ಇಂಟರ್ನೆಟ್ ಗಾಗಿ ಏನೆಲ್ಲ (೧)

ಇಂಟರ್ನೆಟ್ ಗಾಗಿ ಏನೆಲ್ಲ (೧)

 

 

ಕಳೆದ ತಿಂಗಳು ಕಡಿಮೆ ಸಮಯದಲ್ಲೇ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಿ ಹೊಸತೊಂದು ಬಾಡಿಗೆ ಮನೆಗೆ ಹೋಗುವ ಸನ್ನಿವೇಶ ಎದುರಾಯಿತು. ಹೆಚ್ಚು ಕಾಲ ಬಾಡಿಗೆ ಮನೆಗಳಲ್ಲೇ ಇದ್ದದ್ದರಿಂದ ಮನೆ ಬದಲಾಯಿಸುವುದು, ಸಾಮಾನು ಸಾಗಿಸುವುದು ಈಗ ಕಷ್ಟವೆನಿಸುವುದಿಲ್ಲ. ಕಷ್ಟವಾಗುವುದು ಹೊಸ ಜಾಗದಲ್ಲಿ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳುವುದು!

ಹಿಂದಿದ್ದ ಮನೆಯಲ್ಲಿ ಏರ್ಟೆಲ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡಿದ್ದೆ. ಬಿ ಎಸ್ ಎನ್ ಎಲ್ ಶಿಫ್ಟ್ ಮಾಡೋದು ತಿಂಗಳುಗಟ್ಟಲೆ ಹಿಡಿಯಬಹುದೆಂದು ಅದರ ತರಲೆಯೇ ಬೇಡವೆಂದು ಅದರೊಂದಿಗೆ ಹಾಕಿಸಿಕೊಂಡಿದ್ದ ಬ್ರಾಡ್ ಬ್ಯಾಂಡ್ ಕನೆಕ್ಷನ್ ತೆಗೆಸಿಹಾಕಿಬಿಟ್ಟಿದ್ದೆ. ಈಗ ಹೊಸ ಜಾಗದಲ್ಲಿ ಏರ್ಟೆಲ್ ರವರ ಕವರೇಜ್ ಇಲ್ಲ. ಮರಳಿ .... ಪಾದಕ್ಕೆ ಎಂಬಂತೆ ಬಿ ಎಸ್ ಎನ್ ಎಲ್ ಗೆ ಹೊಸತೊಂದು ಅರ್ಜಿ ಹಾಕಿದೆ. ಅರ್ಜಿ ಹಾಕಿ ಒಂದು ತಿಂಗಳಾದರೂ ಏನೂ ಇಲ್ಲ.

ಈ ಮಧ್ಯೆ ಅನಿಲ್ ಅಂಬಾನಿ ಸಾರಥಿಯಾಗಿ ನಡೆಸುತ್ತಿರುವ ರಿಲಯನ್ಸ್ ನ (ವಿ)ಭಾಗ ಬೆಂಗಳೂರಿನಲ್ಲಿ [:http://en.wikipedia.org/wiki/Wimax|Wimax] ಹೊರತಂದಿದೆಯೆಂದು ಕೇಳಿದೆ. ಆ ದಿನವೇ ಹೋಗಿ ಅವರಿಗೊಂದು ಚೆಕ್ ಕೊಟ್ಟು, ಸಾಧ್ಯವಾದಷ್ಟು ಬೇಗ ಹಾಕಿಸಿಕೊಡಿ ಎಂದು ಕೇಳಿದೆ. ದುಡ್ಡು ಪಡೆದದ್ದಕ್ಕೆ ಚೀಟಿಯಿಲ್ಲ, ಪತ್ರವಿಲ್ಲ. ಒಂದು ವಾರದಲ್ಲೇ ಯಾವುದೋ ಕಂಪೆನಿಯ ಇಬ್ಬರು ನಾವು ರಿಲಯನ್ಸ್ ಕಂಪೆನಿಗೆ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವವರು ಎಂದು ಹೇಳಿಕೊಂಡು ಲ್ಯಾಪ್ ಟಾಪ್ ಹಿಡಿದು ಬಂದರು. ಬಂದವರು ಮೇಲೆ ಕೆಳಗೆ ಓಡಾಡುತ್ತ ಮಹಡಿಯ ಮೇಲೆ ಒಂದು ರಿಸೀವರ್ ಕುಳ್ಳಿರಿಸಿದರು. ಆ ರಿಸೀವರಿನಿಂದ ವೈರು ಕೆಳಗೆ ಎಳೆದು ತಂದು "ಸಿಗ್ನಲ್ ಸಿಗ್ತು, ಇಂಟರ್ನೆಟ್ ಬಂತು, ಹೋ" ಎಂದು ಕುಣಿದಾಡಿದರು. ರಿಲಯನ್ಸಿನ ಟವರ್ ಹತ್ತಿರವೇ ಇರೋದರಿಂದ ಬಹಳ ಒಳ್ಳೆಯ ಸಿಗ್ನಲ್ ಸಿಕ್ಕಿತ್ತಂತೆ.

ನನಗೂ "ಅರೆರೆ ಎಷ್ಟು ಸುಲಭವಾಗಿ ಆಗಿಹೋಯ್ತು" ಎಂದನಿಸಿದರೂ "ಎಲ್ಲಿ, ಒಮ್ಮೆ ನೆಟ್ವರ್ಕ್ ಟೆಸ್ಟ್ ಮಾಡಿ ನೋಡಿ" ಎಂದೆ. ಏನೇ ಮಾಡಿದರೂ ಅವರು ತಂದಿದ್ದ ಲ್ಯಾಪ್ ಟಾಪ್ ನಿಂದ ಇಂಟರ್ನೆಟ್ ಕನೆಕ್ಟ್ ಆಗಲೇವಲ್ದು! ನನ್ನ ಲ್ಯಾಪ್ ಟಾಪ್ ಬಳಸಿ ನೋಡುವೆವು ಎಂದು ಕೇಳಿ ಪಡೆದರು. ಅದರಲ್ಲೂ ಆಗಲಿಲ್ಲ. ಕೊನೆಗೆ ಮತ್ತೆ ಮೇಲೆ ಕೆಳಗೆ ಓಡಾಡುತ್ತ ಅಲ್ಲೊಂದ್ ಸಾರಿ ಇಲ್ಲೊಂದ್ ಸಾರಿ ಟೆಸ್ಟ್ ಮಾಡುತ್ತ ಏನೂ ತೋಚದೆ ಹೆಣಗಾಡಿದರು. ಹಲವು ಗಂಟೆಗಳು ಕಳೆದ ಬಳಿಕ ಸೋತು "ಏನೋ ಸಾರ್, ಯಾಕೋ ಇಂಟರ್ನೆಟ್ ಬರ್ತಿಲ್ಲ. ಸೋಮವಾರ ಬಂದು ಮತ್ತೆ ನೋಡ್ತೀವಿ" ಎಂದುಕೊಂಡು ರಿಲಯನ್ಸ್ ಕಂಪೆನಿಯನ್ನು ಶಪಿಸುತ್ತ ಹೊರಟುಹೋದರು.

ಸೋಮವಾರ ಬೆಳಿಗ್ಗೆ ಇವರುಗಳು ಬರುವ ಮುನ್ನ ನಾನೊಮ್ಮೆ ಲಿನಕ್ಸಿನಿಂದ ಪ್ರಯತ್ನಿಸಿ ನೋಡಿದಾಗ ಕನೆಕ್ಟ್ ಆಗಿಬಿಡ್ತು. ನಡೆದದ್ದೇನೆಂದರೆ ಶನಿವಾರ ಭಾನುವಾರ ಎರಡೂ ದಿನ ಅವರ ನೆಟ್ವರ್ಕೇ ಎಗರಿಹೋಗಿತ್ತಂತೆ. ಸದ್ದಿಲ್ಲದೆ ಸೋಮವಾರದಷ್ಟೊತ್ತಿಗೆ ಸರಿಪಡಿಸಿದ್ದರು. ಈ ಸರ್ವೀಸಿನಡಿ ಪ್ರತಿ ಸಾರಿ ಇಂಟರ್ನೆಟ್ ಗೆ ಕನೆಕ್ಟ್ ಆಗುವಾಗ ರಿಲಯನ್ಸ್ ಪುಟದಲ್ಲಿ ಒಮ್ಮೆ ಲಾಗಿನ್ ಆಗಬೇಕಾಗುತ್ತದೆ. ಮೇಲೆ ಸಿಗಿಸಿರುವ ರಿಸೀವರಿನಲ್ಲಿ ಒಂದು ಮಾಡೆಮ್ ಅವಿತುಕೊಂಡಿರುತ್ತದೆ.

(ಮುಂದುವರೆಯುವುದು)

Rating
No votes yet

Comments