ಆ ರಾತ್ರಿ...(ಸಣ್ಣ ಕಥೆ)

ಆ ರಾತ್ರಿ...(ಸಣ್ಣ ಕಥೆ)

"ಬೇಡಾ ಅಂದ್ರೆ ಬೇಡ!!! ಅಲ್ಲೇ ಇರು ಪರವಾಗಿಲ್ಲ...ನಾಳೆ ಬೆಳಗ್ಗೆ ಎದ್ದು ಬಾ!"
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿನಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೋ ಹೋಗು" ಎಂದು ಕೋಪದಲ್ಲಿ ಫೊನ್ ಕುಕ್ಕಿದರು ಅಮ್ಮ.

"ಯಾಕಮ್ಮ ಯೋಚನೆ ಮಾಡ್ತೀಯ???...ಹೀಗೆ ರಾಗಿಣಿ ಎಷ್ಟೋ ಸರತಿ ರಾತ್ರಿ ಆಫೀಸಿಂದ ಬರಲ್ವಾ?" ಎಂದು ಹತ್ತೊಂಬತ್ತು ವರ್ಷದ ರಾಜ ಹೇಳಿದ ಮಾತು ಅಮ್ಮನ ಕಿವಿಗೆ ಬೀಳಲಿಲ್ಲ.
ಇಂದು ಅಮ್ಮನ ಮನಸ್ಸು ಯಾಕೊ ಸರಿ ಇರಲಿಲ್ಲ. ಎಷ್ಟೊ ಸರತಿ ರಾಗಿಣಿ ಆಫೀಸಿನಿಂದ ಮಧ್ಯ ರಾತ್ರಿ ಬಂದದ್ದುಂಟು, ಆದರೂ ಅಮ್ಮನಿಗೆ ಇಂದು ಯಾಕೋ ಆತಂಕವಾಗಿತ್ತು. ಮನಸ್ಸಲ್ಲೇ ಕೊರಗುತ್ತ ಅಮ್ಮ "ಇವರಿಗೇನು ಗೊತ್ತಾಗತ್ತೆ...ಹುಡುಗ್ ಬುದ್ದಿ! ಕಾಲ ಸರಿ ಇಲ್ಲ...ದೇವರು ಇವರಿಗೆ ಯಾವಾಗ ಬುದ್ಧಿ ಕೊಡ್ತಾನೋ???" ಎಂದು ಒದರಿಕೊಂಡರು.

***
(ಸಮಯ  - ನಡು ರಾತ್ರಿ 2.30)

ರಸ್ತೆಯ ಬದಿಯಲ್ಲಿ ಕೆಟ್ಟು ನಿಂತ ಇಂಡಿಕಾ ಕ್ಯಾಬಿನೊಳಗೆ ರಾಗಿಣಿ ಒಬ್ಬಳೇ ಕುಳಿತಿದ್ದಾಳೆ! ಗ್ಯಾಸ್ ಮುಗಿದಿದೆ ಎಂದು ಡ್ರೈವರ್ ಕೆಳಗೆ ಇಳಿದಿದ್ದ. ಆಫೀಸಿನಿಂದ ಹೊರಟಿದ್ದ ರಾಗಿಣಿ, ಕಾರಿನ ಕಿಟಕಿಯಿಂದಾಚೆಗೆ ತಲೆ ಹಾಕಿ, ಸುತ್ತಲೂ ಕಣ್ಣು ಹಾಯಿಸಿದಳು, ಎಂದೂ ಇಲ್ಲದ್ದು, ಇಂದು ಕೆಂಪೇಗೌಡ ರಸ್ತೆಯಲ್ಲಿ ಕೂಡ ಯಾರೂ ಕಾಣುತ್ತಿಲ್ಲ..,!
ತಳಮಳದಿಂದ ಕೂಡಿದ ರಾಗಿಣಿಯ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಮೂಡ ತೊಡಗಿದವು. "ಛೇ! ಅಮ್ಮನ ಮಾತು ಕೇಳಬೇಕಿತ್ತು! ಇವತ್ತು ಯಾಕೋ ಅಮ್ಮ ಸ್ವಲ್ಪ ಜಾಸ್ತಿನೇ ಗಲಾಟೆ ಮಾಡಿದ್ರು. ಆಫೀಸ್ನಿಂದ ಸ್ವಲ್ಪ ಬೇಗ ಹೊರಡಬೇಕಿತ್ತು. ಇಲ್ಲ, ಅಮ್ಮ ಹೇಳಿದ್ ಹಾಗೆ ಬೆಳಗ್ಗೆ ಎದ್ದು ಮನೆಗೆ ಹೋಗಬೇಕಿತ್ತು! ಎಲ್ಲಿ ಬಂದು ಸಿಕ್ಕಿ ಹಾಕಿ ಕೊಂಡಿದ್ದೀನಿ ನಾನು!". ರಾಗಿಣಿ ಮತ್ತೊಮ್ಮೆ ಯಾರಾದರೂ ಕಾಣುವರೋ ಎಂದು ಸುತ್ತ-ಮುತ್ತಲೂ ನೋಡಿದಳು. ಯಾರೂ ಕಣ್ಣಿಗೆ ಬೀಳಲಿಲ್ಲ. ಆಕಾಶ ಕಾಣದಂತೆ ಎತ್ತರಕ್ಕೆ ಹರಡಿಕೊಂಡಿರುವ ಗುಲ್ ಮೋಹರ್ ಮರಗಳು. ಉದ್ದಕ್ಕೂ ಕಾಣುತ್ತಿರುವ ಲೈಟ್ ಕಂಬಗಳ ಸಾಲು. ಬಲಕ್ಕೆ ಯಾವುದೋ ಸರ್ಕಾರಿ ಕಚೇರಿಯಿರಬೇಕು, ರಸ್ತೆಯ ಎಡಕ್ಕೆ ಪಕ್ಕದ ಸರ್ಕಾರಿ ಶಾಲೆಗೆ ಹೊಂದಿಕೊಂಡಿರುವ ದೊಡ್ಡ ಮೈದಾನ. ಬೆಳಗಾದರೆ ಗಿಜಿಗುಡುವ ಜಾಗ. ಆದರೆ ಇದು ಮಧ್ಯ ರಾತ್ರಿ, ಹಾಗಾಗಿ ಒಂದು ನರಪಿಳ್ಳೆಯ ಸದ್ದೂ ಇಲ್ಲ!

"ಛೇ! ಗಾಡಿ ಇಲ್ಲೇ ಕೆಡಬೇಕಾ?" ಎಂದು ಮನಸ್ಸಿನಲ್ಲೇ ಶಪಿಸಿದಳು ರಾಗಿಣಿ. ರಾಗಿಣಿ ಆ ರೀತಿ ಶಪಿಸಲು ಕಾರಣವಿತ್ತು. ಹೇಳಿ-ಕೇಳಿ ಅದು ಕಾರ್ಪೊರೇಶನ್ ಜಾಗ! ಮಧ್ಯ ರಾತ್ರಿಯಾದರೂ ಕೆಂಪೇಗೌಡ ರಸ್ತೆ ನಿರ್ಜನ ಪ್ರದೇಶ ಅನ್ನುವದಕ್ಕೆ ಆಗುವುದೇ ಇಲ್ಲ. ಯಾರಾದರೂ ಓಡಾಡುತ್ತಲೇ ಇರುತ್ತಾರೆ. ಆದರೆ ಕ್ಯಾಬ್ ಕೆಟ್ಟ ಜಾಗದಲ್ಲಿ ಯಾರೂ ಕಾಣುತ್ತಿರಲಿಲ್ಲ! ಇನ್ನೂ ಒಂದು ಫ಼ರ್ಲಾಂಗ್ ಮುಂಚೆಯಾಗಿದ್ದರೆ, ಅಲಸೂರು ಗೇಟ್ ಪೋಲೀಸ್ ಸ್ಟೇಶನ್ ಇದೆ! ಇನ್ನೆರಡು ಫ಼ರ್ಲಾಂಗ್ ಮುಂದಕ್ಕೆ ಮೈಸೂರು ಬ್ಯಾಂಕ್! ಅಲ್ಲಿ ಸಾಮಾನ್ಯವಾಗಿ ಹೆಚ್ಚು ಜನರಿರುತ್ತಾರೆ. ಇವೆರಡರ ಮಧ್ಯೆ ವಿಶಾಲ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿದೆ!

ರಾಗಿಣಿ ಅಂದಿನ ದಿನದ ಬಗ್ಗೆ ಮೆಲಕು ಹಾಕ ತೊಡಗಿದಳು. ರಾಗಿಣಿಗೆ ಅಂದಿನ ದಿನವೇ ಕೆಟ್ಟದಾಗಿತ್ತು. ಬೆಳಗ್ಗೆಯಿಂದ ಪ್ರಾಜೆಕ್ಟ್ ಗಾಗಿ ಮಾಡಿದ ಕೆಲಸವೆಲ್ಲಾ ತಪ್ಪಾಗಿತ್ತು. ಇದನ್ನು ತಿಳಿದ ಮಾನೇಜರ್ ಹರಿಹಾಯ್ದಿದ್ದ. ಮಾರನೆಯ ದಿನ, ಕ್ಲೈಂಟ್'ಗೆ ಡೆಮೋ ತೋರಿಸಲೇಬೇಕು ಎಂದು ರಾಗಿಣಿಯ ತಲೆ ಮೇಲೆ ಕೂತಿದ್ದ. ಪಾಪ, ರಾಗಿಣಿ! ತಪ್ಪನ್ನೆಲ್ಲ ಸರಿ ಪಡಿಸಲು ಆಫೀಸಿನಲ್ಲಿ ಕುಳಿತಿದ್ದಳು! ಕೆಲಸವೆಲ್ಲಾ ಮುಗಿಸಿ ಮನೆಗೆ ಹೊರಡಲು ಕ್ಯಾಬ್ ಬಾಗಿಲು ತೆರೆದಾಗ "ಬನ್ನಿ ಮೇಡಮ್!" ಎಂದು ಎಂದಿಗಿಂತ ಹೆಚ್ಚಿನ ಅಕ್ಕರೆಯಿಂದ ಕರೆದಿದ್ದ ಆ ಕ್ಯಾಬ್ ಡ್ರೈವರ್. ಆ ಕ್ಯಾಬ್ ಡ್ರೈವರ್ ’ಕರಿಯ’ನನ್ನು ಕಂಡರೆ ರಾಗಿಣಿಗೆ ಆಗದು. ಅವನ ಕರಿಯ ಮೂತಿ, ಗಡಸು ಧ್ವನಿ, ದಪ್ಪ ಮೀಸೆ, ಓಮ್ ಪುರಿ ಕೆನ್ನೆ ಯಾವುದೂ ಹಿಡಿಸುವುದಿಲ್ಲ. "ಥಥ್! ಇಂದು ಇವನೇ ಬರಬೇಕೆ!" ಎನ್ನುತ್ತಾ ಕಾರಿನಲ್ಲಿ ಕುಳಿತಿದ್ದಳು ರಾಗಿಣಿ. ದಾರಿಯಲ್ಲಿ ಬರುವಾಗ ಕಾರ್ಪೊರೇಶನ್ ಬಳಿ ಕಾರಿನ ಗ್ಯಾಸ್ ಖಾಲಿ ಆಗಿದೆ. ಕಾರಿನ ಕಿಟಕಿಯ ಬಳಿ ಬಂದು "ಮೇಡಮ್!" ಎಂದು ಡ್ರೈವರ್ ಮೆಲ್ಲನೆ ಹೇಳಿದರೂ, ಆ ಗಡುಸು ಧ್ವನಿಗೆ ಬೆದರಿದಳು ರಾಗಿಣಿ. ಡ್ರೈವರ್ ರಾಗಿಣಿ ಕೊಂಚ ಬೆದರಿದ್ದನ್ನೂ ನೋಡಿಯೂ ಮುಂದುವರಿಸಿದ, "ನಮ್ಮ ಕಂಪನೀದೇ ಇನ್ನೊಂದ್ ಕ್ಯಾಬಿದೆ. ಈ ಕಡೇನೇ ಹೋಗ್ತಾ ಇದೆಯಂತೆ. ಒಂದ್ ಐದು ನಿಮಿಷ ಅಷ್ಟೇ! ಸಿಲಿಂಡರ್ ಬರತ್ತೆ! ಪ್ಲೀಸ್ ವೈಟ್ ಮಾಡಿ".

ಡ್ರೈವರ್ ಐದು ನಿಮಿಷ ಎಂದು ಹೇಳಿ, ಸುಮಾರು ಹದಿನೈದು ನಿಮಿಷಕ್ಕೂ ಮೇಲಾಗಿತ್ತು. ಅಮ್ಮನ ಬೈಗುಳ ಮತ್ತೊಮ್ಮೆ ಜ್ಞಾಪಕಕ್ಕೆ ಬಂತು. ರಾಗಿಣಿಗೆ ಆತಂಕ ಹೆಚ್ಚಾಗ ತೊಡಗಿತು. ಕಾರಿನಿಂದ ಕೆಳಗಿಳಿದ ಡ್ರೈವರ್ ಯಾರಿಗೋ ಮತ್ತೊಮ್ಮೆ ಫೋನ್ ಮಾಡುತ್ತಿರುವುದನ್ನು ಗಮನಿಸಿದಳು. ಅವನು ಮಾತಾಡುವುದು ಏನೂ ಅರ್ಥವಾಗುತ್ತಿಲ್ಲ! ಬಹುಷ: ತುಳುವೋ ಕೊಂಕಣಿಯೋ ಇರಬೇಕು. ಆ ಕಡೆಯವನ ಜೊತೆ ನಗುನಗುತ್ತಾ ಮಾತಾಡುತ್ತಿದ್ದ. ಈ ರೀತಿ ನಗುತ್ತಾ ಮಾತನಾಡುತ್ತಿದ್ದವನನ್ನು, ತಲೆ ತಿರುಗಿಸಿ ದಿಟ್ಟಿಸಿ ನೋಡುತ್ತಿದ್ದ ರಾಗಿಣಿಯನ್ನು, ಡ್ರೈವರ್ ಒಂದೆರಡು ಬಾರಿ ನೋಡಿದ್ದು ಇವಳಿಗೆ ಇರಿಸು-ಮುರಿಸೆನಿಸಿತು. ತಲೆಯನ್ನು ಮತ್ತೆ ನೇರವಾಗಿ ಇಟ್ಟುಕೊಂಡರೂ, ಕಣ್ಣಂಚಿನಲ್ಲೇ ಕರಿಯನನ್ನು ಗಮನಿಸತೊಡಗಿದಳು. "ಗ್ಯಾಸ್ ಸಿಲಿಂಡರ್ ಖಾಲಿ ಆದ್ರೆ ನಗೋದು ಏನಿದೆ!!???" ಎಂದು ಮನಸ್ಸಲ್ಲೇ ಕರಿಯನನ್ನು ಬಯ್ದುಕೊಂಡಳು ರಾಗಿಣಿ.

ಎರಡು ದಿನದ ಹಿಂದೆಯಷ್ಟೇ ಪ್ರತಿಭಾ ಎಂಬ ಕಾಲ್ ಸೆಂಟರ್ ಹುಡುಗಿಯ ಅತ್ಯಾಚಾರದ ಪ್ರಕರಣ ನಡೆದಿತ್ತು! ಎಂದೂ ಭಯಪಡದ ರಾಗಿಣಿಯ ಮನಸ್ಸಿನಲ್ಲೂ, ಆ ಕೆಟ್ಟ ಯೋಚನೆ ಹಾಯದಿರಲಿಲ್ಲ. ಮತ್ತೊಮ್ಮೆ ಡ್ರೈವರ್ ಕಡೆಗೆ ನೋಡಿದಳು. ಫೋನ್ ನಲ್ಲಿನ ಮಾತು ಮುಗಿಸಿದ ಅವನು ಮತ್ತೊಮ್ಮೆ ನಗುತ್ತಾ "ಇನ್ನೇನ್ ಬರತ್ತೆ ಮೇಡಮ್!". ಅವನ ಆ ನಗೆ ರಾಗಿಣಿಗೆ ಹಿಡಿಸದು! "ಕಾರಿನಲ್ಲಿ ಇನ್ನೊಂದು ಸಿಲಿಂಡರ್ ಇದ್ದಂತಿತ್ತು...ಈ ಕರಿಯ ಸುಳ್ಳು ಹೇಳುತ್ತಿದ್ದಾನಾ? ಯಾರಿಗೋ ಫೋನ್ ಮಾಡಿ ನಗ್ ನಗ್ತಾ ಮಾತಾಡ್ತಿದ್ದ! ಈಗಲೂ ಇವನ ಮುಖದಲ್ಲಿ ಅದೇಕೆ ಅಷ್ಟೊಂದು ವಿಚಿತ್ರ ರೀತಿಯ ನಗು! ಈಡಿಯಟ್ ಫೆಲ್ಲೋ!" ಎಂದು ಕರಿಯನನ್ನು ಮನಸ್ಸಿನಲ್ಲೇ ಬಯ್ದುಕೊಳ್ಳತೊಡಗಿದಳು. ಪ್ರತಿಭಾ ಅತ್ಯಾಚಾರದ ಬಗ್ಗೆ ಯೋಚಿಸುತ್ತಿದ್ದ ರಾಗಿಣಿಗೆ ಇನ್ನಷ್ಟು ದಿಗಿಲಾಗ ತೊಡಗಿತು. ರಾಜ, ಆ ಪ್ರಕರಣವಾದ ಮಾರನೇ ದಿನವೇ ಹೇಳಿದ್ದ. ಖಾರದ ಪುಡಿಯನ್ನಾದರೂ ಪರ್ಸ್'ನಲ್ಲಿ ಇಟ್ಟುಕೋ ಎಂದು. ಆದರೆ ಖಾರದ ಪುಡಿಯನ್ನೂ ಇಟ್ಟುಕೊಂಡಿಲ್ಲವಲ್ಲ ಎಂದು ಚಡಪಡಿಸಿದಳು! "ಇವತ್ತು ಪಾರಾದರೆ ನಾಳೆಯಿಂದ ತಪ್ಪದೇ ಇಡಬೇಕು...ಮಧ್ಯರಾತ್ರಿ ಕ್ಯಾಬ್ ನಲ್ಲಿ ಬರಲೇ ಬಾರದು" ಎಂದು ಮನಸ್ಸಿನಲ್ಲೇ ನಿರ್ಧರಿಸಿಕೊಂಡಳು ರಾಗಿಣಿ. ರಾಗಿಣಿಯ ಕರ್ಮಕ್ಕೆ ಮೊಬೈಲ್ ಬ್ಯಾಟರಿ ಬೇರೆ ಮುಗಿದಿತ್ತು, ತಮ್ಮನಿಗೆ ಫೋನ್ ಮಾಡಿ ಗಾಡಿಯಲ್ಲಿ ಬರಹೇಳಲೂ ಆಗುವುದಿಲ್ಲ! ಯಾವಾಗಲೂ ರಾಗಿಣಿ ಸಮಯಕ್ಕೆ ಸರಿಯಾಗಿ ಬ್ಯಾಟರಿ ಚಾರ್ಜ್ ಮಾಡುವುದಿಲ್ಲವೆಂದು ಬಯ್ಸಿಕೊಳ್ಳುವವಳೇ! ಇಂದು ಈ ರೀತಿ ಕೈ ಕೊಟ್ಟಿತ್ತು! ಈ ಜಾಗದಲ್ಲಿ ಸುತ್ತಲೂ ಒಂದು ಕಾಯಿನ್ ಬೂತ್ ಕೂಡ ಇಲ್ಲ! ಸಹಾಯಕ್ಕೆ ಯಾರಾದರೂ ಸಿಗಬಹುದೇನೋ ಎಂದು ಮತ್ತೊಮ್ಮೆ ಸುತ್ತ ನೋಡಿದಳು ರಾಗಿಣಿ. ಆಗೊಂದು-ಈಗೊಂದು ಎಂಬಂತೆ ಕಾರುಗಳು ಭರ್ರೆಂದು 70ಕ್ಕಿಂತ ಹೆಚ್ಚಿನ ಸ್ಪೀಡಿನಲ್ಲಿ ಹೋಗುತ್ತಿದ್ದದನ್ನು ಬಿಟ್ಟು ನಡೆದಾಡುವವರು ಯಾರೂ ಕಾಣಲಿಲ್ಲ. ಸುಮಾರು ದೂರದಲ್ಲಿ ಮೈದಾನದ ಕಟ್ಟೆಯ ಮೇಲೆ, ಯಾರೋ ಮುಸುಕು ಹೊದ್ದು ಮಲಗಿದ್ದಂತೆ ಕಂಡು ಬಂತು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅವರನ್ನು ಸಹಾಯಕ್ಕೆ ಕರೆಯಬಹುದೇ ಎಂಬ ಯೋಚನೆ ರಾಗಿಣಿಯ ಮನಸಲ್ಲಿ ಹರಿಯಿತು. ಅಲ್ಲಿಯೇ ಮಲಗಿದ್ದ ಮನುಷ್ಯನನ್ನೇ ದಿಟ್ಟಿಸಿ ನೋಡುತ್ತಿದ್ದ ಕ್ಷಣದಲ್ಲಿ ಕಟ್ಟೆಯ ಮೇಲಿಂದ ಒಂದು ನಾಯಿ ಛಂಗನೆ ಎಗರಿತು. ಇದನ್ನು ನಿರೀಕ್ಷಿಸದಿದ್ದ ರಾಗಿಣಿ ಥರಗುಟ್ಟಿದಳು! ಸಮಯ ಕಳೆಯುತ್ತಿದ್ದಂತೆ, ರಾಗಿಣಿಗೆ ಭಯ ಹೆಚ್ಚಾಗ ತೊಡಗಿತು.

ಮತ್ತೊಂದು ಇಂಡಿಕಾ ಕ್ಯಾಬ್ ಬಂದು ರಾಗಿಣಿಯಿದ್ದ ಕಾರಿನ ಪಕ್ಕ ನಿಂತಿತು. ಆ ಡ್ರೈವರ್ ಇಳಿದು ಬಂದು ಕರಿಯನ ಕೈ ಕುಲಕಿ ಮತ್ತೆ ಅರ್ಥವಾಗದ ಭಾಷೆಯಲ್ಲಿ ಮಾತಾಡ ತೊಡಗಿದ! ಇಬ್ಬರೂ ಮತ್ತೆ ಮತ್ತೆ ನಗುತ್ತಿದ್ದಾರೆ...! ಹಾಗೇ ಮಾತನಾಡುತ್ತಾ ಆ ಡ್ರೈವರ್, ಅವನ ಕಾರಿನ ಸಿಲಿಂಡರ್ ತೆಗೆದು ಕರಿಯನ ಕಾರಿನಲ್ಲಿ ಅಳವಡಿಸಲು ಸಹಾಯ ಮಾಡಿದ. "ಹೊರಡೋಣ ಮೇಡಮ್! ಆಗ್ಲೆ ತುಂಬಾ ಲೇಟ್ ಆಗಿದೆ" ಎನ್ನುತ್ತಾ ಕಾರ್ ಶುರು ಮಾಡಿದ. ಇಂಡಿಕಾ ಕ್ಯಾಬ್ ಹೊರಟಿತು. ಇನ್ನೇನು ಮೈಸೂರ್ ಬ್ಯಾಂಕ್ ದಾಟಿರಬಹುದು. ಮತ್ತೊಮ್ಮೆ ಡ್ರೈವರ್ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ! ರಾಗಿಣಿ ಆತಂಕದಿಂದ "ಮತ್ತೆ ಏನಾಯ್ತು???" ಎಂದು ಕೇಳಿದಳು. "ಥೂ! ಕ್ಲಚ್ ವೈರ್ ಕಟ್ ಆಯ್ತು ಅಂತ ಕಾಣತ್ತೆ ಮೇಡಂ. ಯಾಕೊ ಟೈಮ್ ಸರಿ ಇಲ್ಲ. ಒಂದು ನಿಮಿಷ ಇರಿ" ಎಂದು ಮತ್ತೆ ಕರೆ ಮಾಡಿದ, ಮತ್ತದೇ ಭಾಷೆ! ಹೆಚ್ಚು ದೂರ ಹೋಗಿರಲಿಲ್ಲವಾದ್ದರಿಂದ, ಇನ್ನೊಬ್ಬ ಡ್ರೈವರ್ ಎರಡೇ ನಿಮಿಷದಲ್ಲಿ ಬಂದ. "ಮೇಡಮ್! ಒಂದು ಕೆಲಸ ಮಾಡೋಣ. ನಾವು ನನ್ ಫ್ರೆಂಡ್ ಕಾರಲ್ಲೇ, ನಿಮ್ಮನ್ನ ಮನೆಗೆ ಡ್ರಾಪ್ ಮಾಡಿ, ವಾಪಸ್ ಬಂದು ನನ್ನ ಕಾರ್ ರಿಪೇರಿ ಮಾಡ್ತೀವಿ - ಸರಿಯಾ?" ಎಂದ. ಇದನ್ನು ಕೇಳುತ್ತಿದ್ದಂತೆ ರಾಗಿಣಿಯ ಮೈ ತುಸು ಕಂಪಿಸಿತು! ಏನು ಮಾಡುವುದು ಎಂದು ತಿಳಿಯಲಿಲ್ಲ. ಬೇರೆ ದಾರಿ ತೋಚಲಿಲ್ಲ. ಒಂದು ಕಡೆ ಭಯ. ಇನ್ನೊಂದು ಕಡೆ ಏನು ಆಗುವುದಿಲ್ಲ ಎಂಬ ಮೊಂಡು ಧೈರ್ಯ. "ಆಗಲಿ ಏನಾಗುವುದೋ ನೋಡೇ ಬಿಡೋಣ! ಶ್ರೀಕೃಷ್ಣ ನನ್ನನ್ನು ಎಂದೂ ಕೈ ಬಿಡುವಿದಿಲ್ಲ. ನನ್ನನ್ನು ಕಾಯುತ್ತಾನೆ" ಎಂದು ದೇವರನ್ನು ಮನದಲ್ಲೇ ನೆನೆದು ಹೊರಟಳು.

ಮತ್ತೊಂದು ಕ್ಯಾಬ್'ನಲ್ಲಿ ಅವರಿಬ್ಬರು ಮತ್ತು ರಾಗಿಣಿ. ಏನಾಗುವುದೋ ಎಂಬ ಹಿಂಜರಿಕೆಯಲ್ಲೇ ಹಿಂದಿನ ಸೀಟಿನಲ್ಲಿ ಕುಳಿತಳು ರಾಗಿಣಿ! ಅವರಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತಿದ್ದಾರೆ. ಹಿಂದೆ ಕುಳಿತು ಕಾರು ಹೊರಟ ಮೇಲೆ, ರಾಗಿಣಿಗೆ ಗಮನಕ್ಕೆ ಬಂದದ್ದು, ಈ ಕಾರಿನಲ್ಲಿ ಸೆಂಟ್ರಲ್ ಲಾಕ್ ಇದೆ ಎಂದು! "ಅಯ್ಯೋ ದೇವರೇ, ನನ್ನನ್ನು ಹೆಚ್ಚು ಕಡಿಮೆ ಇವರು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ. ಇನ್ನೇನು ಗತಿ!" "ಹೀಗೆ ಇವರ ಜೊತೆ ಬರಲು ಒಪ್ಪಲೇ ಬಾರದಿತ್ತು...ಛೇ! ಆ ಕರಿಯನದೂ ಬರೀ ನಾಟಕ. ಸಿಲಿಂಡರ್ ಇದ್ದಂತಿತ್ತು. ಆಮೇಲೆ ಆ ಡ್ರೈವರ್ ಬಂದ ಮೇಲೆ ಮತ್ತೆ ಕ್ಲಚ್ ನಾಟಕ! ಕೃಷ್ಣಾ...ನೀನೇ ಕಾಪಾಡಪ್ಪಾ!" ಎಂದು ಕೃಷ್ಣನನ್ನು ನೆನೆಯುತಿದ್ದ ರಾಗಿಣಿಯ ಎದೆ ಜೋರಾಗಿ ಢವಗುಟ್ಟತೊಡಗಿತು! "ಈಗ ಏನು ಮಾಡುವುದು? ಕಾರಿನಿಂದ ಜಿಗಿಯಲೇ?" ಕಾರು ತುಂಬಾ ವೇಗದಿಂದ ಹೋಗುತ್ತಿದ್ದರಿಂದ ಆ ಯೋಚನೆ ಥಟ್ಟನೇ ಬಿಟ್ಟಳು ರಾಗಿಣಿ. ಆದರು ಮೆಲ್ಲನೆ ಲಾಕ್ ತೆಗೆಯುವ ಪ್ರಯತ್ನ ಮಾಡೇಬಿಡೋಣ ಎಂದೆನಿಸಿ, ಮೆಲ್ಲನೆ ಹಿಂಬಾಗಿಲನ್ನು ತೆರೆಯುವ ಪ್ರಯತ್ನ ಮಾಡಿದಳು.
ಊಹೂಂ...ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ! ಹಿಂದಿನ ಬಾಗಿಲುಗಳನ್ನು ಚೈಲ್ಡ್ ಲಾಕ್ ಮಾಡಿದ್ದಾರೆ ಎಂದು ಆಗಲೇ ರಾಗಿಣಿಗೆ ತಿಳಿದದ್ದು! ತನ್ನ ಸ್ಥಿತಿ-ಅಸಹಾಯಕತೆ ನೆನೆಸಿ ರಾಗಿಣಿಯ ಕಣ್ಣುಗಳು ನೀರೂರಿದವು. ರಾಗಿಣಿ ಕಣ್ಣು ಮುಚ್ಚಿ ದೇವರನ್ನು ನೆನೆಯುತ್ತಾ ಕುಳಿತಳು. ಕಾರ್ ರೊಯ್ಯನೆ ಸಾಗುತ್ತಿತ್ತು. ಮುಂದೆ ಕುಳಿತಿದ್ದ ಇಬ್ಬರೂ ಒಂದೇ ಸಮನೆ ಮಾತನಾಡುತ್ತಿದ್ದರು. ಆಗಾಗ ಜೋರಾಗಿ ನಗುತ್ತಿದ್ದರು. ರಾಗಿಣಿಯ ಮನಸಿನಲ್ಲಿ ನೂರಾರು ಯೋಚನೆಗಳು. "ಇವರಿಬ್ಬರೂ ನನಗೆ ಏನಾದರೂ ಮಾಡಿದರೆ ಏನು ಮಾಡುವುದು? ಕಿರುಚಬೇಕೆ? ನನ್ನ ಬಳಿ ಯಾವುದೇ ಆಯುಧ ಇಲ್ಲ? ಎನು ಮಾಡುವುದು? ಪರ್ಸ್ ಬಿಟ್ಟರೆ ಏನು ಇಲ್ಲ. ನೋಡುವುದಕ್ಕೆ ಇವರಿಬ್ಬರೂ ಧಾಂಡಿಗರಂತಿದ್ದಾರೆ! ನನ್ನ ಕೈಲೇನಾಗುತ್ತದೆ!" ಕಾರು ಗಕ್ಕನೆ ನಿಂತಿತು. ಯೋಚನೆಗಳಲ್ಲಿ ಮುಳುಗಿದ್ದ ರಾಗಿಣಿಯನ್ನು ಎಚ್ಚರಿಸಿತು ಅದೇ ಗಡಸು ಧ್ವನಿ. "ಇಲ್ಲಿ ಸೈನ್ ಮಾಡಿ ಮೇಡಮ್! ತುಂಬಾ ಸಾರಿ! ನಿಮಗೆ ತುಂಬಾ ಕಷ್ಟ ಆಯ್ತು". ರಾಗಿಣಿ ಕಾರಿನ ಕಿಟಕಿಯ ಆಚೆ ನೋಡಿದಳು. ಅರೆ! ಮನೆ ಬಂದಿದೆ! ಅಷ್ಟರಲ್ಲೇ ಕಾರ್ ಶಬ್ದ ಕೇಳಿ ಅಮ್ಮ, ತಮ್ಮ ಬಾಗಿಲು ತೆರೆದು ಹೊರಬಂದರು! ಡ್ರೈವರ್ ಹೇಳುತ್ತಿದ್ದ. "ಇಷ್ಟು ಕಷ್ಟ ಆದರೂ ಈ ಅವಾಂತರದಿಂದ ಒಂದ್ ಉಪಯೋಗ ಆಯ್ತು ಮೇಡಮ್! ನೋಡಿ...ಇವನು ನನ್ ಚಡ್ಡಿ ದೋಸ್ತು! ನಮ್ಮೂರವನೇ ಇವನು. ಇದೇ ಊರಲ್ಲಿದ್ರೂ ನಾವಿಬ್ರೂ ಡ್ರೈವಿಂಗ್ ಕೆಲಸದಲ್ಲೇ ಇದ್ರೂ 5 ವರ್ಷದಿಂದ ಸಿಕ್ಕಿರಲಿಲ್ಲ! ನಿಮ್ಮಿಂದ ಇವನನ್ನು ಭೇಟಿ ಮಾಡಿದ ಹಾಗಾಯ್ತು - ಥ್ಯಾಂಕ್ಸ್ ಮೇಡಮ್! ಗುಡ್ ನೈಟ್!"

ಮನೆಯನ್ನು ನೋಡಿದ  ರಾಗಿಣಿಗೆ ಮನಸ್ಸಿನಲ್ಲಿ ಆವರಿಸಿದ ಆತಂಕ-ಭಯಗಳೆಲ್ಲಾ ಕ್ಷಣದಲ್ಲೇ ಮಾಯವಾಗಿ, ಥಟ್ಟನೆ ಕಾರಿನಿಂದ ಇಳಿದು ಮನೆಯ ಒಳಗೆ ಓಡಿದಳು. ರಾಜ "ನಿನ್ ಫೋನ್ ಬ್ಯಾಟರಿ ಕೆಟ್ಟು ಹೋದರೆ ಏನಾಯ್ತು? ಆ ಡ್ರೈವರ್ ಫೋನ್ ತೊಗೊಂಡ್ ಒಂದ್ ಫೋನ್ ಮಾಡಕ್ಕೆ ಆಗ್ತಾ ಇರಲಿಲ್ವ? ಅಮ್ಮ ಪಾಪ, ಎಷ್ಟು ಒದ್ದಾಡಿಬಿಟ್ಟರು ಗೊತ್ತಾ??? ಈಗ ಸರಿಯಾಗಿ ಬೈಸ್ಕೊಳಕ್ಕೆ ರೆಡಿ ಆಗಿರು" ಅಂತ ಹೇಳಿದಾಗಲೇ ರಾಗಿಣಿಗೆ ಹೊಳೆದಿದ್ದು, ಹಾಗೆ ಫೋನ್ ಮಾಡಬಹುದಿತ್ತೆಂದು !! "ಅಮ್ಮ ಎಷ್ಟೇ ಬಯ್ಯಲಿ ಪರವಾಗಿಲ್ಲ! ಬದುಕಿದೆಯಾ ಬಡ ಜೀವ!" ಎಂದು ನೆಮ್ಮದಿಯಿಂದ ಮುಖ ತೊಳೆದಳು ರಾಗಿಣಿ.

--ಶ್ರೀನಿವಾಸ್ ಪ. ಶೇ.
(ನನ್ನ 2008ರ ಮೂಲ ಕಥೆಯನ್ನು ಕೊಂಚ ಬದಲಿಸಿದೆ)

Rating
No votes yet

Comments

Submitted by RAMAMOHANA Wed, 11/06/2013 - 14:07

ಇದಕ್ಕೆ ಹೇಳೋದು `ಯಾವುದೇ ತೊಂದರೆ ಇಲ್ಲದಿದ್ದರೂ ಆ ತೊಂದರೆಯನ್ನು ಅನುಭವಿಸುವುದು` ಎಂದು
ನಿರೂಪಣೆ ಚೆನ್ನಗಿದೆ ಶ್ರೀನಿವಾಸರೆ, ಆದರೆ ಅದೇಕೋ ಕತೆಯ‌ ಅಂತ್ಯದ‌ ನಿರ್ದಿಷ್ಟ‌ ಊಹೆ ಆರಂಭದಲ್ಲೇ ಬಂದಿತ್ತು.
ರಾಮೋ.