ಇದು ಸಂಪೂರ್ಣ 'ಸಮ್ಮಿಶ್ರ ಲೂಟಿ' ರಾಜಕಾರಣ...
ಇದು ಸಂಪೂರ್ಣ 'ಸಮ್ಮಿಶ್ರ ಲೂಟಿ' ರಾಜಕಾರಣ...
ಬಹುಶಃ ಈ ಅಂಕಣವನ್ನು ನೀವು ಓದುವ ಹೊತ್ತಿಗೆ ನಮ್ಮ ಹೊಸ ರಾಷ್ಟ್ರಪತಿ ಯಾರೆಂದು ಗೊತ್ತಾಗಿರುತ್ತದೆ. ಪ್ರತಿಭಾ ಪಾಟೀಲ್ ಗೆಲ್ಲುವ ಅಭ್ಯರ್ಥಿಯೆಂದು ಸಮೂಹ ಮಾಧ್ಯಮಗಳು ಈಗಾಗಲೇ ಮತಗಳ ಲೆಕ್ಕಾಚಾರ ಹಾಕಿ ಘೋಷಿಸಿವೆ. ಮಾಯಾವತಿಯ ವಿರುದ್ಧ ತಾಜ್ ಹಗರಣದ ಮೊಕದ್ದಮೆ ವಿಚಾರಣೆಗೆ ರಾಜ್ಯಪಾಲರು ಅನುಮತಿ ನಿರಾಕರಿಸುವಂತೆ ನೋಡಿಕೊಳ್ಳುವ ಮೂಲಕ ಬಿ.ಎಸ್.ಪಿ. ಬೆಂಬಲವನ್ನೂ ಕಾಂಗ್ರೆಸ್ ಈಗಾಗಲೇ ಖಚಿತಪಡಿಸಿಕೊಂಡಿರುವುದರಿಂದ ಮತ್ತು ತೃತೀಯ ರಂಗದ ಪಕ್ಷಗಳು ಈ ಚುನಾವಣೆಯಲ್ಲಿ ಮತ ಚಲಾಯಿಸದೇ ಇರುವ ತೀರ್ಮಾನವನ್ನು ಕೈಗೊಂಡಿರುವುದರಿಂದ, ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಪಾಟೀಲ್ ಗೆಲವು ಇನ್ನಷ್ಟು ನಿಚ್ಚಳವಾಗಿರುವಂತೆ ತೋರುತ್ತಿದೆ. ಆದರೆ, ಜಾತಿ ಲೆಕ್ಕಾಚಾರವೂ ಈ ಬಾರಿಯ ಚುನಾವಣೆಯಲ್ಲಿ ಚಾಲನೆಗೊಂಡಿರುವುದರಿಂದ, ಅಮರ್ ಸಿಂಗ್ರಂತಹ ಪ್ರಳಯಾಂತಕ ರಾಜಕೀಯ ದಲ್ಲಾಳಿಗಳು ನಟವರ್ ಸಿಂಗ್ರಂತಹ ಅತಂತ್ರ ರಾಜಕಾರಣಗಳ ಮೂಲಕ ತೆರೆಮರೆಯಲ್ಲಿ ಶೆಖಾವತ್ ಪರ ಕ್ಷತ್ರಿಯ ರಾಜಕಾರಣ ಮಾಡುತ್ತಿರುವ ಸೂಚನೆಗಳು ದೊರಕಿದ್ದು; ಅಂತಿಮ ಫಲಿತಾಂಶ ಏನೇ ಆದರೂ, ಈವರೆಗೆ ತನ್ನ ಪಾವಿತ್ರ್ಯ ಉಳಿಸಿಕೊಂಡು ಬಂದಿದ್ದ ರಾಷ್ಟ್ರಪತಿ ಚುನಾವಣೆಯೂ ಈ ಬಾರಿ ಮಲಿನಗೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಜೊತೆಗೆ, ಹಾಲಿ ರಾಷ್ಟ್ರಪತಿ ಕಲಾಂ ಅವರು ಮೊದಲು ತಾವು ಎರಡನೇ ಅವಧಿಗೆ ಅಭ್ಯರ್ಥಿಯಲ್ಲ ಎಂದು ಘೋಷಿಸಿ, ನಂತರ ಗೆಲುವು ಖಚಿತವಾದರೆ ಸ್ಪರ್ಧಿಸಲು ಸಿದ್ಧ ಎಂಬ ಸಮಯ ಸಾಧಕ ಹೇಳಿಕೆ ನೀಡಿ, ವಾತಾವರಣವನ್ನು ಹದಗೆಡಿಸುವಲ್ಲಿ ತಮ್ಮ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ! ಹಾಗೆ ನೋಡಿದರೆ, ರಾಷ್ಟ್ರಪತಿ ಸ್ಥಾನಕ್ಕೆ ಈ ಚುನಾವಣೆಗಿಂತ ತುರುಸಿನ ಸ್ಪರ್ಧೆ ಈ ಹಿಂದೆ ನಡೆದಿದೆಯಾದರೂ - 1967ರಲ್ಲಿ ಝಕೀರ್ ಹುಸೇನರ ವಿರುದ್ಧ ಸುಬ್ಬರಾವ್ ಹಾಗೂ 1969ರಲ್ಲಿ ಸಂಜೀವ ರೆಡ್ಡಿಯವರ ವಿರುದ್ಧ ವಿ.ವಿ.ಗಿರಿ - ಈ ಬಾರಿಯಷ್ಟು ಜಿಗುಪ್ಸೆಕರ ಪ್ರಚಾರ ಎಂದೂ ನಡೆದಿರಲಿಲ್ಲ. ಆಡಳಿತ ಅದಕ್ಷತೆ, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ಹಿಡಿದು ವ್ಯಭಿಚಾರದವರೆಗೆ ಅನೇಕ ರೀತಿಯ ಆಪಾದನೆಗಳು ಈ ಪ್ರಚಾರದಲ್ಲಿ ಸೇರಿಕೊಂಡು; ಯಾರೇ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿ, ಅವರನ್ನು ರಾಷ್ಟ್ರ ಅನುಮಾನದಿಂದ ನೋಡುವ ಪರಿಸ್ಥಿತಿಯನ್ನು ನಮ್ಮ ರಾಜಕೀಯ ಪಕ್ಷಗಳು ಸೃಷ್ಟಿಸಿವೆ.
ಈ ಪರಿಸ್ಥಿತಿಗೆ ಮೂಲ ಕಾರಣ ಕಾಂಗ್ರೆಸ್ ಪಕ್ಷದ ಆಂತರಿಕ ಅಭದ್ರತೆಯ ರಾಜಕಾರಣವೇ ಆಗಿದೆ. ರಾಷ್ಟ್ರಪತಿ ಎನ್ನುವುದು ರಾಷ್ಟ್ರ ಜೀವನದ ಮೂರು ಮುಖ್ಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಲ್ಲದೆ, ರಾಷ್ಟ್ರ ರಕ್ಷಣೆಯ ಹೊಣೆ ಹೊತ್ತಿರುವ ಸೇನೆಯ ಮೂರೂ ಪಡೆಗಳ ಮೇಲೆ ಆಧಿಪತ್ಯ ಹೊಂದಿರುವ ರಾಷ್ಟ್ರದ ಅತ್ಯುನ್ನತ ಸ್ಥಾನ. ಅಧಿಕಾರ ಚಲಾವಣೆಯ ಅಧಿಕಾರಗಳು ಸೀಮಿತವಾಗಿದ್ದರೂ,(ಇದಕ್ಕೆ ಕಾರಣಗಳೂ ಇವೆ) ರಾಷ್ಟ್ರ ಜೀವನವನ್ನು ಒಂದು ಸುಸ್ಥಿರ ಸ್ಥಿತಿಯಲಿ ಕಾಪಾಡಿಕೊಂಡು ಹೋಗುವ ರಾಜಕೀಯ ಮುತ್ಸದ್ದಿತನದ ಪ್ರತೀಕವಾಗಿ ಈ ಸ್ಥಾನವನ್ನು ಸಂವಿಧಾನದಲ್ಲಿ ಸೃಷ್ಟಿಸಲಾಗಿದೆ. ಅಂತಹ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾಡುವಾಗ ಎಷ್ಟು ಜವಾಬ್ದಾರಿ, ಎಚ್ಚರಿಕೆ ಇರಬೇಕು. ಆದರೆ, ಶತಮಾನಕ್ಕೂ ಮೀರಿದ ರಾಜಕೀಯ ಚರಿತ್ರೆ ಇರುವ ಕಾಂಗ್ರೆಸ್, ಈ ಸ್ಥಾನವನ್ನು ರಾಷ್ಟ್ರದ ಹಿತ ಮರೆತು, ಮುಂದಿನ ದಿನಗಳಲ್ಲಿ ತನ್ನ ಅಧಿಕಾರಕ್ಕೆ ಸಂಚಕಾರ ಬರದಂತೆ ಖಚಿತ ಪಡಿಸಿಕೊಳ್ಳುವ ರೀತಿಯಲ್ಲಷ್ಟೇ ಭರ್ತಿ ಮಾಡಲು ನೋಡಿದೆ.
ಈ ಪಕ್ಷದ ಮೊದಲ ಆಯ್ಕೆ ಆಗಿದ್ದುದು, ಶಿವರಾಜ್ ಪಾಟೀಲ್. ಇವರು ಬೋಫೋರ್ಸ್ ಹಗರಣದ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷರಾಗಿ, ನಂತರ ಲೋಕಸಭಾ ಅಧ್ಯಕ್ಷರಾಗಿ ನೆಹರೂ ಕುಟುಂಬದ ಕುಡಿಗಳನ್ನು ಅನೇಕ ಸಂಕಷ್ಟಗಳಿಂದ ಪಾರು ಮಾಡಿದವರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಇವರನ್ನು ಸೋನಿಯಾ ಗಾಂಧಿಯವರ ವಿಶೇಷ ಶಿಫಾರ್ಸಿನ ಮೇರೆಗೆ ರಾಜ್ಯಸಭೆಗೆ ಆಯ್ಕೆ ಮಾಡಿ ಆಯಕಟ್ಟಿನ ಗೃಹ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ! ಏಕೆಂದು ಕಳೆದರೆಡು ಮೂರು ವರ್ಷಗಳಲ್ಲಿ ಅನೇಕ ಭಯೋತ್ಪಾದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಇವರ ಮೇಲೆ ಅದಕ್ಷತೆಯ ಅನೇಕ ಟೀಕೆಗಳು ಹಾಗೂ ಸಚಿವ ಸಂಪುಟದಿಂದ ಕೈ ಬಿಡಬೇಕೇಂಬ ಬೇಡಿಕೆಗಳು ಕೇಳಿ ಬಂದಿದ್ದರೂ ಅಧಿಕಾರದಲ್ಲಿ ಮುಂದುವರಿಸಲಾಗಿದೆ. ಗೊತ್ತಲ್ಲ? ಅದೃಷ್ಟವಶಾತ್ ಇವರ ಅಭ್ಯರ್ಥಿತನವನ್ನು ಕಾಂಗ್ರೆಸ್ ಮೈತ್ರಿಕೂಟದ ಎಡ ಹಾಗೂ ಮಿತ್ರ ಪಕ್ಷಗಳು ಕಟುವಾಗಿ ವಿರೋಧಿಸಿದ್ದರಿಂದ ಕಾಂಗ್ರೆಸ್ಗೆ ಇದ್ದಕ್ಕಿದ್ದಂತೆ ಮಹಿಳೆಯರ ಬಗ್ಗೆ ಸಹಾನುಭೂತಿ ಉಕ್ಕಿ ಹರಿದು, ಪ್ರತಿಭಾ ಪಾಟೀಲರನ್ನು ತನ್ನ ಅಭ್ಯರ್ಥಿಯೆಂದು ಘೋಷಿಸಿದೆ.
ಪ್ರತಿಭಾ ಪಾಟೀಲರು ಮಹಿಳೆ ಎಂಬುದಕ್ಕಿಂತ ಹೆಚ್ಚಾಗಿ, ನೆಹರೂ ಕುಟುಂಬದ ಸಂಶಯಾತೀತ ನಿಷ್ಠಾವಂತೆ ಎಂಬುದೇ ಇವರ ಆಯ್ಕೆಗೆ ಮುಖ್ಯ ಕಾರಣವಾಗಿದ್ದಂತೆ ತೋರುತ್ತದೆ! ಏಕೆಂದರೆ, ಇವರಿಗೆ ಮುವ್ವತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದ ಚರಿತ್ರೆಯಿದೆ ಎಂದು ಹೇಳಲಾಗುತ್ತಿದೆಯಾದರೂ, ಇವರು ತಮ್ಮ ಹೆಸರಿನಲ್ಲಲ್ಲದೆ ಇನ್ನೆಲ್ಲೂ ತಮ್ಮ ಪ್ರತಿಭೆಯನ್ನು ಪ್ರಕಾಶಿಸದೆ ಇರುವುದರಿಂದ, ಈ ಅಭ್ಯರ್ಥಿ ಯಾರೆಂದು ರಾಷ್ಟ್ರವೇ ಒಮ್ಮೆ ತನ್ನ ನೆನಪನ್ನು ಝಾಡಿಸಿಕೊಂಡು ನೋಡಿಕೊಳ್ಳಬೇಕಾದ ಪ್ರಮೇಯ ಬಂದಿದೆ! ಈ ದೃಷ್ಟಿಯಿಂದ ಎಡ ಹಾಗೂ ಮಿತ್ರ ಪಕ್ಷಗಳು ಮಹಿಳೆಯನ್ನು ಬೆಂಬಲಿಸುವ 'ಪ್ರಗತಿಪರತೆ'ಯ ಮೋಹಕ್ಕೆ ಒಳಗಾಗಿ, ತಮ್ಮ ತಾತ್ವಿಕ ಸ್ಪಷ್ಟತೆಯನ್ನೇ ಕಳೆದುಕೊಂಡು ರಾಷ್ಟ್ರಕ್ಕೆ ಅನ್ಯಾಯ ಮಾಡಿವೆ ಎಂದೇ ಹೇಳಬೇಕು.
ಪ್ರತಿಭಾ ಪಾಟೀಲರ ವಿರುದ್ಧ ಕೇಳಿ ಬಂದ ಅನೇಕ ಆಪಾದನೆಗಳ ನಂತರವಂತೂ; ಏನೇ ಆಗಲಿ, ಬಿ.ಜೆ.ಪಿ. ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ ಬೆಂಬಲ ಪಡೆದ ಹಿರಿಯ ನಾಯಕ ಶೆಖಾವತರೇ ಉತ್ತಮ ಅಭ್ಯರ್ಥಿಯಿರಬಹುದೆಂದು ರಾಷ್ಟ್ರ ಚಿಂತಿಸುತ್ತಿದ್ದಾಗ, ಅವರ ವಿರುದ್ಧವೂ ಕೇಳಿ ಬಂದ ಆಪಾದನೆಗಳು ರಾಷ್ಟ್ರವನ್ನು ಬೆಚ್ಚಿ ಬೀಳಿಸಿವೆ! ಇವರು ಉಪ್ಪಿನ ವ್ಯಾಪಾರಿಯೊಬ್ಬನಿಂದ ಲಂಚ ಪಡೆದು ಸೇವೆಯಿಂದ ಅಮಾನತ್ತುಗೊಂಡ ಪೋಲೀಸ್ ಪೇದೆಯಾಗಿ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದವರು. ದಾಖಲೆಗಳಲ್ಲಿರುವ ಈ ಸಂಗತಿಯ ಜೊತೆಗೆ, ಇವರು ರಾಜಸ್ಥಾನದಲ್ಲಿ ಮಂತ್ರಿ - ಮುಖ್ಯಮಂತ್ರಿಯಾಗಿದ್ದಾಗ ಎಸೆಗಿದ್ದೆಂದು ಹೇಳಲಾದ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗೂ ಲೈಂಗಿಕ ಅಪರಾಧಿಗಳ ರಕ್ಷಣೆ ಮುಂತಾದ ಆಪಾದನೆಗಳು, ಅವುಗಳ ತೀವ್ರತೆ ಹಾಗೂ ವೈವಿಧ್ಯತೆಯಲ್ಲಿ ಪ್ರತಿಭಾ ಪಾಟೀಲರ ಮೇಲಿನ ಆಪಾದನೆಗಳನ್ನು ಮೀರಿಸುವಂತಿವೆ!
ದೇಶಕ್ಕೆ ಇವರಿಬ್ಬರನ್ನು ಬಿಟ್ಟು ಇನ್ನಾರೂ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗಳು ಸಿಗಲಿಲ್ಲವೇ? ಅಮಾತ್ರ್ಯ ಸೇನ್? ಗೋಪಾಲ ಗಾಂಧಿ? ಕೊನೆಗೆ ಜ್ಯೋತಿ ಬಸುವಾದರೂ? ಮಹಿಳೆಯೇ ಬೇಕೆಂದಿದ್ದರೆ, ಗುಜರಾತ್ನ ಹಿರಿಯ ಗಾಂಧಿವಾದಿ ಇಳಾ ಬೆನ್? ಉಹುಂ, ಇವರ್ಯಾರೂ ಇವೊತ್ತಿನ ರಾಜಕೀಯ ವ್ಯವಸ್ಥೆಯ ತಾಳಕ್ಕೆ ಕುಣಿಯುವವರಲ್ಲ. ಇವರೆಲ್ಲ, ತಮ್ಮದೇ ಅನನ್ಯ ಸಾಮಥ್ರ್ಯ ಹೊಂದಿರುವವರು. ಆದರೆ, ಇಂತಹವರನ್ನು ನಿರ್ಣಾಯಕ ಅಧಿಕಾರ ಸ್ಥಾನಗಳ ಹತ್ತಿರಕ್ಕೂ ಸುಳಿಯಗೊಡದಷ್ಟು ಅಧೋಗತಿಗೆ ಇಳಿದಿದೆ ನಮ್ಮ ರಾಷ್ಟ್ರ ರಾಜಕಾರಣ... ಇದಕ್ಕೆ ಪ್ರಚಲಿತ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆಯೂ ಇದೆ. ಹಾಗಾಗಿ ರಾಷ್ಟ್ರ ಹಾಗೂ ರಾಜ್ಯಗಳಲ್ಲಿರುವುದು ಎಲ್ಲ ಅರ್ಥದಲ್ಲಿಯೂ ಸಮ್ಮಿಶ್ರ ಸರ್ಕಾರಗಳೇ! ಆಡಳಿತದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ, ಎಲ್ಲ ರಾಜಕೀಯ ಪಕ್ಷಗಳು ತಂತಮ್ಮ ಯೋಗ್ಯತಾನುಸಾರ ರಾಷ್ಟ್ರ ಜೀವನದ ಅಧೋಗತಿಗೆ ತಮ್ಮ ಪಾಲು ಸಲ್ಲಿಸುತ್ತಿವೆ.
ಕನರ್ಾಟಕವನ್ನು ನೋಡಿ. ನಂದಗುಡಿ ವಿಶೇಷ ಆರ್ಥಿಕ ವಲಯದ ವಿರುದ್ಧ ಕಾಂಗ್ರೆಸ್ಸಿನವರು ಆಂದೋಲನ ಆರಂಭಿಸಿದ್ದಾರೆ. ಆದರೆ, ಈ ವಿಶೇಷ ಆರ್ಥಿಕ ವಲಯದ ಪ್ರಸ್ತಾವನೆ ಹುಟ್ಟಿದುದೇ, ಮನಮೋಹನ ಸಿಂಗರ ಮೂಲಕ ಕಾಂಗ್ರೆಸ್ ಜಾರಿಗೆ ತಂದ ಹೊಸ ಆರ್ಥಿಕ ನೀತಿಯ ಭಾಗವಾಗಿ. ಅಷ್ಟೇ ಅಲ್ಲ, ನಿರ್ದಿಷ್ಟವಾಗಿ ಈ ನಂದಗುಡಿ ಆರ್ಥಿಕ ವಲಯಕ್ಕೆ ಈಗ ಮಂಜೂರಾತಿ ನೀಡಿರುವುದೂ ಕಾಂಗ್ರೆಸ್ ನೇತ್ತತ್ವದ ಕೇಂದ್ರ ಸರ್ಕಾರವೇ! ಹೀಗಾಗಿ ಕಾಂಗ್ರೆಸ್ನವರ ಈ ಆಂದೋಲನ ಅಮಾಯಕ ಜನರನ್ನು ಯಾಮಾರಿಸುವ ಸಮಯ ಸಾಧಕ ಚಿಲ್ಲರೆ ರಾಜಕಾರಣವಲ್ಲದೆ ಮತ್ತೇನಲ್ಲ. ಈ ಆಂದೋಲನದ ನೇತೃತ್ವ ವಹಿಸಿರುವುದಾದರೂ ಯಾರು? ಬೆಂಗಳೂರಲ್ಲಿ ಮತ್ತು ಸುತ್ತಮುತ್ತ ಅಪಾರ ಭೂಮಿ ಖರೀದಿಸಿ ತನ್ನದೇ 'ವಿಶೇಷ ಆರ್ಥಿಕ ವಲಯ'ಗಳನ್ನು ರೂಪಿಸಿಕೊಂಡಿರುವ ಖದೀಮ ರಾಜಕಾರಣಿಗಳು! ರಾಜ್ಯ ಕಾಂಗ್ರೆಸ್ಸಿಗರಿಗೆ ರೈತ ಮಕ್ಕಳ ಬಗ್ಗೆ ನಿಜವಾದ ಕಾಳಜಿ ಇದ್ದರೆ, ವಿಶೇಷ ಆರ್ಥಿಕ ವಲಯ ಯೋಜನೆಯ ಪರಿಕಲ್ಪನೆಯ ವಿರುದ್ಧವೇ ಆಂದೋಲನ ಆರಂಭಿಸುವ ಧೈರ್ಯ ತೋರಲಿ. ಅದು ಸಮಗ್ರ ಬದಲಾವಣೆಗೆ - ಕಾಂಗ್ರೆಸ್ ಪಕ್ಷದ ರಾಜಕಾರಣವೂ - ಸೇರಿದಂತೆ ನಾಂದಿ ಹಾಡೀತು.
ಆದರೆ, ಇಂತಹ ಸಮಗ್ರ ಬದಲಾವಣೆ ಇವರ್ಯಾರಿಗೂ ಬೇಡವಾಗಿದೆ. ಏಕೆಂದರೆ, ಅದು ಇವರ ಬುಡಗಳಿಗೇ ನೀರು ತಿರುಗಿಸಿಬಿಡುತ್ತದೆ! ಹಾಗಾಗಿಯೇ ಇವರು ಬೆಂಗಳೂರು ಭೂಕಬಳಿಕೆ ಕುರಿತು ಸಮಗ್ರ ತನಿಖೆ ನಡೆಸಿರುವ ನಮ್ಮ ನಡುವಿನ ಅಪರೂಪದ ಶಾಸಕ ಎ.ಟಿ.ರಾಮಸ್ವಾಮಿ ಅವರ ನೇತೃತ್ವದ ಸಮಿತಿಯು ಸಣ್ಣ ಪುಟ್ಟ ಒತ್ತುವರಿ ಮಾಡಿರುವ ಬಡಬಗ್ಗರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಸರ್ಕಾರ, ಭಾರಿ ಪ್ರಮಾಣದ ಭೂಕಬಳಿಕೆ ಮಾಡಿರುವ ಪ್ರಬಲರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬ ಆತಂಕ ವ್ಯಕ್ತ ಪಡಿಸುತ್ತಿದ್ದರೂ, ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ಸಿಗರೂ ಸೇರಿದಂತೆ ಯಾವುದೇ ಪಕ್ಷದ ರಾಜಕಾರಣಿಯೂ ಸಮಿತಿಗೆ ಬೆಂಬಲವಾಗಿ ಬಾಯ್ಬಿಡುತ್ತಿಲ್ಲ... ಹಾಗೇ ಅಧಿಕಾರಶಾಹಿಯ ಭ್ರಷ್ಟಾಚಾರದ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿರುವ ಐ.ಎ.ಎಸ್. ಅಧಿಕಾರಿ ವಿಜಯಕುಮಾರ್ ಕುಟುಂಬಕ್ಕೆ ನೈತಿಕ ಬೆಂಬಲದ ಒಂದು ಮಾತೂ ಇವರಿಂದ ಈವರೆಗೆ ಬಂದಿಲ್ಲ. ಇದು ನಿಜವಾದ ಸಮ್ಮಿಶ್ರ ರಾಜಕಾರಣ!
ಇಂತಹ ಸಂಪೂರ್ಣ ಸಮ್ಮಿಶ್ರ ಲೂಟಿ ರಾಜಕಾರಣಕ್ಕೆ ಸುವ್ಯವಸ್ಥಿತ ರೂಪ ನೀಡಲು ಸರ್ವಪಕ್ಷಗಳ ಸಹಯೋಗದೊಂದಿಗೆ ಆಗಾಗ್ಗೆ ವಿಶೇಷ ಪ್ರಯತ್ನಗಳು ನಡೆಯುತ್ತಿರುತ್ತವೆ! ಇತ್ತೀಚಿನ ಪ್ರಯತ್ನವೆಂದರೆ, ಅನಿಲ್ ಲಾಡ್ ಎಂಬ ಗಣಿ ಉದ್ಯಮಿ ಶಾಸಕ ಹೊಸಪೇಟೆ ಬಳಿಯ ತನ್ನ ಹೊಸ ಗುಲಾಬಿ ತೋಟದ ಸಂದರ್ಶನದ ನೆಪದಲ್ಲಿ ಏರ್ಪಡಿಸಿದ್ದ, ಆದರೆ ರಾಜಕೀಯ ಅನುಮಾನಾಸ್ಪದತೆಯ ಕಾರಣದಿಂದಾಗಿ ಸದ್ಯಕ್ಕೆ ಮುಂದೂಡಲ್ಪಟ್ಟಿರುವ, ಕೆಲವು ಆಯ್ದ ಶಾಸಕರ ರಿಸಾರ್ಟ್ ವಿಹಾರ. ಈ ವಿಹಾರಕ್ಕಾಗಿ ಪಕ್ಷ ಬೇಧವಿಲ್ಲದೆ ಶಾಸಕರನ್ನು 'ಗುರುತಿಸಿ' ಆಹ್ವಾನಿಸಲಾಗಿತ್ತೆಂಬ ಸಂಗತಿ, ಇದು ಸದ್ಯದ ಲೂಟಿ ವ್ಯವಸ್ಥೆ ಸರ್ವರ 'ಸಹಕಾರ'ದೊಂದಿಗೆ ಯಾವುದೇ ಬದಲಾವಣೆಯಿಲ್ಲದೆ ಈಗಿನ ನಾಯಕತ್ವದಲ್ಲೇ ಮುಂದುವರಿಸಲು ನಡೆಸಲಾಗುತ್ತಿರುವ ಪ್ರಯತ್ನ ಎಂಬುದರ ಸ್ಪಷ್ಟ ಸೂಚನೆ ನೀಡುತ್ತದೆ. ಈ ಶಾಸಕನ ಮಿತಿಯಿಲ್ಲದ ಅಕ್ರಮ ಹಾಗೂ ಬೇನಾಮಿ ಗಣಿಗಾರಿಕೆಯ ವಿವರಗಳು ಮಾಧ್ಯಮಗಳಲ್ಲಿ ಪದೇ ಪದೇ ಪ್ರಚಾರ ಪಡೆಯುತ್ತಿದ್ದರೂ, ಅದು ಎಗ್ಗಿಲ್ಲದೇ ಮುಂದುವರಿಯುತ್ತಿರುವುದಕ್ಕೆ ಕಾರಣ, ಈ 'ಲೂಟಿ ರಾಜಕಾರಣ' ಇತ್ತೀಚೆಗೆ ಹೊಸ ರಾಜಕೀಯ ನೆಲೆ ತಲುಪಿದ್ದೇ ಈ ಮೂಲದ ಅಪಾರ ಅಕ್ರಮ ಹಣದಿಂದ ಎಂಬುದೇ ಆಗಿದೆ. ಗೋವಾ ಹಾಗೂ ಪುಣೆ ರಿಸಾರ್ಟ್ ರಾಜಕಾರಣಕ್ಕೆ ಬಂಡವಾಳ ಹೂಡಿದವರಿಗೆ ಲಾಭ ಮಾಡಿಕೊಳ್ಳಲು ಬಿಡುವುದಿಲ್ಲವೆಂದರೆ ಅದು ವ್ಯಾಪಾರ ಧರ್ಮವೆನಿಸೀತೆ?
ಆದರೆ ಎಷ್ಟು ಮತ್ತು ಎಂತಹ ಲಾಭ ಮತ್ತು ಹಣ? ಈ ಹಿಂದೆ ಸರ್ಕಾರಗಳನ್ನು ನಿಯಂತ್ರಿಸುತ್ತಿದ್ದುವೆಂದು ಹೇಳಲಾದ ಕಾಮಗಾರಿ, ಅಬ್ಕಾರಿ ಹಾಗೂ ಶಿಕ್ಷಣ ದಂಧೆಗಳ ಹಣ, ಇದರ ಮುಂದೆ ತೀರಾ ಜುಜುಬಿಯಾಗಿ ಕಾಣುತ್ತಿದೆ. ಹಾಗಾಗಿಯೇ ಕೆಲ ವರ್ಷಗಳ ಹಿಂದಷ್ಟೇ ನಮ್ಮ ನಿಮ್ಮಂತೆ ಸಾಮಾನ್ಯ ಪ್ರಜೆಗಳಾಗಿದ್ದ ಈ ಗಣಿ ಉದ್ಯಮಿಗಳು ಈಗ ವೈಭವೋಪೇತ ಬಂಗಲೆಗಳು, ರಿಸಾರ್ಟ್ಗಳು, ಹತ್ತಾರು ಹೆಲಿಕಾಪ್ಟರಗಳು ಮತ್ತು ಸುಸಜ್ಜಿತ ವಸತಿ ಬಸ್ಸುಗಳ ಒಡೆಯರಾಗಿ ಯಾರನ್ನು ಬೇಕಾದರೂ, ವಸ್ತುಗಳನ್ನು ಖರೀದಿಸುವಂತೆ ಖರೀದಿಸಲು ಸಾಧ್ಯವಾಗಿರುವುದು. ಹಾಗೇ, ಮುಖ್ಯಮಂತ್ರಿಯ ಕುಟುಂಬದವರು ಒಂದೇ ವಾರದಲ್ಲಿ ಹತ್ತಾರು ಕೋಟಿ ರೂಪಾಯಿಗಳ ಬೆಲೆಯ ಸ್ಥಿರ ಆಸ್ತಿ ಖರೀದಿಸಲು ಮತ್ತು ನಮ್ಮ ಅರಣ್ಯ ಮಂತ್ರಿಗಳು ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಅನಾಥಾಶ್ರಮ ಕಟ್ಟುವ 'ಧರ್ಮಾತ್ಮ' ಕಾರ್ಯದಲ್ಲಿ ತೊಡಗಲು ಸಾಧ್ಯವಾಗುವುದು. ಎಲ್ಲಕ್ಕಿಂತ ಮುಖ್ಯವಾಗಿ, ಈ ಸುಲಭ 'ದುಡಿಮೆ'ಗೆ ಸಾರ್ವಜನಿಕ ಮಾನ್ಯತೆ ದೊರೆತು, ಈ ಬಗ್ಗೆ ಯಾವ ವಲಯದಿಂದಲೂ ಪ್ರಶ್ನೆಗಳೇ ಏಳದಂತಾಗುವುದು... ಇದು ಯಾರನ್ನಾದರೂ ಹತಾಶೆಗೊಳಿಸುವಂತಹ ದರಿದ್ರ ರಾಜಕೀಯ ಸ್ಥಿತಿ. ನಕ್ಸಲರು ಹುಟ್ಟುವುದು ಮತ್ತು ಅವರಿಗೆ ಜನರ ಸಹಾನುಭೂತಿ ದೊರಕಲಾರಂಭಿಸುವುದೂ, ಇಂತಹ ತಕ್ಷಣಕ್ಕೆ ಬೆಳಕೇ ಕಾಣದ ಅಸಹಾಯಕ ಸ್ಥಿತಿಯಲ್ಲಿ. ಹಾಗಾದರೆ, ನಕ್ಸಲೀಯರ ಬೆಳವಣಿಗೆಗೆ ಕಾರಣರಾರು? ಅವರನ್ನು ಕೊಲ್ಲುವ ರಾಜಕಾರಣ ಎಷ್ಟು ಸಾಚಾ ಎನಿಸೀತು? ಜನ ಪ್ರತಿನಿಧಿಗಳು ಯೋಚಿಸಬೇಕು.
ಆದರೆ ಈ ಜನ ಪ್ರತಿನಿಧಿಗಳು ತಾವೀಗ ಸಕ್ರಿಯವಾಗಿ ಭಾಗವಹಿಸಿ ಪೋಷಿಸುತ್ತಿರುವ ರಾಜಕಾರಣವು ತಮ್ಮ ಪಾಲಿಗೆ ಉತ್ಪತ್ತಿ ಮಾಡಿ ಕೊಡುತ್ತಿರುವ ಅತಿಯಾದ ಹಣದ ಅಜೀರ್ಣದಿಂದಾಗಿಯೋ ಏನೋ, ಯೋಚಿಸುವ ಸಾಮಥ್ರ್ಯವನ್ನೇ ಕಳೆದುಕೊಂಡಿದ್ದಾರೆನಿಸುತ್ತದೆ. ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಿ ಅವುಗಳಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡು ಅಧಿಕಾರ ವಿಕೇಂದ್ರೀಕರಣದ ಮೂಲೋದ್ದೇಶಗಳನ್ನೇ ನಾಶ ಮಾಡ ಹೊರಟಿರುವ ತಿದ್ದುಪಡಿ ಮಸೂದೆ ಬಗ್ಗೆ, ಈ ಸಂಸ್ಥೆಗಳ ಜನಪ್ರತಿನಿಧಿಗಳು ಹಾಹಾಕಾರವೆಬ್ಬಿಸುತ್ತಿದ್ದರೂ ಇವರು ಒಂದು ಮಾತೂ ಆಡದಿರುವುದರ ಮರ್ಮವಾದರೂ ಏನು? 'ಆನುದೇವ...' ಪುಸ್ತಕವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ವಿಧಾನ ಸಭೆಯಲ್ಲಿ ವೀರಾವೇಶದಿಂದ ಮಾತನಾಡಿದ ಸದಸ್ಯರು, ಈ ಪುಸ್ತಕದಲ್ಲಿ ಕುವೆಂಪು ಹಾಗೂ ಅಂಬೇಡ್ಕರರನ್ನು ಅವಮಾನಿಸಲಾಗಿದೆ ಮತ್ತು ಬಸವಣ್ಣನನ್ನು ಹೀನಾಮಾನವಾಗಿ ಜರಿಯಲಾಗಿದೆ ಎಂಬ ಅಪ್ಪಟ ಸುಳ್ಳುಗಳನ್ನು ಹೇಳಿ ದಕ್ಕಿಸಿಕೊಳ್ಳುವುದಾದರೂ ಹೇಗೆ? ಅಂದರೆ ಈ ಸದಸ್ಯರೂ ಸೇರಿದಂತೆ ಅಲ್ಲಿದ್ದ ಯಾರೂ ಈ ಪುಸ್ತಕವನ್ನು ಓದಿಲ್ಲ! ಈ ಪುಸ್ತಕವನ್ನು ಓದಿದ್ದ ಯಾವ ಶಾಸಕನಾದರೂ ಅಲ್ಲಿದ್ದರೆ, ಇವರ ಸುಳ್ಳುಗಳನ್ನು ಖಂಡಿಸುತ್ತಿದ್ದ. ಆದರೆ, ತಾವ್ಯಾರೂ ಓದದ ಪುಸ್ತಕವನ್ನು ನಿಷೇಧಿಸಲು ಹೊರಟಿದೆ ನಮ್ಮ ಶಾಸಕ ಸಮುದಾಯ... ಪುಸ್ತಕ ಓದಿ ನಿಷೇಧ ಅನಗತ್ಯವೆಂದಿದ್ದ ಗೃಹ ಸಚಿವ ಎಂ.ಪಿ.ಪ್ರಕಾಶರು ಈಗ ಏನು ಹೇಳುತ್ತಾರೋ ತಿಳಿಯದು!
ಪ್ರಕಾಶರಂತಹವರ ಇಂತಹ ಜಾಣ ಮೌನವೇ ಈ ವ್ಯವಸ್ಥೆಯನ್ನು ಈ ದುಃಸ್ಥಿತಿಗೆ ತಂದಿರುವುದು. ನಮ್ಮ ಸಾಂಸ್ಕೃತಿಕ ವಲಯದಲ್ಲಿ ಇಂತಹ 'ಜಾಣ'ರ ಸಂಖ್ಯೆ ಹೆಚ್ಚುತ್ತಿರುವುದೇ ಮೊನ್ನೆ ಚಿತ್ರದುರ್ಗದಲ್ಲಿ 'ಅಭಿರುಚಿ': ಸಾಹಿತ್ಯಿಕ - ಸಾಂಸ್ಕೃತಿಕ ವೇದಿಕೆಯಡಿ 'ಸಮಕಾಲೀನ ಸಾಂಸ್ಕೃತಿಕ ರಾಜಕಾರಣ'ದ ಬಗ್ಗೆ ಏರ್ಪಡಿಸಲಾಗಿದ್ದ ಸಂವಾದ ಗೋಷ್ಠಿಯಲ್ಲಿ 'ಆನುದೇವಾ...' ಕುರಿತು ಮುಕ್ತವಾಗಿ ವ್ಯಕ್ತವಾದ ಟೀಕೆಗಳಿಗೆ ಉತ್ತರ ಕೊಡಲು ಹೊರಟ ನನ್ನ ಅಧ್ಯಕ್ಷ ಭಾಷಣಕ್ಕೆ ಅಲ್ಲಿನ ಇಬ್ಬರು ಸ್ವಯಂಘೋಷಿತ 'ಸಾಂಸ್ಕೃತಿಕ ಯಜಮಾನರು'ಗಳು ಮತ್ತು ಓರ್ವ ಉದಯೋನ್ಮುಖ ರಾಜಕೀಯ ಪುಢಾರಿ ತಡೆಯೊಡ್ಡಲು ಸಾಧ್ಯವಾದದ್ದು. ಈ ಮೂವ್ವರ ಅನಾಗರಿಕ ವರ್ತನೆಯನ್ನು ಅಲ್ಲಿ ಸೇರಿದ್ದ ಮಿಕ್ಕ 60-70 ಜನರು ಮೂಕ ಪ್ರೇಕ್ಷಕರಂತೆ ನೋಡುತ್ತಾ ಕೂರುವಂತಾದ ಅಸಹಾಯಕತೆಯೇ ನಮ್ಮ ಇಂದಿನ ಸಮಾಜ ಎದುರಿಸುತ್ತಿರುವ ಸಾಂಸ್ಕೃತಿಕ ಬಿಕ್ಕಟ್ಟಿನ ನಿಜ ಮೂಲವಾಗಿದೆ. ಇಲ್ಲದಿದ್ದರೆ, ಕಾರವಾರದಲ್ಲಿ ಗೋವಾ ಕೊಂಕಣಿ ರಾಜ್ಯ ಏಕೀಕರಣ ಮಂಚದ ಸಂಚಾಲಕ ದಂಪತಿಗಳ ಮೇಲೆ ಸಾರ್ವಜನಿಕವಾಗಿ ಮೊಟ್ಟೆ ಎಸೆದು ಹಲ್ಲೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯವರಿಗೆ ಸರ್ಕಾರದಿಂದಲೇ ಕಾನೂನು ರಕ್ಷಣೆ ದೊರಕುವಂತಹ ಪರಿಸ್ಥಿತಿ ಏಕೆ ಸೃಷ್ಟಿಯಾಗುತ್ತಿತ್ತು? ಇದನ್ನು ಖಂಡಿಸಿ ಸಾರ್ವಜನಿಕರು ಬರೆದ ಪತ್ರಗಳನ್ನು ಪ್ರಕಟಿಸಲೂ ಕನ್ನಡದ ಪ್ರಮುಖ ದಿನ ಪತ್ರಿಕೆಯೊಂದು ಹಿಂಜರಿಯುವ ಪರಿಸ್ಥಿತಿ ಏಕುಂಟಾಗುತ್ತಿತ್ತು? ಪುಂಡಾಟಿಕೆಯನ್ನು ನಾವೆಲ್ಲ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವೆಂದು ಅಸಹಾಯಕವಾಗಿ ಒಪ್ಪಿಕೊಂಡಂತಿದೆ. ಅಲ್ಲಾ, ಇಲ್ಲಿಂದ ನಾವು ಮುಂದೆ ಸಾಗುವುದು ಎಲ್ಲಿಗೆ?
ಅಂದ ಹಾಗೆ: ಇತ್ತೀಚೆಗೆ ತಾನೇ ತಮಗೂ ನಕ್ಸಲೀಯರಿಗೂ ಯಾವುದೇ ಸಂಬಂಧವಿಲ್ಲವೆಂದು ಘಂಟಾಘೋಷವಾಗಿ ಹೇಳಿಕೊಂಡಿದ್ದ 'ನಾಗರಿಕ ಹಕ್ಕುಗಳ ಪ್ರತಿಪಾದಕ'ರನೇಕರು, ಮೆಣಸಿನ ಹಾಡ್ಯ ಪ್ರಕರಣದ ಸುದ್ದಿ ಹೊರಬೀಳುತ್ತಿದ್ದಂತೆಯೇ, ಇದು 'ನಕಲಿ ಎನ್ಕೌಂಟರ್' ಎಂದೋ 'ನಿರಪರಾಧಿಗಳ ಹತ್ಯೆಯಾಗಿದೆ' ಎಂದೋ, ನಕ್ಸಲೀಯರೆಂದರೆ ಯಾರೆಲ್ಲ ಎಂಬುದು ತಮಗೆ ಗೊತ್ತಿದ್ದಂತೆ ಹೇಳಿಕೆ ನೀಡಲಾರಂಭಿಸಿದರಲ್ಲಾ? ಅದು ಹೇಗೋ, ಬಲ್ಲವರು ಹೇಳಬೇಕು!
-ಡಿ.ಎಸ್.ನಾಗಭೂಷಣ
Comments
ಉ: ಇದು ಸಂಪೂರ್ಣ 'ಸಮ್ಮಿಶ್ರ ಲೂಟಿ' ರಾಜಕಾರಣ...
ಉ: ಇದು ಸಂಪೂರ್ಣ 'ಸಮ್ಮಿಶ್ರ ಲೂಟಿ' ರಾಜಕಾರಣ...