ಆ ಚಿಕ್ಕ ಹುಡುಗಿ..

ಆ ಚಿಕ್ಕ ಹುಡುಗಿ..

ಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿಯುತ್ತಿತ್ತು.

ಬಂದವಳೇ "ಅರ್ಧ ಕಾಲು ಕೆಜಿ ಕಡ್ಲೆಹಿಟ್ಟು ಕೊಡಿ" ಎಂದಳು.
ಅಂಗಡಿಯಾತನಿಗೆ ಅರ್ಥವಾಗಲಿಲ್ಲ.
ಅವಳನ್ನು ಅಸಡ್ಡೆಯಿಂದ ನೋಡಿದವನೇ "ಕಾಲು ಕೆಜಿನಾ?" ಎಂದು ಕೇಳಿದ.
"ಇಲ್ಲ ಕಾಲು ಕೆಜಿಯಲ್ಲಿ ಅರ್ಧ" ಹುಡುಗಿ ಹೇಳಿದಳು.
ಕಟ್ಟಿಕೊಟ್ಟ ನಂತರ ಐವತ್ತು ಪೈಸೆ ಕರಿಬೇವು,ಒಂದಷ್ಟು ಹಳ್ಳುಪ್ಪು,ಚಿಕ್ಕ ಸೋಪು ಎಲ್ಲವನ್ನು ಅದರ ಬೆಲೆ ವಿಚಾರಿಸಿ ತೆಗೆದುಕೊಂಡಿದ್ದಳು ಹುಡುಗಿ. ಪ್ರತಿ ವಸ್ತು ತೆಗೆದುಕೊಳ್ಳುವಾಗಲೂ ಕೈಯಲ್ಲಿದ್ದ ಹಣ ಸರಿ ಹೊಂದುವುದೊ ಇಲ್ಲವೊ ಎಣಿಸುತ್ತಿದ್ದಳು.ಎಲ್ಲವೂ ಸೇರಿ ಆರು ರೂಪಾಯಿಯಾಯಿತು.

ಹುಡುಗಿಯ ಹತ್ತಿರ ಇದ್ದದ್ದು ಐದುವರೆ ಮಾತ್ರ.ಎಲ್ಲವನ್ನು ಅಂಗಡಿಯಾತನ ಕೈಗಿಟ್ಟಳು.
"ಇನ್ನು ಐವತ್ತು ಪೈಸೆ?" ಕೇಳಿದನವ.
"ಇಷ್ಟೇ ಅಣ್ಣಾ ಇರೋದು ಮತ್ತೆ ಬಂದಾಗ ಕೊಡ್ತೀನಣ್ಣಾ" ಅಂಗಲಾಚಿತು ಹುಡುಗಿ.
"ಪ್ರತಿ ಬಾರಿ ಬಂದಾಗಲೂ ಹೀಗೇ ಆಟ ಆಡ್ತಿಯಾ? ಏನು ಕೊಡೊದಿಲ್ಲ ಹೋಗು" ಎಂದ.
"ಅಣ್ಣ ನಿಜವಾಗ್ಲೂ ಕೊಡ್ತೀನಣ್ಣ ಒಯ್ಯಲಿಲ್ಲ ಅಂದ್ರೆ ಮನೇಲಿ ಬಡಿತಾರಣ್ಣಾ.." ಪರಿಪರಿಯಾಗಿ ಬೇಡುತ್ತಿದ್ದಳು ಹುಡುಗಿ.
"ನಾನು ಕೊಡ್ತೀನಿ ತಗೊಳ್ಳಿ" ನಾನೆಂದೆ.
"ಇರ್ಲಿ ಬಿಡಪ್ಪಾ ಇವಳು ಪ್ರತಿ ಬಾರಿ ಇದೇ ಆಟ ಆಡೋದು ಅದಕ್ಕೆ ಬುದ್ಧಿ ಬರಲಿ ಅಂತ ಹೇಳಿದ್ದು"ಎಂದು ಮರುಮಾತಾಡದೆ ಎಲ್ಲವನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಟ್ಟ.ಜೋಪಾನವಾಗಿ ತೆಗೆದುಕೊಂಡು ಹೋಯ್ತು ಹುಡುಗಿ.
ನಾನಿನ್ನೂ ಅವಳು ಹೋದ ದಿಕ್ಕಿನತ್ತಲೇ ನೋಡುತ್ತಿದ್ದೆ.ಮನಸ್ಸಿಗೆ ಕಸಿವಿಸಿಯಾಗಿತ್ತು ಕೇವಲ ಅಷ್ಟರಲ್ಲೆ ಈ ಜನ ಅದು ಹೇಗೆ ಬದುಕುತ್ತಿದ್ದಾರೋ ಎಂದು.ಮನೆಗೆ ಬಂದವನ ತಲೆಯಲ್ಲಿ ನೂರಾರು ವಿಚಾರಗಳು ಪ್ರಶ್ನೆಗಳು ಓಡಾಡುತ್ತಿದ್ದವು..ನಾವಿಲ್ಲಿ ತಿಂದು ಉಂಡು ಹಾಯಾಗಿರುತ್ತೇವೆ....ಅಲ್ಲಿ ಇನ್ನೊಂದು ಕಡೆ ಆ ದಿನದ ಊಟಕ್ಕೆ ಅವರು ಪಾಡು ಪಡುತ್ತಿರುತ್ತಾರೆ.ಕೆಲಸ ಸಿಗದಿದ್ದರೆ ಉಪವಾಸ! ಅವರ ನೋವು ಸುಲಭವಾಗಿ ಬಾಯಲ್ಲಿ ಹೇಳುವಂಥದ್ದಲ್ಲ.ಒಂದು ರಾತ್ರಿ ಉಪವಾಸವಿದ್ದರೆ ಜಗತ್ತೇ ಮುಳುಗಿ ಹೋದಂತೆ ಆಡುತ್ತೇವೆ..ಅಂಥಾದ್ರಲ್ಲಿ ಇವರು ದಿನವೂ ಹೋರಾಡಬೇಕಾದ ಪರಿಸ್ಥಿತಿ.
ಅದರ ಬಗ್ಗೆ ಎಲ್ಲಾದರೂ ಯಾರಾದರೂ ಬರೆದಿದ್ದಾರ ಅಂತ ಅಪ್ಪಾಜಿಯವರ ಕಪಾಟಿನೆಡೆಗೆ ಓಡಿದೆ.
ಇಷ್ಟೆಲ್ಲ ನೆನಪಾಗಿದ್ದು ಇತ್ತೀಚಿನ ಬೆಲೆ ಏರಿಕೆಯನ್ನು ನೋಡಿದಾಗ.ಇಲ್ಲಿ ತಣ್ಣಗೆ AC ರೂಮಲ್ಲಿ ಕೂತು ಕೆಲಸ ಮಾಡುವ ನಮ್ಮಂಥವರಿಗೇ ಇದರ ಬಿಸಿ ಹತ್ತಿರುವಾಗ ಇನ್ನು ಪಾಪ ಬಡವರ ಪಾಡೇನು?
ಯಾಕೋ ಐವತ್ತು ಪೈಸೆಗೆ ಆಗ ಅಷ್ಟೂ ಪಾಡು ಪಟ್ಟ ಆ ಹುಡುಗಿಯ ಚಿತ್ರ ಅಸ್ಪಷ್ಟವಾಗಿ ಮನದಲಿ ಸರಿದಾಡಿತು.

Rating
No votes yet

Comments