ಆ ದಿನಗಳನೆಂತು ಮರೆಯಲಿ ನಾನು 5
ಸಂಜೆಗತ್ತಲಾಗೆ ಎಲ್ಲ ಓಡೋಡಿ ಮನೆಯಸೇರಿ
ಅಗ್ಗಿಷ್ಟಿಕೆಯ ಮುಂದೆ ಕುಳಿತು ಕೈಯಿಮೈಯಕಾಸಿ
ಸುಟ್ಹುರುಳಿಹಪ್ಪಳವ ಗೊಬ್ಬರಿ, ತುಪ್ಪದೊಡನೆ ಮೆದ್ದು
ಅಜ್ಜಿಮಾಡಿಟ್ಟ ಹುರಿಗಾಳು ಹುರುಕಲು ಡಬ್ಬಹುಡುಕಿ
ಕಲ್ಲುಂಡೆ, ನಿಪ್ಪಟ್ಟು, ಕೋಡುಬಳೆ, ಚಕ್ಕಲಿಯ ಸವಿದ
ಸವಿಯಾದ ಆ ದಿನಗಳನೆಂತು ಮರೆಯಲಿ ನಾನು
ಬಟ್ಟೆ, ಪಾತ್ರೆಬುಟ್ಟಿ ಹೊತ್ತು ಅಮ್ಮ ಕೆರೆಗೆ ಹೊರಡೆ
ಸೆರಗು ಹಿಡಿದು ನಾನು ಅಮ್ಮನೊಡನೆ ಸಾಗುತ
ದಡದಿ ಕುಳಿತು ಕಲ್ಲುತೂರಿ ಸುಳಿಯ ಎಬ್ಬಿಸುತ
ಪುರಿಯನೆರಚಿ ಕಾದು ಮೀನಿನಾಟ ನೋಡುತ
ಸೋರೆ ಬುರುಡೆ ಬೆನ್ನಿಗೆ ಬಿಗಿದು ನೀರಿಗಿಳಿಯುತ
ಆದಡದಿಂ ಈದಡಕೆ ಈದಡದಿಂ ಆದಡಕೀಜುತ
ಆನಂದಿಸಿದಾ ದಿನಗಳನೆಂತು ಮರೆಯಲಿ ನಾನು
ಊರಕೆರೆಯ ಸ್ವಚ್ಛಗೊಳಿಸೆ ಊರಮಂದಿಯೆಲ್ಲ ಸೇರಿ
ಗುದ್ದಲಿ, ಹಾರೆ, ಸನಿಕೆ, ಸಲಾಕಿ, ಮಂಕರಿಗಳನೆ ತಂದು
ಕೆರೆಯ ತಳವನೆಲ್ಲ ಅಗೆದು ಹೂಳನೆತ್ತಿ ದಡಕೆ ಹಾಕಲು
ಜಿಗಟು ಜೇಡಿಮಣ್ಣು ನಾವು ಹೊತ್ತು ಮನೆಗೆ ತಂದು
ಮಕ್ಕಳೆಲ್ಲ ಅದನು ತುಳಿದು ತುಳಿದು ಹದವಮಾಡೆ
ಒಂಟೊಲೆ, ಜೋಡೊಲೆ, ಕೋಡೊಲೆ, ಎತ್ತೊಲೆಯ
ಅಂದದಿಂ ಮಣ್ಣಿನಲಿ ಅಮ್ಮ, ಅಜ್ಜಿ ಸಿದ್ಧಪಡಿಸಲು
ಅವರೊಡನೆ ನಾವು ಮಕ್ಕಳೆಲ್ಲ ಕುಳಿತು ಮಣ್ಣಮಿದ್ದು
ಮನಬಂದಂತೆ ಮಣ್ಣಿನಾಟಿಕೆಗಳ ಚೆಂದದಿಂದ ಮಾಡಿ
ಅವನೆ ಬಳಸಿ ಅಡುಗೆಮಾಡಿ ಎಲ್ಲ ಹಂಚಿತಿಂದು ನಲಿದ
ಮಧುರ ಕ್ಷಣದ ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
Comments
ಉ: ಆ ದಿನಗಳನೆಂತು ಮರೆಯಲಿ ನಾನು 5
In reply to ಉ: ಆ ದಿನಗಳನೆಂತು ಮರೆಯಲಿ ನಾನು 5 by venkatb83
ಉ: ಆ ದಿನಗಳನೆಂತು ಮರೆಯಲಿ ನಾನು 5