮಟ್ಟಿಗೆ ಕನ್ನಡಿಸಿರುವೆ.
ಇನ್ನೂ ಒಳ್ಳೆಯ ಅನುವಾದವನ್ನು ಕನ್ನಡಕಂದರು ಕೊಡುವ ಸಾಧ್ಯತೆ ಇದೆ ;) ಅಲ್ಲಿಯವರೆಗೆ ಇದು ಓದಿ!
ಕಲಿತದು ವಿದ್ಯೆ ಮಾಡಲದು ನೆರವು ತನಗೋ ಮೇಣ್ ಪರರಿಗೋ
ಅದಿಲ್ಲದೆ ಬರಿ ಹೊತ್ತಿಗೆಯೊಳಿರಲದರಿಂದೇನು ಭಾರವಿದ್ಯೆಯಿಂ? || 1||
ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2||
ಬಾಯ್ಮಾತಿನಲಿ ಮಾತ್ರ ಬಳಕೆಯಲಿ ತಾನಿಲ್ಲದೆಲೆ
ಬರಿ ರಂಜಿಸುವುದದು ಗಿಳಿವಿದ್ಯೆಯು! ||3||
ಬಲ್ಲವರ ಮುಂದೆ ತೋರದೆಲೆ, ಮರುವರ ಮುಂದೆ ಬೆಳಗುತಲಿ
ಬಯಸಿದವರಿಗೆ ಕಲಿಸದಿರಲದುವೆ ದುರುಳವಿದ್ಯೆಯು || ೪||
ಆವ ಕಲಿಕೆಯದು ಕಂಡವರ ಮಚ್ಚರವ ತರಿಸುತಲಿ
ಸುಖನಿದಿರೆಯ ಕೆಡಿಸುವುದದು ಶೂಲವಿದ್ಯೆಯು! || ೫||
ನಾನು ಸರಿಯಾಗಿ ಅರ್ಥಮಾಡೀಕೊಳ್ಳ್ದದ ಕಾರಣ, ಬೆನಕರು ಕಡೆಯ ಶ್ಲೋಕವನ್ನು ಹೀಗೆ ಭಾಷಾಂತರಿಸಿದರು:
ಕಸಿದು ಪರರ ನಲ್ನುಡಿಗಳನು ತನ್ನದೆಂದಾಡುವನ
ಹೆಸರ ಗಿಟ್ಟಿಸುವ ಕಲಿಕೆ ತಾ ನಿಜದಿ ಕಳವಲ್ತೆ?
ಅಥವಾ,
ನನ್ನ ಉಳಿದೈದರ ಧಾಟಿಯಲ್ಲೇ ಹೇಳುವುದಾದರೆ
ಕಂಡವರೊಳ್ಳೆಯ ಮಾತನು ತನ್ನದೆಂಬಂತೆ ನುಡಿಯುತಲಿ
ಅಂತೋ ಇಂತೋ ಹೆಸರಗಳಿಸಲದು ತಾ ಕಳ್ಳವಿದ್ಯೆಯು!
||೬||
ಮೂಲ ಕೆಳಗೆ ಕೊಟ್ಟಂತೆ - ಕನ್ನಡಕಂದರ ದಯ :)
ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬||
-ಹಂಸಾನಂದಿ