ಆ ಒಂದು ಕ್ಷಣದಲ್ಲಿ..(ಕಥೆ)
ಮಧುರ..ಮಧುರ...ಏಳಮ್ಮ ಬೇಗ. ಇವತ್ತೂ ಇಷ್ಟು ಹೊತ್ತು ಮಲಗಿದರೆ ಹೇಗೆ. ನಾಳೆ ಮದುವೆ ಇಟ್ಟುಕೊಂಡು ನೀನು ಇಷ್ಟು ಹೊತ್ತು ಮಲಗಿದರೆ ಹೇಗಮ್ಮ. ನಾಳೆ ಇಂದ ಅತ್ತೆ ಮನೆಗೆ ಹೋಗುವವಳು ನೀನು. ಅಲ್ಲೂ ಹೀಗೆ ನಿದ್ರೆ ಮಾಡಿದರೆ ಅವರು ಏನೆಂದು ತಿಳಿಯುತ್ತಾರೆ. ಎಷ್ಟು ಸೋಮಾರಿಯಾಗಿ ಬೆಳೆಸಿದ್ದಾರೆ ಎಂದುಕೊಳ್ಳುತ್ತಾರೆ. ಏಳು ಕೂಸು ಬೇಗ.
ಅಮ್ಮ ನಾಳೆ ಇಂದ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ ಅಂತಾನೆ ಎಲ್ಲ ನಿದ್ರೆಯನ್ನೂ ಇವತ್ತೇ ಮಾಡಿ ಮುಗಿಸುತ್ತೇನೆ. ಇನ್ನೊಂದು ಸ್ವಲ್ಪ ಹೊತ್ತು ಮಲಗಿರುತ್ತೇನೆ ಎಂದು ಮತ್ತೆ ಮುಸುಕು ಹೊದ್ದು ಮಲಗಿದಳು.
ಮಧುರ....ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡಿದರೆ ನನಗೆ ಮುಂದಿನ ಕೆಲಸಗಳು ಮಾಡಕ್ಕೆ ಅನುಕೂಲ ಆಗತ್ತೆ. ಸಂಜೆ ವೇಳೆಗೆ ಮಧು ಅವರು ಛತ್ರಕ್ಕೆ ಬಂದು ಬಿಡುತ್ತಾರೆ. ಆ ಸಮಯದ ಮುಂಚೆ ನಾವು ಅಲ್ಲಿರಬೇಕು. ಮನೆ ತುಂಬಾ ಜನ ಬೇರೆ ಇದಾರೆ. ಎಷ್ಟೊ೦ದು ಕೆಲಸ ಇದೆ ಬೇಗ ಏಳಮ್ಮ ಎಂದು ಮಧುರಳ ತಾಯಿ ಅಲ್ಲಿಂದ ಹೊರಟರು.
ಮಧುರ ಅಪ್ಪ ಅಮ್ಮನ ಏಕೈಕ ಮುದ್ದಿನ ಮಗಳು. ಅಪ್ಪ ಅಮ್ಮನ ಪ್ರೀತಿಗೆ ಪಾತ್ರಳಾಗಿದ್ದಳು. ಅವರೂ ಸಹ ಮಧುರಳ ಆಸೆಗಳಿಗೆ, ಅವಳ ಭಾವನೆಗಳಿಗೆ ಯಾವತ್ತೂ ವಿರೋಧ ವ್ಯಕ್ತ ಪಡಿಸಿರಲಿಲ್ಲ. ಹಾಗೆಯೇ ಮಧುರ ಸಹ ಅಪ್ಪ ಅಮ್ಮನಿಗೆ ಇಷ್ಟವಿಲ್ಲದ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ.
ಮೂರು ತಿಂಗಳ ಹಿಂದಷ್ಟೇ ಮಧುರಳಿಗೆ ಅವರ ಅಪ್ಪ ಅಮ್ಮ ಮಧುಸೂಧನ್ ಎಂಬ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ನೋಡ ನೋಡುತ್ತಿದ್ದಂತೆ ಮೂರು ತಿಂಗಳುಗಳು ಉರುಳಿ ಹೋಗಿದ್ದವು. ಮದುವೆಗೆ ಎರಡು ದಿನ ಮುಂಚಿನಿಂದಲೇ ಮನೆಗೆ ಅತಿಥಿಗಳು, ಬಂಧುಗಳು ಅವರ ಮಕ್ಕಳು
ಎಲ್ಲ ಬಂದು ಮನೆ ತುಂಬಿಕೊಂಡಿತ್ತು. ಜೊತೆಯಲ್ಲಿ ಮಧುರಳ ಆಪ್ತ ಗೆಳತಿ ಸುಮಾ ಸಹ ಬಂದಿದ್ದಳು.
ಮಧುರ ಮತ್ತು ಸುಮಳ ಸ್ನೇಹ ಚಿಕ್ಕಂದಿನದ್ದು. ಅಕ್ಕ ಪಕ್ಕದ ಮನೆಯಲ್ಲಿದ್ದ ಮಧುರ ಮತ್ತು ಸುಮಾ ಚಿಕ್ಕಂದಿನಿಂದ ಬಹಳ ಆಪ್ತವಾಗಿ ಬೆಳೆದಿದ್ದರು. ಪ್ರತಿಯೊಂದು ವಿಷಯವನ್ನೂ ಒಬ್ಬರಿಗೊಬ್ಬರು ಹಂಚಿಕೊಳ್ಲುತ್ತಿದ್ದರು. ಒಮ್ಮೊಮ್ಮೆ ಊಟ ತಿಂಡಿ ನಿದ್ರೆ ಎಲ್ಲವೂ ಸುಮಳ ಮನೆಯಲ್ಲಿ, ಇಲ್ಲ ಮಧುರಳ ಮನೆಯಲ್ಲೇ ಆಗಿಹೋಗಿತ್ತು. ಇಬ್ಬರ ಮನೆಯಲ್ಲೂ
ಇವರ ಸ್ನೇಹವನ್ನು ನೋಡಿ ರೇಗಿಸುತ್ತಿದ್ದರು. ಅಲ್ರೆ ನಾಳೆ ಮದುವೆ ಆದ್ರೆ ಇಬ್ಬರೂ ಒಬ್ಬನೇ ಹುಡುಗನನ್ನು ಆಗುತ್ತೀರೋ ಹೇಗೆ?
ವರ್ಷದ ಹಿಂದಷ್ಟೇ ಸುಮಾ ಅವರ ಕುಟುಂಬ ಮನೆಯನ್ನು ಬೇರೊಂದು ಪ್ರದೇಶಕ್ಕೆ ವರ್ಗಾಯಿಸಿದ್ದರು. ಆದರೂ ಪ್ರತಿದಿನ ಇವರ ಭೇಟಿ ನಿಲ್ಲುತ್ತಿರಲಿಲ್ಲ. ಹಾಗೇನಾದರೂ ಭೇಟಿ ಸಾಧ್ಯವಾಗದಿದ್ದರೆ ಫೋನ್ ಅಂತೂ ತಪ್ಪುತ್ತಿರಲಿಲ್ಲ. ಒಬ್ಬರಿಗೊಬ್ಬರು ಅಷ್ಟು ಹಚ್ಚಿಕೊಂಡಿದ್ದರು. ನಿಶ್ಚಿತಾರ್ಥವಾದ ಮೇಲೂ ಮಧು ಜೊತೆ ಫೋನ್ ನಲ್ಲಿ ಮಾತಾಡಡಿದ್ದರೂ ಸುಮಳ ಜೊತೆಯಂತೂ ತಪ್ಪುತ್ತಿರಲಿಲ್ಲ. ಈಗ ಮಧುರಳ ಮದುವೆ, ಎರಡು ದಿನದಿಂದ ಸುಮಾ ಮಧುರಳ ಮನೆಯಲ್ಲಿ ಇದ್ದಳು. ಹಿಂದಿನ ದಿನ ರಾತ್ರಿ ಇಬ್ಬರೂ ಮಧ್ಯರಾತ್ರಿವರೆಗೂ ಮಾತಾಡಿದ್ದರಿಂದ ಮಧುರ ಇನ್ನೂ ನಿದ್ದೆ ಮಾಡುತ್ತಿದ್ದಳು. ಸುಮಾ ಒಮ್ಮೆ ಮನೆಗೆ ಹೋಗಿ ಮಧ್ಯಾಹ್ನದ ವೇಳೆಗೆ ಬರುತ್ತೇನೆ ಎಂದು ಹೋಗಿದ್ದಳು.
ಮತ್ತೊಮ್ಮೆ ಮಧುರಳ ಅಮ್ಮ ಬಂದು ಎಬ್ಬಿಸಿದಾಗ ಮಧುರ ಹುಸಿ ಕೋಪ ತೋರುತ್ತಾ ಎದ್ದು ಸ್ನಾನ ಮುಗಿಸಿ ಪೂಜೆ ಮಾಡಿ, ಬೇರೆ ಕೆಲಸದಲ್ಲಿ ನಿರತಳಾದಳು. ಮಧ್ಯಾಹ್ನದ ಹೊತ್ತಿಗೆ ಊಟ ಮುಗಿಸಿ ಸುಮಗೆ ಕರೆ ಮಾಡಿದಳು. ಎಲ್ಲೇ ಕೋತಿ ಇಷ್ಟೊತ್ತಾದರೂ ಇನ್ನೂ ಬಂದಿಲ್ವಲ್ಲೇ. ಕೊಬ್ಬು ತಾನೇ ನಿನಗೆ. ಇಲ್ಲ ಮಧುರ ನಾಳೆಗೆ ಸೀರೆ ತೆಗೆದುಕೊಂಡು ಬರೋಣ ಅ೦ತ ಅಂಗಡಿಗೆ ಬಂದಿದ್ದೇನೆ. ಇನ್ನೊಂದು ಒಂದು ಘಂಟೆಯಲ್ಲಿ ಅಲ್ಲಿರುತ್ತೇನೆ. ಇನ್ನೇನು ನಾಳೆಯಿಂದ ಮಧು ಇರುತ್ತಾನೆ. ಆಮೇಲೆ ಇಷ್ಟೆಲ್ಲಾ ಫೋನ್ ಮಾಡ್ತ್ಯ ನಂಗೆ?
ಹಲೋ ಮಧು ಅಲ್ಲ ಯಾರು ಬಂದ್ರು ನಿನ್ನ ಸ್ನೇಹ ಬಿಡುವುದಿಲ್ಲ ಕಣೆ...ಅದಿರಲಿ ಮೊದಲು ನೀನು ಬಾ, ನೀನಿಲ್ದೆ ಯಾವುದಕ್ಕೂ ತೋಚುತ್ತಾ ಇಲ್ಲ ಎಂದು ಕರೆ ಕಟ್ ಮಾಡಿದಳು.
ಅಷ್ಟರಲ್ಲಿ ಮಧು ಫೋನ್ ಮಾಡಿ ಮಧುರ ನಾವು ಇನ್ನೊಂದು ಮೂರು ಘಂಟೆಯಲ್ಲಿ ಛತ್ರಕ್ಕೆ ಬರುತ್ತೇವೆ. ಆದಷ್ಟು ಬೇಗ ನಿನ್ನನ್ನು ನೋಡಬೇಕು ಎನಿಸುತ್ತಿದೆ ಮದುವೆ ಬಟ್ಟೆಯಲ್ಲಿ ಬೇಗನೆ ಬಂದು ಬಿಡು ಎಂದು ಕರೆ ಮಾಡಿದ. ಕೂಡಲೇ ಆ ವಿಷಯವನ್ನು ಮನೆಯವರಿಗೆ ತಿಳಿಸಿ ತಾನು ಸಿದ್ಧವಾಗಲು ತೆರಳಿದಳು.
ಕನ್ನಡಿಯ ಮುಂದೆ ನಿಂತು ತನ್ನ ಅಂದವನ್ನು ತಾನೇ ಮೆಚ್ಚಿಕೊಳ್ಳುತ್ತ ಎರಡೆರಡು ಬಾರಿ ಸೀರೆ ನೆರಿಗೆಯನ್ನು ಸರಿ ಮಾಡಿಕೊಳ್ಲುತ್ತಿದ್ದಳು ಮಧುರ. ಅಷ್ಟರಲ್ಲಿ ಯಾವುದೋ ಕರೆ ಬಂದು ಮೊಬೈಲ್ ಕಿವಿಗಿಟ್ಟುಕೊಂಡು ಹಲೋ ಎಂದಳು. ಮಧುರ ಎಂದು ಕ್ಷೀಣವಾದ ದನಿಯೊಂದು ಕೇಳಿ ಬಂತು. ಹಲೋ ಯಾರು ಎಂದು ಕೇಳಿದಳು ಮಧುರ.
ಮಧುರ ನಾನು ಕಣೆ ಸುಮಾ...ಅವಳ ದನಿಯಲ್ಲಿ ನೋವಿನ ಭಾವ ತುಂಬಿತ್ತು...ಹಲೋ ಸುಮಾ ಯಾಕೆ ಒಂದು ರೀತಿ ಮಾತಾಡ್ತಾ ಇದ್ದೀಯ?
ಮಧುರ ಏನೂ ಗಾಭರಿ ಆಗಬೇಡ ನಾನು ನಿನ್ನ ಮನೆಗೆ ಬರಬೇಕಾದರೆ ದಾರಿಯಲ್ಲಿ ಸಣ್ಣದೊಂದು ಆಕ್ಸಿಡೆಂಟ್ ಆಯಿತು ಈಗ ಇಲ್ಲೇ ಹಿಲ್ ಸೈಡ್ ಆಸ್ಪತ್ರೆಯಲ್ಲಿದ್ದೇನೆ. ನೀನು ಛತ್ರಕ್ಕೆ ಹೊರಡು. ನಾನು ನಾಳೆ ಬೆಳಿಗ್ಗೆ ಬರುತ್ತೇನೆ ಎಂದಳು.
ಸುಮಾ ಏನು ಹೇಳ್ತಾ ಇದ್ದೀಯ ಎಂದು ಅಳಲು ಶುರು ಮಾಡಿದಳು. ಮಧುರ ಅಸಲಿಗೆ ನಿನಗೆ ಹೇಳುವುದೇ ಬೇಡ ಎಂದುಕೊಂಡಿದ್ದೆ, ಆದರೆ ಆಮೇಲೆ ಅದಕ್ಕೂ ನಿನ್ನ ಕೈಲಿ ಬೈಸಿಕೊಳ್ಳಬೇಕಲ್ಲ ಎಂದು ಹೇಳಿದೆ ಅಷ್ಟೇ. ದಯವಿಟ್ಟು ನೀನು ಅಳು ನಿಲ್ಲಿಸಿ ನಿನ್ನ ಪಾಡಿಗೆ ನೀನು ಛತ್ರಕ್ಕೆ ಹೊರಡು ಎಂದು ಕರೆ ಕಟ್ ಮಾಡಿದಳು.
ಮಹಡಿ ಮೇಲಿಂದ ಅಳುತ್ತ ಬಂದ ಮಧುರ ಅಮ್ಮನ ಬಳಿ ಹೋಗಿ ವಿಷಯ ತಿಳಿಸಿ ಅಮ್ಮ ಇನ್ನೂ ಮಧು ಅವರು ಬರುವುದಕ್ಕೆ ಮೂರು ಗಂಟೆ ಸಮಯವಿದೆ. ಅಷ್ಟರಲ್ಲಿ ನಾನು ಹೋಗಿ ಸುಮಳನ್ನು ನೋಡಿ ಬರುತ್ತೇನೆ ಎಂದಳು. ಮಧುರ ನಿನಗೇನೂ ತಲೆ ಕೆಟ್ಟಿದ್ಯ, ಇನ್ನೇನು ಛತ್ರಕ್ಕೆ ಹೊರಡಬೇಕು ಈಗ ನೀನು ನೋಡಿದರೆ ಆಚೆ ಹೋಗುತ್ತೀನಿ ಅಂತಿದ್ಯ ಅದೆಲ್ಲ ಸಾಧ್ಯವಿಲ್ಲ. ನೀನೆಲ್ಲೂ ಆಚೆ ಹೋಗುವ ಹಾಗಿಲ್ಲ. ಸುಮಳ ಬಗ್ಗೆ ನಮಗೂ ಅನುಕಂಪ ಇದೆ ಆದರೆ ಈ ಹೊತ್ತಿನಲ್ಲಿ ನೀನು ಹೋಗುವುದಕ್ಕೆ ನಾವು ಸಮ್ಮತಿಸುವುದಿಲ್ಲ.
ಅಮ್ಮ ನನಗೆ ಮದುವೆಗಿಂತ ಸುಮಾ ಹೆಚ್ಚು. ನೀವು ನಿಮ್ಮ ಪಾಡಿಗೆ ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳಿ ನಾನು ಹೋಗಿ ಅವಳನ್ನು ನೋಡಿಕೊಂಡು ಬಂದು ಬಿಡುತ್ತೇನೆ ಎಂದು ಅವರಮ್ಮನ ಉತ್ತರಕ್ಕೂ ಕಾಯದೆ ಆಟೋ ಹತ್ತಿ ಹೊರಟು ಬಿಟ್ಟಳು. ಸುಮಳ ಮನೆ ಇದ್ದದ್ದು ನಗರದಲ್ಲೇ ಆದರೂ ಅದು ಸಿಕ್ಕಾಪಟ್ಟೆ ದೂರ ಇತ್ತು. ಕೆಲಸಕ್ಕಾಗಿ ಅವಳು ಬಂದಾಗ ಅವರಿಬ್ಬರೂ ಪ್ರತಿ ದಿನ ಭೇಟಿ ಮಾಡುತ್ತಿದ್ದೆರು. ಅವಳಿಗೆ ಆಕ್ಸಿಡೆಂಟ್ ಆಗಿದ್ದ ಜಾಗ ಅದೊಂದು ಅಜ್ಞಾತ ಪ್ರದೇಶ ಆಗಿತ್ತು. ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ ಆಸ್ಪತ್ರೆಯೂ ಅದಕ್ಕೆ ಭಿನ್ನವಾಗಿರಲಿಲ್ಲ. ಆ ಪ್ರದೇಶದಲ್ಲಿ ಆಸ್ಪತ್ರೆ ಬಿಟ್ಟರೆ ಬೇರೆ ಹೆಚ್ಚೇನೂ ಜನಸಂದಣಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಮನೆ ಕಾಣುತ್ತಿತ್ತು.
ಆಸ್ಪತ್ರೆಯ ಒಳಗೆ ಹೋಗಿ ಸುಮಳನ್ನು ನೋಡಿದರೆ ಅವಳು ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದಳು. ಅವಳ ಪಕ್ಕದಲ್ಲಿ ಹೋಗಿ ಸುಮಾ ಎಂದ ತಕ್ಷಣ ಎಚ್ಚರಗೊಂಡು ಮಧುರಳನ್ನು ಅಲ್ಲಿ ನೋಡಿ ಆಶ್ಚರ್ಯಚಕಿತಳಾಗಿ ಮಧುರ ನಿನಗೇನೂ ಹುಚ್ಚ, ಛತ್ರಕ್ಕೆ ಹೋಗುವುದು ಬಿಟ್ಟು ಇಲ್ಲಿಗೆ ಯಾಕೆ ಬಂದೆ. ಮೊದಲು ನಡಿ ಎಂದಳು.
ನಾನು ಹೋಗುತ್ತೀನಿ, ಮೊದಲು ಡಾಕ್ಟರ ಏನೆಂದರು ಅದು ಹೇಳು, ಏನಿಲ್ಲ ಸ್ವಲ್ಪ ಪೆಟ್ಟು ಬಿದ್ದಿದೆ ಅಷ್ಟೇ ಪೇನ್ ಕಿಲ್ಲರ್ ಇಂಜೆಕ್ಷನ್ ಕೊಟ್ಟಿದ್ದಾರೆ. ರಾತ್ರಿಗೆ ಸರಿ ಹೋಗತ್ತೆ. ಬೆಳಿಗ್ಗೆ ನಿನ್ನ ಮದುವೆಗೆ ಹಾಜರ್ ಇರುತ್ತೇನೆ. ಮೊದಲು ನೀನು ಹೊರಡು ಎಂದು ಬೀಳ್ಕೊಟ್ಟಳು.
ಅವಳನ್ನು ಮಾತಾಡಿಸಿ ಆಚೆ ಬಂದರೆ ಯಾವುದೇ ಆಟೋಗಳು ಕಾಣಿಸಲಿಲ್ಲ. ಅಷ್ಟರಲ್ಲಿ ಮನೆಯಿಂದ ಬಂದ ಕರೆಗೆ ಉತ್ತರಿಸಿ ಹಾ ಅಮ್ಮ ಹೊರಡುತ್ತಿದ್ದೀನಿ ಇನ್ನೊಂದು ಅರ್ಧ ಗಂಟೆಯಲ್ಲಿ ಮನೆಯಲ್ಲಿರುತ್ತೇನೆ. ಸುಮಗೆ ಹೆಚ್ಚೇನೂ ಪೆಟ್ಟಾಗಿಲ್ಲ ಬೆಳಿಗ್ಗೆ ಹೊತ್ತಿಗೆ ಛತ್ರಕ್ಕೆ ಬರುತ್ತಾಳೆ ಎಂದು ಕರೆ ಕಟ್ ಮಾಡಿ ಆಟೋ ಹುಡುಕುತ್ತ ಮುಂದೆ ಬಂದಿದ್ದಳು. ಸುತ್ತಲೂ ನಿರ್ಜನ ಪ್ರದೇಶ ಒಂದೇ ಒಂದು ಗಾಡಿಯೂ ಕಾಣುತ್ತಿಲ್ಲ. ಮತ್ತೆ ಮೊಬೈಲ್ ರಿಂಗಾಯಿತು ನೋಡಿದರೆ ಮಧು. ಹಲೋ...ಮಧುರ ಎಲ್ಲಿದ್ದೀಯ, ಹಾ ಮಧು ಇಲ್ಲೇ ಹಿಲ್ ಸೈಡ್ ಆಸ್ಪತ್ರೆ ಬಳಿ ಬಂದಿದ್ದೆ. ಸುಮಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಇದ್ದಳು ಅವಳನ್ನು ನೋಡಿ ಬರಲು ಬಂದಿದ್ದೆ. ಇನ್ನೇನು ಹೊರಡುತ್ತಿದ್ದೇನೆ.
ಮಧುರ ನಿನಗೆ ತಲೆ ಕೆಟ್ಟಿದ್ಯ ಯಾಕೆ ಅಷ್ಟು ದೂರ ಹೋಗಿದ್ದೀಯ, ಮೊದಲೇ ಆ ಪ್ರದೇಶ ಸರಿ ಇಲ್ಲ, ಕಳೆದ ವಾರವಷ್ಟೇ ಅಲ್ಲೊಂದು ಅನಾಹುತ ನಡೆದಿತ್ತು. ಹೋಗಲಿ ನಾನು ಬರಲ? ಬೇಡ ಮಧು ನಾನು ಆಟೋ ಮಾಡಿಕೊಂಡು ಬರುತ್ತೇನೆ. ನೀನೇನೂ ಯೋಚಿಸಬೇಡ ಎಂದು ಕರೆ ಕಟ್ ಮಾಡಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಹಿಂದಿನಿಂದ ಎರಡು ಬೈಕಿನಲ್ಲಿ ನಾಲ್ಕು ಜನ ಹುಡುಗರು ಬಂದು ನನಗೆ ಅಡ್ಡಲಾಗಿ ಗಾಡಿ ನಿಲ್ಲಿಸಿದರು.
ಮಧುರಗೆ ಜಂಘಾಬಲವೇ ಉಡುಗಿ ಹೋಯಿತು. ಅವರಲ್ಲಿ ಒಬ್ಬ ಹತ್ತಿರ ಬಂದು ಕ್ಯಾ ಬುಲ್ ಬುಲ್ ಎಂದ. ಅವನ ಬಾಯಿಂದ ಕೆಟ್ಟ ವಾಸನೆ ಬರುತ್ತಿತ್ತು. ನಾಲ್ಕು ಜನರೂ ಕಂಠ ಪೂರ್ತಿ ಕುಡಿದಿದ್ದರು. ನಾಲ್ವರೂ ಕೆಟ್ಟ ಕೆಟ್ಟ ಮಾತುಗಳಿಂದ ಮಧುರಳನ್ನು ಚೇಡಿಸುತ್ತಿದ್ದರು. ಒಬ್ಬ, ಏನಮ್ಮ ಮದುವೆ ಇಂದ ಓಡಿ ಬಂದಿದ್ಯ? ಯಾಕೆ ಹುಡುಗ ಇಷ್ಟ ಆಗಲಿಲ್ವಾ? ನನ್ನ ಮದುವೆ ಆಗ್ತೀಯ ಎಂದು ಮೈ ಮುಟ್ಟಲು ಬಂದ. ಮಧುರ ಅವರನ್ನು ತಳ್ಳಿ ಓಡಲು ಶುರು ಮಾಡಿದಳು. ಇನ್ನೊಬ್ಬ ಅವಳಿಗೆ ಕಾಲು ಕೊಟ್ಟಿ ಬೀಳಿಸಿಬಿಟ್ಟ. ನಾಲ್ಕೂ ಜನ ಹತ್ತಿರ ಬರುತ್ತಿದ್ದಾರೆ.
ಅಷ್ಟರಲ್ಲಿ ಹಿಂದಿನಿಂದ ಒಬ್ಬ ಬಂದು ಆ ನಾಲ್ಕೂ ಜನರನ್ನು ಎಳೆದು ಪಕ್ಕಕ್ಕೆ ಹಾಕಿದ. ಬಂದಿದ್ದ ಆಸಾಮಿ ಆಜಾನುಬಾಹು ಆಗಿದ್ದ, ಅವನನ್ನು ಕಂಡು ಆ ನಾಲ್ಕೂ ಜನ ಓಡಿ ಹೋದರು. ಕೆಳಗೆ ಬಿದ್ದಿದ್ದ ಮಧುರ ಎದ್ದು ಅವನಿಗೆ ಕೃತಜ್ಞತೆ ತಿಳಿಸಲು ಮುಂದೆ ಬಂದಳು. ಹಲೋ ನನ್ನ ಹೆಸರು ವಿಕ್ರಂ ಎಂದು ತನ್ನ ಪರಿಚಯ ಮಾಡಿಕೊಂಡ. ಅವಳು ತನ್ನ ಪರಿಚಯ ಮಾಡಿಕೊಂಡು ನಡೆದ ಘಟನೆ ವಿವರಿಸಿ ಈ ಸಮಯದಲ್ಲಿ ದೇವರಂತೆ ಬಂದು ನನ್ನನ್ನು ಕಾಪಾಡಿದ್ದೀರ. ನಿಮಗೆ ಹೇಗೆ ಕೃತಜ್ಞತೆ ಅರ್ಪಿಸಬೇಕೋ ತಿಳಿಯುತ್ತಿಲ್ಲ.
ಮಧುರ ಅವಳ ಪಾಡಿಗೆ ಮಾತಾಡುತ್ತಿದ್ದರೂ ವಿಕ್ರಂ ತದೇಕಚಿತ್ತದಿಂದ ಅವಳ ಕಣ್ಣನ್ನೇ ನೋಡುತ್ತಾ ನಿಂತಿದ್ದ. ಹಲೋ ವಿಕ್ರಂ ಏನಾಯ್ತು?, ಮಧುರ ಹೀಗೆ ಹೇಳುತ್ತೀನಿ ಎಂದು ತಪ್ಪು ತಿಳಿಯಬೇಡಿ, ನಾನು ನಿಮ್ಮನ್ನು ನೋಡಿ ಕೇವಲ ಐದು ನಿಮಿಷಗಳಾಗಿದೆ ಅಷ್ಟೇ ಆದರೆ ಆ ಐದು ನಿಮಿಷದಲ್ಲೇ ನನಗೆ ನಿಮ್ಮ ಮೇಲೆ ಪ್ರೀತಿ ಉಂಟಾಗಿದೆ. ನಿಮಗೆ ಅದು ವಿಚಿತ್ರ ಎನಿಸಬಹುದು ಆದರೆ ಇದು ಸತ್ಯ ಅದೇನೋ ಗೊತ್ತಿಲ್ಲ, ನಿಮ್ಮನ್ನು ನೋಡಿದ ತಕ್ಷಣ ನನ್ನ ಮನಸನ್ನು ನಾನು ನಿಮಗೆ ಅರ್ಪಿಸಿದ್ದೇನೆ.
ನೋಡಿ ವಿಕ್ರಂ, ನೀವು ಮಾಡಿದ ಸಹಾಯಕ್ಕೆ ನಾನು ಆಜನ್ಮ ಋಣಿಯಾಗಿರುತ್ತೇನೆ, ನನಗೆ ನಿಮ್ಮಲ್ಲಿ ಕೃತಜ್ಞತಾ ಭಾವ ಇದೆ ಅಷ್ಟೇ ಹೊರಟು ಇನ್ಯಾವುದೇ ಭಾವ ಮೂಡುತ್ತಿಲ್ಲ, ಮೇಲಾಗಿ ನಾಳೆ....ಎನ್ನುವಷ್ಟರಲ್ಲಿ ಹಿಂದಿನಿಂದ ಮಧು...ಮಧು...ಎಂದು ಮಧುಸೂಧನ್ ಓಡಿ ಬರುತ್ತಿದ್ದ. ಹತ್ತಿರ ಬಂದವನೇ ಮಧು ಏನಾಯ್ತು ಯಾರಿದು ಎಂದು ಕೇಳಿದ, ಮಧುರ ನಡೆದ ಘಟನೆಯನ್ನು ತಿಳಿಸಿ ಮಧು ಇವರೇ ನನ್ನನ್ನು ಕಾಪಾಡಿದ್ದು ಎಂದು ತಿಳಿಸಿದಳು. ಮಧು ವಿಕ್ರಂ ಕೈ ಹಿಡಿದು ನೀವು ಮಾಡಿದ ಸಹಾಯಕ್ಕೆ ನಿಮಗೆ ತುಂಬಾ ಧನ್ಯವಾದಗಳು. ನಾಳೆ ನಮ್ಮಿಬ್ಬರ ಮದುವೆ ನೀವು ಖಂಡಿತ ಬರಬೇಕು ಎಂದು ಮಧುರಳ ಕೈ ಹಿಡಿದು ಕಾರಿನತ್ತ ನಡೆಯುತ್ತಿದ್ದ.
ವಿಕ್ರಂ ಅಲ್ಲೇ ನಿಂತು ಆ ಒಂದು ಕ್ಷಣದಲ್ಲಿ ಮೂಡಿದ ಪ್ರೀತಿ ಅಲ್ಲೇ ಕೊನೆಯಾಯಿತಲ್ಲ ಎಂದು ಅವರನ್ನೇ ನೋಡುತ್ತಾ ನಿಂತಿದ್ದ. ಒಮ್ಮೆ ಹಿಂತಿರುಗಿದ ಮಧುರ ಕಣ್ಣಲ್ಲಿ ವಿಕ್ರಂ ಬಗ್ಗೆ ಇದ್ದ ಕೃತಜ್ಞತಾ ಭಾವ ಕಾಣುತ್ತಿತ್ತು.
Comments
ಉ: ಆ ಒಂದು ಕ್ಷಣದಲ್ಲಿ..(ಕಥೆ):ಸಿನೆಮಾ...:(((
In reply to ಉ: ಆ ಒಂದು ಕ್ಷಣದಲ್ಲಿ..(ಕಥೆ):ಸಿನೆಮಾ...:((( by venkatb83
ಉ: ಆ ಒಂದು ಕ್ಷಣದಲ್ಲಿ..(ಕಥೆ):ಸಿನೆಮಾ...:(((
In reply to ಉ: ಆ ಒಂದು ಕ್ಷಣದಲ್ಲಿ..(ಕಥೆ):ಸಿನೆಮಾ...:((( by Jayanth Ramachar
ಉ: ಆ ಒಂದು ಕ್ಷಣದಲ್ಲಿ..(ಕಥೆ):ಕಥೆಯ ಹಿಂದಿನ ಕಥೆ....!