ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಇನ್ಫೋಸಿಸ್‍ನ ನಾರಾಯಣ ಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ನಿಯುಕ್ತರಾದಾಗ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಇದಕ್ಕೆ ಆಕ್ಷೇಪಿಸಿ, "ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೆ ತರಬೇಕೆನ್ನುವ ನಾರಾಯಣ ಮೂರ್ತಿಯವರು ವಿಶ್ವಮಟ್ಟದ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದು ಯಾವ ನ್ಯಾಯ? ಇವರನ್ನು ಯಾವುದಾದರೂ ವಾಣಿಜ್ಯ ಮೇಳಗಳ ಉದ್ಘಾಟನೆಗೆ ಸರ್ಕಾರ ಬೇಕಾದರೆ ಬಳಸಿಕೊಳ್ಳಲಿ" ಎಂದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಾಕಷ್ಟು ಜನ ಕೇವಲ ನಾಲ್ಕು ಸಾಲು ಸಾಹಿತ್ಯ ಬರೆದು ಕನ್ನಡ ಉದ್ದಾರವಾಯಿತೆಂದುಕೊಂಡರೆ ಹೇಗೆ, ಕನ್ನಡಿಗರಿಗಾಗಿ ಇನ್ಫೋಸಿಸ್ ಸಂಸ್ಥೆ ಅದರಲ್ಲೂ ಸುಧಾ ನಾರಾಯಣ ಮೂರ್ತಿಯವರು ಸಾಕಷ್ಟು ಧನಸಹಾಯ ಮುಂತಾದ ಸೇವೆಗಳನ್ನು ಮಾಡಿರುವುದರಿಂದ ಅವರು ಯೋಗ್ಯರು ಎಂದು ಪ್ರತಿಕ್ರಿಯಿಸಿದ್ದರು.
ಅದೇನೆ ಇರಲಿ, ಇಂಗ್ಲೀಷಿನ ಬಗೆಗೆ ನಮ್ಮವರಿಗಿರುವ ವ್ಯಾಮೋಹವನ್ನು ನೋಡಿದಾಗ ನನಗೆ ಹಳೆಯದೊಂದು ಕಥೆ ಜ್ಞಾಪಕಕ್ಕೆ ಬರುತ್ತಿದೆ. ಬ್ರಿಟೀಷರು ನಮ್ಮನಾಳುತ್ತಿದ್ದ ಕಾಲ ಆಗ ವಿಲ್ಸನ್ ದೊರೆ ಎಂಬ ಒಬ್ಬ ಆಂಗ್ಲ ಅಧಿಕಾರಿ ಇದ್ದ. ಅಧಿಕಾರಿ ಎಂದ ಮೇಲೆ ಆಳು-ಕಾಳು ಎಲ್ಲಾ ಇದ್ದವು. ಅವನಿಗೊಬ್ಬ ಸೇವಕ ಮಾದ ಎಂಬಾತನಿದ್ದ; ಅವನು ದೊರೆಗೆ ಅಂಗರಕ್ಷಕನಂತಿದ್ದು ದೊರೆ ಬೇಟೆಗೆ ಹೋದಾಗಲೆಲ್ಲ ಅವನಿಗೆ ಸಹಾಯಕನಾಗಿ ತೆರಳುತ್ತಿದ್ದ. ಅವನ ಹೆಂಡತಿ ಕೆಂಪಿ ಬಣ್ಣದಲ್ಲಲ್ಲ ಹೆಸರಿನಲ್ಲಿ; ಆ ದೊರೆಯ ಬಂಗಲೆಯಲ್ಲಿ ಕಸ-ಮುಸುರೆ ಕೆಲಸ ಮಾಡುತ್ತಿದ್ದಳು. ಒಮ್ಮೆ ಮಾದ ಯಾವುದೋ ಕೆಲಸದ ಮೇಲೆ ಪರ ಊರಿಗೆ ಹೊರಡಬೇಕಾಗಿತ್ತು ಹಾಗಾಗಿ ತನ್ನ ಹೆಂಡತಿಗೆ ಒಂದು ಮಾತು ಹೇಳಿ ಹೋಗೋಣವೆಂದರೆ ಮನೆ ಕೆಲಸಕ್ಕೆ ಹೋದ ಕೆಂಪಿ ಎಷ್ಟೊತ್ತಾದರೂ ಬರಲೇ ಇಲ್ಲ. ಏಕೆ ತಡವಾಯಿತು , ಒಂದು ಬಾರಿ ತಿಳಿದುಕೊಂಡು ಬರೋಣವೆಂದು ಮಾದನೇ ದೊರೆಯ ಬಂಗಲೆಯತ್ತ ಕಾಲುಹಾಕಿದ. ಬಂಗಲೆಯ ಹತ್ತಿರ ಹೋದರೆ ಅಲ್ಲಿ ಯಾರೂ ಕಾಣ ಬರಲಿಲ್ಲ ಹಾಗಾಗಿ ಬಂಗಲೆಯನ್ನು ಒಂದು ಸುತ್ತು ಹಾಕಿ ಬರೋಣವೆಂದುಕೊಂಡು ಹೊರಟ. ಬಂಗಲೆಯ ಹಿಂದಿನ ಕೋಣೆಯಲ್ಲಿ ಏನೋ ಸದ್ದು ಕೇಳಿಸಿತು, ಕುತೂಹಲದಿಂದ ಅದೇನೆಂದು ತಿಳಿಯಲು ಮಾದ ಕಿಟಕಿಯಲ್ಲಿ ಇಣುಕಿ ನೋಡಿದ. ಅಲ್ಲಿ ಅವನಿಗೆ ಕಾಣ-ಬಾರದ ದೃಶ್ಯವೊಂದು ಕಣ್ಣಿಗೆ ಬಿತ್ತು ಅದೇನೆಂದರೆ ಅವನ ಕರಿ ಹೆಂಡತಿ ಕೆಂಪಿ ಪರಂಗಿ ದೊರೆಯ ತೋಳ್ತೆಕ್ಕೆಯಲ್ಲಿ ಸ್ವರ್ಗಸುಖ ಕಾಣಿತ್ತಿದ್ದಾಳೆ. ಮಾದನಿಗೆ ದೊರೆಯನ್ನು ಅಲ್ಲೇ ಕೊಚ್ಚಿ ಹಾಕುವಷ್ಟು ರೋಷ ಉಕ್ಕಿಬಂತು. ಆದರೆ, ದೊರೆಯ ಮೇಲೆ ಸೇಡು ತೀರಿಸಿಕೊಳ್ಳಲು ಮಾದನೇನು ಸಾಮಾಜಿಕವಾಗಿ ಬಲಿಷ್ಠನೇ? ಅದರಲ್ಲೂ ಬಿಳಿದೊರೆಗಳನ್ನು ಎದುರು ಹಾಕಿಕೊಳ್ಳುವುದು ಸಾಮಾನ್ಯ ವಿಷಯವೇ? ಹಾಗಾಗಿ, ಮಾದ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ. ಹೀಗಿರುವಾಗಲೊಮ್ಮೆ ದೊರೆಯೊಂದಿಗೆ ಬೇಟೆಗೆ ಹೋಗುವ ಅವಕಾಶ ಮಾದನಿಗೆ ಸಿಕ್ಕಿತು. ಆ ಸಮಯದಲ್ಲಿ ಸನಿಹದಲ್ಲೇ ಹುಲಿ ಬರುವ ಸುಳುಹು ಅರಿತ ಮಾದ ದೊರೆಗೆ ಅದರ ಬಗ್ಗೆ ಯಾವುದೇ ಸುಳಿವನ್ನು ವಿಲ್ಸನ್ ದೊರೆಗೆ ಕೊಡಲಿಲ್ಲ. ಹುಲಿ ತೀರ ಇನ್ನೇನು ಹತ್ತಿರ ಬಂತು ಎನ್ನುವಾಗ ಮಾದ ದೊರೆಗಳೇ ಹುಲಿ ಹುಲಿ ಎಂದು ಕೂಗಿ ಉಪಾಯದಿಂದ ಹತ್ತಿರದ ಮರವೇರಿ ಕುಳಿತುಬಿಟ್ಟ. ಮಾದ ದೊರೆಯ ಸಹಾಯಕ್ಕೆ ನಿಲ್ಲದೇ ಹೋದದ್ದರಿಂದ ಅಸಾಯಕನಾದ ವಿಲ್ಸನ್ ದೊರೆ ಹುಲಿಗೆ ಆಹಾರವಾದ. ಇದಾದ ಮೇಲೆ ವಿಲ್ಸನ್ ದೊರೆ ಬೇಟೆಗೆ ಹೋಗಿ ಹುಲಿ ಬಾಯಿಗೆ ಸಿಕ್ಕು ಸತ್ತನೆಂದು ಮಾದ ಊರಲ್ಲೆಲ್ಲಾ ಸುದ್ದಿ ಹರಡಿದ. ಹೀಗೆ ಮಾದ ತನ್ನ ಸೇಡನ್ನು ತೀರಿಸಿಕೊಂಡಿದ್ದ. ಸ್ವಲ್ಪ ಕಾಲದ ನಂತರ ಕೆಂಪಿಗೆ ಮಗುವಾಯಿತು ನೋಡಿದರೆ ಮಗು ಕೆಂಪಗಿದ್ದು ವಿಲ್ಸನ್ ದೊರೆಯನ್ನು ಹೋಲುತ್ತಿತ್ತು. ಹೀಗೆ ವಿಲ್ಸನ್ ದೊರೆ ಸತ್ತೂ ಸೇಡಿಗೆ ಸೇಡು ತೀರಿಸಿಕೊಂಡಿದ್ದ.
ಹೀಗೆಯೇ, ಬ್ರಿಟಿಷರು ನಮ್ಮನ್ನು ಬಿಟ್ಟು ತೊಲಗಿದರೂ ಅವರ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿಹೋಗಿದ್ದಾರೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅವರಿಗಿಂತ ನಾವೇ ಚೆನ್ನಾಗಿ ಜರಿಯುತ್ತಾ ಬ್ರಿಟಿಷರ ಸಂಸ್ಕೃತಿ ಮತ್ತು ಭಾಷೆಯನ್ನು ಅವರಿಗಿಂತ ನಾವೇ ಚೆನ್ನಾಗಿ ಪೋಷಿಸಿಕೊಂಡು ಬರುತ್ತಿದ್ದೇವೆ. ಹೀಗೆ ಬ್ರಿಟಿಷರು ದೇಶ ಬಿಟ್ಟು ಹೋದರೂ ಅವರ ಸಂಸ್ಕೃತಿಯನ್ನು ನಾವೇ ಹಾಡಿ ಹೊಗಳೂವಂತೆ ಮಾಡಿ ವಿಲ್ಸನ್ ದೊರೆಯಂತೆ ಪರೋಕ್ಷವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದು ದೇಶಕ್ಕೊದಗಿದ ದೌರ್ಭಾಗ್ಯವೆನ್ನದೇ ಬೇರೆ ವಿಧಿಯಿಲ್ಲ. ವಿಶ್ವದ ಶ್ರೇಷ್ಠ ಸಂಶೋಧನಾ ಸಾಹಿತ್ಯವೆಲ್ಲಾ ಇಂಗ್ಲೀಷಿನಲ್ಲಿದೆ ಎಂದುಕೊಂಡರೆ ಅದನ್ನು ಅರಿತುಕೊಳ್ಳಲು ಬೇಕಾದರೆ ಇಂಗ್ಲೀಷನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಿಂದಲೇ ಕಲಿಯಲಿ ಅದು ಬೇರೆ ವಿಷಯ. ಆದರೆ ಸಾಂಸ್ಕೃತಿಕ ವಿಷಯಗಳಲ್ಲೂ ಅವರನ್ನೇ ಅಂದಾನುಕರಣೆ ಮಾಡುತ್ತಿರುವುದು ನಿಜಕ್ಕೂ ಖೇದಕರ.
Comments
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಶ್ರೀಧರರೆ, ಈ ವ್ಯಾಮೋಹದ ಮಟ್ಟ ಕೆಲವೊಮ್ಮೆ ತೀರಾ ಅತಿರೇಖಕ್ಕೆ ಹೋಗುವುದು ಸಾಮಾನ್ಯವಾಗಿ ಕಾಣುವ ಅಂಶ. ನಾನೆ ನೋಡಿರುವ ಸುಮಾರು ಕನ್ನಡ ಸಂಬಂಧಿ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಸೇರುವ ವಿದ್ಯಾವಂತ ಕನ್ನಡಿಗರು ಸಹ ಮೊದಲ ನಮಸ್ಕಾರದ ವಿನಿಮಯ ಮುಗಿಯುತ್ತಿದ್ದಂತೆ (ಕೆಲವೊಮ್ಮೆ ಅದೂ 'ಹಲೋ' ಕೈಯಲ್ಲಿ ಸಿಕ್ಕಿ ಮಾಯವಾಗುವುದುಂಟು) ಮಿಕ್ಕೆಲ್ಲ ಸಂಭಾಷಣೆ ಇಂಗ್ಲೀಷಿಗೆ ಜಾರಿಬಿಟ್ಟಿರುತ್ತದೆ! ಅವರ ಜತೆಯಲ್ಲಿರುವ ಅವರ ಕುಟುಂಬಗಳವರದು ಅದೆ ಕಥೆ!
In reply to ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ by nageshamysore
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ನಿಮ್ಮ ಮಾತು ನಿಜ ನಾಗೇಶರೆ, ಇದಕ್ಕೆ ಕನ್ನಡಿಗರ ಪರಭಾಷಾ ವ್ಯಾಮೋಹ ಮತ್ತು ತಮ್ಮ ಭಾಷೆಯ ಬಗೆಗಿನ ನಿರಭಿಮಾನ ಕಾರಣ :(
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಭಾರತೀಯರು ಕರಿಚರ್ಮದ ಆಂಗ್ಲರಾಗುತ್ತಾರೆ ಎಂಬ ಮೆಕಾಲೆಯ ಭವಿಸ್ಯ ನಿಜವಾಗಿಬಿಟ್ಟಿದೆ. ಗುಲಾಮಗಿರಿಯಲ್ಲಿ ಸುಖ ಕಾಣುವ ಮನೋಭಾವವೂ ಒಂದು ರೀತಿಯ ಕಾಯಿಲೆಯೇ ಆಗಿದೆ. ಕಾಲ ಯಾವ ಮದ್ದು ಕೊಟ್ಟೀತೋ ನೋಡೋಣ. ಧನ್ಯವಾದ, ಶ್ರೀಧರರೇ.
In reply to ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ by kavinagaraj
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ನಿಮ್ಮ ಮಾತು ನಿಜ ಕವಿಗಳೆ, ಮೆಕಾಲೆ ಹೇಳಿದಂತೆ ನಾವೆಲ್ಲಾ ಕರಿಚರ್ಮದ ಆಂಗ್ಲರಾಗುತ್ತಿದ್ದರೆ ಅತ್ತ ಅವರು ಹಿಂದೂ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಾ ಸಂಸ್ಕೃತವನ್ನು ಶಾಲಾ ಪಠ್ಯಗಳಲ್ಲಿ ಕಡ್ಡಾಯ ಮಾಡುತ್ತಾ ಬಿಳಿ ಚರ್ಮದ ಭಾರತೀಯರಾಗುತ್ತಿದ್ದಾರೆ. ಇದಕ್ಕಾಗಿ ಸಂತೋಷಿಸಬೇಕೋ ಅಥವಾ ನಮ್ಮ ಅವಸ್ಥೆ ಕಂಡು ವ್ಯಥೆ ಪಡಬೇಕೋ ಅರ್ಥವಾಗುತ್ತಿಲ್ಲ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಶ್ರೀದರರಿಗೆ ನಮಸ್ತೆ, ಕಥೆಯಲ್ಲಿ ಸತ್ಯ ಅಡಗಿದೆ, ಪರಭಾಷಾ ವ್ಯಾಮೋಹ ಎಂಬ ಪದದಲ್ಲಿ ಇಂಗ್ಲಿಷ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ, ಅದಲ್ಲದೆ, ಮಾತೃಭಾಷೆ ಬೇರೆಯಾದ ನಾವುಗಳು, ಇಂಗ್ಲಿಷ್ ಭಾಷೆಯಲ್ಲಿ ಎಷ್ಟೇ ಪರಿಣಿತಿ ಪಡೆದರು, ಪರಕೀಯರಿಗಿಂತಾ ಕೆಳಗೆ ಇರುತ್ತೇವೆ ಎನ್ನುವುದು ವಾಸ್ತವ, ಅದಲ್ಲದೆ ನಾವು ಅವರ ಭಾಷೆಯಲ್ಲಿ ಯೋಚಿಸುವುದು ಬಹಳ ಕಷ್ಟದ ವಿಚಾರ,,,,, ಪರಭಾಷೆ ಇಲ್ಲದ ಎಷ್ಟೊ ರಾಷ್ಟ್ರಗಳು ತಮ್ಮ ಮಾತೃ ಭಾಷೆಯಲ್ಲಿಯೇ ತಂತ್ರಜ್ಞಾನವನ್ನು ಕಲಿತು ಪ್ರಪಂಚದ ಎತ್ತರದಲ್ಲಿದೇವೆ ಎನ್ನುವುದನ್ನು ನಾವು ಮನಗಾಣಬೇಕು, ಇನ್ನು ಸಂಸ್ಕೃತಿಯ ವಿಷಯದಲ್ಲಿ ನೋಡಿದರೆ, ಹೌದು ನಾವು ಕಪ್ಪು ಚರ್ಮದ ಪರಕೀಯರಾಗಿದ್ದೇವೆ, "ಬಾವಿಯ ಒಳಗೆ ಕೊಡವನ್ನು ಬಹಳ ಸುಲಬವಾಗಿ ಜಾರಿ ಬಿಡಬಹುದು, ಆದರೆ ಮೇಲೆ ಎತ್ತಲು ಸ್ವಲ್ಪ ಕಷ್ಟ, ನಾವೀಗ ಕೊಡದಂತೆ ಆಕರ್ಷಣೆ ಅತ್ತ ಸಾಗುತ್ತಿದ್ದೇವೆ ಎನಿಸುತ್ತದೆ, ಮೇಲೆ ಬರುವುದು ಅನುಮಾನವೂ ಹೌದು,,,,, ಪ್ರಸ್ತುತ ಪರಿಸ್ಥಿತಿಗೆ ಬಹಳ ಅವಶ್ಯ ನಿಮ್ಮ ಬರಹ,
ಧನ್ಯವಾದಗಳು,,,,,
In reply to ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ by naveengkn
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಬಾವಿಯ ಒಳಗೆ ಕೊಡವನ್ನು ಬಹಳ ಸುಲಬವಾಗಿ ಜಾರಿ ಬಿಡಬಹುದು, ಆದರೆ ಮೇಲೆ ಎತ್ತಲು ಸ್ವಲ್ಪ ಕಷ್ಟ, ನಾವೀಗ ಕೊಡದಂತೆ ಆಕರ್ಷಣೆ ಅತ್ತ ಸಾಗುತ್ತಿದ್ದೇವೆ ಎನಿಸುತ್ತದೆ, ಮೇಲೆ ಬರುವುದು ಅನುಮಾನವೂ ಹೌದು,,,,, +1. ಪ್ರಯತ್ನಪಟ್ಟರೆ ಖಂಡಿತ ಸಾಧ್ಯವಾಗುತ್ತದೆ ಆದರೆ ಅದಕ್ಕಾಗಿ ಕಾಯಬೇಕಷ್ಟೆ. ಪ್ರತಿಕ್ರಿಯೆಗೆ ಧನ್ಯವಾದಗಳು ನವೀನ್.
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಲಂಡನ್ ಮಕ್ಕಳು ವೇದ ಮಂತ್ರವನ್ನು ಹೇಳುತ್ತಿರುವುದು. ಅಲ್ಲಿನ ಮಕ್ಕಳು ಸಂಸ್ಕೃತವನ್ನೂ ಆಸಕ್ತಿಯಿಂದ ಧ್ಯಯನ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ.http://www.youtube.com/feature=player_embedded
In reply to ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ by kavinagaraj
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
http://blog.vedasudhe.com/2014/07/blog-post_15.html
In reply to ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ by kavinagaraj
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಉತ್ತಮ ಮಾಹಿತಿಯುಳ್ಳ ಕೊಂಡಿಯನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ಕವಿಗಳೆ.
ಉ: ಇಂಗ್ಲೀಷ್ ಭಾಷಾ ಮಾಧ್ಯಮ - ಹೀಗೊಂದು ನೋಟ
ಸರ್ಕಾರಕ್ಕಾದರೂ ಇದರ ಬಗ್ಗೆ ತಿಳುವಳಿಕೆ ಇರಬಾರದೇ ಸಾರ್? ಕರ್ನಾಟಕದಲ್ಲಿಬಹುತೇಕ ಎಲ್ಲಾ ಅಂಕ ಪಟ್ಟಿಗಳೂ , ಪ್ರವೇಶ ಪತ್ರಿಕೆಗಳು , ಪ್ರಶ್ನೆ ಪತ್ರಿಕೆಗಳು ಇಂಗ್ಲಿಷೀಕರಣಗೊಳ್ತಿವೆ ಅಲ್ವಾ ಸಾರ್?