ಇದೊಂತರಾ ರಾಮಾಯಣ ... ಓದಿ ನೋಡಿ ..

ಇದೊಂತರಾ ರಾಮಾಯಣ ... ಓದಿ ನೋಡಿ ..

ನಾಸೋ ಸರ್ ಬರೆದ ಮಜ್ಜಿಗೆ ರಾಮಾಯಣ ಓದಿ ... ಕೆಲ ವರ್ಷಗಳ ಹಿಂದೆ ದೂರದರ್ಶನದಲ್ಲಿ ಹಾಸ್ಯ ಕಾರ್ಯಕ್ರಮವೊಂದರಲ್ಲಿ ವೈದ್ಯರೊಬ್ಬರು ಹೇಳಿದ ಕತೆ ನೆನಪಾಯಿತು.
ಒಂದು ಊರಿನಲ್ಲಿ ನರಸಿಂಹಯ್ಯ ಎಂಬೊಬ್ಬನಿದ್ದ. ಅವನು ತಾನು ಮಾತಾಡೋ ಪ್ರತಿಯೊಂದು ವಿಷ್ಯಕ್ಕೂ ರಾಮಾಯಣವನ್ನ ಲಿಂಕ್ ಮಾಡ್ತಿದ್ದ ಅನ್ನೋ ಕಾರಣಕ್ಕೆ ಅವನಿಗೆ ಲಿಂಕ್ ನರಸಿಂಹಯ್ಯ ಅಂತ ಹೆಸರಿತ್ತು. ಯಾರು ಏನಾದ್ರೂ ಕೇಳಾಲಿ ಅದಕ್ಕೆ ರಾಮಾಯಣವನ್ನ ಲಿಂಕ್ ಮಾಡಿಬಿಡ್ತಿದ್ದ... ಎಷ್ಟರ ಮಟ್ಟಿಗೆ ಅಂದ್ರೆ ಯಾರಾದ್ರು "ಏನು ನರಸಿಂಹಯ್ಯನೋರೆ ಹೀಗೆ ಕೂತ್ಕೊಂಡ್ರಿ " ಅಂದ್ರೆ ಅಯ್ಯೋ ಹೌದಪ್ಪಾ ನಂಗೂ ಆ ರಾಮನ ಹಾಗೆ ಈ ವನವಾಸ ಹತ್ತಿ ಸಾಕಾಗಿದೆ. ಅನ್ನೋನು. ಏನಾದ್ರೂ ಹೇಳಲಿ ಎಲ್ಲಕ್ಕೂ ರಾಮಾಯಣದ ಒಂದು ಪದವಾದರೂ ಲಿಂಕ್ ಮಾಡ್ತಿದ್ದ. ಇದನ್ನ ಕೇಳೀ ಕೇಳೀ ಊರವರಿಗೆ ಬೇಜಾರಾಗೋವಷ್ಟು ಇವನ ಲಿಂಕ್ ಮಾತುಗಳು ಜಾಸ್ತಿಯಾದವು. ಹೀಗೇ ಮಾಡೋವಾಗ ಊರಿನವರೆಲ್ಲಾ ಹೇಗಾದ್ರೂ ಮಾಡಿ ಈ ನರಸಿಂಹಯ್ಯನನ್ನ ಮಾತಲ್ಲಿ ಸೋಲಿಸಬೇಕು ಅಂತ ಗುಟ್ಟಾಗಿ ಒಂದೆಡೆ ಸೇರಿ ಮಾತಾಡಿಕೊಂಡರು. ಸರಿ ದೂರದ ನಗರದಿಂದ ಭಾಷಾ ವಿದ್ವಾಂಸರೊಬ್ಬರನ್ನ ಕರೆಸಿದರು. ನರಸಿಂಹಯ್ಯನಿಗೂ ಕರೆ ಹೋಯ್ತು. ಅವನೂ ಸಾವಕಾಶವಾಗಿ ಬಂದು ಕುಳಿತ . ಸಭೆ ಪ್ರಾರಂಭವಾಯ್ತು. ಊರವರು ಕೇಳಿದ್ರು ." ನೋಡು ನರಸಿಂಹಯ್ಯ ವಿದ್ವಾಂಸರು ನಿನಗೆ ಒಂದು ಸವಾಲನ್ನ ಒಡ್ಡೂತ್ತಾರೆ. ಅದಕ್ಕೂ ರಾಮಾಯಣಕ್ಕೂ ನೀನೇನಾದರೂ ಲಿಂಕ್ ಕಲ್ಪಿಸಿದರೆ ಗೆದ್ದೆ. ಇಲ್ಲಾಂದ್ರೆ ಇನ್ಯಾವತ್ತೂ ಲಿಂಕ್ ಮಾಡೋ ಹಾಗಿಲ್ಲ" ಅಂತಂದ್ರು. ಸರಿ ನರಸಿಂಹಯ್ಯ ಹೂಂ ... ಅಂದು ಕುಳಿತ .ಎಲ್ಲರೂ ಕಾತರದಿಂದ ಕಾಯುತ್ತಾ ಕುಳಿತಿದ್ದರು. ವಿದ್ವಾಂಸರು ಒಮ್ಮೆ ನರಸಿಂಹಯ್ಯನನ್ನೂ , ಮತ್ತೊಮ್ಮೆ ಊರ ಜನರನ್ನೂ ನೋಡುತ್ತಾ ... ತಾನೇ ಬಹಳಾ ಬುದ್ಧಿವಂತನೆಂದು ಬೀಗುತ್ತಿದ್ದರು. ಸರಿ ನರಸಿಂಹಯ್ಯ "ಪ್ರಶ್ನೆ ಕೇಳಬಹುದು " ಅಂತಂದ . ವಿದ್ವಾಂಸರಿಗೆ ಅರೇ ಇಷ್ಟು ಆರಾಮಾಗಿ ಕೇಳ್ತಿದ್ದಾನಲ್ಲಾ ಅಂತ ಆಶ್ಚರ್ಯ... ಇರಲಿ ನೋಡಿಯೇ ಬಿಡ್ತೇನೆ ..ಎಂದು ಹೇಳಿ ಸವಾಲನ್ನು ಒಡ್ಡಿದರು. ಅವರ ಸವಾಲು ಹೀಗಿತ್ತು.... " ಕಣ್ಣಾ ಮುಚ್ಚೇ ಕಾಡೇ ಗೂಡೇ ಉದ್ದಿನ ಮೂಟೇ ಉರುಳೇ ಹೋಯ್ತು" ಅಲ್ಲಿದ್ದ ಜನರೆಲ್ಲಾ ಬಾಯ ಮೇಲೆ ಬೆರಳಿಟ್ಟರು... ಅರೇ! ಇದೇನಿದು ? ಮಕ್ಕಳಾಟದ ಸಾಲುಗಳು ...ಇಷ್ಟು ದೊಡ್ಡ ವಿದ್ವಾಂಸರು ಈಸಾಲುಗಳ್ನ ಹೇಳ್ತಿದ್ದಾರಲ್ಲಾ ಅಂತ ಅನ್ನಿಸಿದರೂ , ನೋಡೋಣಾ ನರಸಿಂಹಯ್ಯ ಹೇಗೆ ಲಿಂಕ್ ಕೊಡ್ತಾನೆ ಅಂತ ಕಾಯ್ತಾ ಕುಳಿತರು .ಬಲು ಸಾವಕಾಶವಾಗಿ ವಿದ್ವಾಂಸರನ್ನ ನೋಡುತ್ತಾ ಲಿಂಕ್ ನರಸಿಂಹಯ್ಯ ಹೇಳಿದ . " ಆಹಾ! ಎಂಥಾ ಸಾಲುಗಳನ್ನು ಹೇಳಿದಿರಿ.. ಇಡೀ ರಾಮಾಯಣವನ್ನೇ ಈ ಸಾಲುಗಳಲ್ಲಿ ಹೇಳಿಬಿಟ್ಟಿದ್ದೀರಿ... ಶಹಬ್ಬಾಸ್ " ಅಂತಂದ .
ಈಗ ಮೂಗಿನ ಮೇಲೆ ಬೆರಳಿಡುವ ಸರದಿ ವಿದ್ವಾಂಸರದ್ದು . " ಏನು ? ಇಡೀ ರಾಮಾಯಣದ ಕಥೆಯೇ ? ಅದು ಹೇಗಯ್ಯಾ ? ಅಂದರು . ನರಸಿಂಹಯ್ಯ ವಿವರಿಸಿದ ...
"ನೋಡಿ ಕಣ್ಣಾ ಮುಚ್ಚೇ... ದಶರಥನ ಕಣ್ಣು ಮುಚ್ಚಲಾಗಿ... ಕಾಡೇ ಗೂಡೇ.... ರಾಮನಿಗೆ ಕಾಡೇ ಗೂಡಾಯಿತು ... ಅದರಿಂದ ಏನಾಯ್ತು ... ಉದ್ದಿನ ಮೂಟೇ .... ಉದ್ದಿನ ಮೂಟೆಯಂತೆ ಮೆರೆಯುತ್ತಿದ್ದ ರಾವಣಾ .... ಉರುಳೇ ಹೋದ.... " ಎಂತಾ ಕತೆ... ವಿದ್ವಾಂಸರು ನರಸಿಂಹಯ್ಯನ ಕೈಗಳನ್ನು ಹಿಡಿದು " ಅಯ್ಯಾ ನಿನ್ನನ್ನು ಸೋಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ನಾನು ಬರುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳಿದರು... ಊರಿನರೆಲ್ಲಾ ನರಸಿಂಹಯ್ಯನಿಗೆ ಜೈಕಾರ ಹಾಕುತ್ತಾ .. ಊರ ತುಂಬಾ ಮೆರೆದರು ... ಹೇಗಿದೆ ನಾಲ್ಕು ಸಾಲಿನ ರಾಮಾಯಣ ??? :)

Rating
No votes yet

Comments