ಇದೊಂದು ಮಾದರಿ ಶಾಲೆಯ ಮಾದರಿ ಕಾರ್ಯಕ್ರಮ

ಇದೊಂದು ಮಾದರಿ ಶಾಲೆಯ ಮಾದರಿ ಕಾರ್ಯಕ್ರಮ

ಇದೊಂದು ಮಾದರಿ ಶಾಲೆಯ ಮಾದರಿ ಕಾರ್ಯಕ್ರಮ



                   ಇಂದು ಗಾಂಧೀ ಜಯಂತಿ.  ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಿ ಸೇವಾ ಕಾರ್ಯದಲ್ಲಿ ತೊಡಗುವುದನ್ನು ಕಂಡಿದ್ದೇವೆ. ೧೪೩ ವರ್ಷಗಳ  ಹಿಂದೆ ಇದೇ ದಿವಸ ಮೋಹನದಾಸ ಹುಟ್ಟಿಬಂದುದು. ದೇಶದ  ಸಮಸ್ತರ ಹೃದಯ ಮನಸ್ಸುಗಳನ್ನು ಗೆದ್ದು ಹೊಸ  ಚೈತನ್ಯವನ್ನು ಮೂಡಿಸಿ ವಿಶ್ವಕ್ಕೆ ಹೊಸ ಬೆಳಕನ್ನು ನೀಡಿದಾತನಾದ.  ಸತ್ಯವನ್ನು ವಿನಯ ಪೂರ್ವಕವಾಗಿ ಸಹನೆಯಿಂದ ಆಗ್ರಹಿಸುವ, ಸಾತ್ವಿಕತೆಯಿಂದಲೇ ಎಲ್ಲವನ್ನು ಜಯಿಸುವ ಪರಂಪರೆಯನ್ನು ಬೋಧಿಸಿದ ಮಹಾತ್ಮನಾದ. ಇಂದಿನ ಮಕ್ಕಳಿಗೆ ಈ ಕುರಿತು ಸಾಕಷ್ಟು ತಿಳಿದಿಲ್ಲ. ಬಾಲ್ಯದಲ್ಲಿ ಸಮಾಜ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಒಳಿತು, ಕೆಡುಕುಗಳ ಕುರಿತಾಗಿ ಅರಿವು ಮೂಡಿಸಬೇಕಾದ್ದು ಸ್ವತಂತ್ರ ಭಾರತದ ಜವಾಬ್ಧಾರಿಯುತ ಪ್ರಜೆಗೆ ಕರ್ತವ್ಯ. ಇದೋ ಇಲ್ಲಿ ನೋಡಿ ಇಲ್ಲೊಂದು ಪರಿಸರ ಮಿತ್ರ ಶಾಲೆಯ ಮಕ್ಕಳು ಗಾಂಧೀಜಯಂತಿಯಂದು ತಮ್ಮ ಪರಿಸರ ಜಾಗೃತಿಯನ್ನು ಮೆರೆಸಿದ ಕ್ರಮ.

                   ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರ ಮತ್ತು ಶ್ರೀಗಜಾನನ ಸಂಸ್ಕೃತ ಪಾಠಶಾಲೆಗಳ ಸಂಯುಕ್ತ  ಆಶ್ರಯ ದಲ್ಲಿ 02 /10 /2012ರ ಮುಂಜಾನೆ 8 /30ಕ್ಕೆ ಸರಿಯಾಗಿ ಸಾಮಾಜಿಕ ಕಾರ್ಯ ಕರ್ತರಾದ ಶ್ರೀ ಕುಂಟಗೋಡು ಸೀತಾರಮರವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು.  ನಂತರ ಎಸೆದ ಪ್ಲಾಸ್ಟಿಕ್ಕಿನಿಂದ
ಮಕ್ಕಳು ತಯಾರಿಸಿದ ಪ್ಲಾಸ್ಟಿಕ್ ರಾಕ್ಷಸ ಎಂಬ ಬೃಹದಾಕಾರವನ್ನು ಹೊತ್ತುಕೊಂಡು ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. 'ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ' ,  'ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯಾ' ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುತ್ತಿದ್ದರು. ಈ ಕಾರ್ಯಕ್ರಮದ ಸಂದೇಶವನ್ನು ಶಾಲೆಯ ಪ್ರತಿಯೊಬ್ಬ ಮಗುವೂ ಕನಿಷ್ಠ 20 ಕರಪತ್ರಗಳನ್ನು ಕೈಯಲ್ಲಿ ಬರೆದು ಮನೆಮನೆಗಳಿಗೆ ಹಂಚಿದ್ದು ಹೃದಯಸ್ಪರ್ಷಿಯಾಗಿತ್ತು.
 
                      10 /30 ರಿಂದ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ 
ಶ್ರೀ ಕುಂಟಗೋಡು ಸೀತಾರಮರವರು ಪ್ಲಾಸ್ತಿಕ್ಕಿನಿಂದಾಗಿ      ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಚೆನ್ನಾಗಿ ಮನವರಿಕೆ ಮಾಡಿಸಿದರು. ನಾಟಿ ವೈದ್ಯರಾದ ಶ್ರೀ ಕೆ.ಪಿ.ರಮೇಶ್ ಕೊಡ್ಲುತೋಟ ಮಕ್ಕಳಿಗೆ ಪರಿಸರ ರಕ್ಷಣೆಗೆ ವಹಿಸಬೇಕಾದ ಎಚ್ಚರಿಕೆಯನ್ನು ತಿಳಿಸಿದರು. ಶಾಲಾ ವ್ಯವಸ್ಥಾಪಕ ಸದಾನಂದ ಶರ್ಮರವರು ರಾಮಾಯಣ  ಮತ್ತು ಮಹಾಭಾರತ ಕಾವ್ಯಗಳಲ್ಲಿನ ಪರಿಸರ ಕಾಳಜಿಯನ್ನು ವಿವರಿಸಿದರು. ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರುಗಳ ಜೀವನದ ಸಾಧನೆಯ ಶಕ್ತಿಯನ್ನು ತಿಳಿಸಿದರು.

                       11 ರಿಂದ ಪರಿಸರತಜ್ಞ ಶ್ರೀ ಜಿ. ವಿ. ಮಂಜುನಾಥ್ ಗುಡ್ಡೆದಿಂಬ ಇವರಿಂದ ಮಕ್ಕಳಿಗೆ ಸಸ್ಯ ಸಂಜೀವಿನಿಯ ಬೋಧನೆ . 80 ಜಾತಿಯ ವಿವಿಧ ಸಸ್ಯಗಳ ಕುರಿತಾಗಿ ಮಕ್ಕಳಿಗೆ, ಪೋಷಕರಿಗೆ ಹಾಗು ಶಿಕ್ಷಕರಿಗೆ ಮಾಹಿತಿ ನೀಡಿದರು. ಸಸ್ಯಗಳ ಪರಿಚಯ, ಔಷಧೀಯ ಗುಣ, ಬಳಕೆ ವಿಧಾನಗಳ ಕುರಿತು ಪ್ರಶ್ನೋತ್ತರವನ್ನು ನಡೆಸಿಕೊಟ್ಟರು. ಮಕ್ಕಳು ಹಾಗು ಪೋಷಕರು ಆಸಕ್ತಿಯಿಂದ ಪಾಲ್ಗೊಂಡುದು  ವಿಶೇಷವೆನಿಸುವಂತಿತ್ತು. ಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಭಾರತಿ ಏಸ್. ಶರ್ಮ
ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂಧಿಗಳ ಶ್ರಮ ಸಾರ್ಥಕವೆನಿಸುತ್ತಿತ್ತು.

                           ಸಾಗರ ನಗರ ಸಭೆಯ ಅಧ್ಯಕ್ಷರಾದ ಶ್ರೀರಾಧಾಕೃಷ್ಣ ಬೆಂಗ್ರೆಯವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.

                                                                                                             - ಸದಾನಂದ

Rating
No votes yet