ಆ ದಿನಗಳನೆಂತು ಮರೆಯಲಿ ನಾನು‍‍ 1

ಆ ದಿನಗಳನೆಂತು ಮರೆಯಲಿ ನಾನು‍‍ 1

ಮಳೆರಾಯನಾಗಮನಕೆ ತವಕದಿ ಕಾದು
ಮಳೆಯಲ್ಲಿ ಕುಣಿದು ಕುಪ್ಪಳಿಸಿ ತೊಯ್ದು
ಅಪಾಳೆ ತಿಪ್ಪಾಳೆಯಾಡಿ ನಲಿಯುತ ಬಿದ್ದೆದ್ದ
ಆ ದಿನಗಳನೆಂತು ಮರೆಯಲಿ ನಾನು
ರಭಸದಲಿ ಹರಿಯುತಿಹ ಮಳೆನೀರಲಿ
ಕಾಗದದ ದೋಣಿಗಳ ತೇಲಿಬಿಟ್ಟು
ಗಲ್ಲಕ್ಕೆ ಕೈಕೊಟ್ಟು ಮೈಮರೆತು ಕುಳಿತು
ದೋಣಿಯೊಡನೆ ತೇಲಿ ತೇಲಿ ಹೋದ
ಆ ದಿನಗಳನೆಂತು ಮರೆಯಲಿ ನಾನು

ಬಣ್ಣ ಬಣ್ಣದ ಚಿಟ್ಟೆಹಿಡಿದು ಬೆರಳಿಗದರ ರಂಗಮೆತ್ತಿ
ಜೀರುಡೆ ಹಿಡಿದು ಬೆಂಕಿ ಪೊಟ್ಟಣದಲದನುಯಿರಿಸಿ
ಬೆಳಕಿನ ಹುಳುವ ಸೀಸೆಯೊಳಿರಿಸಿ ಬೆಳಕ ಕಂಡು
ಬಸವನ ಹುಳುವ ಗೆಳೆಯನ ಚಡ್ಡಿ ಜೋಬೊಳ್ಹಾಕಿ
ಕೆರಳಿಸಿದ ಆ ದಿನಗಳನೆಂತು ಮರೆಯಲಿ ನಾನು
ಮರಳರಾಶಿಯಲಿ ಕಾಲನಿಟ್ಟು ಒತ್ತಿ
ಕಪ್ಪೆಗೂಡುಗಳ ಪೈಪೋಟಿಯಲಿ ಕಟ್ಟಿ
ಹೂವು ಎಲೆಗಳಿಂದಲದನಲಂಕರಿಸಿ
ಎಲ್ಲರೊಂದಾಗಿ ಕುಣಿದು ಕುಪ್ಪಳಿಸಿದ
ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ

ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.

Rating
No votes yet

Comments