"ಆರ್ಕುಟ್" ಎಂಬ ಮಾಯಾ ಜಾಲ!

"ಆರ್ಕುಟ್" ಎಂಬ ಮಾಯಾ ಜಾಲ!

"ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ.. ", "ನನ್ನ ಸ್ಕ್ರ್ಯಾಪ್ ಬುಕ್ ನೋಡು".. "ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?", "ಅಲ್ಬಮ್ ಅಪ್‍ಡೇಟ್ ಮಾಡೋ", "ನನ್ನನ್ನ ಫ್ರೆಂಡ್ ಲಿಸ್ಟ್ ಗೆ ಸೇರಿಸ್ಕೋ".. ಏನಿದು ವಿಚಿತ್ರವಾಗಿದೆ ಅಂತೀರಾ? ಇದು ಆರ್ಕುಟ್ ಎಂಬ ಅಂತರ್ಜಾಲದ ನೂತನ ತಾಣ ಸೃಷ್ಟಿಸಿರೋ ಹೊಸ ಪದಗಳು... ಯುವ ಜನಾಂಗವನ್ನು ಗಾಢವಾಗಿ ತನ್ನತ್ತ ಸೆಳೆದಿರುವ ಮಾಹಿತಿ ತಂತ್ರಜ್ಞಾನದ ನೂತನ ಆವಿಷ್ಕಾರ.

 ಏನಿದು ಆರ್ಕುಟ್ ?

ಆರ್ಕುಟ್ ಎಂಬುದು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು, ವಿಷಯಗಳ ಬಗ್ಗೆ ಮತ್ತು ಚರ್ಚಿಸಲು, ಭೌಗೋಳಿಕವಾಗಿ ದೂರ ದೂರವಿರುವ ಸ್ನೇಹಿತರ ನಡುವೆ ಸಂಪರ್ಕ ಸೇತುವೆಯನ್ನು ನಿರ್ಮಿಸಲು  ಅನುಕೂಲವನ್ನು ಕಲ್ಪಿಸುವ ಅಂತರ್ಜಾಲದ ಒಂದು ತಾಣ. (http://www.orkut.com).

ಹೊಸ ಸ್ನೇಹಿತರು ಬೇಕೇ? ಇಲ್ಲಿ ಸುಲಭವಾಗಿ ಸಂಪಾದಿಸಿ ಅವರೊಡನೆ ಹರಟ ಬಹುದು. ಆರ್ಕುಟ್‍ನ ಸ್ಕ್ರ್ಯಾಪ್ ಬುಕ್‍ಗಳಿರುವುದೇ ಸ್ನೇಹಿತರ ನಡುವಣ ದೈನಂದಿನ ಹರಟೆಗಾಗಿ. ನಿಮ್ಮ ಬಾಲ್ಯದ ಗೆಳೆಯನೊಡನೆ ಸಂಪರ್ಕ ಕಳೆದು ಹೋಗಿದೆಯೇ? ಆರ್ಕುಟ್‍ನಲ್ಲಿ ಹುಡುಕಾಡಿದರೆ ಸಿಗದೇ ಇರುವ ಸಾಧ್ಯತೆ ಕಡಿಮೆ!. ನಿಮ್ಮ ಸ್ನೇಹಿತನ ಬಗ್ಗೆ ಮೆಚ್ಚುಗೆಯ ಮಾತಾಡಬೇಕೆ? ಅವನ ಗುಣ ವಿಶೇಷಗಳನ್ನು ಇತರರಿಗೆ ಪರಿಚಯಿಸಬೇಕೆ? ಹಾಗಿದ್ದರೆ ನೀವು ಅತನಿಗೂಂದು "ಟೆಸ್ಟಿಮೋನಿ" ಬರೆಯಬಹುದು.  ನಿಮ್ಮ ಮಧುರ ಕ್ಷಣಗಳನ್ನು ನೆನಪಿಸುವ ಭಾವಚಿತ್ರ, ವೀಡಿಯೋಗಳನ್ನು ಇತರರೊಡನೆ ಹಂಚಿಕೊಳ್ಳಬೇಕೇ? , ಆರ್ಕುಟ್‍ನಲ್ಲಿ ಸುಲಭವಾಗಿ ಮಾಡಬಹುದು. ಹೊಸ ಚಿತ್ರಗಳ ಬಗ್ಗೆ, ಹೊಸ ವಿಚಾರಗಳ ಬಗ್ಗೆ ಇತರರ ಅಭಿಪ್ರಾಯವನ್ನು ತಿಳಿಯಬೇಕೇ? ಆರ್ಕುಟ್‍ನ ಕಮ್ಯೂನಿಟಿ ಪುಟದಲ್ಲಿ ಹೊಸ ಅಂಕಣವೊಂದನ್ನು ಆರಂಭಿಸುವ ಮೂಲಕ ಒಂದು ಚರ್ಚಾ ವೇದಿಕೆಯನ್ನೇ ಸೃಷ್ಟಿಸಬಹುದು. 

ಯಾಕಿಷ್ಟು ಜನಪ್ರಿಯ ?

ಮೇಲೆ ಹೇಳಿರುವ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಿರುವುದರ ಜೊತೆಗೆ ಆರ್ಕುಟ್‍ನ ಜನಪ್ರಿಯತೆಗೆ ಇನ್ನೊಂದು ಪ್ರಮುಖ ಕಾರಣವೂ ಇದೆ. ಅದೆಂದರೆ ಆರ್ಕುಟ್ ಒದಗಿಸುವ ಮುಕ್ತ ವಿಹಾರ. ಯಾರು ಯಾರ ಪುಟಗಳನ್ನು ಬೇಕಾದರೂ ವೀಕ್ಷಿಸಬಹುದು. ನಿಮ್ಮ ಸ್ನೇಹಿತ ಅವನ ಸ್ನೇಹಿತರೊಂದಿಗೆ ಏನೇನು ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾನೆ, ಅವನಿಗಿರುವ ಸ್ನೇಹಿರರು ಯಾರ್ಯಾರು? ಅವನ ಅಭಿರುಚಿಗಳೇನು? ಅವನ ಬಗ್ಗೆ ಯಾರು ಯಾರು ಏನೇನು ಅಭಿಪ್ರಾಯಪಡುತ್ತಾರೆಂಬುದನ್ನು ಸುಲಭವಾಗಿ ನೋಡಬಹುದು. ಅವನ ಸ್ನೇಹಲೋಕದಲ್ಲಿ ನಿಮ್ಮ ಸ್ನೇಹಿತರೂ ಸಿಕ್ಕರೆ ಅವರನ್ನೂ ನಿಮ್ಮ ಸ್ನೇಹಿತರ ಬಳಗಕ್ಕೆ ಸೇರಿಸಿಕೊಳ್ಳಬಹುದು. ಬಹುಷಃ ಇಷ್ಟೊಂದು ಮುಕ್ತತೆ, ಸ್ವಾತಂತ್ರ್ಯಗಳನ್ನು ಒದಗಿಸಿದ್ದು ಆರ್ಕುಟ್‍ನಲ್ಲೇ ಮೊದಲು ಎನ್ನಬಹುದು.

ದುರ್ಬಳಕೆ:

ಮೇಲೆ ಹೇಳಿರುವ ಅಂಶಗಳೆಲ್ಲ ಆರ್ಕುಟ್‍ನ ಒಂದು ಮುಖವನ್ನು ಪರಿಚಯಿಸಿದರೆ ಆರ್ಕುಟ್‍ನ ಇನ್ನೊಂದು ಮುಖದ ಬಗ್ಗೆಯೂ ಹೇಳಲೇ ಬೇಕಾಗುತ್ತದೆ. ಊರಿದ್ದಲ್ಲಿ ಕೊಳಗೇರಿಯೂ ಇದ್ದೇ ಇರುತ್ತದೆ ಎಂಬ ಮಾತು ಆರ್ಕುಟ್‍ಗೂ ಅನ್ವಯಿಸುತ್ತದೆ. ಯುವ ಜನಾಂಗದ ಮಧ್ಯೆ ಅತ್ಯಂತ ಜನಪ್ರಿಯತೆಯನ್ನು ಗಳಿಸಿರುವ ಆರ್ಕುಟ್ ‍ನ ದುರ್ಬಳಕೆಯೂ ಅನೂಚಿತವಾಗಿ ಸಾಗುತ್ತಲೇ ಇದೆ. ಅಶ್ಲೀಲ ವಿಷಯಗಳ ಬಗ್ಗೆ ಚರ್ಚಿಸಲು, ವಿಷಯಗಳಬಗ್ಗೆ, ವ್ಯಕ್ತಿಗಳ ಬಗ್ಗೆ ಸಲ್ಲದ ಅಪಪ್ರಚಾರ ಮಾಡಲು ಆಮೂಲಕ ಅಮಾಯಕ ಯುವ ಜನತೆಯನ್ನು ತಪ್ಪು ಹಾದಿಗೆಳೆಯುವಲ್ಲಿ ಆರ್ಕುಟ್‍ನ ದುರ್ಬಳಕೆಯಾಗುತ್ತಿರುವುದು ಖೇದಕರ ಸಂಗತಿ. ಈ ಮಧ್ಯಮದಿಂದ ಅನುಕೂಲಗಳೆಷ್ಟು ಆಗಿವೆಯೋ, ಅಷ್ಟೇ ಅನನುಕೂಲಗಳೂ ಆಗುತ್ತಿವೆ. ಆದರೆ ವಿಚಾರವಂತರಾದ ನಾವು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕೇ ವಿನಃ ದುರ್ಬಳಕೆಯನ್ನಲ್ಲ.

Rating
No votes yet