ಇಂದ್ಯಾಕೋ..

ಇಂದ್ಯಾಕೋ..

    ಸಾಮಾನ್ಯವಾಗಿ ಹೆಣ್ಣು ಭಾವಜೀವಿ. ಮದುವೆಯಾದಾಗ  ತಾನು ಹುಟ್ಟಿ ಆಡಿ ಬೆಳೆದ ಮನೆಯನ್ನು ತೊರೆದು ಹೊಸ ಕನಸುಗಳೊಂದಿಗೆ ಗಂಡನ ಮನೆ ಸೇರಿ ಅಲ್ಲಿಯ ಜೀವನಶೈಲಿಗೆ ಹೊಂದಿಕೊಳ್ಳುವ ಅವಳು, ತನ್ನ ತವರನ್ನು ನೆನಪಿಸುವ  ಯಾವುದೇ ವಸ್ತು, ವಸ್ತ್ರ ಅಥವಾ ಒಡವೆಯಾಗಲಿ ಅದನ್ನು  ಜೋಪಾನವಾಗಿ ಕಾಪಿಟ್ಟುಕೊಳ್ಳುವಳು. ಮಕ್ಕಳಾಗಿ, ಮೊಮ್ಮಕ್ಕಳಾದರೂ ಹೆಣ್ಣಿಗೆ ತವರೆಂದರೆ ಏನೋ ಸೆಳೆತ, ವ್ಯಾಮೋಹವಿರುವುದು. ತವರಿಗೆ ಹೋಗುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂಭ್ರಮ, ಜತೆಗೆ ಬಳಗವನು ಸೇರುವ ಕಾತರ. ಮದುವೆಯಾದ ಹೊಸದರಲ್ಲಿ ತವರು ಕಾಡುವುದು ಹೆಚ್ಚು. ಮನೆಮಂದಿಯೊಂದಿಗೆ ಸಂತಸದಿಂದಿದ್ದರೂ ಕೆಲವೊಮ್ಮೆ ತವರ ನೆನಪು ಒತ್ತರಿಸಿ ಬರುವುದು.
    
 
    ಇಂದ್ಯಾಕೋ...
ಅಣ್ಣಅಕ್ಕಂದಿರ ಒಡನಾಟ
ತಮ್ಮತಂಗಿಯರ ತುಂಟಾಟ
ಮರೆಯೆನು ಕಳೆದ ಕ್ಷಣದೂಟ
ಹರಟೆ ಕೀಟಲೆ ಕಿಲಕಿಲ ನಗು
ನೆನೆದರೆ ನಾನಾಗುವೆ ಮಗು
ಇಂದ್ಯಾಕೋ...
ನೆನಪುಗಳ ಮೆರವಣಿಗೆ ಸಾಗುತಿದೆ

ಎಳೆಗರುವಿನ ಕೆನೆದಾಡುವ ನೋಟ
ಬಯಲಲಿ ಮೇಯುವ ಆಕಳ ಕೂಟ
ದೊಡ್ಡಾಲದ ಬಿಳಲಿನಲಿ ಜೀಕಾಟ
ಹೊಲದ ಸಣ್ಣಕೊಳದಲಿ ಈಜಾಟ
ಮರವನೇರಿ ಕೊಯ್ಯುವ ಪೇರಳೆ
ಕಲ್ಲೆಸೆದು ಉರುಳಿಸುವ ನೇರಳೆ
ಇಂದ್ಯಾಕೋ....
ಮನವು ತವರಕಡೆ ವಾಲುತಿದೆ

ಅರಳುತ ಹಾಡಾಗುವ ಹೂಗಳ ಸಾಲು
ಮಾಡಲಿ ಗುಬ್ಬಚ್ಚಿ ಪಾರಿವಾಳ ಗೂಡು
ಪಕ್ಷಿಗಳ ಮೋಹಕ ಚಿಲಿಪಿಲಿ ನಾದಕಲೆ
ಬಿಲ್ಲಿ, ಮೋತಿಯರು ಚೆಲ್ಲುವ ಸ್ನೇಹಸೆಲೆ
ಕೈಯಾರೆ ನೆಟ್ಟು  ನೀರುಣಿಸಿದ ಗಿಡವು
ಬೆಳೆದು ಮೆರೆಯುತಿದೆ ತುಂಬಿ ಫಲವು
ಇಂದ್ಯಾಕೋ....
ಮನವು ಅಲ್ಲೇ ನೆಲೆಸುತಿದೆ

ಸುತ್ತ  ಗಿಡಮರ ಬಳ್ಳಿಗಳ ಹಸಿರಸಿರಿ
ನಿತ್ಯ ಹರಿಯುವ ಬಳಗದ ಭಾವಝರಿ
ಸೆಳೆಯುತಿದೆ ಅಪ್ಪನ ವಾತ್ಸಲ್ಯದ ಸೆಲೆ
ಕರೆಯುತಿದೆ ಅಮ್ಮನ ಪ್ರೀತಿಯ ಹೊಳೆ
ತವರ ಸೇರುವ ಹಾದಿಯು ಬಲುಮೆತ್ತಗೆ
ಇಂದ್ಯಾಕೋ..
ಒದ್ದೆಯಾಗಿ ಹೃದಯ ಒದ್ದಾಡುತಿದೆ..

Rating
No votes yet

Comments