ಈಜುವ ಶಾಲೆ
ಇಡೀ ಶಾಲೆಯೇ ಈಜುವುದನ್ನು ನೀವು ಎಲ್ಲಾದರೂ ಕೇಳಿದ್ದೀರ ಅಥವಾ ಕಂಡಿದ್ದೀರ. ನಾನು ಕಂಡಿಲ್ಲ, ಆದರೆ ಖಂಡಿತ ಕೇಳಿ ತಿಳಿದಿದ್ದೇನೆ.
ನನ್ನ ಅಪ್ಪ ಶಾಲಾ ಮಾಸ್ತರಾಗಿದ್ದರು ಎಂಬುದನ್ನು ಹಿಂದಿನ ಅಧ್ಯಾಯದಲ್ಲಿಯೇ ತಿಳಿಸಿದ್ದೇನೆ. ಅವರು ಮಾಸ್ತರರಾಗಿದ್ದು ಆಗಿನ ಗೋಬಿಚೆಟ್ಟಿಪ್ಪಾಳಯಂ ಡಿಸ್ಟ್ರಿಕ್ಟ್ ಬೋರ್ಡ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ. ಈ ಡಿಸ್ಟ್ರಿಕ್ಟ್ ವ್ಯಾಪ್ತಿಗೆ ಕೊಳ್ಳೇಗಾಲ, ತಾಳವಾಡಿ, ಬಣ್ಣಾರಿ ಮುಂತಾದ ಸ್ಥಳಗಳೆಲ್ಲ ಸೇರಿದ್ದವು. ಬಣ್ಣಾರಿ ಈಗ ತಮಿಳುನಾಡಿಗೆ ಸೇರಿದೆ. ಇದು ದಿಂಬಂಘಾಟ್ದಿಂದ ಕೆಳಕ್ಕೆ ಇಳಿದ ತಕ್ಷಣಸಿಗುವ ಗ್ರಾಮ. ಇಲ್ಲಿರುವ ಮಾರಿಯಮ್ಮನ ದೇವಸ್ಥಾನ ಬಹಳ ಪ್ರಸಿದ್ಧ. ಈಗಲೂ ಸಹ ಮಾರಿಯಮ್ಮನ ಜಾತ್ರೆಗೆ ಸಾವಿರಾರು ಜನ ಸೇರುತ್ತಾರೆ. ಮೈಸೂರು ಅರಸರ ಚರಿತ್ರೆಯನ್ನು ಗಮನಿಸಿದರೆ, ಬಣ್ಣಾರಿಯ ಹತ್ತಿರ ಇದ್ದ ಡಣಾಯಕನ ಕೋಟೆಯಲ್ಲಿ ಒಬ್ಬ ಪಾಳೇಗಾರನಿದ್ದನಂತೆ. ಅವನು ಮೈಸೂರು ಒಡೆಯರ ಸಾಮಂತನಾಗಿದ್ದ ಎಂಬ ಉಲ್ಲೇಖವಿದೆ. ಬಣ್ಣಾರಿಯ ಸುತ್ತಮುತ್ತಲು ದುರ್ಗಮ ಬೆಟ್ಟಗುಡ್ಡಗಳ ಪ್ರದೇಶ. ಬಣ್ಣಾರಿಯ ಹತ್ತಿರ ಭವಾನಿ ನದಿ ಹರಿಯುತ್ತದೆ. ಈ ಭವಾನಿ ನದಿಯು ಕಾವೇರಿಯ ಉಪನದಿ ಮತ್ತು ಇದು ತಮಿಳು ನಾಡಿನ ಭವಾನಿ ಎಂಬ ಸ್ಥಳದಲ್ಲಿ ಕಾವೇರಿಯೊಡನೆ ಸೇರುತ್ತದೆ.
ಈ ಭವಾನಿ ನದಿಗೆ ಸತ್ಯಮಂಗಲ ಮತ್ತು ಬಣ್ಣಾರಿಯ ನಡುವೆ ಈಗ ಲೋವರ್ ಭವಾನಿ ಡ್ಯಾಂ ಕಟ್ಟಿದ್ದಾರೆ. ಈ ಡ್ಯಾಂನಿಂದ ಬಹಳ ಪ್ರದೇಶಗಳು ಈಗ ವ್ಯವಸಾಯಕ್ಕೆ ಒಳಪಟ್ಟು ಫಲವತ್ತಾದ ಜಮೀನುಗಳಾಗಿ ಮಾರ್ಪಟ್ಟಿದೆ.
ನನ್ನ ಅಪ್ಪ ಈ ಭವಾನಿ ಡ್ಯಾಂ ಕಟ್ಟುವುದಕ್ಕೆ ಮುಂಚೆ ಆ ನದಿಯ ತೀರದಲ್ಲಿದ್ದ ಪೀರ್ ಕಡವು ಮತ್ತು ಪಟ್ರಮಂಗಲಂ ಎಂಬ ಗ್ರಾಮದ ಶಾಲೆಯಲ್ಲಿ ಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಪೀರ್ಕಡವು ಮತ್ತು ಪಟ್ರಮಂಗಲಂ ಗ್ರಾಮಗಳು ಬಣ್ಣಾರಿಯ ಮೇಲಕ್ಕೆ ಅರಣ್ಯ ಪ್ರದೇಶದ ಬೆಟ್ಟದ ಪ್ರಾಂತ್ಯದಲಿದ್ದ ಗ್ರಾಮಗಳು.
ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಭವಾನಿ ನದಿಯ ದಂಡೆಯಲ್ಲಿ ಒಂದು ಶಾಲೆ ನಿರ್ಮಿಸಿದ್ದರು. ಈ ಎರಡೂ ಗ್ರಾಮಗಳು ಸ್ವಲ್ಪ ಬೆಟ್ಟಗುಡ್ಡಗಳ ಮಧ್ಯದಲ್ಲಿ ಇದ್ದು ದುರ್ಗಮವಾಗಿದ್ದರಿಂದ ಈ ಶಾಲೆಗೆ ಮಾಸ್ತರಾಗಿ ಬಂದು ಕೆಲಸ ಮಾಡಲು ಜನ ಅಷ್ಟೊಂದು ಉತ್ಸಾಹ ತೋರುತ್ತಿರಲಿಲ್ಲ. ಇನ್ನೂ ಆಗತಾನೆ ಕೆಲಸಕ್ಕೆ ಸೇರಿ ಒಂದೆರಡು ವರ್ಷಗಳಾಗಿದ್ದ ನನ್ನ ಅಪ್ಪ ವಿದ್ಯಾಇಲಾಖೆಯ ಕಣ್ಣಿಗೆ ಬಿದ್ದ. ಸರಿ ಪೀರ್ಕಡವಿಗೆ ವರ್ಗವಾಗಿಬಿಟ್ಟಿತು. ಬೆಟ್ಟದ ತಳಭಾಗದ ಪ್ರದೇಶವಾದದ್ದರಿಂದ ಅಲ್ಲಿ ವರ್ಷವಿಡೀ ವಿಪರೀತ ಶೆಖೆ. ಆದರೆ ನದೀ ತೀರದಲ್ಲಿದ್ದರಿಂದ ಜನರು ನೀರಿಗೆ ಕಷ್ಟಪಡಬೇಕಾಗಿರಲಿಲ್ಲ. ಅಲ್ಲಿನ ಶಾಲೆಯನ್ನು ಭವಾನಿ ನದಿಯ ಆಚೆ ತೀರದಲ್ಲಿ ಕಟ್ಟಲಾಗಿತ್ತು. ಗ್ರಾಮಗಳೆರಡೂ ನದಿಯ ಈ ಕಡೆ ತೀರದಲ್ಲಿದ್ದುವು. ಶಾಲೆಗೆ ಹೋಗಬೇಕಾದರೆ ನದಿಯನ್ನು ದಾಟಿಕೊಂಡೇ ಹೋಗಬೇಕು. ಶಾಲೆಯನ್ನು ತಲುಪಲು ನದಿದಾಟುವುದು ಅನಿವಾರ್ಯವಾಗಿತ್ತು. ಇಂಥ ಶಾಲೆಗೆ ಮಾಸ್ತರಾಗಿ ನನ್ನ ಅಪ್ಪನಿಗೆ ವರ್ಗವಾಯಿತು.
ಆ ಕಾಲದಲ್ಲಿ ಬಾಲಕಿಯರು ಶಾಲೆಗೆ ಬರುವುದು ಬಹಳ ಅಪರೂಪ. ಎಲ್ಲೋ ಪಟ್ಟಣ ಪ್ರದೇಶದಲ್ಲಿ ಬಾಲಕಿಯರ ಶಾಲೆ ಇರುತ್ತಿದ್ದವೇ ವಿನಃ ಗ್ರಾಮೀಣ ಪ್ರದೇಶದಲ್ಲಂತೂ ಹೆಣ್ಣು ಮಕ್ಕಳು ಶಾಲೆಗೆ ಬರುವ ಅಭ್ಯಾಸವೇ ಇರಲಿಲ್ಲ. ನನ್ನ ಅಪ್ಪ ವರ್ಗವಾಗಿ ಬಂದ ಪೀರ್ಕಡವು ಶಾಲೆಯಲ್ಲಿ ಬಾಲಕಿಯರು ಇರಲೇ ಇಲ್ಲ. ಅಲ್ಲಿಗೆ ಬರುತ್ತಿದ್ದವರೆಲ್ಲಾ ಹುಡುಗರೇ.
ಅದೂ ಬೆಳೆಕಟಾವು ಮಾಡುವ ಅಥವಾ ಬಿತ್ತನೆ ಮಾಡುವ ಸಂದರ್ಭಗಳಲ್ಲಿ ಹುಡುಗರು ಶಾಲೆಗೆ ಬರುತ್ತಲೇ ಇರಲಿಲ್ಲ. ಅದು ತಮಿಳು ಭಾಷಿಕರ ಪ್ರದೇಶವಾದ್ದರಿಂದ ಮಾಸ್ತರನ್ನು ವಾಧ್ಯಾರ್ ಎಂದೇ ಕರೆಯುತ್ತಿದ್ದರು. ಸ್ಕೂಲ್ ವಾಧ್ಯಾರ್ ಒಬ್ಬನೇ ಇಡೀ ಊರಿಗೆ ವಿದ್ವಾನ್ ಮತ್ತು ಪಂಡಿತ. ಮಿಕ್ಕವರು ಅಷ್ಟು ಅಕ್ಷರಸ್ಥರಲ್ಲ. ತೋಟ, ತುಡಿಕೆ ಜಮೀನು ನೋಡಿಕೊಂಡಿರುತ್ತಿದ್ದರು.
ಊರಿನಲ್ಲಿ ಪ್ರಮುಖ ವ್ಯಕ್ತಿಗಳು ಅಂದರೆ ಕೌಂಡರ್ಮನೆ, ಕೌಂಡರ್ ಅಂದರೆ ಗೌಂಡರ್ ಅಥವಾ ಗೌಡ ಎಂದು ಕನ್ನಡದಲ್ಲಿ. ಅವರ ಮನೆಯಲ್ಲಿ ಮದುವೆ ಅಥವಾ ಬೇರೆ ಯಾವುದೇ ಶುಭ ಸಮಾರಂಭಗಳಲ್ಲಿ ಊರ ಜನರೆಲ್ಲ ಬಂದು ಮುಯ್ಯಿ ಒಪ್ಪಿಸುವುದು ಆಗಿನ ಸಂಪ್ರದಾಯ. ಮುಯ್ಯಿ ಒಪ್ಪಿಸಿ ಅದನ್ನು ಬರೆಯಿಸಬೇಕು. ಈ ಮುಯ್ಯಿ ಒಪ್ಪಿಸಿದ್ದನ್ನು ಸ್ವೀಕರಿಸಿ ಬರೆದುಕೊಳ್ಳುವುದು ಊರಿನ ಶಾಲೆಯ ವಾಧ್ಯಾರ್ ಕೆಲಸ. ಸಮಾರಂಭವೆಲ್ಲ ಮುಗಿದ ಮೇಲೆ ಮುಯ್ಯಿನ ಲೆಕ್ಕವನ್ನು ಗೌಂಡರ್ಗೆ ಕೊಟ್ಟು, ಅವನು ಈ ಕೆಲಸಕ್ಕಾಗಿ ಪ್ರತ್ಯೇಕವಾಗಿ ಕೊಡುವ ದಕ್ಷಿಣೆಯನ್ನು ಪಡೆದುಕೊಳ್ಳಬೇಕು. ಇದು ಅಂದಿನ ಕಾಲದಲ್ಲಿ ಆ ಊರುಗಳಲ್ಲಿ ಜಾರಿಯಲ್ಲಿದ್ದ ನಿಯಮ. ಇದನ್ನು ಶಾಲೆಯ ವಾಧ್ಯಾರ್ಗಳು ಮೀರುವ ಹಾಗಿಲ್ಲ. ನನ್ನಪ್ಪ ಸಹ ಗೌಂಡರ್ ಮನೆಯ ಮುಯ್ಯಿ ಲೆಕ್ಕವನ್ನು ಬರೆದು ದಕ್ಷಿಣೆ ಪಡೆದ ಸಂಗತಿಯನ್ನು ನಮಗೆಲ್ಲಾ ಹೇಳಿದ್ದರು. ಏತಕ್ಕೆಂದರೆ ಸುಗ್ಗಿ ಮತ್ತು ಬಿತ್ತನೆ ಸಮಯಗಳಲ್ಲಿ ಹುಡುಗರು ಶಾಲೆಗೆ ಬರುತ್ತಿರಲಿಲ್ಲವಲ್ಲ. ಮಾಸ್ತರಿಗೆ ಏನೂ ಕೆಲಸವಿಲ್ಲ. ಸರಿ ಮುಯ್ಯಿಲೆಕ್ಕವನ್ನಾದರೂ ಬರೆಯುತ್ತಿದ್ದರು.
ಈ ಶಾಲೆಯ ಭವಾನೀ ನದಿಯ ಆಚೆಯ ತೀರದಲ್ಲಿತ್ತು ಎಂದು ಮೊದಲೇ ತಿಳಿಸಿದೆ. ಆದರೆ ಊರು ಈ ಕಡೆಯ ತೀರದಲ್ಲಿತ್ತು. ವಿದ್ಯಾರ್ಥಿಗಳು ಮತ್ತು ಮಾಸ್ತರು ಎಲ್ಲ ಊರಿನಲ್ಲಿ ವಾಸ ಮಾಡುತ್ತಿದ್ದರು. ಶಾಲೆಯು ಕೆಲಸ ಮಾಡುವ ಸಮಯದಲ್ಲಿ ಮಾತ್ರ ಆಚಿನ ತೀರಕ್ಕೆ ಹೋಗಬೇಕು ಮತ್ತು ಶಾಲೆಯನ್ನು ನಡೆಸಬೇಕಾಗಿತ್ತು. ಮೊದಲೇ ಹೇಳಿದಂತೆ ಆ ಊರು ಬಹಳ ಶೆಖೆ ಪ್ರದೇಶ. ಶಾಲೆಯಲ್ಲಿ ಬರೀ ಹುಡುಗರದ್ದೇ ಕಾರುಬಾರು. ಹುಡುಗಿಯರಂತೂ ಇರಲೇ ಇಲ್ಲ.
ಏನು ಕಾರಣಕ್ಕಾಗಿ ಶಾಲೆಯನ್ನು ನದಿಯ ಮತ್ತೊಂದು ಬದಿಯಲ್ಲಿ ಕಟ್ಟಿದ್ದರೋ ಕಾಣೆ. ಅಂತೂ ಅಲ್ಲಿನ ಪರಿಸ್ಥಿತಿ ಹಾಗಿತ್ತು. ನನ್ನ ಅಪ್ಪ ಈಜುವುದರಲ್ಲಿ ಪ್ರವೀಣ.
ಈ ಶಾಲೆಗೆ ವರ್ಗವಾದ ಮೇಲೆ ನನ್ನ ಅಪ್ಪ ಆ ಪೀರ್ಕಡುವು ಗ್ರಾಮಕ್ಕೆ ಹೋಗಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡರು. ಆ ಊರಿನಲ್ಲಿ ಒಂದು ಮನೆಯನ್ನು ಬಾಡಿಗೆಗೆ ಏರ್ಪಾಡು ಮಾಡಿಕೊಂಡರು.
ಬೇಸಿಗೆ ರಜ ಮುಗಿದ ನಂತರ ಶಾಲೆಗಳು ಪುನಃ ಪ್ರಾರಂಭವಾಗುತ್ತದೆ. ಉಪಾಧ್ಯಾಯರುಗಳು ಸಹ ಈ ಸಮಯದಲ್ಲಿಯೇ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗವಾಗುವುದು ಪದ್ಧತಿ. ನನ್ನಪ್ಪನಿಗೂ ಈ ಸಮಯದಲ್ಲಿಯೇ ವರ್ಗವಾಯಿತು.
ಪೀರ್ಕಡುವಿಗೆ ವರ್ಗವಾಗಿ ಶಾಲೆ ಪ್ರಾರಂಭವಾಗುವ ಸಮಯವೂ ಬಂದಿತು. ತುಂಬಿಹರಿಯುತ್ತಿದ್ದ ಭವಾನಿ ನದಿಯ ಆ ಬದಿಯಲ್ಲಿ ಶಾಲೆ, ಊರು ಈ ಬದಿಯಲ್ಲಿ. ಆ ಶಾಲೆಯ ಮಾಸ್ತರು ಅಲ್ಲಿ ಓದುವ ಹುಡುಗರು, ಅಲ್ಲಿನ ಜವಾನ ಎಲ್ಲರೂ ಊರಿನಿಂದ ನದಿ ದಾಟಿ ಆ ಬದಿಯಲ್ಲಿರುವ ಶಾಲೆಗೆ ಹೋಗಬೇಕು. ಶಾಲೆ ಮುಗಿದ ಮೇಲೆ ಪುನಃ ಈ ಬದಿಯಲ್ಲಿರುವ ಊರಿಗೆ ಬರಬೇಕು.
ನದಿ ದಾಟಲು ಸೇತುವೆ ಇರಲಿಲ್ಲ. ತೆಪ್ಪ ಉಪಯೋಗಿಸಬೇಕು ಇಲ್ಲವೆ ಈಜು ಬರುವವರು ಈಜಿಕೊಂಡು ಆ ಕಡೆ ತೀರವನ್ನು ಸೇರಬೇಕು. ಈ ಪೀರ್ಕಡುವಿನ ಶಾಲೆಯ ವೈಶಿಷ್ಟ್ಯವೇ ಈ ಈಜುವಿಕೆಯದ್ದು. ಊರಿನಿಂದ ನದಿ ತೀರಕ್ಕೆ ಬಂದು ಉಪಾಧ್ಯಾಯರು, ಶಾಲಾ ವಿದ್ಯಾರ್ಥಿಗಳು ಮತ್ತು ಗುಮಾಸ್ತ, ಜವಾನ ಎಲ್ಲರೂ ತಮ್ಮ ತಮ್ಮ ಮೈಮೇಲಿನ ಶರ್ಟು ಮತ್ತು ಪಂಚೆಯನ್ನು ಬಿಚ್ಚಿ ತಲೆಗೆ ರುಮಾಲಿನಂತೆ ಸುತ್ತಿ, (ಚಡ್ಡಿ ಮಾತ್ರ ಮೈಮೇಲೆ) ನದಿಗೆ ಇಳಿದು ಎಲ್ಲರೂ ಒಟ್ಟಿಗೆ ಈಜಿಕೊಂಡು ಆ ಕಡೆ ತೀರವನ್ನು ಸೇರುತ್ತಿದ್ದರಂತೆ. ಆ ತೀರದಲ್ಲಿ ತಲೆಗೆ ಸುತ್ತಿದ್ದ ಮುಂಡಾಸನ್ನು ಬಿಚ್ಚಿ ಚೌಕದಿಂದ ಮೈ ಒರಸಿಕೊಂಡು ಶರ್ಟು ಧೋತರಗಳನ್ನು ಧರಿಸಿ ಶಾಲೆಗೆ ಹಾಜರಾಗುತ್ತಿದ್ದರು. ಮಾಸ್ತರು, ಜವಾನ ಮತ್ತು ಗುಮಾಸ್ತ ಇವರೆಲ್ಲ ಚೆಡ್ಡಿ ಧರಿಸಿದ್ದರೆ ಶಾಲೆಯ ಮಕ್ಕಲೆಲ್ಲ ಬರೀ ಲಂಗೋಟಿಯಲ್ಲಿಯೇ ಈಜಿಕೊಂಡು ಬರುತ್ತಿದ್ದರಂತೆ.
ಪುನಃ ಸಂಜೆ ಶಾಲೆ ಮುಗಿದ ನಂತರ ಈ ಈಜುವ ಕಾರ್ಯಕ್ರಮ ಪುನರಾವರ್ತನೆ ಆಗುತ್ತಿತ್ತು. ನನ್ನ ಅಪ್ಪ ಆ ಊರಿನಲ್ಲಿ ಕೆಲಸ ಮಾಡಿದ್ದು ಒಂದು ವರ್ಷದವರೆಗೆ ಮಾತ್ರ. ಆ ಒಂದು ವರ್ಷ ಪೂರ್ತಾ ದಿನಾ ಶಾಲೆಗೆ ಈಜಿಕೊಂಡೇ ಹೋಗಿ ಮಾಸ್ತರಿಕೆ ಮಾಡಿದರಂತೆ.
ಮುಂದೆ ಲೋವರ್ ಭವಾನಿ ಡ್ಯಾಂ ಕಟ್ಟಿದ ಮೇಲೆ ಈ ಎರಡೂ ಗ್ರಾಮಗಳು ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆ ಆಗಿ ಹೋದವು. ಪೀರ್ಕಡು ಗ್ರಾಮವನ್ನು ಸ್ಥಳಾಂತರಿಸಿ ಈಗ ಬಣ್ಣಾರಿಯ ಹತ್ತಿರ ಹೊಸದಾಗಿ ನಿರ್ಮಿಸಿದ್ದಾರೆ.
ಭಾರತದ ಪ್ರಧಾನಿ ಆಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಾಲೆಗೆ ಈಜಿಕೊಂಡು ಹೋಗಿ ವಿದ್ಯಾಭ್ಯಾಸ ಮಾಡಿದರು ಎಂದು ಓದಿ ತಿಳಿದಿದ್ದೇವೆ.
ಆದರೆ ಈ ಹಳೆ ಪೀರ್ಕಡವು ಗ್ರಾಮದ ವಿದ್ಯಾರ್ಥಿಗಳು, ಮಾಸ್ತರು ಎಲ್ಲಾ ಲಾಲ್ಬಹದ್ದೂರರಿಗಿಂತ ಮುಂಚೆಯೇ ಈಜಿಕೊಂಡೇ ವ್ಯಾಸಂಗ ಮಾಡಿದ್ದರು ಎಂದು ತಿಳಿಯುತ್ತದೆ.
Comments
ಉ: ಈಜುವ ಶಾಲೆ
ಅಬ್ಬಾ!