ಈ ದಿನ ಜನುಮದಿನಾ.....(ಈಚಿನ ಸಾವಿನ ಸುದ್ದಿಗಳ ನಡುವೆ ಹುಟ್ಟನ್ನು ನೆನೆಸುತ್ತಾ...)
...........ಶುಭಾಶಯ ನಮ್ಮ ಶುಭಾಶಯ!
ಏಪ್ರಿಲ್ ಮಾಸ ಬಂತೆಂದರೆ, ಬೇರೆಲ್ಲಕ್ಕಿಂತ ಮೊದಲು ಮನದಲಿ ಮಿಂಚಿ ಮಳೆಯಾಗುವ ಭಾವಲಹರಿಯೆಂದರೆ - ಡಾಕ್ಟರ ರಾಜಕುಮಾರರ ನೆನಪು. ಏಪ್ರಿಲ್ 24ರ ಹುಟ್ಟುಹಬ್ಬದ ನೆನಪು ಮಾಡುವ ಈ ಮಾಸ ಪ್ರತಿ ವರ್ಷಕ್ಕಿಂತ ಈ ಬಾರಿ ಕೊಂಚ ಹೆಚ್ಚೇ ತಳಮಳದೊಂದಿಗೆ ಕಾಡುತ್ತಿದೆ, ಮತ್ತೊಂದು ಕಾರಣದಿಂದಾಗಿ ; ಈ ಕೆಲವೆ ದಿನಗಳ ಹಿಂದೆಯಷ್ಟೆ ಸ್ವರ್ಗಸ್ತರಾದ ಹಾಗೂ ರಾಜ್ ಹೆಸರಿನೊಂದಿಗೆ ಹೇಳಲಿ, ಬಿಡಲಿ ತನ್ನಂತಾನೆ ಸದಾ ತಳುಕು ಹಾಕಿಕೊಂಡು ಬರುವ ಡಾಕ್ಟರ ಪಿ.ಬಿ.ಶ್ರೀನಿವಾಸರನ್ನು ನೆನೆದು. ಎರಡು ಹಿರಿ ಜೀವಗಳ ಸಖ್ಯ ಆ ಲೋಕದಲ್ಲಾದರೂ ಮುಂದುವರಿಯಲಿದೆಯಲ್ಲ ಎಂಬ ನಿರಾಳತೆಯೊಂದಿಗೆ ಈ ನೆನಕೆಯನ್ನು ಆ ಶ್ರೇಷ್ಟಜೀವಿಗಳ ಸ್ಮರಣೆಗೆ ಅರ್ಪಿಸುತ್ತೇನೆ.
ಡಾ.ರಾಜ್ ಬಗ್ಗೆ ಹೇಳಬೇಕಾದ್ದೆಲ್ಲ ಯಾರೆಲ್ಲ ಹೇಳಿ ಮುಗಿಸಿರುವ ಪರಿಸ್ಥಿತಿಯಲ್ಲಿ, ನಾನು ಏನು ಬರೆದರೂ ಅವುಗಳದೆ ಒಂದರ ಪುನರವತರಣಿಕೆಯಾಗುವುದರಿಂದ, ಅದರ ಬದಲಿಗೆ ತುಸು ಸ್ವಂತದ ನೆನಪು, ಅನುಭವಗಳಿಗೆ ಮೀಸಲಿಡುವುದೆ ವಾಸಿಯೆಂದು ಕಾಣುತ್ತದೆ. ನಾನು ಬೆಳೆದಿದ್ದೆ ಒಂದು ರೀತಿಯಲ್ಲಿ ರಾಜ್ ಚಿತ್ರ ನೋಡಿಕೊಂಡೆ - ಅದರಲ್ಲೂ ಟೆಂಟಿನಲ್ಲಿ. ಕುದುರೆಯೇರಿ ಜೀನಿಡಿದ ರಾಜಕುಮಾರನಾಗಲಿ, ಕತ್ತಿ ಹಿಡಿದ ಕಠಾರಿ ವೀರನಾಗಲಿ, ಕರಿ ಮುಸುಕಿನ ವೀರ ಕೇಸರಿಯಾಗಲಿ, ಚಾತುರ್ಯದಿಂದ ದೇವರ ಗೆದ್ದ ಮಾನವನಾಗಲಿ, ಸ್ಮಶಾನ ಕಾದ ಹರಿಶ್ಚಂದ್ರನಾಗಲಿ..ಈ ಕೊನೆಯಿಲ್ಲದ ಪಟ್ಟಿಯ ಯಾರೆ ಆಗಲಿ - ಅವರೆಲ್ಲರನ್ನು ಕಂಡಿದ್ದು, ಅನುಭಾವಿಸಿದ್ದು, ಆದರ್ಶವಾಗಿ ಹೊತ್ತುಕೊಂಡಿದ್ದೆಲ್ಲಾ ಡಾ.ರಾಜ್ ಮುಖದ ಮೂಲಕವೆ ; ಅದರಲ್ಲೂ ನಾಕಾಣೆಯ ಟೆಂಟಿನ ನೆಲದ ಮೇಲೆ ಕರ್ಚೀಪೊ, ದಿನ ಪತ್ರಿಕೆಯೊ ಹಾಸಿ ಬಿಟ್ಟ ಕಣ್ಣು, ಬಾಯಿ ಬಿಟ್ಟಂತೆ ಪದೆ ಪದೆ ನೋಡಿದ್ದೆ, ನೋಡಿದ್ದು ಅದೆಷ್ಟು ಬಾರಿಯೊ. ನಿಜ ಹೇಳಬೇಕೆಂದರೆ, ನಾನು ಸ್ವಲ್ಪ ನೆಟ್ಟಗೆ ಕನ್ನಡ ಓದಲು, ಬರೆಯಲು ಕಲಿತಿದ್ದು ಸ್ಕೂಲಿಗಿಂತ ಹೆಚ್ಚಾಗಿ, ಅವರ ಚಿತ್ರಗಳನ್ನು ನೋಡಿಯೆ! ಯಾವ ಮೇಸ್ಟರ ಬೆತ್ತದ ನೆರವೂ ಇಲ್ಲದೆಯೆ, ಯಾವ ಪರೀಕ್ಷೆ ಬರೆವ ಭೀತಿಯೂ ಇರದೆ, ವ್ಯಾಕರಣಗಳ ಗೋಜು, ಗೊಂದಲದ ಹವಣಿಕೆಯಿಲ್ಲದೆ ಬರಿ ಅವರ ಚಿತ್ರಗಳ ಡೈಲಾಗು ಮತ್ತು ಅದನ್ನವರು ಹೇಳುವ ಶೈಲಿಯನ್ನು ನೋಡಿಯೆ, ಅನುಕರಿಸಿಯೆ ಕಲಿತಿದ್ದು! ಹೀಗೆ ಆಡುತ್ತಾ, ಹಾಡುತ್ತ ಕಲಿತಿದ್ದಕ್ಕೊ ಏನೊ, ಈಗಲೂ ಮರೆಯದ ಹಾಗೆ ಭದ್ರವಾಗಿ ಬೇರೂರಿಬಿಟ್ಟಿದೆ, ಮನದಾಳದಲ್ಲಿ.
ಆಗೆಲ್ಲ ನಮಗೆ ಮನೆಯಲ್ಲಿ ಹೀಗೆ ಇರಬೇಕು, ಇರಬಾರದು ಎಂದು ಹೇಳಿ ಅಂಕೆಯಲ್ಲಿಡುವ, ಮಾರ್ಗದರ್ಶಕರಾಗುವ ಆದರ್ಶವ್ಯಕ್ತಿಗಳೆ ಇರಲಿಲ್ಲ. ಬೆಳೆದ ವಾತಾವರಣ, ಜಾಗ ಎಲ್ಲವು ತೀರಾ ಸಾಮಾನ್ಯವಾದ ಪರಿಸರ - ಓದಲೇಬೇಕೆನ್ನುವ ಒತ್ತಾಯ, ಒತ್ತಡಗಳಿರದೆ ಇಷ್ಟಬಂದ ಹಾಗೆ ಸುತ್ತಾಡಿಕೊಂಡಿದ್ದರೂ ಯಾರೂ ಕತ್ತಿನಪಟ್ಟಿ ಹಿಡಿದು , ಕೆನ್ನೆಗೆರಡು ಬಾರಿಸಿ ಕೂರಿಸದ, ಬುದ್ದಿ ಹೇಳದಂತಹ ಸುತ್ತುಮುತ್ತಲಲಿ ಬೆಳೆದ ನಮಗೆ ಯಾವುದು ಸರಿ, ಯಾವುದು ತಪ್ಪೆಂಬ ಪ್ರಜ್ಞೆಯಾದರೂ ಎಲ್ಲಿತ್ತು ಹೇಳಿ? ಆದರೆ ಇಲ್ಲೆ ನೋಡಿ ನಡೆದದ್ದು ಜಾದು! ನಮಗರಿವಿಲ್ಲದಂತೆ ಆ ವಯಸಿನಲ್ಲೆ ಸಿನಿಮಾದಾಸರಾದ ನಾವು, ಅದೇ ಅರಿವಳಿಕೆಯಲ್ಲಿ ಡಾಕ್ಟರ ರಾಜ್ ಚಿತ್ರಗಳ ಪಾತ್ರಗಳಾಳಕ್ಕೆ ಮುಳುಗಿ, ಅನುಭವಿಸಿ, ಅನುಕರಿಸಿ - ಗೊತ್ತಿದ್ದೊ, ಗೊತ್ತಿಲ್ಲದೆಯೊ ಅವುಗಳನ್ನೆ ಆದರ್ಶದ ಮಾದರಿಯನ್ನಾಗಿ ಮನದಲ್ಲಿ ಸ್ವೀಕರಿಸಿಕೊಂಡುಬಿಟ್ಟೆವೆಂದು ಕಾಣುತ್ತದೆ. ಹೀಗಾಗಿ, ಯಾವುದು ಸರಿಯಾದ ನಡುವಳಿಕೆಯೆಂಬ ಪ್ರಶ್ನೆ ಮನದಲುದ್ಭವಿಸಿದರೆ ಯಾವುದೆ ತಕರಾರಿಲ್ಲದೆ ಮನ ಸರಕ್ಕನೆ, ರಾಜ್ ಚಿತ್ರದ ಯಾವುದೋ ಸೀನೊಂದನ್ನು ನೆನೆಸಿಕೊಂಡು ಆ ಪಾತ್ರದ ಯಥಾವತ್ತನ್ನೆ ನಕಲು ಮಾಡಿಬಿಡುತ್ತಿತ್ತು! ಹಿರಿಯರಲ್ಲಿ ಗೌರವ ವಿಶ್ವಾಸ, ತಾಳ್ಮೆ, ಸಹನೆ, ಹೊಂದಾಣಿಕೆ, ಧೈರ್ಯ, ಸಾಹಸ, ಸಾಮಾಜಿಕ ವರ್ತನೆ, ಸ್ವಭಾವ - ಹೀಗೆ ಎಲ್ಲಾ ಭಾವಕಲ್ಪಗಳು ಒಂದಲ್ಲಾ ಒಂದು ರೀತಿ, ಅವರ ಚಿತ್ರಗಳ ಅಭಿನಯದ ಮೂಸೆಯಿಂದ ಮನದಾಳಕ್ಕಿಳಿದು ಪ್ರತಿಷ್ಟಿತವಾದದ್ದೆ. ಅಷ್ಟೂ ಸಾಲದೆಂಬಂತೆ ಅದೆ ಶಿಸ್ತು, ವಿನಯ, ಸಜ್ಜನಿಕೆ , ಸರಳತೆಯನ್ನು ನಿಜ ಜೀವವನದಲ್ಲೂ ಅವರ ಹಾಗೆ ಅಳವಡಿಸಿಕೊಂಡು ಮಾದರಿಯಾದ ಅದೆಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ, ನೀವೆ ಹೇಳಿ? ನನ್ನ ಗೆಳೆಯ ಪದೆಪದೆ ಹೇಳುವ ಹಾಗೆ ನಿಜ ಜೀವನದಲ್ಲಿ ಬೀಡಿ, ಸಿಗರೇಟು ಸೇದದ, ಮದ್ಯಪಾನ ಮಾಡದ ಇಂತಹ ಎಷ್ಟು ಮಹನೀಯರನ್ನು ನಾವು ಕಾಣಬಹುದು - ಆ ರೀತಿಯ ಪ್ರಸಿದ್ದಿ, ಶ್ರೇಷ್ಟತೆಯ ಮಟ್ಟವನ್ನು ಮುಟ್ಟಿದ ಮೇಲೂ? ಇದಲ್ಲವೆ ಅತಿಶಯ...ನನ್ನಂತಹ ಇನ್ನೂ ಅದೆಷ್ಟೊ ಸಾಧಾರಣ ಸಾಮಾನ್ಯರನ್ನು ನಮಗರಿವೆ ಇಲ್ಲದ ಹಾಗೆ ನಡೆ, ನುಡಿ, ಸಂಸ್ಕೃತಿ, ಭಾಷಾಪ್ರೇಮಗಳನ್ನೆಲ್ಲ ಹುಟ್ಟಿಸಿ, ಜೀವನವೆಲ್ಲಾ ತುಂಬಿ ತುಳುಕುವಂತೆ ಮಾಡಿದ್ದು? ಸಿನಿಮಾದಂತ ಬಲವಾದ ಮಾಧ್ಯಮದ ಜತೆ ಇಂತಹ ಸುಧೃಡ ವ್ಯಕ್ತಿತ್ವದ ಪ್ರೇರಕ ಶಕ್ತಿಯ ಪ್ರಭಾವಕ್ಕೊಳಗಾಗುವ ಭಾಗ್ಯ, ಈಗಿನ ಪೀಳಿಗೆಯ ಅದೆಷ್ಟು ಜನರಿಗೆ ಲಭ್ಯ?
ಒಬ್ಬ ವ್ಯಕ್ತಿ, ಶಕ್ತಿಯಾಗಿ ರೂಪುಗೊಂಡರೆ ಉಂಟುಮಾಡುವ ಪ್ರಭಾವಗಳೊಂದೊಂದು ತಮ್ಮದೆ ಆದ ದಂತಕಥೆಗಳಾಗಿ ಜನಮನದಲ್ಲಿ ನಿಂತು ಹೋಗುತ್ತವೆ. ಆದರೆ ಡಾ.ರಾಜ್ ವಿಷಯದಲ್ಲಿ, ಇದು ಇನ್ನು ಒಂದು ಹೆಜ್ಜೆ ಮುಂದು. ಆ ರೀತಿ ಪ್ರಭಾವ ಬೀರಿದ ಕಥೆಗಳ ಲೆಕ್ಕವೆ ಅಗಣಿತವಾಗಿ ಎಷ್ಟೊ ಮನೆ, ಮನಗಳಲ್ಲಿ ಬೆಳಕಿಗೆ ಬರದೆ ಹಾಗೆ ಉಳಿದುಹೋಗಿವೆ - ಅದೂ ಮತ್ತೊಂದು ಸಾಮಾನ್ಯ ಅನುಭವ ಎನ್ನುವ ಹಾಗೆ. ಸಾಮಾನ್ಯತನದ ಅಸಾಮಾನ್ಯತೆಯೆ ಡಾ.ರಾಜ್ ವ್ಯಕ್ತಿತ್ವ ವಿಶೇಷಣದ ವೈಶಿಷ್ಟ್ಯ! ಇದರಿಂದಾಗಿಯೆ ಮನೆಯಲ್ಲಿ ಯಾವುದೇ ಹಬ್ಬವನ್ನೂ ಆಚರಿಸದಿದ್ದ ಗೆಳೆಯನೊಬ್ವನ ಮನೆಯಲ್ಲಿ ಪ್ರತಿವರ್ಷ ಏಪ್ರಿಲ್ 24ನ್ನು ಮಾತ್ರ ಹಬ್ಬದ ಹಾಗೆ ಆಚರಿಸುತ್ತಿದ್ದುದು ಕಂಡಾಗ ಅಚ್ಚರಿಯಾಗುವುದಿಲ್ಲ. ಯಾರದೊ ಮನೆಗೆ ಶ್ರೀಸಾಮಾನ್ಯನ ಹಾಗೆ ಬಂದು ಕೂತು ಮುದ್ದೆಯುಂಡು ಹೋದ ಕಥೆಯೂ ಅಸಾಧಾರಣವೆನಿಸುವುದಿಲ್ಲ. ಸಾಧಕನೊಬ್ಬನ ಬದುಕೆ ಸಾಧನೆಯಾದರೆ ಏನೆಲ್ಲಾ ಆಗಬಹುದೊ ಅದಕ್ಕೆ ಜೀವಂತ, ಜ್ವಲಂತ ಉದಾಹರಣೆಯೆ ಡಾ.ರಾಜ್ ಬದುಕು ಎಂದರೆ ತಪ್ಪಾಗಲಾರದು.
ಬರಿಯುತ್ತ ಹೊರಟರೆ ಮುಗಿಯದ ಕಥಾಸರಿತ್ಸಾಗರದಂತೆ ಅವರ ಬದುಕು, ಹಿನ್ನಲೆ, ಪ್ರಭಾವ. ಬದುಕಿದ್ದಾಗಲೂ ದಂತಕಥೆ, ಸತ್ತ ಮೇಲೂ ದಂತಕಥೆಯಾದವರ ಅಹವಾಲು ಅವರದು. ಹಾಗೆಯೆ ಅವರ ಕುರಿತು ಬರೆವವರಲ್ಲಿ ನಾನು ಮೊದಲಿಗನೂ ಅಲ್ಲ, ಹಾಗೆಯೆ ಕಡೆಯವನೂ ಅಲ್ಲ - ಹಾಗಿದೆ ಅವರ ವ್ಯಕ್ತಿತ್ವ ಹರಿಸಿದ ಪ್ರಭಾವದ ಚಿಲುಮೆ. ಆ ವ್ಯಕ್ತಿತ್ವದ ಹೊನ್ನ ಸಂಚಿಕೆಯ ತೃಣಮಾತ್ರದಷ್ಟು ಅಕ್ಷರ ಪುಟಗಳಾಗಿ ನಮ್ಮ ತನುಮನ ಸೇರಿ, ನೇವರಿಸಿ ಹರಸಿದರೆ ನಾವಷ್ಟರಮಟ್ಟಿಗೆ ಧನ್ಯರು!
ಆ ನೆನಪಿನೋಲೆಯ ಪಯಣದ ಜಾತ್ರೆಯನ್ನು ಈ ಕವನ-ನಮನದೊಂದಿಗೆ ಮುಗಿಸುತ್ತೇನೆ, ಸ್ವರ್ಗಕ್ಕೆ ರವಾನಿಸಿದ ಜನುಮದಿನದ ಶುಭಾಶಯಗಳೊಂದಿಗೆ!
ನಡೆಸಿ ಸ್ವರ್ಗದಲು ಕನ್ನಡ ಮೇಳ......!
--------------------------------------
ಹಾರಿತ್ತು ಶರೀರ ಅವಸರದಿ
ನೇರ ಹಿಡಿದೆ ಸ್ವರ್ಗದ ಹಾದಿ
ಎದೆ ಸ್ತಂಭನ ಕನ್ನಡ ಸನಾದಿ
ಬಿಡದೆ ಕಾಡಿ ಸಾವಿನ ಬೂದಿ!
ಕಥೆಯಲ್ಲ ದಂತ ಕಥೆಯಾದ
ದಂತವೇ ಪೂರಾ ಮೈಯಾದ
ಕಥೆಕಥೆಯೆ ದಂತದೈರಾವತ
ಹೊತ್ತೊಯ್ಯೆ ಸವಾರಿ ಕರೆದಿತ್ತ!
ನಿನಗೆ ನೀನೆ ಆಗಿ ಬಿಳಿಯಾನೆ
ಕನ್ನಡಕೆ ಕಲ್ಪವೃಕ್ಷವಾಗಿ ಗೊನೆ
ನಿನಗೇಕೆ ಬೇಕಿತ್ತು ಕಾಮಧೇನು
ಬರಡಾಗಿಸೀಸಗ್ಗ ಆಸ್ವರ್ಗವೇನು?
ಹೇಳದೆ ಬಂದತೆಯೇ ಹೊರಟೆ
ಆ ಊರಿಗೆ ಸೇರಿದ ಮೇಲ್ಹರಟೆ
ಮಾತೂಕಥೆಗಿರಬೇಕಿಲ್ಲವೆ ಜತೆ
ಚಿ.ಉದಯಶಂಕರರ ರಸಿಕತೆ!
ಆದರೂ ಈ ಹುಟ್ಟುಹಬ್ಬ ಹತ್ತಿರ
ಜತೆಗೆ ಹಾಡುವವರಿಲ್ಲದ ಬೇಸರ
ಕಳೆಯಲೆಂದೇ ಪಿ.ಬಿ.ಶ್ರೀನಿವಾಸು
ಉಡುಗೊರೆ ಕಳಿಸಿದ್ದೂ ಸ್ವೀಕರಿಸು!
ಅಲ್ಲೂ ನಡೆಯಲಿ ಆಸ್ಥಾನ ಗೋಷ್ಟಿ
ಅಮರಾವತಿಗೂ ಮೆರುಗಿತ್ತು ವೃಷ್ಟಿ
ನಾವಿಲ್ಲಿ ಕಳಕೊಂಡ ಮುತ್ತುರಾಜರು
ಮನರಂಜನೆ ತಣಿಯೆ ಸಭಾಸದರು!
ನಾವ್ಬಿಟ್ಟ ಭಾಗ್ಯ ನಮ್ಮ ಗೂಡಿನ ಹಕ್ಕಿ
ಜತನದಿ ಕಾಪಾಡಿ ನಿಮ್ಮ ಹೊಣೆ ಗಟ್ಟಿ
ಕನ್ನಡಾತ್ಮರ ಮೇಳ ಸಮ್ಮೇಳನ ನಡೆಸಿ
ಕನ್ನಡ ಕನ್ನಡತನವಲ್ಲೂ ಉಳಿಸಿ ಬೆಳೆಸಿ!
-----------------------------------------------------------------------------------------------------------------------
ನಾಗೇಶ ಮೈಸೂರು, ಸಿಂಗಾಪುರದಿಂದ, (24.ಏಪ್ರಿಲ್. 2013ರ ರಾಜ್ ಹುಟ್ಟುಹಬ್ಬದ ನೆನಪಾಗಿ)
-----------------------------------------------------------------------------------------------------------------------
Rating
Comments
ನಾಗೇಶರೇ, ಲಕ್ಷ್ಮೀಕಾಂತ ಇಟ್ನಾಳ ರ
ನಾಗೇಶರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆ. ಉತ್ತಮ ಬರಹ. ಡಾ. ರಾಜ್ ರ ವ್ಯಕ್ತಿತ್ವದ ನೆನಕೆಗಳನ್ನು, ನಮ್ಮಗಳ ಮೇಲೆ ಮಾಡಿದ ಸಂಸ್ಕೃತಿಯ ಪ್ರಭಾವವನ್ನು ಚನ್ನಾಗಿ ಬರೆದಿದ್ದೀರಿ, ಹಂಚಿಕೊಂಡಿದ್ದಕ್ಕೆ ಧನ್ಯವಾದ.
In reply to ನಾಗೇಶರೇ, ಲಕ್ಷ್ಮೀಕಾಂತ ಇಟ್ನಾಳ ರ by lpitnal@gmail.com
ನಮಸ್ಕಾರ, ಲಕ್ಷ್ಮಿಕಾಂತ ಇಟ್ನಾಳರೆ
ನಮಸ್ಕಾರ, ಲಕ್ಷ್ಮಿಕಾಂತ ಇಟ್ನಾಳರೆ - ನೀವಂದಂತೆ ಡಾ.ರಾಜ್ ಪ್ರಭಾವ ಸಾಕಷ್ಟು ಜನರ ಮೇಲೆ ದಟ್ಟವಾಗಿ ಪ್ರಭಾವ ಬೀರಿ, ವ್ಯಕ್ತಿತ್ವದ ಭಾಗಗಳಾಗಿ ಅಂತರ್ಗತವಾಗಿ ಹೋಗಿದೆ. ತಮ್ಮ ಎಂದಿನ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದ, ನಾಗೇಶ ಮೈಸೂರು, ಸಿಂಗಾಪುರದಿಂದ.
"ಆಗೆಲ್ಲ ನಮಗೆ ಮನೆಯಲ್ಲಿ ಹೀಗೆ
"ಆಗೆಲ್ಲ ನಮಗೆ ಮನೆಯಲ್ಲಿ ಹೀಗೆ ಇರಬೇಕು, ಇರಬಾರದು ಎಂದು ಹೇಳಿ ಅಂಕೆಯಲ್ಲಿಡುವ, ಮಾರ್ಗದರ್ಶಕರಾಗುವ ಆದರ್ಶವ್ಯಕ್ತಿಗಳೆ ಇರಲಿಲ್ಲ. ಬೆಳೆದ ವಾತಾವರಣ, ಜಾಗ ಎಲ್ಲವು ತೀರಾ ಸಾಮಾನ್ಯವಾದ ಪರಿಸರ - ಓದಲೇಬೇಕೆನ್ನುವ ಒತ್ತಾಯ, ಒತ್ತಡಗಳಿರದೆ ಇಷ್ಟಬಂದ ಹಾಗೆ ಸುತ್ತಾಡಿಕೊಂಡಿದ್ದರೂ ಯಾರೂ ಕತ್ತಿನಪಟ್ಟಿ ಹಿಡಿದು , ಕೆನ್ನೆಗೆರಡು ಬಾರಿಸಿ ಕೂರಿಸದ, ಬುದ್ದಿ ಹೇಳದಂತಹ ಸುತ್ತುಮುತ್ತಲಲಿ ಬೆಳೆದ ನಮಗೆ ಯಾವುದು ಸರಿ, ಯಾವುದು ತಪ್ಪೆಂಬ ಪ್ರಜ್ಞೆಯಾದರೂ ಎಲ್ಲಿತ್ತು ಹೇಳಿ? ಆದರೆ ಇಲ್ಲೆ ನೋಡಿ ನಡೆದದ್ದು ಜಾದು! ನಮಗರಿವಿಲ್ಲದಂತೆ ಆ ವಯಸಿನಲ್ಲೆ ಸಿನಿಮಾದಾಸರಾದ ನಾವು, ಅದೇ ಅರಿವಳಿಕೆಯಲ್ಲಿ ಡಾಕ್ಟರ ರಾಜ್ ಚಿತ್ರಗಳ ಪಾತ್ರಗಳಾಳಕ್ಕೆ ಮುಳುಗಿ, ಅನುಭವಿಸಿ, ಅನುಕರಿಸಿ - ಗೊತ್ತಿದ್ದೊ, ಗೊತ್ತಿಲ್ಲದೆಯೊ ಅವುಗಳನ್ನೆ ಆದರ್ಶದ ಮಾದರಿಯನ್ನಾಗಿ ಮನದಲ್ಲಿ ಸ್ವೀಕರಿಸಿಕೊಂಡುಬಿಟ್ಟೆವೆಂದು ಕಾಣುತ್ತದೆ. ಹೀಗಾಗಿ, ಯಾವುದು ಸರಿಯಾದ ನಡುವಳಿಕೆಯೆಂಬ ಪ್ರಶ್ನೆ ಮನದಲುದ್ಭವಿಸಿದರೆ ಯಾವುದೆ ತಕರಾರಿಲ್ಲದೆ ಮನ ಸರಕ್ಕನೆ, ರಾಜ್ ಚಿತ್ರದ ಯಾವುದೋ ಸೀನೊಂದನ್ನು ನೆನೆಸಿಕೊಂಡು ಆ ಪಾತ್ರದ ಯಥಾವತ್ತನ್ನೆ ನಕಲು ಮಾಡಿಬಿಡುತ್ತಿತ್ತು! ಹಿರಿಯರಲ್ಲಿ ಗೌರವ ವಿಶ್ವಾಸ, ತಾಳ್ಮೆ, ಸಹನೆ, ಹೊಂದಾಣಿಕೆ, ಧೈರ್ಯ, ಸಾಹಸ, ಸಾಮಾಜಿಕ ವರ್ತನೆ, ಸ್ವಭಾವ - ಹೀಗೆ ಎಲ್ಲಾ ಭಾವಕಲ್ಪಗಳು ಒಂದಲ್ಲಾ ಒಂದು ರೀತಿ, ಅವರ ಚಿತ್ರಗಳ ಅಭಿನಯದ ಮೂಸೆಯಿಂದ ಮನದಾಳಕ್ಕಿಳಿದು ಪ್ರತಿಷ್ಟಿತವಾದದ್ದೆ. ಅಷ್ಟೂ ಸಾಲದೆಂಬಂತೆ ಅದೆ ಶಿಸ್ತು, ವಿನಯ, ಸಜ್ಜನಿಕೆ , ಸರಳತೆಯನ್ನು ನಿಜ ಜೀವವನದಲ್ಲೂ ಅವರ ಹಾಗೆ ಅಳವಡಿಸಿಕೊಂಡು ಮಾದರಿಯಾದ ಅದೆಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ,"
ಕೆಲವೊಮ್ಮೆ ಕೆಲವೊಂದು ಬರಹಗಳು ಪ್ರತಿಕ್ರಿಯೆಗಳನ್ನು ನೋಡುವಾಗ ಓದುವಾಗ ನೀಡುವಾಗ ಅವು ನಮ್ಮದೇ ಮನದ ಭಾವನೆಗಳು ಎಂದು ಅನ್ನಿಸುವುದು . ಹೀಗೆ ಹಲವು ಬಾರಿ ನನಗೆ ಅನುಭವ ಆಗಿದೆ . ಇವತ್ತು ಇಲ್ಲಿ ಸೇರಿದ ಮೂರು ಬರಹಗಳನ್ನು ನೋಡಿದ ಓದಿದ ಮೇಲೆ ಆ ಎರಡಕ್ಕೆ ಪ್ರತಿಕ್ರಿಯಿಸಿ ನಿಮ್ಮ ಬರಹಕ್ಕೆ ಬಂದರೆ ಇಲ್ಲೂ ಅದೇ ಭಾವ ..
ನಿಮ್ಮ ಬಹುತೇಕ ಅನುಭವ ಬಹುಶ ಎಲ್ಲರಿಗೂ ಬಂದದ್ದು ಆದದ್ದು . ಡಾ: ರಾಜ್ ಅವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಹಾಗೆಯೇ ಹೊಸತು ಅಂತ ಬರೆಯಲು ಕಷ್ಟ ಪಡಬೇಕು ಕಾರಣ ಬಹುತೇಕ ಎಲವೋ ತೆರೆದಿಟ್ಟ ಪುಸ್ತಕ . ಮತ್ತು ಅವರ ಬಗ್ಗೆ ಬಂದ ಪುಸ್ತಕಗಳು ಬರಹಗಳು ಲೆಕ್ಕ ಇಡಲು ಆಗದಸ್ತು .
ಹಲವೊಮ್ಮೆ ನನಗೆ ಅನ್ನ್ನಿಸಿದ್ದು
ನಾ ಮೊದಲೇ ಹುಟ್ಟಬೇಕಿತ್ತು ಅಂತ .. ಅಂದರೆ ಸುಮಾರು ೩ ೦ - ೪೦ ವರ್ಷಗಳ ಹಿಂದೆ ಸೊ ಆಗ ನಾನು ರಾಜ್ ಅವರ ಕಾಲಮಾನದ ಅವರ ಸಿನೆಮ ಬಿಡುಗಡೆ ವೀಕ್ಷಣೆ ಚರ್ಚೆ ಗೋಕಾಕ ಚಳುವಳಿ ಇತ್ಯಾದಿ ಕಣ್ಣಾರೆ ನೋಡಬಹುದಿತ್ತಲ್ಲ ಅಂತ ..
ಆದರೂ ಅವರ ಪ್ರಭಾವ ನನ್ನ ಮೇಲೆ ಆಗಿದೆ ... ಜನರ ಪ್ರೇಇ ಪ್ರೇಮ ಗೌರವಾಧರಗಳನ್ನು ಪಡೆದ ಪ್ರತಿಯೊಬ್ಬರೂ ಅವರ ಮನೆಯ ಸದಸ್ಯ(ಹಿರಿಯ) ಎಂದು ಭಾವಿಸಿದ ಅವರ ಮರಣ ಕಾಲದಲ್ಲಿ ಮನೆಯವರೇ ತೀರಿದ ಹಾಗೆ ಮೂಡಿದ ಭಾವ ಇಂದಿಗೂ ನನಗೆ ನೆನಪಿದೆ ಮತ್ತು ಸ್ಪುಸ್ತವಾಗಿ ಹೇಳುವುದಾದರೆ ರಾಜ್ ಅವರು ಇನ್ನಿಲ್ಲ ಎಂದಾಗ ನನಗೆ ಬಂದ ಯೋಚನೆ
ಇನ್ಯಾರು ದಿಕ್ಕು ?
ನಮಗೆ- ಕನ್ನಡಕ್ಕೆ ...
ಬಹುಶ ಅಂದು ಅವರ ವಿರೋಧಿಗಳಿಗೂ ಮನ ಕಲ್ಕಿರಲೇಬೇಕು .. ಅನಾಥ ಭಾವ ಮೂಡಿರಬೇಕು ..
ಇಡೀ ಕರು ನಾಡು ಅನಾಥರಾದಂತೆ ಆಗಿತ್ತು ,ಸಮ್ಮಿಶ್ರ ಭಾಶೆಅ ಜನಗಳ ಬೆಂಗಳೂರು ಬಳ್ಳಾರಿ ರಾಯಚೂರು ಆದಿಯಾಗಿ ಗುಲ್ಬರ್ಗ ಬೀದರ್ ಮಂಗಳೂರು ಮೈಸೂರು ಎಲ್ಲೆಡೆ ಒಂದೇ ಭಾವ - ಅಣ್ಣಾವ್ರು ಇನ್ನಿಲ್ಲ ಎಂಬ ಕಹಿ ಸುದ್ಧಿ ಅರಗಿಸಿಕೊಳ್ಳಲು ಆಗ್ತಿಲ್ಲ . ಈಗಲೂ ಕನ್ನಡ ಕರ್ನಾಟಕ ಎಂದಾಗ ಅವರೆ ನೆನಪಾಗೋದು ..
ರಾಜ್ ಅವರ ಬಗ್ಗೆ ಹಲವು ಬರಹಗಳು ಸಂಪದದಲ್ಲಿ ಬಂದಿವೆ . ಮತ್ತು ಹೋದ ವರ್ಷ ನಾನು ಒಂದು ಬರಹ ಬರೆದಿದ್ದೆ ಇಲ್ಲಿದೆ ಓದಿ ..
http://sampada.net/blog/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%B0%E0%B2%A4%E0%B3%8D%E0%B2%A8-%E0%B2%A1%E0%B2%BE-%E0%B2%B0%E0%B2%BE%E0%B2%9C%E0%B3%8D%E2%80%8D%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D-%E0%B2%85%E0%B2%B5%E0%B2%B0-%E0%B3%AE%E0%B3%AA-%E0%B2%A8%E0%B3%87-%E0%B2%B9%E0%B3%81%E0%B2%9F%E0%B3%8D%E0%B2%9F%E0%B3%81-%E0%B2%B9%E0%B2%AC%E0%B3%8D%E0%B2%AC/23/04/2012/36487
ರಾಜ್ ಅವರು ತಮಗಿಂತ ಹಿರಿಯರು ತಮ್ಮ ಸಮಾನ ವಯಸ್ಸಿನವರು ಮತ್ತು ನಮ್ಮಂತ ಯುವಕರ ಮೇಲೆಯೂ ಅಗಾಧ ಪರಿಣಾಮ ಬೀರಿದರು ಅವರ ಪಾತ್ರಗಳು ಚಿತ್ರಗಳ ಮೂಲಕ ನಮಮ್ ಹತ್ತು ಹಲವು ತಪ್ಪು ಅರಿವಾಗಿ ತಿದ್ದಿಕೊಂಡದ್ದು ಆಯ್ತು , ಹಲವರ ಮನ ಪರಿವರ್ತನೆ ಆಯ್ತು ಸದ್ಗುಣಗಳು ಮನೆ ಮಾಡಿದವು -ಇದು ಪೊಳ್ಳು ಸುಳ್ಳಲ್ಲ ಕಣ್ಣಾರೆ ನೋಡಿದ್ದು ಕೆಲವೊಮ್ಮೆ ನಾನೇ ಅನುಭವಿಸಿದ್ದು. ..
ಅದ್ಕೆ ಇರ್ಬೇಕು ಹಿರಿಯರಾದ ಪಾಟೀಲರು (ಹನುಮಂತ ಅನಂತ ಪಾಟೀಲರು - ರಿಪ್ಪನ್ ಪೇಟೆ ) ರಾಜ್ ಬಗ್ಗೆ ಬರಹ ಬರೆದಾಗ ಅದ್ಕೆ ಕೊಟ್ಟ ಶೀರ್ಷಿಕೆ
ಡಾ: ರಾಜ್ ವ್ಯಕ್ತಿಯಲ್ಲ - ಅದೊಂದು ಸಂಸ್ಕೃತಿ ಅಂತ ... ನಿಜ ನಿಜ ...
ಶುಭವಾಗಲಿ '
\।/
In reply to "ಆಗೆಲ್ಲ ನಮಗೆ ಮನೆಯಲ್ಲಿ ಹೀಗೆ by venkatb83
ವಂದನೆಗಳು ಸಪ್ತಗಿರಿಯವರೆ,
ವಂದನೆಗಳು ಸಪ್ತಗಿರಿಯವರೆ,
ಎಂಥಾ ಸೊಗಸಾಗಿ ಪ್ರತಿಕ್ರಿಯೆ ಬರೆದಿದ್ದೀರಿ! ನನ್ನ ಲೇಖನಕ್ಕಿಂತ ನಿಮ್ಮ ಪ್ರತಿಕ್ರಿಯೆಯೆ ಚೆನ್ನಾಗಿದೆ ಅನಿಸಿಬಿಟ್ಟಿತು. ಜತೆಗೆ ನಿಮ್ಮ ಕಳೆದ ವರ್ಷದ ಅಣ್ಣಾವ್ರ ಲೇಖನ ಹಳೆ ಬಾಲ್ಯದ ನೆನಪುಗಳೆಲ್ಲ ಮತ್ತೆ ಮರುಕಳಿಸುವಂತೆ ಮಾಡಿಬಿಟ್ಟಿತು - ಮಧ್ಯರಾತ್ರಿಯಲ್ಲಿ ಖಾಲಿ ರಸ್ತೆಯ ಪಕ್ಕ ಅವರ ಹೊಸಚಿತ್ರಗಳಿಗೆ 'ಸ್ಟಾರು' ಕಟ್ಟಿದ್ದು ಸೇರಿದಂತೆ. ಬರೆಬರೆದೂ ಖಾಲಿಯಾಗದ ಭವ್ಯ ವ್ಯಕ್ತಿತ್ವದೆದುರು, ನಮ್ಮ ಅರಿವಿನ ಕುಬ್ಜತೆಯ ಗಡಿಯೊಳಗೆ ಏನೊ ತೋಚಿದ್ದಷ್ಟು ಗೀಚಬಹುದೆ ಹೊರತು, ಆ ಮೇರು ವ್ಯಕ್ತಿತ್ವಕ್ಕೆ ಒಂದೆ ಕಂತಿನಲ್ಲಿ ಸಂಪೂರ್ಣ ನ್ಯಾಯಾವೊದಗಿಸುವ ತಾಕತ್ತಂತು ನಮ್ಮಲ್ಲಿಲ್ಲವೆಂದೆ ನನ್ನ ಭಾವನೆ. ನಿಮ್ಮ ರಸಪೂರ್ಣ ಪ್ರತಿಕ್ರಿಯೆ ನನ್ನ ಬರಹದ ಒಟ್ಟಾರೆ ತೂಕ ಹೆಚ್ಚಿಸಿ ಅಣ್ಣಾವ್ರ ನೆನಪಿಗೆ ಅಷ್ಟರಮಟ್ಟಿಗಾದರೂ ಹೆಚ್ಚು ನ್ಯಾಯ ಒದಗಿಸುತ್ತಿದೆಯೆಂಬ ಸಮಾಧಾನ. ಅದಕ್ಕೆ ತುಂಬಾ ಧನ್ಯವಾದಗಳು!
- ನಾಗೇಶ ಮೈಸೂರು, ಸಿಂಗಾಪುರದಿಂದ.