ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
'ಶರದ್ ಪವಾರ್ ಗೆ ಕಪಾಳ ಮೋಕ್ಷ' ಸ್ವಲ್ಪ ದಿನದ ಮಟ್ಟಿಗೆ ಸುದ್ದಿಯಾಗಿ ನಂತರ 'ಕೊಲವರಿ ಡಿ' ಹಾಡಿನೊಂದಿಗೆ ಹಾಸ್ಯವಾಗಿ ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಗಿಟ್ಟಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದರ ಜತೆಗೆ ನಾವೇ ಆರಿಸಿದ ನಾಯಕರ ಮೇಲೆ ಕೈ ಮಾಡುವುದು ಸರಿಯೇ? ಎಂಬ ಗಂಭೀರ ಪಶ್ನೆಯೂ ಉದ್ಬವಿಸುತ್ತದೆ. ಪ್ರಜಾಪ್ರಭುತ್ವವಿರುವ ನಾಡಲ್ಲಿ ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು. ಹಾಗಾದರೆ ಭ್ರಷ್ಟಾಚಾರದಿಂದ ನಲುಗಿಹೋಗಿರುವ ಭರತ ಖಂಡದಲ್ಲಿ ಗಾಂಧೀವಾದದಿಂದಲೇ ನಮಗೆ ಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸಲು ಸಾಧ್ಯವೇ? ಎಂಬುದು ಮುಂದಿನ ಪ್ರಶ್ನೆ.
ಈ ಮೊದಲು ಕೂಡಾ ನಮ್ಮನ್ನಾಳುವ ನಾಯಕರ ಮೇಲೆ ಸಾಮಾನ್ಯ ಜನರು ಹಲ್ಲೆಗೈದ ಘಟನೆ ನಡೆದಿದೆ. ಹಲ್ಲೆಗೊಳಗಾದ ನಾಯಕರ ಪಟ್ಟಿಯಲ್ಲಿ ಇದೀಗ ಶರದ್ ಪವಾರ್ ಸೇರ್ಪಡೆ ಅಷ್ಟೇ. ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ, ನಿಮ್ಮ ಮನಸ್ಸಿನ ಮೂಡುವ ಪ್ರಶ್ನೆ ಹೀಗೂ ಉಂಟೆ? ಎಂಬುದಾಗಿರುವುದಿಲ್ಲ. ಬದಲಾಗಿ ನಾವು -ಮ್ಯಾಂಗೋ ಪೀಪಲ್ (ಆಮ್ ಆದ್ಮಿ) ನಮ್ಮ ರಾಷ್ಟ್ರೀಯ ನಾಯಕರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದೇವೆಯೇ? ಎಂಬುದು.
ನೋಡ್ತಾ ಇರಿ ಸರ್ಕಾರ ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡ್ತಿದೆ ಎಂದು ಭಾಷಣ ಬಿಗಿದ ಕೇಂದ್ರ, ರಾಜ್ಯ ಸಚಿವರುಗಳು ಹಗರಣಗಳ 'ಲೇಬಲ್' ಹೊತ್ತು ಸಾಲು ಸಾಲಾಗಿ ಜೈಲು ಸೇರುತ್ತಿದ್ದಾರೆ. ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ಕೂಗು ಕೇಳಿಬರುತ್ತಿದ್ದರೂ ಸರ್ಕಾರ ಮಾತ್ರ ಜಾಣ ಮೌನಕ್ಕೆ ಶರಣಾಗಿದೆ.
ಇತ್ತ ಹಣದುಬ್ಬರ, ಬೆಲೆ ಏರಿಕೆಯಿಂದಾಗಿ ದೈನಂದಿನ ಜೀವನ ದುಸ್ತರವಾಗುತ್ತಿದೆ. ಜನ ಸಾಮಾನ್ಯರ ಬೇಡಿಕೆಗಳನ್ನು ಪೂರೈಸಲು ಸರ್ಕಾರ ಹೆಣಗಾಡುತ್ತಿದೆ. ಇಂತದರಲ್ಲಿ ಜನ ಸಾಮಾನ್ಯರು ನಾಯಕರ ಕಪಾಳಕ್ಕೆ ಹೊಡೆಯುವುದರಿಂದಲೋ, ಅವರತ್ತ ಶೂ ಎಸೆಯುವುದರಿಂದಲೋ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೇ? ಹಿಂಸಾ ಪ್ರವೃತ್ತಿಯಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದೆಯೇ ಎಂಬುದು ಚಿಂತಿಸಬೇಕಾದ ವಿಷಯ.
ಇಲ್ಲಿ ಗಮನಿಸ ಬೇಕಾದ ಇನ್ನೊಂದು ವಿಷಯ ಹರ್ವಿಂದರ್ ಸಿಂಗ್್ನ ಹೇಳಿಕೆ. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಮೇಲೆ ಹಲ್ಲೆಗೈದ ಹರ್ವಿಂದರ್ ಬೆಲೆ ಏರಿಕೆಯೇ ಈ ಹಲ್ಲೆಗೆ ಕಾರಣ ಎಂದು ಹೇಳಿದ್ದಾನೆ. ಮಾತ್ರವಲ್ಲದೆ ಈ ಕಪಾಳಮೋಕ್ಷ ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳಿಗೆ ಉತ್ತರ ಎಂಬುದು ಆತನ ತಕ್ಷಣದ ಪ್ರತಿಕ್ರಿಯೆ. ಹಾಗೆ ನೋಡಿದರೆ ಹರ್ವಿಂದರ್ ಹೇಳಿಕೆ ತೀರಾ ಅಚ್ಚರಿಯೇನು ಹುಟ್ಟಿಸುತ್ತಿಲ್ಲ. ಯಾಕೆಂದರೆ ನಾವು ನೀವು ಸೇರಿದಂತೆ ಎಲ್ಲರೂ ರಾಜಕಾರಣಿಗಳ ಲಾಬಿ, ಲಂಚಕೋರತನ, ಭ್ರಷ್ಟಾಚಾರವನ್ನು ನೋಡಿ ರೋಸಿ ಹೋಗಿದ್ದೇವೆ. ರಾಜಕಾರಣಿಗಳು ಎಂದರೆ 'ಬ್ರಾಂಡೆಡ್ ಕಳ್ಳರು' ಎನ್ನುವಷ್ಟರ ಮಟ್ಟಿಗೆ ಅವರ 'ಸಾಧನೆ'ಗಳು ಎಲ್ಲೆಡೆ ಹಬ್ಬಿವೆ. ಈ ರಾಜಕಾರಣಿಗಳ ಕೀಳು ಮಟ್ಟದ ವರ್ತನೆ, ಅಸಂಬದ್ಧ ಹೇಳಿಕೆ, ಕೆಸರೆರೆಚಾಟ ನೋಡಿದರೆ ಕ್ಯಾಕರಿಸಿ ಉಗಿಯಬೇಕು ಅಂತಾ ಅನಿಸುತ್ತೆ. ಹೀಗಿರುವಾಗ ಸಾಮಾನ್ಯ ವ್ಯಕ್ತಿಯೊಬ್ಬನ ಆಕ್ರೋಶವೇ ಶರದ್ ಪವಾರ್ ಕಪಾಳ ಮೋಕ್ಷಕ್ಕೆ ಕಾರಣವಾಯಿತು ಎಂಬುದು ಸ್ಪಷ್ಟ ಅಲ್ಲವೆ? ಅದೇ ವೇಳೆ ಪ್ರಸ್ತುತ ಘಟನೆಯ ಬಗ್ಗೆ ಗಾಂಧೀವಾದಿ ಅಣ್ಣಾ ಹಜಾರೆ ನೀಡಿದ ಪ್ರತಿಕ್ರಿಯೆ ಕೂಡಾ ಜನರಲ್ಲಿ ಅಚ್ಚರಿ ಮೂಡಿಸಿದಂತೂ ನಿಜ. ಹಾಗಂತ ಜನನಾಯಕರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿಯನ್ನು ಯಾರೇ ಆಗಲಿ, ಯಾವತ್ತೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಆದಾಗ್ಯೂ, ಶರದ್ ಪವಾರ್್ರ ಕಪಾಳಮೋಕ್ಷವನ್ನು ಸಂಸತ್್ನಲ್ಲಿ ಖಂಡಿಸಲಾಯಿತು. ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಸಾಮಾನ್ಯ ಜನರ ರೋಷ ಎಷ್ಟಿದೆ ಎಂಬುದು ಈ ಹಲ್ಲೆಯಿಂದ ತಿಳಿದು ಬರುತ್ತದೆ ಎಂದು ವಿಪಕ್ಷಗಳು ಆಡಳಿತ ಪಕ್ಷಗಳನ್ನು ಟೀಕಿಸತೊಡಗಿದವು. ಆದರೆ ಈ ಖಂಡನೆ ಟೀಕೆಗಳು ನಮ್ಮನ್ನು ಇನ್ನಷ್ಟು ಗೊಂದಲಕ್ಕೀಡಾಗುವಂತೆ ಮಾಡಿವೆ. ಅದೇನೆಂದರೆ ಒಂದೆಡೆ ಶರದ್ ಪವಾರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ರಾಜಕೀಯ ಪಕ್ಷಗಳು ಇನ್ನೊಂದೆಡೆ ಸಾಮಾನ್ಯ ಜನರ ಆಕ್ರೋಶವನ್ನು ಸಮರ್ಥಿಸಿಕೊಳ್ಳುತ್ತಿವೆ. ರಾಷ್ಟ್ರದ ಜನತೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಂದ ಸಂತುಷ್ಟರಾಗಿಲ್ಲ, ಅವರು ಸಂಕಷ್ಟದಲ್ಲಿದ್ದಾರೆ ಎಂಬುದು ದೇಶವನ್ನಾಳುವ ಮತ್ತು ವಿಪಕ್ಷದಲ್ಲಿರುವ ರಾಜಕಾರಣಿಗಳಿಗೆ ಗೊತ್ತು. ಇಂತಿರುವಾಗ ಜನ ಸಾಮಾನ್ಯರ ಹೊರೆಯನ್ನು ಕಡಿಮೆ ಮಾಡಲು ಯಾವೊಬ್ಬ ರಾಜಕಾರಣಿಯೂ ಪ್ರಯತ್ನಿಸುತ್ತಿಲ್ಲ ಯಾಕೆ? ಸದನದಲ್ಲಿ ಬೊಬ್ಬೆ ಹಾಕಿ ಕಾಲ ವ್ಯರ್ಥ ಮಾಡುವ ಜನ ನಾಯಕರು ಎಂದಾದರೂ ಆರ್ಥಿಕ ಸಬಲತೆ ತರಲು ಯಶಸ್ವೀ ಯೋಜನೆಯನ್ನು ರೂಪಿಸಿದ್ದಾರೆಯೇ? ಅನ್ನದಾತರಾದ ರೈತರು ಸಾಲದ ಹೊರೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವಾಗ, ಮದ್ಯದೊರೆ ವಿಜಯ್ ಮಲ್ಯರ ಸಾಲ ತೀರಿಸಲು ಸರ್ಕಾರ ಸಹಾಯಕ್ಕೆ ನಿಂತಿದೆ. ಎಂತಹಾ ವಿಪರ್ಯಾಸ ನೋಡಿ!
ಇನ್ನೊಂದೆಡೆ ರಾಜಕೀಯ ಪಕ್ಷಗಳು 'ಇಂದು ನಾನು ನಾಳೆ ನೀನು' ಎಂಬ ರೀತಿಯಲ್ಲಿ ಕೇಂದ್ರ, ರಾಜ್ಯದಲ್ಲಿ ಗದ್ದುಗೆಯೇರಿ ಮೆರೆಯುತ್ತಿವೆ. ಈಗ ವಿಪಕ್ಷದ ಸೀಟಿನಲ್ಲಿ ಕುಳಿತುಕೊಂಡ ರಾಜಕಾರಣಿಗಳು ಸರ್ಕಾರ ಹಾಗೆ ಮಾಡಿದೆ, ಹೀಗೆ ಮಾಡಿದೆ...,ಸರ್ಕಾರ ಮಾಡಿದ್ದು ಸರಿಯಲ್ಲ ಎಂದು ದೂರುತ್ತವೆ.
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರೆ ಇದಕ್ಕಿಂತ ಉತ್ತಮ ಆಡಳಿತವನ್ನು ಮಾಡುತ್ತೇವೆ ಎಂದು ಭರವಸೆಯನ್ನಿತ್ತು 5 ವರ್ಷಗಳ ನಂತರ ಗದ್ದುಗೆಯೇರುತ್ತವೆ. ಆದರೆ ಗದ್ದುಗೆಯೇರಿದ ನಂತರ ತಮ್ಮ ಕಿಸೆ ತುಂಬಿಸುವಲ್ಲಿ ಮಗ್ನರಾದ ಇವರಿಗೆ ಜನ ಸಾಮಾನ್ಯರ ಸಮಸ್ಯೆಯನ್ನು ಅರಿತುಕೊಳ್ಳಲು ಪುರುಸೋತ್ತು ಸಿಗುವುದೇ ಇಲ್ಲ. ಎಲ್ಲಾ ವಿಷಯಗಳಿಗೆ ರಾಜಕೀಯದ ಬಣ್ಣ ಹಚ್ಚುವ ರಾಜಕೀಯ ಪುಢಾರಿಗಳಿಗೆ ಸಾಮಾನ್ಯ ಜನರು ನೆನಪಿಗೆ ಬರುವುದು ಮುಂದಿನ ಚುನಾವಣೆ ಬಂದಾಗ ಮಾತ್ರ!
ರಾಜಕಾರಣಿಗಳ ಈ ನಡೆಯನ್ನು ನೋಡಿದರೆ ಅದೇನು ಅಧಿಕಾರ ಪೀಠಕ್ಕೇರಿದ ಕೂಡಲೇ ರಾಜಕಾರಣಿಗಳಿಗೆ ಮರೆಗುಳಿತನ ಆವರಿಸಿ ಬಿಡುತ್ತದೆಯೇ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಇನ್ನು ಹಲ್ಲೆಗೈದ ವ್ಯಕ್ತಿಗಳ ಬಗ್ಗೆ ಹೇಳುವುದಾದರೆ ಇವರ್ಯಾರು ಅವಿದ್ಯಾವಂತರಲ್ಲ. ವಿದ್ಯಾವಂತರಾದ ಜನರೇ ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು ನಿಜವಾಗಿಯೂ ದುರದೃಷ್ಟಕರ. ಸಾಮಾನ್ಯ ವ್ಯಕ್ತಿಯ ದೃಷ್ಟಿಯಿಂದ ನೋಡಿದರೆ ರಾಜಕಾರಣಿಗಳ ಭ್ರಷ್ಟಾಚಾರ, ಹಗರಣ, ಬೆಲೆ ಏರಿಕೆ ಎಲ್ಲವೂ ಜನರನ್ನು ಆಕ್ರೋಶ ಭರಿತರಾಗುವಂತೆ ಮಾಡಿದೆ ಒಪ್ಪೋಣ. ಆದರೆ ಪ್ರಜಾಪ್ರಭುತ್ವವಿರುವ ಭಾರತ ದೇಶದಲ್ಲಿ ಜನರು ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಳ್ಳುವುದು ಶೋಭೆ ತರುವಂತದಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ವಾದ ಯಾವತ್ತೂ ಒಳ್ಳೆಯದಲ್ಲ. ನಾವು ನಮ್ಮನ್ನಾಳುವ ನಾಯಕರ ವರ್ತನೆಯಿಂದ ರೋಸಿ ಹೋಗಿದ್ದೇವೆ ನಿಜ. ಆದರೆ ಅವರ ಮೇಲೆ ಹಲ್ಲೆ ಮಾಡುವ ಮೂಲಕ ಯಾವುದೇ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಇದರ ಬದಲು ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿ ಪಡಿಸಬೇಕಾಗಿದೆ. ಆದರೆ ರಾಜಕಾರಣದಲ್ಲಿ ತೊಡಗಿರುವ ವ್ಯಕ್ತಿಗಳಲ್ಲಿ 'ಜನರಿಗಾಗಿ ದುಡಿವ, ಶುದ್ಧ ಮನಸ್ಸಿನ ಸಮರ್ಥ ವ್ಯಕ್ತಿ' ಇದ್ದಾರೆಯೇ? ಎಂಬುದು ಮತದಾರನ ಪ್ರಶ್ನೆ.
Rating
Comments
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
In reply to ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' ! by makara
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
In reply to ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' ! by makara
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
In reply to ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' ! by manju787
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !
ಉ: ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !