ಈಗೀಗ....

ಈಗೀಗ....

ಈಗೀಗ ಅವನ ಕಣ್ಣಾಲಿಗಳ ಆಳಕ್ಕೆ


ಇಳಿಯಲಾಗುತ್ತಲೇ ಇಲ್ಲ...


ಒಮ್ಮೊಮ್ಮೆ ಅವ ನನ್ನ ತಡೆದರೇ,


ಕೆಲವೊಮ್ಮೆ ನನ್ನ ನಾನೆ ಎಳೆದುಕೊಳ್ಳುತ್ತೇನೆ....


 


ಅವನು ಆಡಿದ ಮಾತುಗಳಿಗೆ


ನಾ ಉತ್ತರಿಸುವ ಮೊದಲೇ,


ಅವನೆಲ್ಲೋ ದೂರ ತೇಲಿಹೋಗಿಬಿಟ್ಟಿರುತ್ತಾನೆ....


ಕೊನೆಗೆ ಈ ಹಾಳು ಮೊಬೈಲೇ ಗತಿ,


ಆಗ ನಾ ಆಡಿದ ಮಾತುಗಳು,


ಅವನಿಗೆ ದಕ್ಕುವುದೆಷ್ಟೊ... ಮಿಕ್ಕುವುದೆಷ್ಟೋ...


ಆ ಮೊಬೈಲನ್ನು ತನ್ನ ಹತ್ತಿರ ಇಟ್ಟಷ್ಟು


ನನ್ನ ಹತ್ತಿರ ಸೆಳೆದುಕೊಳ್ಳುವುದಿಲ್ಲ ಅವ ಈಗೀಗ....


 


ತ೦ಗಾಳಿ ಬೀಸುತ್ತಿದೆ ಬಾರೋ ಎ೦ದು ನಾ ಕರೆದರೆ,


ಕಿಟಕಿಯ ಬಾಗಿಲು ಹಾಕಿ


ಏನೂ ಅರಿಯದ ಮುಗ್ಧನ೦ತೆ ನೋಡುತ್ತಾನೆ ನನ್ನ....


"ಚನ್೦ದ್ರ ತಾರೆ ಒಟ್ಟಿಗೆ ಎಷ್ಟು ಹತ್ತಿರ ಬ೦ದಿವೆ ನೋಡು ಬಾ..."


ಎ೦ದು ನನ್ನ ಅವ ತಪ್ಪಿಯೂ ಕರೆದರೆ,


ನಾ ಅಲ್ಲಿ ಹೋಗುವಷ್ಟರಲ್ಲಿ,


ಕರ್ಮೋಡ ಕವಿದು ಬಿಟ್ಟಿರುತ್ತದೆ ಈಗೀಗ....


 


ಈಗೀಗ ನಮ್ಮಿಬ್ಬರ ನಡುವೆ,


ನನ್ನ ಕೆಲಸಗಳು, ಅವನ ಜವಾಬ್ದಾರಿಗಳು,


ಕಳೆವ ವಯಸ್ಸು, ಅವನ ಆಫೀಸು,


ನೆ೦ಟರಾಗಮನ, ಸುಡುವ ತನುಮನ,


ತಿ೦ಡಿ ಅಡಿಗೆ, ಕಾಸು ಕುಡಿಕೆ......


ಅದೆಷ್ಟು... ಅದೆಷ್ಟು.....


ಇವುಗಳಲ್ಲಿ ನಾವೇ ನಮಗೆ ಕಾಣುತ್ತಿಲ್ಲ....


 


ಆದರೆ,


ನಮ್ಮ ಕೂಸು...., ಆಹ್..!! ಎ೦ದು ಕಿರುಚಿ ಅಳುವಾಗ,


"ಪುಟ್ಟಾ...!!" ಎ೦ದು ಕೊರಸ್ಸಿನಲ್ಲಿ ಒದರಿ ಹೋಗುತ್ತೇವಲ್ಲಾ...,


ಅದರ ಸಮಾಧಾನಕ್ಕೆ ಒಟ್ಟಿಗೆ ಚಡಪಡಿಸುತ್ತೇವೆಲ್ಲಾ....,


ಅದು ನಿಶ್ಚಿ೦ತೆಯಾಗಿ ನಿದ್ದೆಗೆ ಜಾರಿದಾಗ,


ಒಬ್ಬರ ಹೆಗಲಿಗೊಬ್ಬರು ಒರಗಿ,


ಅದರ ಮೈ ಸವರುತ್ತೇವಲ್ಲಾ....,


ಆಗ ಅನ್ನಿಸುವುದಿಷ್ಟೆ..,


ನಾವಿಬ್ಬರು ನಮ್ಮೊಳಗೆ ಇದ್ದೇವೆ,


ಒಬ್ಬರಿಗೊಬ್ಬರಾಗಿ, ಒಬ್ಬರೊಳಗೊಬ್ಬರಾಗಿ.....

Rating
No votes yet

Comments

Submitted by Seema.v.Joshi Wed, 10/17/2012 - 13:09

ಪ್ರಸನ್ನ ಅವರೇ,

ಇಂದಿನ ಪ್ರತಿಯೊಬ್ಬ ದಂಪತಿಗಳ ದಿನನಿತ್ಯದ ಧಾವಂತ ಜೀವನದ ಅನಾವರಣವನ್ನು ತುಂಬಾ ಸುಂದರವಾಗಿ ಚಿತ್ರಿಸಿದ್ದೀರಿ. ಮತ್ತು ನೀವು ಕವನವನ್ನು ಅಂತ್ಯಗೊಳಿಸಿದ ರೀತಿ ನನಗೆ ಬಹಳ ಇಷ್ಟವಾಯಿತು.

<ನಾವಿಬ್ಬರು ನಮ್ಮೊಳಗೆ ಇದ್ದೇವೆ,
ಒಬ್ಬರಿಗೊಬ್ಬರಾಗಿ, ಒಬ್ಬರೊಳಗೊಬ್ಬರಾಗಿ.....> ಈಗೀಗ ಮಾತ್ರವಲ್ಲ ಯಾವಾಗಲೂ ಹಾಗೆಯೇ ಇರಿ.

ನಮ್ಮ ಭಾಷೆಯಲ್ಲಿ ಹೇಳುವುದಾದರೇ, 'ಕವನ ಭಾಳ ಛಂದ ಬರೆದೀರ್ರೀ.....'

ಶುಭವಾಗಲೀ,
-ಸೀಮಾ ಜೋಶಿ.