'ಆ್ಯಕ್ಸಿಡೆಂಟ್' ಮೆಚ್ಚಿ ಸಂಭಾವನೆ ವಾಪಸ್ ನೀಡಿದ್ದ ಇಳಯರಾಜಾ!

'ಆ್ಯಕ್ಸಿಡೆಂಟ್' ಮೆಚ್ಚಿ ಸಂಭಾವನೆ ವಾಪಸ್ ನೀಡಿದ್ದ ಇಳಯರಾಜಾ!

ಚಿತ್ರ

ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ. 
ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ, ಇತ್ತೀಚೆಗೆ ಹಾಸ್ಯ ನಟ ಕಾಶಿಯವರನ್ನು ಸಂದರ್ಶಿಸಿದ್ದಾಗ ಅವರು ಹೇಳಿದ ಪ್ರಸಂಗವಿದು. 
'ಆ್ಯಕ್ಸಿಡೆಂಟ್' ಚಿತ್ರದ ಶೂಟಿಂಗ್ ಮುಗಿದ ಮೇಲೆ ಶಂಕರ್ ನಾಗ್ , ರೀರೆಕಾರ್ಡಿಂಗ್ ಗಾಗಿ ಚಿತ್ರದ ರೀಲುಗಳೊಂದಿಗೆ ಚೆನ್ನೈಗೆ ಹೋಗಿದ್ದರು. ಆ ಚಿತ್ರಕ್ಕೆ ಸಂಗೀತಜ್ಞಾನಿ ಇಳಯರಾಜಾ ಅವರದ್ದೇ ಸಂಗೀತ. ಹಾಗಾಗಿ, ಇಳಯರಾಜಾ ಸ್ಟುಡಿಯೋದಲ್ಲಿ ಅವರಿಗೆ ಚಿತ್ರವನ್ನು ತೋರಿಸಲಾಯ್ತು. ಚಿತ್ರ ನೋಡಿದ ಇಳಯರಾಜಾ, ಮರುದಿನವೇ ರೀರೆಕಾರ್ಡಿಂಗ್ ಇಟ್ಟುಕೊಂಡರು. ಅಷ್ಟೇ ಅಲ್ಲ, ಒಂದೇ ದಿನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ದುಡಿದು ರೀರೆಕಾರ್ಡಿಂಗ್ ಮುಗಿಸಿಕೊಟ್ಟರು. 
ಹೀಗೆ, ಒಂದೇ ದಿನದಲ್ಲಿ ರೀರೆಕಾರ್ಡಿಂಗ್ ಮುಗಿಸಿಕೊಟ್ಟ ಇಳಯರಾಜಾ ಅವರಿಗೆ ಸಂಭಾವನೆ ಎಷ್ಟು ಕೊಡಬೇಕು ಎಂಬ ಸಂದಿಗ್ಧತೆ ಶಂಕರ್ ನಾಗ್ ಅವರನ್ನು ಕಾಡಲು ಆರಂಭಿಸಿತು. ಆಗ, ಅವರು ಒಂದು ಬ್ಲಾಂಕ್ ಚೆಕ್ ನಲ್ಲಿ ತಮ್ಮ ಸಹಿ ಮಾಡಿ, ಅದನ್ನು ಒಂದು ಕವರಿನಲ್ಲಿ ಹಾಕಿ ಇಳಯರಾಜಾ ಅವರಿಗೆ ಕೊಟ್ಟು ಬಂದರು. 
ಆದರೆ, ಒಂದು ವಾರದ ನಂತರ, ಶಂಕರ್ ಅವರಿಗೆ ಅಚ್ಚರಿ ಕಾದಿತ್ತು. ಅವರ ಮನೆಗೆ ಮದ್ರಾಸಿನಿಂದ (ಈಗಿನ ಚೆನ್ನೈ) ಅಂಚೆ ಮೂಲಕ ಲಕೋಟೆ ಬಂತು. ಅದನ್ನು ಕಳುಹಿಸಿದ್ದು ಇಳಯರಾಜಾ. ಅದನ್ನು ತೆರೆದರೆ, ಅದರಲ್ಲಿ ಅವರಿಗೆ ನೀಡಲಾಗಿದ್ದ ಬ್ಲಾಂಕ್ ಚೆಕ್ ಅನ್ನು ವಾಪಸ್ ಮಾಡಿದ್ದ ರಾಜಾ, ಜೊತೆಗೆ ಅವರ ಸಹಿಯುಳ್ಳ 50 ಸಾವಿರ ರು.ಗಳ ಚೆಕ್ಕನ್ನೂ ಶಂಕರ್ ಹೆಸರಿಗೆ ಕಳುಹಿಸಿದ್ದರು! ಜೊತೆಗೆ ಒಂದು ಪುಟ್ಟ ಕಾಗದದಲ್ಲಿ ಒಂದು ಸಾಲಿನ ಪುಟ್ಟ ಮೆಸೇಜ್ ಸಹ ಇತ್ತ. ಇದರಲ್ಲಿ, 'ಥ್ಯಾಂಕ್ಸ್ ಫಾರ್ ಗಿವಿಂಗ್ ಆ್ಯನ್ ಅಪಾರ್ಚುನಿಟಿ ಟು ಗಿವ್ ಮ್ಯೂಸಿಕ್ ಫಾರ್ ಎ ವಂಡರ್ ಫುಲ್ ಫಿಲಂ' ಎಂದು ರಾಜಾ ಬರೆದಿದ್ದರು. 
ಇದು, ಶಂಕರ್ ನಾಗ್ ಕೃತಿಯನ್ನು ಮೆಚ್ಚಿ ಇಳಯರಾಜಾ ಕೊಟ್ಟ ಬಹುಮಾನ. ಅಷ್ಟೇ ಅಲ್ಲ, ಒಬ್ಬ ಸೃಜನಶೀಲ ವ್ಯಕ್ತಿ ಮತ್ತೊಬ್ಬ ಸೃಜನಶೀಲ ವ್ಯಕ್ತಿಯನ್ನು ಗೌರವಿಸಿದ ರೀತಿ. 
ಇವತ್ತು ಶಂಕರ್ ನಾಗ್ ಹುಟ್ಟುಹಬ್ಬ... ಅವರ ನೆನಪಿನಲ್ಲಿ ಇಲ್ಲಿ ಹೇಳಿರುವ ಈ ಪ್ರಸಂಗ ಎಲ್ಲಾ ಸೃಜನಶೀಲರಿಗೂ ಸ್ಫೂರ್ತಿಯಾಗಲಿ.

Rating
No votes yet