ಆ ದಿನಗಳನೆಂತು ಮರೆಯಲಿ ನಾನು 2
ಮಾವಿನಕಾಯಿ ಹುಣಿಸೆ ಬೋಟಿಗೆಂದು ಕಲ್ಲತೂರಿ
ಕೆಳಗೆಬಿದ್ದ ಹೀಚನಾಯ್ದು ತಿಂದು ಮುಖವ ಕಿವುಚಿ
ಉಪ್ಪುಖಾರ ಹಚ್ಚಿನೆಕ್ಕಿ ನೆಕ್ಕಿ ಆನಂದಿಸಿದ
ಸಂತಸದಾ ದಿನಗಳನೆಂತು ಮರೆಯಲಿ ನಾನು
ಹುಣಿಸೆಹಣ್ಣ ನಾರಬಿಡಿಸಿ ಉಪ್ಪು ಬೆಲ್ಲವದಕೆ ಬೆರೆಸಿ
ಕೆಂಪುಮೆಣಸು ಜೀರಿಗೆಯ ಹದದಿ ಅದಕೆ ಹಾಕಿ
ಕುಟ್ಟಿ ಕುಟ್ಟಿ ಉಂಡೆಮಾಡಿ ಕಡ್ಡಿಯತುದಿಗೆ ಚುಚ್ಚಿ
ಬಾಯೊಳಿಟ್ಟು ಚೀಪುತದರ ಸವಿಯ ನಾವು ಸವಿದ
ಸವಿಯಾದ ಆ ದಿನಗಳನೆಂತು ಮರೆಯಲಿ ನಾನು
ಅಣ್ಣನಾ ಕಾಡಿ ಅಜ್ಜಿತಾತನ ಕಣ್ತಪ್ಪಿಸಿ ಕಳ್ಳಹೆಜ್ಜೆಯಿಟ್ಟು
ಆಳಿನೊಡಗೂಡಿ ಅವರೆಹೊಲವ ಕಾಯಲು ಹೊರಟು
ಚಳಿಯ ಕಾಸೆ ಬೆಂಕಿ ಹಚ್ಚಿ, ಸುತ್ತ ಮೂರು ಕಲ್ಲನಿಟ್ಟು
ಅದರಮೇಲೆ ಹಂಡೆಯಿಟ್ಟು ಹೊಳೆನೀರತಂದು ತುಂಬಿ
ಉರಿಯಮಾಡಿ ನೀರು ಕುದಿಸಿ ಹಿಡಿಯುಪ್ಪನದಕೆಹಾಕಿ
ಸೊಗಡು ಅವರೆ ಗಿಡದಿ ತರೆದುತಂದು ಹಾಕಿ ಬೇಯಿಸಿ
ಬೆಲ್ಲನೆಂಚಿ ಬೆಳಗಾಗುವರೆಗೂ ಸುತ್ತ ಕುಳಿತೆಲ್ಲ ತಿಂದದರ
ಸವಿಯ ಸವಿದ ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.