ಇಬ್ಬರೂ ಮಹಾತ್ಮರೇ

ಇಬ್ಬರೂ ಮಹಾತ್ಮರೇ

ಚಿತ್ರ
ನಾನು ಸಾಯುವುದಿಲ್ಲ-ನಾನು ಸಾಯಬೇಕು”
ನಾನು ಸಾಯುವುದಿಲ್ಲ ಎಂದವನೊಬ್ಬ.ನಾನು ಸಾಯಬೇಕು ಅಂದವನೊಬ್ಬ.ಇಬ್ಬರೂ ಮಹಾತ್ಮರೇ ಈಗ ಮೊದಲನೆಯವನ ಬಗ್ಗೆ ನಾಲ್ಕು ಮಾತು....
ಸದಾಶಿವರಾಯರಿಗೆ ಎಂಟುಮಕ್ಕಳಾದರೂ ಯಾರೂ ಪ್ರಪಂಚವನ್ನು ನೋಡಲೇ ಇಲ್ಲ. ಕಡೆಯಲ್ಲಿ ಇಬ್ಬರು ಮಕ್ಕಳು ಉಳಿಯುತ್ತಾರೆ.ದೊಡ್ದವ ಅಮೃತ ಅವನ ತಮ್ಮ ಮಧು. ಸದಾಶಿವರಾಯರಿಗೆ ಮತ್ತೊಂದು ಕಂಟಕ ಎದಿರಾಗುತ್ತದೆ. ವಿಷಮಶೀತ ಜ್ವರದಿಂದ ಅಮೃತನೂ ಇಹಲೋಕ ತ್ಯಜಿಸುತ್ತಾನೆ. ಶವದ ಮುಂದೆ ಹೆತ್ತವರು ಕುಳಿತು ರೋಧಿಸುತ್ತಿರುವಾಗ ಮೂರು ವರ್ಷದ ಮಗು ಮಧು ಹೇಳುತ್ತಾನೆ " ಅಪ್ಪ, ನಾನು ಸಾಯುವುದಿಲ್ಲ ,ಅಳಬೇಡಿ"...ಆ ಮಗುವನ್ನು ನೋಡಿಕೊಂಡು ಅಪ್ಪ ಅಮ್ಮ ಕಾಲಹಾಕುತ್ತಾರೆ. ಮಗು ಬೆಳೆದು ದೊಡ್ದವನಾಗುತ್ತಾನೆ. ಎಂಎಸ್ಸೀ ಪದವಿ ಮುಗಿಸಿ ಕಾಶಿಯ ಹಿಂದುವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ " ಗುರೂಜಿ" ಎನಿಸುತ್ತಾರೆ. ಅವರೇ ಮುಂದೆ ಆರ್.ಎಸ್.ಎಸ್.ನ ಸರಸಂಘಚಾಲಕರಾಗಿ ನಾಲ್ಕು ದಶಕಗಳ ಕಾಲ ದೇಶಾದ್ಯಂತ ಸಂಚರಿಸಿ ಲಕ್ಷಲಕ್ಷ ದೇಶಭಕ್ತ ತರುಣರಿಗೆ ಸ್ಪೂರ್ತಿನೀಡಿದ ಪೂಜ್ಯ ಗುರೂಜಿ ಗೊಲ್ವಾಲ್ಕರ್. ಇತಿಹಾಸದ ಪುಟದಲ್ಲಿ ಅವರ ಹೆಸರು ಶಾಶ್ವತ.ಅಂದು ಬಾಲಕ ಹೇಳಿದ್ದೂ ಇದನ್ನೇ.. ನಾನು ಸಾಯುವುದಿಲ್ಲ ಎಂದರೆ ತನ್ನ ಶರೀರಕ್ಕೆ ಹೇಳಿದ ಮಾತಲ್ಲ ಅದು .ಅವರ ಮಾತು ಸತ್ಯವಾಯ್ತು. ಅವರ ಹೆಸರಿಗೆ ಸಾವಿಲ್ಲ.
ಈಗ ಎರಡನೆಯವನ ಬಗ್ಗೆ ನಾಲ್ಕು ಮಾತು……
ಗುರುಗಳು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಾರೆ “ ಯಾರು ದೇವರಲ್ಲಿಗೆ ಹೋಗಬಲ್ಲಿರಿ?” ಒಬ್ಬ ವಿದ್ಯಾರ್ಥಿ ಹೇಳಿದ “ ನಾನು ಹೋದರೆ ಹೋದೇನು” ಉಳಿದ ವಿದ್ಯಾರ್ಥಿಗಳೆಲ್ಲಾ ಇವನನ್ನು ಗೇಲಿ ಮಾಡಿದರು. ಇವನು ದೇವರ ಹತ್ತಿರ ಹೋಗುತ್ತಾನಂತೆ! ಭಾರಿ ಸಾಧನೆ ಮಾಡಿ ಬಿಟ್ಟಿದ್ದಾನೆ! ಹೋಗಪ್ಪಾ ,ನೋಡೋಣ. ಹೋಗಿ ದೇವರ ಹತ್ತಿರ ವರ ಪಡೆದುಕೊಂಡು ನಮಗೆಲ್ಲಾ ತೋರಿಸು!ಎಲ್ಲರೂ ಗೇಲಿ ಮಾಡುತ್ತಾರೆ.
ಈ ವಿದ್ಯಾರ್ಥಿಯ ಮಾತು ಗುರುಗಳಿಗೆ ಅರ್ಥವಾಗಿತ್ತು. ಅವರು ಬಿಡಿಸಿ ಉಳಿದ ವಿದ್ಯಾರ್ಥಿಗಳಿಗೆ ಹೇಳಿದರು “ ಕನಕ ಏನು ಹೇಳಿದ, ಅಂತಾ ನಿಮಗೆ ಗೊತ್ತಾಯ್ತಾ? “ನಾನು” ಎನ್ನೋ ಅಹಂಕಾರ ಹೋದಾಗ ಯಾರು ಬೇಕಾದರೂ ದೇವರನ್ನು ಕಾಣಬಹುದು ಅಂತಾ ಅದರರ್ಥ. ನಿಮಗೆಲ್ಲಿ ಅರ್ಥವಾಗುತ್ತೆ?..
ಕನಕ ಒಬ್ಬ ಸಾಮಾನ್ಯ ಕುರುಬ ಜಾತಿಯ ಹುಡುಗ. ಜೊತೆಯಲ್ಲಿ ಬ್ರಾಹ್ಮಣ ಜಾತಿಯ ಹಲವು ವಿದ್ಯಾರ್ಥಿಗಳಿದ್ದರು. ಆದರೆ ಭಗವಂತನ ಬಗೆಗೆ ಕನಕನಲ್ಲಿದ್ದ ಶ್ರದ್ಧೆ, ಭಕ್ತಿ ಮಿಕ್ಕವರಲ್ಲಿ ಇರಲಿಲ್ಲ. ಮುಂದೆ ಇದೇ ಕನಕ ಬೆಳೆದು ಕನಕ ದಾಸ ರೆಂದು ಪ್ರಖ್ಯಾತರಾಗುತ್ತಾರೆ. ಕನಕ ದಾಸರ ಹೆಸರೂ ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಕನಕನೂ “ ನಾನು ಸಾಯಬೇಕೆಂದಿದ್ದ” ಕನಕ ಹೇಳಿದ್ದ “ನಾನು” ದೇಹಕ್ಕೆ ಅನ್ವಯವಾಗಿರಲಿಲ್ಲ. ಅಹಂಕಾರ ಕುರಿತು ಹೇಳಿದ್ದ. ಮಧು ಸಾಯುವುದಿಲ್ಲವೆಂದು ಹೇಳಿದ್ದು ಅವನ ಹೆಸರು! ಕನಕ ಸಾಯಬೇಕೆಂದಿದ್ದು ಅವನ ಅಹಂಕಾರ! ಇಬ್ಬರೂ ಮಹಾತ್ಮರೇ.
 
Rating
No votes yet