ಆಹಾ! ಒಳ್ಳೇ ಜೋಡಿ

ಆಹಾ! ಒಳ್ಳೇ ಜೋಡಿ

ನಾನಿಂದು ಯಾವುದೋ ಫಂಕ್ಷನ್ನಿಗೆ ಅಮ್ಮನ ಬಲವಂತಕ್ಕಾಗಿ ಹೋಗಿದ್ದೆ. ಅಲ್ಲಿ ಕುಳಿತವರೆಲ್ಲರೂ ಗುಸುಗುಸು ಎಂದು ಮಾತಾಡುತ್ತಿದ್ದರು. ಅದು ಯಾರ ಬಗ್ಗೆ ಎಂದು ಅರ್ಥವಾಗಿರಲಿಲ್ಲ. ಅಲ್ಲಿ ಯಾರೂ ಗೆಳತಿಯರಿಲ್ಲದೆ ಬೇಸರದಿಂದ ಕುಳಿತಿದ್ದ ನನಗೆ ಅಮ್ಮ ಕರೆದು ಒಂದು ಜೋಡಿಯನ್ನು ತೋರಿಸಿ, ಇವರ ಬಗ್ಗೆಯೆ ಎಲ್ಲರೂ ಮಾತಾಡಿಕೊಳ್ಳುತ್ತಿದ್ದದ್ದು ಎಂದರು. ನನಗಂತೂ ಆ ನವದಂಪತಿಗಳನ್ನು ನೋಡಿದಾಗ ಆಶ್ಚರ್ಯ, ಆನಂದ ಒಟ್ಟೊಟ್ಟಿಗೆ ಆಯಿತು. ಇಬ್ಬರ ಮುಖದಲ್ಲೂ ಏನು ಕಳೆ! ಉತ್ಸಾಹ. ಇಬ್ಬರೂ ಅವರದೇ ಲೋಕದಲ್ಲಿದ್ದರು. ಅವರಿಬ್ಬರನ್ನೂ ನೋಡಿ ಬಹಳ ಖುಶಿಯಾಯಿತು. ಅದರಲ್ಲೇನಿದೆ? ಅಂತೀರಾ. ವಿಶೇಷವಿದೆ. ಏನೆಂದರೆ ಇಬ್ಬರೂ ಅರವತ್ತು ವಯಸ್ಸು ದಾಟಿದವರು! ಆ ಮಹಿಳೆಗೆ ಕಾಲಿನ ಅಂಗವಿಕಲತೆಯಿಂದಾಗಿ ಇಷ್ಟು ವಯಸ್ಸಿನವರೆಗೂ ಮದುವೆಯಾಗಿರಲಿಲ್ಲವಂತೆ. ಯಾವುದೋ ಕಾಲೇಜಿನ ಲೆಕ್ಚರರ್ ಆಗಿದ್ದವರು ರಿಟೈರ್ಡ್ ಆದ ಮೇಲೆ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆತನಿಗೂ ಕೂಡ ಯಾವುದೋ ಕಾರಣಕ್ಕಾಗಿ ಮದುವೆಯಾಗಿರಲಿಲ್ಲ. ಇಬ್ಬರೂ ಒಬ್ಬರಿಗೊಬ್ಬರಿಗೆ ಆಸರೆಯಾಗಲು ಈಗ ಮದುವೆಯಾಗಿದ್ದಾರೆ. ನನಗಂತೂ ಪ್ರೀತಿಯೆಂದರೆ ಇದು ಎಂದು ಅನ್ನಿಸಿತು. ಈ ಹಿಂದೆ ಪ್ರೀತಿಯೆಂದರೇನು ಎಂದು ಚರ್ಚಿಸಿದ್ದ ನನಗೆ ಪ್ರೀತಿಗೆ ಅರ್ಥ ಸಿಕ್ಕಿತು. ಆ ನವ (ಯುವ) ದಂಪತಿಗಳಿಗೆ ನನ್ನಿಂದ ಮುಜುಗರವಾಯಿತೇನೋ ಗೊತ್ತಿಲ್ಲ. ನನಗದರ ಅರಿವೇ ಇಲ್ಲದಂತೆ ಅವರನ್ನೇ ನೋಡುತ್ತಾ ಇದ್ದು ಬಿಟ್ಟೆ.

Rating
No votes yet

Comments