ಇವೆರಡರಲ್ಲಿ ಪ್ರಮುಖ ಸುದ್ದಿ ಯಾವುದು?

ಇವೆರಡರಲ್ಲಿ ಪ್ರಮುಖ ಸುದ್ದಿ ಯಾವುದು?

ಮೊದಲನೇ ವ್ಯಕ್ತಿ:

ಆತ ಓರ್ವ ಸಂಸಾರಿ. ಹೆಂಡತಿ ಮಕ್ಕಳೊಡನೆ ಸುಖವಾಗಿ ಬಾಳುತ್ತಿರುತ್ತಾನೆ. ಒಂದು ದಿನ ಆತನಿಗೆ, ಜೀವನದಲ್ಲಿ ಜಿಗುಪ್ಸೆ ಉಂಟಾಗುತ್ತದೆ. ಎಲ್ಲವನ್ನೂ ತೊರೆಯಲು ಬಯಸುತ್ತಾನೆ. ತನ್ನ ಹೆಂಡತಿ ಮಕ್ಕಳಿಗೆ ಬೇಕಾದ ವ್ಯವಸ್ಥೆ ಮಾಡಿಡುತ್ತಾನೆ. ತಾನು ಸನ್ಯಾಸಿಯಾಗಿ ಕಾವಿ ಬಟ್ಟೆ ತೊಟ್ಟುಕೊಂಡು, ಒಂದು ಮಠವನ್ನು ಸೇರುತ್ತಾನೆ. ಅಲ್ಲಿನ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಜೀವನ ಸಾಗಿಸುತ್ತಿರುತ್ತಾನೆ.

ಎರಡನೇ ವ್ಯಕ್ತಿ:
ಈತ ಕಾವಿ ಬಟ್ಟೆ ತೊಟ್ಟು ಮಠದಲ್ಲಿ ಸ್ವಾಮಿಯಾಗಿ ಕೆಲಸ ನಿರ್ವಹಿಸುತ್ತಾ ಇರುತ್ತಾನೆ. ಜೊತೆಗೆ ಒಳ್ಳೆಯ ಗಾಯಕನೂ ಆಗಿರುತ್ತಾನೆ. ಒಮ್ಮೆ ಈತನ ಗಾಯನವನ್ನು ಮೆಚ್ಚಿದ ಒಂದು ಹೆಣ್ಣು ಈತನೊಂದಿಗೆ ಸಂಪರ್ಕ ಬೆಳೆಸಿಕೊಳ್ಳುತ್ತಾಳೆ. ಇವರಿಬ್ಬರ ನಡುವೆ ಪತ್ರ ಸಂಪರ್ಕ, ದೂರವಾಣಿ ಸಂಪರ್ಕ ಬೆಳೆಯುತ್ತದೆ. ಕಾಲ ಕ್ರಮೇಣ ಆ ಬಾಲೆ ಮತ್ತು ಈ ಮಠದ ಸ್ವಾಮಿಯ ನಡುವೆ ಪ್ರೇಮಾಂಕುರವಾಗುತ್ತದೆ. ಇದುವರೆಗೆ ಷಡ್ವೈರಿಗಳನ್ನು ಜಯಿಸಿದವನೆಂದು ಅಂದುಕೊಂಡಿದ್ದ, ಈ ಸನ್ಯಾಸಿ ಆಕೆಯ ಪ್ರೇಮಕ್ಕೆ ಮರುಳಾಗಿ, ಸನ್ಯಾಸವನ್ನು ತೊರೆದು, ಅಕೆಯನ್ನು ಮದುವೆಯಾಗಿ, ಸಂಸಾರಿಯಾಗುತ್ತಾನೆ.

ನನ್ನ ಪ್ರಶ್ನೆ:

ಇಲ್ಲಿ ನಿಜವಾಗಿಯೂ ಸುದ್ದಿ ಯಾವುದು? ಮನುಷ್ಯನಿಗೆ ಯಾವುದು ಕಷ್ಟ? ಪತ್ರಿಕೆಗಳು ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು? ಯಾವುದನ್ನು ಮುಖಪುಟ ಸುದ್ದಿಯನ್ನಾಗಿಸಬಹುದು?

-ಆಸು ಹೆಗ್ಡೆ

Rating
No votes yet

Comments