ಇದು ಭಾರತ! ಇದು ಭಾರತ
ಇದು ಭಾರತ! ಇದು ಭಾರತ
ಬರೋಡದಲ್ಲಿನ ಅಂತಾರಾಷ್ಟ್ರೀಯ ಖ್ಯಾತಿಯ ಕಲಾಶಾಲೆಯಲ್ಲಿ, ಚಂದ್ರಮೋಹನ್ ಎಂಬ ವಿದ್ಯಾರ್ಥಿ ತನ್ನ ಪರೀಕ್ಷೆಗಾಗಿ ಬರೆದಿದ್ದ ಚಿತ್ರ ಅಶ್ಲೀಲ ಹಾಗೂ ಧರ್ಮದ್ರೋಹಿ ಎಂದು ಆರೋಪಿಸಿ ಕೆಲವು ಹಿಂದೂ ಸಂಘಟನೆಗಳಿಂದ ಆ ಶಾಲೆಯಿದ್ದ ವಿಶ್ವವಿದ್ಯಾಲಯದ ಆವರಣದ ಮೇಲೆ ದಾಳಿ. ದಾಂಧಲೆಯ ಮೂಲಕ ಭಯದ ವಾತಾವರಣ ಸೃಷ್ಟಿ. ವಿದ್ಯಾರ್ಥಿಸಮೂಹ ಹಾಗೂ ಶಿಕ್ಷಕ ಸಿಬ್ಬಂದಿಗೆ ಬೆದರಿಕೆ. ವಿಭಾಗದ ಮುಖ್ಯಸ್ಥನ ಅಮಾನತಿಗೆ ಆಗ್ರಹ ಹಾಗೂ ಅದರಲ್ಲಿ ಯಶಸ್ವಿ. ಚಂದ್ರಮೋಹನನ ಮೇಲೆ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪ ಸಲ್ಲಿಕೆ. ಆ ವಿದ್ಯಾರ್ಥಿಗೆ ಐದು ದಿನಗಳ ಸೆರೆಮನೆವಾಸದ ಶಿಕ್ಷೆ. ಇದನ್ನೆಲ್ಲ ಪೋಲೀಸ್ ಸಹಕಾರದಿಂದಲೇ ಒಂದೇ ದಿನದಲ್ಲಿ ಮಾಡಲಾಗಿದೆ! ಅಷ್ಟೇ ಅಲ್ಲ, ಆ ವಿದ್ಯಾರ್ಥಿಗೆ ಜಾಮೀನು ನೀಡುವ ಅಧಿಕಾರವಿರುವ ನ್ಯಾಯಾಧೀಶ ಇದ್ದಕ್ಕಿದ್ದಂತೆ ರಜೆ ಮೇಲೆ ಹೋಗುತ್ತಾರೆ...ಯಾರು ಹೇಳಿದರು, ನಮ್ಮ ನ್ಯಾಯಾಂಗ ನಿಧಾನ ಗತಿಯದೆಂದು?
ಮಧ್ಯ ಪ್ರದೇಶಧ ಇಂದೂರಿನಲ್ಲಿ ಮುಸ್ಲಿಮೇತರ(ಸಿಂಧಿ) ಹುಡುಗಿಯೊಬ್ಬಳು ಮುಸ್ಲಿಂ ಹುಡುಗನನ್ನು ಮದುವೆಯಾದದ್ದಕ್ಕಾಗಿ ಹಿಂದೂ ಧರ್ಮ ರಕ್ಷಣೆಗಾಗಿ ಇರುವುವೆಂದು ಹೇಳಲಾಗುವ ಸಂಘಟನೆಗಳಿಂದ ಊರು ತುಂಬ ಪ್ರತಿಭಟನೆ. ಉದ್ರೇಕಕಾರಿ ಘೋಷಣೆಗಳು. ಮದುವೆಯನ್ನು-ನವ ವಧು ವರರ ಕೋರಿಕೆಯ ಮೇರೆಗೇ-ಸಾರ್ವಜನಿಕ ಮಾನ್ಯತೆ ಹಾಗೂ ಬೆಂಬಲಕ್ಕಾಗಿ, ಒಂದು ಸುದ್ದಿ ತುಣುಕಾಗಿ ಪ್ರಸಾರ ಮಾಡಿದ ಟಿ.ವಿ. ವಾಹಿನಿಯ ಮೇಲೆ ಈ ಸಂಘಟನೆಗಳ ಬೆಂಬಲಿಗರಿಂದ ಹಲ್ಲೆ. ರಾಜಸ್ಥಾನ್-ಗುಜರಾತ್ ಸರ್ಕಾರಗಳಿಂದ ಅಂರ್ತಧರ್ಮೀಯ ಮದುವೆಗಳು ರಾಷ್ಡ್ರ ವಿರೋಧಿ ಕೃತ್ಯಗಳೆಂಬಂತೆ, ಅವುಗಳ ಗಣತಿಗಾಗಿ ಗುಪ್ತ ಆದೇಶ! ಇವೆಲ್ಲವುಗಳ ಮಧ್ಯೆ, ವಿಶ್ವ ಹಿಂದೂ ಪರಿಷತ್ನ ಗಿರಿರಾಜ ಕಿಶೋರರಿಂದ, 'ಮುಸ್ಲಿಮ್ ಹುಡುಗರ ಆಕರ್ಷಣೆ ಎಂದರೆ, ಮುಂಜಿ ಮಾಡಿಸಿಕೊಂಡ ಅವರು ಮುಸ್ಲಿಮೇತರ ಹುಡುಗಿಯರಿಗೆ ಹೆಚ್ಚಿನ ಶಾರೀರಿಕ ಸುಖ ನೀಡುತ್ತಾರೆ' ಎಂಬ ಕುತೂಹಲಕರ ಸಂಶೋಧನೆ ಬೇರೆ!
ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆಂಬ ಮೊಕದ್ದಮೆಯ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲಿಲ್ಲವೆಂಬ ಕಾರಣದ ಮೇಲೆ, ಹರಿದ್ವಾರದ ಸ್ಥಳೀಯ ನ್ಯಾಯಾಲಯದಿಂದ ರಾಷ್ಟ್ರದ ಸುವಿಖ್ಯಾತ ಕಲಾವಿದ ಎಂ.ಎಫ್.ಹುಸೇನರ ಆಸ್ತ-ಪಾಸ್ತಿ ಮುಟ್ಟುಗೋಲಿಗೆ ಆಜ್ಞೆ! ಸದ್ಯ, ಸರ್ವೋಚ್ಚ ನ್ಯಾಯಾಲಯದಿಂದ ಕೆಳ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ.
ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ಎಲ್ಲೋ ಗೋಮಾಂಸ ತಿಂದನೆಂದು ನ್ಯಾಯಾಲಯದಲ್ಲಿ ದಾವೆ. ಅದಕ್ಕೆ ನ್ಯಾಯಲಯದ ಮನ್ನಣೆ!
ಗುಜರಾತ್ನಲ್ಲಿ ಒಂದಾದರಮೇಲೊಂದು ಬಹಿರಂಗಗೊಳ್ಳುತ್ತಿರುವ ನಕಲಿ ಎನ್ಕೌಂಟರ್ಗಳಲ್ಲಿ ಸತ್ತವರು ಮುಸ್ಲಿಮರೆಂಬ ಕಾರಣಕ್ಕೆ ಈ 'ಎನ್ಕೌಂಟರ್' ಗಳನ್ನು ನಡೆಸಿದ ಪೋಲೀಸ್ ಅಧಿಕಾರಿಗಳ ಪರವಾಗಿ ಹಿಂದೂ ಸಂಘಟನೆಗಳ ಪ್ರಚಾರಾಂದೋಲನ! ಈ ಪ್ರಕರಣಗಳ ಹಿಂದಿರುವುದು ದೇಶಭಕ್ತಿಯಲ್ಲ, ಗುಜರಾತ್-ರಾಜಸ್ಥಾನಗಳ ರಿಯಲ್ ಎಸ್ಟೇಟ್-ಗ್ರಾನೈಟ್ ಉದ್ಯಮಗಳ ತಿಮಿಂಗಿಲಗಳು ತಮ್ಮ ದುರ್ವ್ಯವಹಾರಗಳ ರಕ್ಷಣೆಗಾಗಿ ಪೋಲೀಸರಿಗೆ ಕೊಟ್ಟ ಸುಪಾರಿ ಎಂಬುದು ಕ್ರಮೇಣ ಸ್ಪಷ್ಟವಾಗುತ್ತಿದ್ದರೂ, ಈ ಪ್ರಕರಣದ ರೂವಾರಿ ಹಾಗೂ ಕೋಟ್ಯಾಂತರ ರೂಪಾಯಿಗಳ ಅಕ್ರಮ ಆಸ್ತಿ ಗಳಿಸಿರುವ ಗುಜರಾತ್ ಪೋಲೀಸ್ ಅಧಿಕಾರಿ ವನ್ಙಾರನ ಪರ ಅವನ ಜಾತಿ ಸಮುದಾಯದವರಿಂದ ಪ್ರತಿಭಟನೆ!
ಕೊಲ್ಲಾಪುರದಲ್ಲಿ ಮತಾಂತರದಲ್ಲಿ ತೊಡಗಿದ್ದರೆಂದು ಹೇಳಲಾದ ಇಬ್ಬರು ಕ್ರೈಸ್ತ ಪಾದ್ರಿಗಳ ಮೇಲೆ ರಕ್ತಸಿಕ್ತವಾದ ಹಲ್ಲೆ. ಪೋಲೀಸ್ ನಿಷ್ಕ್ರಿಯತೆ ಸೇರಿದಂತೆ, ಪ್ರಕರಣದ ಬಗ್ಗ್ಗೆ ಮಹಾರಾಷ್ಟ್ರ ಸರ್ಕಾರದಿಂದ ತನಿಖೆಗೆ ಆಜ್ಞೆ!
ಮಹಿಳೆಯರನ್ನು ಅಕ್ರಮವಾಗಿ ವಿದೇಶಗಳಿಗೆ ಸಾಗಿಸುವ ದಂಧೆಯಲ್ಲಿ, ತಮ್ಮ ಸಭೆಗಳಲ್ಲಿ 'ಮಾತೆಯರಿಗೇ ಪ್ರತ್ಯೇಕ ಸ್ಥಳ ಕಾದಿರಿಸುವ' ಸಂಘ ಪರಿವಾರದ ಪಕ್ಷವೂ ಸೇರಿದಂತೆ ನಾಲ್ಕಾರು ಪಕ್ಷಗಳಲ್ಲಿ ಹರಡಿ ಹೋಗಿರುವ ಸಂಸತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರೇ ಭಾಗಿಯಾಗಿ; ವಿಚಾರಣೆ ಮುಂದುವರೆದಂತೆ ಒಬ್ಬೊಬ್ಬರೇ ಪೋಲೀಸರಿಗೆ ಶರಣು!
ತಮಿಳ್ನಾಡಿನ ಮಧುರೈನಲ್ಲಿ, ಅಲ್ಲಿನ ಮುಖ್ಯಮಂತ್ತಿಯ ಕುಟುಂಬ ರಾಜಕಾರಣದ ವೈಶಮ್ಯದಿಂದಾಗಿ, ಪ್ರತಿಕೂಲ ರಾಜಕೀಯ ಸಮೀಕ್ಷೆಯ ನೆಪದಲ್ಲಿ ಪತ್ರಿಕೆಯೊಂದರ ಮೇಲೆ ದಾಳಿ, ಹಲವರ ಮರಣ! ದಕ್ಷ ಕೇಂದ್ರ ಮಂತ್ರಿಯೊಬ್ಬರ ರಾಜಕೀಯ ಬಲಿ!
ಕರ್ನಾಟಕಕ್ಕೆ ಬಂದರೆ, ನಮ್ಮ ಜಲ ಸಂಪನ್ಮೂಲ ಮಂತ್ರಿ ಕೆ.ಎಸ್.ಈಶ್ವರಪ್ಪನವರಿಂದ ಗೋಹತ್ಯೆ ಮಾಡಿದವರ ಕೈ ಕತ್ತರಿಸಲು ಕರೆ! ನಂತರದಲ್ಲೇ, ಅದಕ್ಕೆ ಅವಕಾಶ ಮಾಡಿಕೊಡುವ ಕಾನೂನು ಮಾಡಲು ಸಲಹೆ ಮಾತ್ರ ನೀಡಿದ್ದಾಗಿ ಸ್ಪಷ್ಟನೆ!
ಜಾತಿ ಆಧಾರದ ಮೇಲೆ ಊಟದ ವ್ಯವಸ್ಥೆ ಮಾಡಿದ್ದ ಮತ್ತು ಗೋಮೂತ್ರ ಸರ್ವರೋಗ ನಿವಾರಿಣಿ ಎಂದು ವೈಜ್ಞಾನಿಕವಾಗಿ ಸಿದ್ಧವಾಗಿದೆ ಎಂದು ಹುಸಿ ಘೋಷಣೆ ಮಾಡಿ, ದನಗಳ ಹೆಸರಲ್ಲಿ ಜನರನ್ನು ಮರಳು ಮಾಡಿದ 'ವಿಶ್ವ ಸಮ್ಮೇಳನ'ವೊಂದಕ್ಕೆ ನಮ್ಮ ಸರ್ಕಾರದಿಂದ ಎರಡು ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣದ ಕೊಡುಗೆ! ನಮ್ಮ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತಿಗಳ ಪ್ರಕಾರ, ಸರ್ಕಾರ ಮಾಡಲಾಗದ ಕೆಲಸಗಳನ್ನು ಮಠ ಮಾನ್ಯಗಳು ಮಾಡುತ್ತಿವೆ! ಎಂತಹ ತಪ್ಪೊಪ್ಪಿಗೆ! ಅಥವಾ...ವ್ಯಂಗ್ಯ?
ಈ ಟೀಕೆಗಳಿಂದ ಕೆರಳಿದ ಯಡಿಯೂರಪ್ಪನವರಿಂದ ಈಗ ಸರ್ಕಾರಿ ಖಜಾನೆ ತಮ್ಮ ಅಥವಾ ತಮ್ಮ ಪಕ್ಷದ ಖಾಸಗಿ ಆಸ್ತಿಯೆಂಬಂತೆ, ಮತ್ತೆ ಆ ಮಠಕ್ಕೆ ಹತ್ತು ಕೋಟಿ ರೂಪಾಯಿ ಕೊಟ್ಟೇನು ಎಂಬ ಠೇಂಕಾರದ ಮಾತು!
ಕಂಬಾಲಪಲ್ಲಿ ದೌರ್ಜನ್ಯ ಪ್ರಕರಣದಲ್ಲಿ ತೀರ್ಪು ಬಂದು ತಿಂಗಳುಗಳು ಕಳೆದಿದ್ದರೂ, ಸರ್ಕಾರದಿಂದ ಮೇಲ್ಮನವಿಯ ಸುಳಿವಿಲ್ಲ. ಆದರೆ ಕಾಕತಾಳೀಯವೆಂಂತೆ, ರಾಜ್ಯದ ವಿವಿಧೆಡೆ ಸವರ್ಣೀಯರು ಮತ್ತು ಅಸ್ಪೃಶ್ಯರ ನಡುವೆ ಘರ್ಷಣೆಗಳ ಸ್ಫೋಟ!. ಕೆಲವೆಡೆ, ಅಸ್ಪ್ರಶ್ಯರಿಗೆ ಬಹಿಷ್ಕಾರ...
ಬೆಂಗಳೂರಲ್ಲಿ ಭೂಮಿಯ ಬೆಲೆ ಚಿನ್ನದ ಬೆಲೆಯನ್ನೂ ಮೀರಿ ಬೆಳೆದಿದ್ದು, ಇಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಪ್ರಭಾವಿ ವ್ಯಕ್ತಿಗಳಿಂದಲೇ ಒತ್ತುವರಿಯಾಗಿದೆಯೆಂದು ಸದನ ಸಮಿತಿಯೇ ವರದಿ ನೀಡಿದ್ದರೂ, ಏನೂ ಮಾಡದ ಸರ್ಕಾರ; ಸಕ್ರಮಕ್ಕಾಗಿ ಕಾಯುತ್ತಿರುವ ಬಡವರ ಒತ್ತುವರಿ ಭೂಮಿಯನ್ನಷ್ಟೇ ಆಯ್ದು ಹರಾಜು ಹಾಕುತ್ತಿದೆ...ಈ ಬಗ್ಗೆ ಸರ್ಕಾರ, 'ಪರಿಶೀಲಿಸೋಣ' ಎಂದಷ್ಟೇ ಪ್ರತಿಕ್ರಿಯಿಸುತ್ತಿದೆ!
ಸ್ವತಃ ಮುಖ್ಯಮಂತ್ರಿಯೇ ವಿಶ್ವವಿದ್ಯಾಲಯವೊಂದರ ಆವರಣಕ್ಕೆ ನುಗ್ಗಿ, ಮುಷ್ಕರ ನಿರತ ಉದ್ಯೋಗಿಗಳನ್ನು ಉಪಕುಲಪತಿಯ ವಿರುದ್ಧ ಎತ್ತಿಕಟ್ಟಿದ್ದನ್ನು ಎಲ್ಲಿಯಾದರೂ ಕೇಳಿದ್ದೀರಾ? ನಮ್ಮ ಯುವ ಮುಖ್ಯಮಂತ್ರಿ ಅದನ್ನು ಮಾಡಿದ್ದಾರೆ. ಏಕೆಂದರೆ, ಇದು ಕುಲ ಬಾಂಧವರ ಹಿತದ ಪ್ರಶ್ನೆ! ಈ ಕುಲ ಬಾಂಧವರೆಲ್ಲ, ಈ ಹಿಂದಿನ ಕುಲಬಾಂಧವನೊಬ್ಬ ಉಪಕುಲಪತಿಯಾಗಿ ಮಾಡಿದ ಅಕ್ರಮ ನೇಮಕಾತಿಯ ಲಾಭ ಪಡೆದವರು. ಅದನ್ನು ಮಾನ್ಯ ಮಾಡಲು ನಿರಾಕರಿಸಿರುವ ಸದ್ಯದ ಉಪಕುಲಪತಿಯನ್ನು ಬೆಂಬಲಿಸಿಬೇಕಾದ ನಮ್ಮ ಮುಖ್ಯಮಂತ್ರಿ, ಹೋಗಿ ಹೆದರಿಸಿ ಬಂದಿದ್ದಾರೆ. ಇದರ ವಿರುದ್ಧ ಯಾವ ಶಿಕ್ಷಣ ತಜ್ಞನಿಂದಲೂ ಸೊಲ್ಲಿಲ್ಲ!
-ಇದು ಒಂದು ವಾರದ ಭಾರತ! ಇದು ಸರಿ ಸುಮಾರಾಗಿ, ಪ್ರತಿ ವಾರದ ಪ್ರಸ್ತುತ ಭಾರತ ಕೂಡ. ಈ ಭಾರತ ಈಗ ಅಭೂತಪೂರ್ವವಾದ ಶೇ.10ರ ದರದೊಂದಿಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಮಾಧ್ಯಮಗಳು ಬೊಬ್ಬೆ ಹಾಕುತ್ತಲೇ ಇವೆ. ಆದರೆ, ಮೇಲೆ ಸಂಕ್ಷಿಪ್ತವಾಗಿ ಚಿತ್ರಿಸಿರುವ ಒಂದು ವಾರದ (ಪೂರ್ತಿ ತಲೆ ಕೆಟ್ಟಂತಿರುವ) ಭಾರತವನ್ನು ಗಮನಿಸಿ ನೀವೇನಾದರೂ, ಮುನ್ನಡೆಯುತ್ತಿರುವುದು ಯಾವ ಕಡೆಗೆ ಮತ್ತು ಯಾಕೆ ಎಂದು ಗಾಬರಿಯಿಂದ, ಇಂತಹ ಮುನ್ನಡೆಯ ಬಗ್ಗೆ ಅನುಮಾನ ತಾಳುವಿರಾದರೆ; ನೀವು ಹುಚ್ಚರೇ ಸರಿ ಎನ್ನುತ್ತದೆ, ಅದೇ ವಾರದಲ್ಲಿನ 'ಪ್ರಜಾವಾಣಿ' ಪತ್ರಿಕೆಯ ದಿನವಹಿ ಎಸ್.ಎಂ.ಎಸ್. ಸಮೀಕ್ಷೆಯೊಂದು. ಈ ಸಮೀಕ್ಷೆಯಲ್ಲಿ ಕೇಳಲಾದ, 'ಬಿಸಿಯಾಗುತ್ತಿರುವ ಧರೆ ಬಗ್ಗೆ ನೀಡಲಾಗುತ್ತಿರುವ ಮಾಹಿತಿ ಅತಿ ರಂಜಿತವೇ?' ಎಂಬ ಪ್ರಶ್ನೆಗೆ( ಈ ಪ್ರಶ್ನೆಯೇ ಎಷ್ಟು ಬೇಜವಾಬ್ದಾರಿಯದು ಎಂಬುದನ್ನೂ ಗಮನಿಸಿ) ಪ್ರತಿಕ್ರಿಯಿಸಿರುವವರಲ್ಲಿ ಶೇ.80ರಷ್ಟು ಜನ 'ಹೌದು' ಎಂದು ಎಂದು ಉತ್ತರಿಸಿದ್ದಾರೆ! ಅಂದರೆ ನಮ್ಮ ಜನ( ಈ ಪ್ರಶ್ನೆಯನ್ನು ರೂಪಿಸಿದ ಪತ್ರಕರ್ತನು ಪ್ರತಿನಿಧಿಸುವ ನಮ್ಮ ಮಾಧ್ಯಮದವರೂ ಸೇರಿದಂತೆ!) ಈ ಅಭೂತಪೂರ್ವ 'ಪ್ರಗತಿ'ಯ ಎಂತಹ 'ಸುಖ'ದಲ್ಲಿ ಹೇಗೆ ಮೈ ಮರೆತಿದ್ದಾರೆಂದರೆ, ಅವರಿಗೆ ದೂರದ ಸಿಡಿಲಿನ ಶಬ್ದವಿರಲಿ, ಹತ್ತಿರದ ಬೆಂಕಿಯ ತಾಪವೂ ತಾಗದಾಗಿದೆ!
ಇನ್ನು ಏಳು ವರ್ಷಗಳಲ್ಲಿ ಜಗತ್ತಿನ ಜನತೆ ತನ್ನ ಜೀವನ ಶೈಲಿಯನ್ನು ಬದಲಿಸಿಕೊಂಡು-ಅಂದರೆ, ಬದುಕಿನ ವಿವಿಧ ರಂಗಗಳಲ್ಲಿನ ಪ್ರಸ್ತುತ ಇಂಧನ ಬಳಕೆಯ ರೀತಿ ನೀತಿಗಳನ್ನು ಪರಿಷ್ಕರಿಸಿಕೊಳ್ಳಬೇಕು. ಆ ಮೂಲಕ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು, ಕ್ರಮೇಣ ನಿಗದಿತ ಗತಿಯಲ್ಲಿ ತಗ್ಗಿಸಬೇಕು. ಇಲ್ಲದಿದ್ದಲ್ಲಿ, ಭೂಮಿ ಹಿಂದೆಂದೂ ಕಾಣದಂತಹ ಹವಾಮಾನ ಅಲ್ಲೋಲ ಕಲ್ಲೋಲಗಳಿಗೆ ಸಿಕ್ಕಿ, ಯಾವ ಜೀವ ಸಂತತಿಗೂ ಬದುಕಲು ಯೋಗ್ಯವಾದ ಜಾಗವಾಗಿ ಉಳಿಯಲಾರದು. ಹೀಗೆಂದು ಸ್ವತಃ ವಿಜ್ಞಾನಿಗಳೇ, ವಿಶ್ವ ಸಂಸ್ಥೆಯ ಮಾರ್ಗದರ್ಶನದಲ್ಲಿ ಏರ್ಪಾಡಾಗಿದ್ದ ಬ್ಯಾಂಕಾಕ್ ವಿಶ್ವ ಪರಿಸರ ಸಮ್ಮೇಳನದಲ್ಲಿ ವೈಜ್ಞಾನಿಕ ಪ್ರಯೋಗ ಹಾಗೂ ಸಮೀಕ್ಷೆಗಳ ಆಧಾರದ ಮೇಲೆ ನಿಷ್ಕರ್ಷಿಸಿ ಹೇಳಿದ್ದರೂ ನಾವು ನಂಬಲಾರದವರಾಗಿದ್ದೇವೆ! ಇದು ಹತ್ತು ವರ್ಷಗಳ ಹಿಂದೆ ಕ್ಯೂಟೋ ಸಮ್ಮೇಳನದಲ್ಲಿ ನೀಡಲಾಗಿದ್ದ ಸಲಹೆ ಹಾಗೂ ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಹೋಗಿರುವ ಜಗತ್ತಿಗೆ, ಈಗ ವಿಜ್ಞಾನಿಗಳು ನೀಡಿರುವ ಕೊನೆಯ ಎಚ್ಚರಿಕೆ. ಆದರೂ ನಾವು ಕೇಳಲು ನಿರಾಕರಿಸುತ್ತಿದ್ದೇವೆ... ಆಶ್ಚರ್ಯವೆಂದರೆ, ಯಾವ ವಿಜ್ಞಾನದ ಸುಖ ಫಲಗಳನ್ನು ಉಣ್ಣುತ್ತ ಈ ಆಧುನಿಕ ನಾಗರೀಕತೆಯನ್ನು ನಾವೂ ಸ್ವಾಗತಿಸಿದ್ದೆವೋ, ಆ ವಿಜ್ಞಾನವೇ ಇಂದು ಈ ನಾಗರೀಕತೆಗೆ ಕಡಿವಾಣ ಹಾಕಬೇಕೆಂದು ಬಾರಿ ಬಾರಿ ಹೇಳುತ್ತಿದ್ದರೂ, ಅದಕ್ಕೆ ಪ್ರತಿಸ್ಪಂದಿಸುವ ಶಕ್ತಿಯನ್ನೇ ನಾವಿಂದು ಕಳೆದುಕೊಂಡಿದ್ದೇವೆ. ಎಂತಹ ಅಂಗವಿಕಲತೆ ಇದು!
ಮನಸ್ಸನ್ನು ವಿಸ್ತರಿಸಬೇಕಾದ ವಿಜ್ಞಾನ, ಮನಸ್ಸನ್ನು ಮುಚ್ಚಿಬಿಡುವ ತಂತ್ರಜ್ಞಾನವಾಗಿ ಅವನತಿಗೊಳ್ಳುವ ಈ ದುರಂತವನ್ನೇ ಗಾಂಧೀಜಿ, ಆಧುನಿಕ ನಾಗರೀಕತೆಯ ಆಂತರಿಕ ದೌರ್ಬಲ್ಯವೆಂದು ಗುರುತಿಸಿ, ಅದರ ವಿರುದ್ಧ ಎಚ್ಚರಿಕೆ ನೀಡಿದ್ದು. ಆ ಎಚ್ಚರಿಕೆಯೇ ಇಂದು ಆಧುನಿಕ ಪರಿಭಾಷೆಯಲ್ಲಿ ಪರಿಸರದ ಪ್ರಶ್ನೆಯಾಗಿ ನಮ್ಮ ಮುಂದೆ ಪ್ರಸ್ತುತಗೊಳ್ಳುತ್ತಿದೆ. ಆದರೇನು, ಈ ನಾಗರೀಕತೆಯ ಸದ್ಯದ ನಾಯಕತ್ವ ವಹಿಸಿರುವ ಮತ್ತು ಧರೆಯ ಬಿಸಿಯೇರಿಕೆಗೆ ಬಹು ದೊಡ್ಡ ಕೊಡುಗೆ ನೀಡುತ್ತಿರುವ ದೇಶವಾದ ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಈಗಲೂ ಕೂಡ, 'ನನ್ನ ಜನ ತಮ್ಮ ಬದುಕಿನ ಶೈಲಿಯನ್ನು ಬದಲಿಸಿಕೊಳ್ಳಲು ಸಿದ್ಧರಿಲ್ಲ' ಎಂದು ಘೋಷಿಸುವ ಮೂಲಕ ಈ ನಾಗರೀಕತೆ ಮೂರ್ಖತನದ ಪರಮಾವಧಿಯನ್ನು ಮುಟ್ಟಿರುವ ಸೂಚನೆಯನ್ನು ನೀಡಿದ್ದಾರೆ. ಕ್ಯೂಟೋ ಸಮ್ಮೇಳನ ರೂಪಿಸಿದ ಪರಿಸರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿ ತಳೆದ ನಿಲವನ್ನು ಅಮೆರಿಕಾ ಬದಲಾಯಿಸಿಕೊಂಡಿಲ್ಲ. ಅಂದರೆ, 'ಇರಾಕ್ ಯದ್ಧ'ಗಳಿಗೆ ಸದ್ಯಕ್ಕಂತೂ ಕೊನೆಯಿಲ್ಲ!
ಇದು ಮಾನವತೆ ಪ್ರವೇಶಿಸಿರುವ ಪಾತಾಳ ಲೋಕ. ಸುಖದ ಅಮಲಿನಲ್ಲಿ ಅಥವಾ ನಿರೀಕ್ಷೆಯಲ್ಲಿ ಎಲ್ಲ ಸೂಕ್ಷ್ಮಗಳನ್ನೂ, ಸಂವೇದನಾಶೀಲತೆಯನ್ನೂ ಕಳೆದುಕೊಳ್ಳುತ್ತಿರುವ ಜನಾಂಗವೊಂದು ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿರುವ ದುರಂತ ಚಿತ್ರವಿದು. ಇದಕ್ಕೆ ಕಾರಣ, ಸಮಾಜದ ಒಳಚೇತನವಾದ 'ಧಾರ್ಮಿಕತೆ' ಎನ್ನುವುದು ವಿಕ್ಷಿಪ್ತಗೊಳ್ಳುತ್ತಿರುವುದೇ ಆಗಿದೆ. ಮನುಷ್ಯನ ಎಲ್ಲ ಸಹಜ ದೌರ್ಬಲ್ಯಗಳ ವಿರುದ್ಧ ಮನಸ್ಶಾಕ್ಷಿಯ ರೂಪದಲ್ಲಿ ಅರಳಿಕೊಳ್ಳಬೇಕಾದ ಧರ್ಮವಿಂದು ಆಧುನೀಕರಣದ ಒತ್ತಡಗಳಿಗೆ ಸಿಕ್ಕಿ, ಕೇವಲ ವಿಧಿ-ನಿಷೇಧಗಳ ಕರ್ಮಕಾಂಡವಾಗಿ ಕ್ರಿಯಾಶೀಲವಾಗತೊಡಗಿದೆ. ಸಿರಿವಂತರ ಸಿರಿ ಹೆಚ್ಚಿದಷ್ಟೂ ಈ ಕರ್ಮಕಾಂಡ ಅವರ ಪಾಪಪ್ರಜ್ಞೆಯ ಪ್ರತೀಕವಾಗುತ್ತಾ ಹಲವು ಹಿಂಸಾತ್ಮಕ ರೂಪಗಳನ್ನು ಪಡೆಯುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಅಮೇರಿಕಾದಂತಹ ಅಮರಿಕಾವೇ ಇಂದು 'ನವ ಸಂಪ್ರದಾಯವಾದಿ' (Neo conservatives)ಗಳ ಕೈವಶವಾಗಿ, ಅಮೆರಿಕನ್ ಸರ್ಕಾರದ ನೀತಿ ನಿರ್ಧಾರಗಳ ಹಿಂದೆ ಅಲ್ಲಿನ ಚರ್ಚ್ನ ಕೈವಾಡ ಎದ್ದು ಕಾಣುತ್ತಿದೆ. ಇನ್ನು ಮಸ್ಲಿಂ ರಾಷ್ಟ್ರಗಳ ಕಥೆ ಹೊಸದೇನೂ ಅಲ್ಲ. ಹೊಸದು ಅಂದರೆ, ಉದಾರವಾದಿ ಮಸ್ಲಿಂ ಸಮಾಜಗಳನ್ನು ಸಲಹುತ್ತಿದ್ದ ಟರ್ಕಿ, ಈಜಿಪ್ತ್, ಇರಾಕ್ ಹಾಗೂ ಬಂಗ್ಲಾದೇಶಗಳಲ್ಲೂ ಈಗ ಮತೀಯ ಮೂಲಭೂತವಾದ ದೊಡ್ಡ ಪ್ರಮಾಣದಲ್ಲಿ ತಲೆ ಎತ್ತುತ್ತಿದೆ. ದುಃಖದ ಸಂಗತಿಯೆಂದರೆ, ಭಾರತವೂ ಇದೇ ಹಾದಿಯಲ್ಲಿ ನಡೆಯುವ ಆತಂಕ ಈಗ ಎದುರಾಗಿದೆ. ಈ ಬರಹದ ಮೊದಲಲ್ಲಿ ನೀಡಿರುವ ನಮ್ಮ ಇಂದಿನ ದೈನಂದಿನ ಬದುಕಿನ ವಿವರಗಳ ಪರೋಕ್ಷ ಸಂದೇಶ ಇದೇ ಆಗಿದೆ.
ಭಾರತದ ಧರ್ಮ ಇತರ ಧರ್ಮಗಳ 'ಹಾವಳಿ'ಯನ್ನು ಎದುರಿಸಲು ಹೋಗಿ, ತಾನೇ ಅವುಗಳಂತಾಗುವ ದುರಂತವನ್ನೀಗ ಎದುರಿಸುತ್ತಿದೆ. ಇತರ ಧರ್ಮಗಳ ಈ ಹಾವಳಿಗೆ, ತಾನು ತನ್ನೆಲ್ಲ ಆಧ್ಯಾತ್ಮಿಕತೆಯನ್ನು ಕಳೆದುಕೊಂಡಿರುವುದೇ ಕಾರಣವಾಗಿದೆ ಎಂಬ ಜ್ಞಾನೋದಯ ಅದಕ್ಕಿನ್ನೂ ಆಗಿಲ್ಲ. ಆಗುವಂತೆಯೂ ತೋರುತ್ತಿಲ್ಲ, ಅದರ ನಾಯಕತ್ವದ ಸದ್ಯದ ಶಸ್ತ್ರಾಸ್ತ್ರ ಸ್ವರೂಪ ನೋಡಿದರೆ! ಇದರ-ಇಂತಹ ವಾತಾವರಣದ- ಪರಿಣಾಮಗಳು ಇಂದು ನಮ್ಮ ಶಾಸಕಾಂಗವಿರಲಿ-ಅದನ್ನು ಹೇಗೋ ಚುನಾವಣೆಗಳ ಮೂಲಕ ನಿವಾರಿಸಿಕೊಳ್ಳಬಹುದು- ನಮ್ಮ ಕಾರ್ಯಾಂಗ(ವಿಶೇಷವಾಗಿ ಪೋಲೀಸ್ ಇಲಾಖೆ) ಮತ್ತು ಮುಖ್ಯವಾಗಿ ನ್ಯಾಯಾಂಗದ ಮೇಲೆ ಆಗುತ್ತಿರುವ ರೀತಿ ನೋಡಿದರೆ. ನಾವು ಹೆಚ್ಚು ಹೆಚ್ಚು ಆಧುನಿಕವಾಗುತ್ತಾ ಹೋದಂತೆ ಹೇಗೆ ಹೆಚ್ಚೆಚ್ಚು ಅನಾಗರೀಕವಾಗುತ್ತಾ ಹೋಗುತ್ತಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಪೋಲೀಸ್ ಹಾಗೂ ನ್ಯಾಯಾಂಗದ ಕೆಳ ಹಂತಗಳಿಗಷ್ಟೇ ಹಬ್ಬಿರುವ ಧಾರ್ಮಿಕ ವಿಕ್ಷಿಪ್ತತೆಯ ಈ ರೋಗ ಮೇಲಿನ ಹಂತಗಳಿಗೂ ತಲುಪಲು ಬಹು ಕಾಲ ಬೇಕಾಗಲಾರದು, ಪರಿಸ್ಥಿತಿ ಹೀಗೇ ಮುಂದುವರೆದರೆ. ಅಂದರೆ ಜನತೆ, ಮಾರುಕಟ್ಟೆ-ಆಧುನಿಕತೆಯ ಅಮಲಿನಲ್ಲಿ ತನ್ನ ಪಜ್ಞೆಯನ್ನೇ ಕಳೆದುಕೊಳ್ಳುತ್ತಾ, ಕೊನೆಗೆ ಭೂಮಿಯನ್ನೇ ಕಳೆದುಕೊಳ್ಳುವ ಸ್ಥಿತಿಯನ್ನು ಆಹ್ವಾನಿಸುವ ದಾರಿಯಲ್ಲಿ ನಡೆಯುತ್ತ್ತಾ ಹೋದರೆ!
ಈ ನಡಿಗೆಯ ದಿಕ್ಕನ್ನು, ರಾಜಕೀಯ ಇಚ್ಛಾಶಕ್ತಿಯಿದ್ದರೆ ಬದಲಾಯಿಸಬಹುದು ಎಂಬ ವಿಶ್ವಾಸವನ್ನು ಹುಟ್ಟಿಸುವಂತಿದೆ, ಉತ್ತರ ಪ್ರದೇಶದ ಇತ್ತೀಚಿನ ಚುನಾವಣೆಯ ಫಲಿತಾಂಶಗಳು. ಇಲ್ಲಿ ನಾನು ಬಿ.ಎಸ್.ಪಿ.ಯ ವಿಜಯದ ಬಗ್ಗೆ ಹೇಳುತ್ತಿಲ್ಲ. ಏಕೆಂದರೆ, ಮನುಷ್ಯನ ಪ್ರಜ್ಞೆ ತಪ್ಪಿಸುವ ಆಧುನಿಕ ನಾಗರೀಕತೆ ಕುರಿತಂತೆ ಬಿ.ಎಸ್.ಪಿ. ನಾಯಕರ ನಿಲುವು-ಅವರು ಬುದ್ಧನಿಗೆ ನಮಿಸುವವರಾದರೂ, ಅದು ಬರೀ ಪ್ರತೀಕಾರಾರ್ಥವಾದುದಾಗಿರುವುದರಿಂದ-ಇತರ ಪಕ್ಷಗಳ ನಾಯಕರಿಗಿಂತ ವಿಭಿನ್ನವಾಗಿರುವಂತೆ ಕಾಣುತ್ತಿಲ್ಲ. ಸಿರಿ ಸಂಪತ್ತನ್ನು ಕುರಿತಂತೆ ಅವರ ನಾಯಕಿ ಪದೇ ಪದೇ ಪ್ರದರ್ಶಿಸುತ್ತಿರುವ ದೌರ್ಬಲ್ಯವೇ ಇದಕ್ಕೆ ಸಾಕ್ಷಿಯಾಗಿದೆ.. ನಿಜ, ಬಿ.ಎಸ್.ಪಿ. ಸದ್ಯದ ಎಲ್ಲ ರಾಜಕೀಯ ಪಕ್ಷಗಳು ಪ್ರತಿನಿಧಿಸುವ ಅವಾಂತರಕಾರಿ ಪರಿಸ್ಥಿತಿಗೆ ಪರ್ಯಾಯವಲ್ಲದಿರಬಹುದು; ಆದರೆ ಕಣ್ಣಿಗೆ ರಾಚುವಂತಹ ದೊಡ್ಡ ಪ್ರತಿಕ್ರಿಯೆಯಂತೂ ಹೌದು. ಅಷ್ಟೇ ಅಲ್ಲ, ಹೀಗೇ ಎಚ್ಚರ ತಪ್ಪುತ್ತಾ ಹೋದರೆ ಎಂತಹ ಪರ್ಯಾಯ ರೂಪುಗೊಳ್ಳಬಹುದು ಎಂಬುದರ ಎಚ್ಚರಿಕೆ ಗಂಟೆ ಕೂಡಾ ಆಗಿರಬಹುದು!
ಅಂದ ಹಾಗೆ : ಭಾರತದಂತಹ ದೇಶಕ್ಕೆ, ಈ 'ಸುಖ'ದ ಬೆನ್ನು ಹತ್ತುವ ಆಧುನಿಕ ನಾಗರೀಕತೆಯ ಕುಲದೇವತೆ ಎಂದರೆ ಇಂಗ್ಲಿಷ್. ಈ ಪರಿಣಮಿಸಿರುವ ಇಂಗ್ಲಿಷ್ಮ್ಮಳ ಮಹಿಮೆಯನ್ನು ಕುರಿತ ಆಧುನಿಕ ಪುರಾಣ ರಚನೆ ನಮ್ಮಲ್ಲಿ ಎಂತಹ ಆಳದ ಮೌಢ್ಯವನ್ನು ಸೃಷ್ಟಿಸಿದೆ ಎಂದರೆ, ನಮ್ಮ ಜನಕ್ಕೆ ಸಾವಿರಾರು ವರ್ಷಗಳ ಕಾಲ ಬೆಳೆದು ಬಾಳುತ್ತಾ ಬಂದಿರುವ ತಮ್ಮ ಮಾತೃಭಾಷೆಯ ಶಕ್ತಿ-ಸಾಮಥ್ರ್ಯಗಳ ಬಗ್ಗೆ ನಂಬಿಕೆಯೇ ಹೊರಟು ಹೋಗಿದೆ. ಆದರೆ, ತನ್ನ ಪರಂಪರೆಯ ಬಗೆಗೇ ಹೀಗೆ ಸುಲಭದಲ್ಲಿ ನಂಬಿಕೆ ಕಳೆದುಕೊಂಡ ಜನರ ಮಧ್ಯೆ ಆಸೆ ಹುಟ್ಟಿಸುವಂತೆ, ಕೆಲವರಾದರೂ ಈ ಮೌಢ್ಯವನ್ನು ಪ್ರಶ್ನಿಸುವ ದುಸ್ಸಾಹಸ ಮಾಡಿ ಗೆದ್ದ ಸಂತೋಷವನ್ನು ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ! ಇಂತಹ ಸಂಭ್ರಮದ ಸುದ್ದಿ ಇದೀಗ ಹಾಸನದಿಂದ ಬಂದಿದೆ: ಗೆಳೆಯ ಆರ್.ಪಿ.ವೆಂಕಟೇಶ ಮೂರ್ತಿಯ ಹಿರಿ ಮಗಳು ಲಹರಿ ತನ್ನ ಇಡೀ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಮುಗಿಸಿ, ಸಿ.ಇ.ಟಿ.ಯಲ್ಲಿ ಸರ್ಕಾರಿ ವೈದ್ಯಕೀಯ ಸೀಟು ಗಿಟ್ಟಿಸಿ ಇದೀಗ ತನ್ನ ಎಂ.ಬಿ.ಬಿ.ಎಸ್. ಪದವಿಯನ್ನು ರಾಜ್ಯಕ್ಕೇ ಎರಡನೇ ಸ್ಥಾನ ಪಡೆದು ಮುಗಿಸಿದ್ದಾಳೆ. ಅಭಿನಂದನೆ ಲಹರಿ ಮಗಳೇ!
ಅವಳನ್ನು ಶಾಲೆಗೆ ಸೇರಿಸುವಾಗ 'ನನ್ನ ಮಗಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಿ ಹಾಳು ಮಾಡಬೇಡಿ' ಎಂದು ಗೋಳಿಟ್ಟು ರಂಪ ಎಬ್ಬಿಸಿದ್ದ ಅವಳಮ್ಮ ಜಯಂತಿ ಕೂಡಾ ಈಗ ಕನ್ನಡದ ಹೆಮ್ಮೆಯ ಅಮ್ಮ! ಆಗ ಈ ರಂಪವನ್ನೆಲ್ಲ ಸ್ವಯಂ ನಂಬಿಕೆಯ ಬಲದಿಂದ ಮೆಟ್ಟಿ ನಿಂತ ವೆಂಕಟೇಶ ಮೂರ್ತಿ ಈಗ ಈ ಖುಷಿಯ ಸ್ಫೂರ್ತಿಯಲ್ಲಿ, ತಾವು ಸಂಪಾದಕರಾಗಿರುವ 'ಜನತಾ ಮಾಧ್ಯಮ' ಪತ್ರಿಕೆಯಲ್ಲಿ ತನ್ನ ಮಗಳಂತೆಯೇ ಕನ್ನಡ ಮಾಧ್ಯಮದಲ್ಲೇ ಶಾಲೆ ಓದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸ್ಥಾನ-ಮಾನ ಗಳಿಸಿರುವವರ ದೊಡ್ಡ ಪಟ್ಟಿಯೊಂದನ್ನೇ ಪ್ರಕಟಿಸಿದ್ದಾರೆ. ಆದರೆ, ಇದರಿಂದೆಲ್ಲ ಕಿಂಚಿತ್ತೂ ವಿಚಲಿತರಾಗದ ನಮ್ಮ ಬಹಳಷ್ಟು ತಂದೆ ತಾಯಿಗಳು, 'ಇದು ಎಲ್ಲ ಮಕ್ಕಳಿಂದಲೂ ಸಾಧ್ಯವಿಲ್ಲ' ಎಂದೆನ್ನುತ್ತಾ, ತಾವು ಹೆರುತ್ತಿರುವುದು ದಡ್ಡ ಮಕ್ಕಳನ್ನು ಮತ್ತು ಇಂಗ್ಲಿಷ್ ಶಿಕ್ಷಣವಿರುವುದು ದಡ್ಡರಿಗೆ ಎಂದು ಪರೋಕ್ಷವಾಗಿ ಸೂಚಿಸಿದರೆ ಆಶ್ಚರ್ಯವೇನಿಲ್ಲ!