ಇಂದಿನ ಡೈರಿಯಿಂದ
ಎಂದಿನಂತೆ ಇಂದು ೬.೧೪ರ ಬೊರಿವಿಲಿ ಟ್ರೈನ್ನಲ್ಲಿ ಬಂದೆ. ಇವತ್ತೇನೋ ಎಂದಿಗಿಂತ ವಿಪರೀತ ಜನಸಂದಣಿ ಇದ್ದಿತ್ತು. ನನಗೇನೋ ಕುಳಿತುಕೊಳ್ಳಲು ಜಾಗ ಸಿಕ್ಕಿದ್ದಿತು. ಸ್ವಲ್ಪ ಸುಸ್ತಾಗಿದ್ದ ಕಾರಣ, ಈ ಜಗತ್ತಿನ ಪರಿವೆಯೇ ಬೇಡವೆಂಬಂತೆ ಕಣ್ಣು ಮುಚ್ಚಿ ಕುಳಿತಿದ್ದೆ. ಬಾಂದ್ರಾ ಬರುವ ವೇಳೆಗೆ ಕಾಲಿಡಲು ಒಂದಿಂಚೂ ಸ್ಥಳವಿರಲಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು.
ಅದೇ ಸಮಯದಲ್ಲಿ ಯಾರೋ ವಯಸ್ಸಾದವರು ಬಹಳ ಜೋರು ಮಾಡುತ್ತಿರುವುದು ಕೇಳಿಸಿತು. ಏನು ಅದು ಎಂದು ನೋಡಲು ಕಣ್ತೆರೆದೆ. ಆ ಮುದುಕರು ಹೇಗೋ ಬಾಗಿಲಿನಿಂದ ಒಳಕ್ಕೆ ಬಂದಿದ್ದರು. ಬಂದು ತಮ್ಮ ಮುಂದಿದ್ದವರಿಗೆ ಒಳಗೆ ಹೋಗಿ, ಇಲ್ದೇ ಇದ್ರೆ ನನಗೆ ಜಾಗ ಬಿಡಿ, ನಾನು ಹೋಗುವೆ ಅಂತಿದ್ದರು.
ಆಗ ಮುಂದಿದ್ದ ಒಬ್ಬಾತ, 'ಅಜ್ಜ, ಮುಂದೆ ಒಂದು ಸ್ವಲ್ಪವೂ ಜಾಗವಿಲ್ಲ. ಕಾಲಿಡಲೂ ಸ್ಥಳ ಕಾಣ್ತಿಲ್ಲ. ನೀವು ಇಲ್ಲಿಯವರೆವಿಗೆ ಬಂದದ್ದು ಹೆಚ್ಚೇ! ಇಲ್ಲಿಯೇ ನಿಂತಿರಿ' ಎಂದರು.
ಅದಕ್ಕೇ ಆ ಮುದುಕರ ಅವರ ಜೊತೆಗೆ ಜಗಳ ಮಾಡಲು ಶುರು ಮಾಡಿದರು. 'ನನಗೆ ಇಷ್ಟು ವಯಸ್ಸಾಗಿದೆ. ವಯಸ್ಸಿನಲ್ಲಿ ನಾನು ನಿನ್ನಪ್ಪನ ಹಾಗೆ. ನನ್ನ ಕಷ್ಟವನ್ನು ಅರಿಯಲಾರೆಯಾ? ನಿನ್ನ ತಂದೆಯೇ ಇಲ್ಲಿ ಬಂದಿದ್ರೆ ನೀನೇನು ಮಾಡ್ತಿದ್ದೆ?'
ಅದಕ್ಕೆ ಮರು ನುಡಿಯಾಗಿ ಆತ, 'ಸುಮ್ನೆ ಜಾಸ್ತಿ ಮಾತನಾಡಿ, ನನ್ನ ತಲೆ ಹಾಳು ಮಾಡಬೇಡಿ. ಒಳಗೆ ಜಾಗವಿಲ್ಲ, ಇದ್ದಿದ್ದರೆ ನಾನೇ ಮೊದಲು ಮುಂದಕ್ಕೆ ಹೋಗ್ತಿದ್ದೆ. ಹಾಗೆ ನೀವು ಮುಂದೆ ಹೋಗಲು ಪ್ರಯತ್ನಿಸಿದರೂ ನಿಮ್ಮ ಮೂಳೆ ಮುರಿದು ಹೋದೀತು' ಎಂದರು.
ಈ ಮುದುಕರು ಅವರ ಮಾತು ಕೇಳಲು ತಯಾರೇ ಇಲ್ಲ. ಅಕ್ಕಪಕ್ಕದವರೆಲ್ಲರೂ ಆತನ ಮಾತನ್ನು ಸಮರ್ಥಿಸಿದರೂ, ಕೇಳುವ ಹಾಗೇ ಇಲ್ಲ. 'ನನ್ನನ್ನೇನು ಅಂತ ತಿಳಿದಿದ್ದೀಯೇ? ನಾನು ಉತ್ತರಪ್ರದೇಶದಿಂದ ಬಂದವನು. ಎಂತೆಂಥ ಕಷ್ಟಗಳನ್ನೆಲ್ಲಾ ಸಹಿಸಿದ್ದೀನಿ. ನನಗೇ ನೀವು ಪ್ರವಚನ ಕೊಡ್ತಿಯಾ?' ಎನ್ನೋದೇ.
ಅಕ್ಕ ಪಕ್ಕದ ಜನರೆಲ್ಲಾ ಆ ಮುದುಕರಿಗೆ ಸಮಾಧಾನ ಹೇಳುತ್ತಿದ್ದರೂ ಮಾತು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ. ಇವರೊಂದಿಗೆ ಹೆಚ್ಚಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಆತ ಸುಮ್ಮನಾದರು.
ಅಷ್ಟು ಹೊತ್ತು ಸುಮ್ಮನಿದ್ದ ನಾನು, ಎದ್ದು ನಿಂತು ' ಆ ಬಸಾ (ಬನ್ನಿ ಕುಳಿತುಕೊಳ್ಳಿ)', ಎಂದೆ. ಜನರೆಲ್ಲರೂ 'ತ್ವೂ ಬಸಾ ಸಾಹೇಬ್ - ಏ ಮರಾಠೀ ಮಾಣೂಸ್ ನಾಹಿ(ನೀವು ಕುಳಿತುಕೊಳ್ಳಿ - ಇವರು ಮರಾಠಿ ಮನುಷ್ಯ ಅಲ್ಲ)' ಎಂದರು. ನಾನು ಅದಕ್ಕೆ, ' ಯಾರಾದರೇನಂತೆ - ನಾನೂ ಮರಾಠಿಯವನಲ್ಲ, ಅವರಿಗೆ ವಯಸ್ಸಾಗಿದೆ, ನಿಲ್ಲಲಾಗೋದಿಲ್ಲ, ಕುಳಿತುಕೊಳ್ಳಲಿ, ನನಗೆ ನಿಲ್ಲಲು ಶಕ್ತಿ ಇದೆ - ನಿಲ್ಲುವೆ' ಅಂದೆ. ಅದಕ್ಕೇ ಅವರು 'ಹಾಂ, ನೀವು ಕುಳಿತುಕೊಳ್ಳಲು ಜಾಗ ಕೊಟ್ಟದ್ದು ನೋಡಿದರೇ ತಿಳಿಯುತ್ತದೆ, ನೀವು ಮರಾಠಿಯವರಲ್ಲ ಅಂತ'. ಮರು ನುಡಿಯಲ್ಲಿ ನಾನಂದೆ - 'ಹಾಗೆಲ್ಲಾ ಹೇಳಬೇಡಿ - ಮರಾಠಿಯವರಲ್ಲಿ ಇನ್ನೂ ಹೆಚ್ಚಿನ ಮಾನವೀಯತೆ ಇರುವವರು ತುಂಬಾ ಜನರಿದ್ದಾರೆ, ಅವರಿಂದಲೇ ನಾನು ಈ ಪಾಠ ಕಲಿತಿರೋದು'. ಹೀಗಂದ ತಕ್ಷಣ ಅವರು ಸುಮ್ಮನಾದರು.
ನಾನೂ ಏನಾದರೂ ಅವರಂತೆಯೇ ಮಾತನಾಡಿದ್ದರೆ ಎಂತಹ ದೊಡ್ಡ ಗಲಾಟೆ ಆಗ್ತಿತ್ತು ಅಲ್ವಾ?
Comments
ಉ: ಇಂದಿನ ಡೈರಿಯಿಂದ