ಇಲ್ಲಿಯ ಅಲ್ಲಿಯ ಜನಪದ ಕತೆ

ಇಲ್ಲಿಯ ಅಲ್ಲಿಯ ಜನಪದ ಕತೆ

ಹಿಂದೊಮ್ಮೆ ಉತ್ತರಕರ್ನಾಟಕದ ಜನಪದ ಕತೆಗಳು ಪುಸ್ತಕ ತಕೊಂಡು ಓದಿದ್ದೆ. ಈಗ ದಕ್ಷಿಣ ಕರ್ನಾಟಕದ ಜನಪದ ಕತೆಗಳು ಪುಸ್ತಕ ಓದ್ತಿದೀನಿ. ಇಲ್ಲಿನ ಒಂದು ಕತೆಯ ಭಾಗ ನೋಡಿ.

ದೊರೆಮಗ ಊಟ ಮಾಡಿ ಮಲಗಿದ ಮೇಲೆ ದೊರೆಮಗನ ಹೆಂಡಿರು ತಟ್ಟೆಗೆ ಊಟ ಇಕ್ಕೊಂಡು ಹೊರಗೆ ಹೋದಳು. ಚಾವಡೀಲಿ ಒಬ್ಬ ಮರಪುಟ್ಟಿ ಹೆಣೆಯೋ ಮೇದರೋನು "ಇಷ್ಟೊತ್ತುವರೆಗೆ ಏನೇ ಮಾಡ್ತಿದ್ದೆ? ಎಷ್ಟೊತ್ತು ಹಸ್ಕೊಂಡಿರಬೇಕು? " ಎಂದು ಸಿಕ್ಕಾಪಟ್ಟೆ ಕೆಳಕ್ಕೆ ಕೆಡವಿಕೊಂಡು ಗುದ್ದಿದ. ಅವಳು ಕಯಕ್ ಕುಯಕ್ ಅನ್ನಲಿಲ . ಆಗ ಮೇದರೋನು "ನಾನು ಗುದ್ದಿದರೆ ಹೇಗಿರುತ್ತದೆ ? ನಿನ್ನ ಗಂಡ ಗುದ್ದಿದರೆ ಹೇಗಿರುತ್ತದೆ ? " ಎಂದು ಕೇಳಿದ. ಅದಕ್ಕೆ ಇವಳು ಹೇಳಿದಳು- "ನೀನು ಗುದ್ದಿದರೆ ಕೆಳಗೇಳು ಲೋಕ ಮೇಗೇಳು ಲೋಕ ಕಂಡಂಗಾಗ್ತದೆ. ನನ್ನ ಗಂಡ ಗುದ್ದಿದರೆ ಮುಂಗಾರು ಸಿಡಿಲು ಹೊಡೆದಂಗಾಗ್ತದೆ"
ಅದೇ ವೇಳೆಗೆ ತನ್ನ ಕತ್ತೆ ಹುಡುಕಿಕೊಂಡು ಅಲ್ಲಿಗೆ ಬಂದಿದ್ದ ಅಗಸರವನು ಇವಳ ಮಾತನ್ನು ಕೇಳಿಸ್ಕೊಂದು "ಅವ್ವ, ಕೆಳಗೇಳು ಲೋಕ , ಮೇಗೇಳು ಲೋಕ ಕಂಡಂತ ನನ್ನ ತಾಯಿ ನನ್ನದೊಂದು ಕರಿಕತ್ತೆ ಇಲ್ಲ , ಕಂಡೇನ್ ತಾಯಿ" ಅಂದ . "ಇಲ್ಲ" ಅಂದಳು . ಅಗಸ ಮುಂದೆ ಹೋದ.

ಕತೇನೂ ಮುಂದೆ ಹೋಗುತ್ತದೆ. ಇದನ್ನ ಇಲ್ಲಿಗೇ ಬಿಡೋಣ.

ಹಿಂದೆ ’ಮಯೂರ’ ಮಕ್ಕಳವಿಭಾಗದಲ್ಲಿ - ಹೌದ್ರೀ - ಮಕ್ಕಳ ವಿಭಾಗದಲ್ಲೇ - ಯಾವ್ದೋ ಯುರೋಪ್ ದೇಶದ ಜನಪದ ಕತೇ ಓದಿದ್ದೆ. ಅದೂ ಇದೇ ತರ . ಅದು ಹೀಗಿತ್ತು.

ಒಬ್ಬ ಕಳ್ಳ ಒಂದು ತೋಟದ ಮನೆಗೆ ನುಗ್ಗಿದ. ಯಾರೋ ಬರುವ ಸದ್ದು ಕೇಳಿ ಅಲ್ಲೇ ಅಟ್ಟದಲ್ಲಿ ಅಡಗಿಕೊಂಡ . ಬಂದವರು ಒಬ್ಬ ಹುಡುಗಿ, ಒಬ್ಬ ಹುಡುಗ . ಜತೆಗೆ ತಿಂಡಿ ತಂದಿದ್ದರು . ಅವರು ಬಟ್ಟೆ ಬಿಚ್ಚಿ ಆಟ ಆಡಿದರು. ಆಮೇಲೆ ತಂದಿದ್ದ ತಿಂಡಿ ತಿನ್ತಾ ಕೂತರು . ಆಗ ಹುಡುಗಿ , " ಒಂದು ವೇಳೆ ನಮಗೆ ಮಗು ಆದ್ರೆ ಏನ್ ಮಾಡೋದು? " ಅಂದಳು . ಆಗ ಹುಡುಗ " ಅದಕ್ಕೆ ಯಾಕೆ ಚಿಂತೆ ಮಾಡ್ತೀಯ ? ಮೇಲಿದ್ದೋನು ನೋಡ್ಕೋತಾನೆ" ಅಂದ . ಆಗ ಅಟ್ಟದ ಮೇಲಿದ್ದ ಕಳ್ಳನಿಗೆ ಸಿಟ್ಟು ಬಂದು ಕೆಳಕ್ಕೆ ಧುಮುಕಿ " ಅಲ್ರಯ್ಯ, ನಿಂ ಮಗೂನ ನಾನ್ಯಾಕ್ರಯ್ಯ ನೋಡ್ಕೋಬೇಕು?" ಅಂತ ಸಿಟ್ಟು ಮಾಡಿದ . ಹುಡುಗ ಹುಡುಗಿ ಎಲ್ಲ ಅಲ್ಲೇ ಬಿಟ್ಟು ಓಡಿದರು. ಕಳ್ಳ ಎಲ್ಲಾ ತಿಂಡಿ ತಗೊಂಡು ಓಡಿ ಹೋದ. ಇದು ಅಲ್ಲಿಯ ಕತೆ.

Rating
No votes yet

Comments