ಈ ಬಾಡಿ ಬಿಲ್ಡರ್ ಗೆ ಬರೀ ೯೩ ವರ್ಷ ಕಣ್ರೀ...

ಈ ಬಾಡಿ ಬಿಲ್ಡರ್ ಗೆ ಬರೀ ೯೩ ವರ್ಷ ಕಣ್ರೀ...

ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩. ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. 'ಜಿಮ್' ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗಂಟು ಕಟ್ಟಬೇಕು ಇವರ ವರ್ಕ್ ಔಟ್ ನೋಡಿ. ಸಾಧಾರಣವಾಗಿ ೭೦ ದಾಟುತ್ತಿದ್ದಂತೆ ಜನ ಕೋಲು ಹಿಡಿಯುತ್ತಾರೆ, ಗೋಡೆ ಸವರುತ್ತಾ ನಡೆಯುತ್ತಾರೆ, ವೀಲ್ ಚೇರ್ ಗುಲಾಮ ರಾಗುತ್ತಾರೆ ಇಲ್ಲಾ ಹಾಸಿಗೆ ಹಿಡಿಯುತ್ತಾರೆ. ಅಪರೂಪಕ್ಕೆ ಎಂಭತ್ತು ತೊಂಭತ್ತು ದಾಟಿದವರು ಗಟ್ಟಿ ಮುಟ್ಟಾ ಗಿ ಇರೋದು ಕಾಣಲು ಸಿಗುತ್ತಾರೆ. ತೊಂಭತ್ತರ ಹತ್ತಿರ ಇರುವ ಕೇರಳದ ಮಾಜಿ ಮುಖ್ಯಮಂತ್ರಿ ವೀ. ಎಸ್. ಅಚ್ಯುತಾನಂದನ್, ಈಗ ವಿಪಕ್ಷ ನಾಯಕ. ಎಂ, ಎಫ್ ಹುಸೇನ್ ಸಹ ಇಳಿ ವಯಸ್ಸನ್ನು ಅಣಕಿಸಿದವರ ಸಾಲಿಗೆ ಸೇರಿದವರು. ರಾಜಕಾರಣಿಗಳು ದೀರ್ಘಾಯುಷಿಗಳು, ನನ್ನ ಪ್ರಕಾರ. ಕಣ್ಣಿಗೆ ಕಂಡವರದ್ದನ್ನೆಲ್ಲಾ ನುಂಗೀ, ನುಂಗೀ ಅದೂ ಒಂದು ರೀತಿಯ ವ್ಯಾಯಮವೇನೋ ಎಂದು ನಮಗೆ ತೋರ ಬೇಕು, ಅಯಾ ತೆರನಾದ ಆರೋಗ್ಯ. ಹಾಗಾದರೆ ನಾವೆಲ್ಲರೂ ಬಯಸುವ, ತಹ ತಹಿಸುವ ಚಿರ ಯೌವ್ವನ ಅನ್ನೋದು ಇದೆಯೇ? ಇಲ್ಲಾ ಎಂದೇ ವೈದಕೀಯ ವಲಯದ ತೀರ್ಪು. ಆದರೆ ಯಾವಾಗಲೂ ಚಟುವಟಿಕೆಯಿಂದ ಇರುತ್ತಾ, ಸಿಕ್ಕಿದ್ದನ್ನೆಲ್ಲಾ ಉದರಕ್ಕೆ ಇಳಿ ಬಿಡದೆ ಕೇರ್ಫುಲ್ ಆಗಿದ್ದರೆ ಊರ ಹೊರಗಿನ ಚಿರ ಯಾತ್ರೆ ಸ್ವಲ್ಪ ಮುಂದೂಡ ಬಹುದು ಅಷ್ಟೇ. ಈಗಿನ ಕಾಲದ ಈಟಿಂಗ್ ಹ್ಯಾಬಿಟ್ಸ್, sedantary lifestyle ಕಾರಣ ಹದಿಹರೆಯದ ಹುಡುಗರಿಂದ ಹಿಡಿದು, ೨೦, ಮೂವತ್ತು, ನಲವತ್ತರ ಯುವಕರು ದಿಢೀರ್ ಎಂದು ಕಾರ್ಡಿಯಾಕ್ ಖಾಯಿಲೆಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಹೃದ್ರೋಗಕ್ಕೆ ಬಲಿಯಾದ ನಮ್ಮ ಸ್ನೇಹಿತರ, ಪರಿಚಯಸ್ಥರ, ನೆಂಟರಿಷ್ಟರ ನ್ನು ನೋಡಿಯೂ ನಾವು ವ್ಯಾಯಾಮದ ಕಡೆ ಗಮನ ಹರಿಸುತ್ತಿಲ್ಲ. ನನ್ನ ಕತೆಯಂತೂ ಇನ್ನಷ್ಟು ಶೋಚನೀಯ.

ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಗೆ ಬೇಕಾದ ಎಲ್ಲಾ 'ಗೇರ್' ಗಳಿದ್ದಾಗ್ಯೂ ಒಂದು ದಿನ ಹೋದರೆ ಎರಡು ವಾರ ರೆಸ್ಟ್. ನನ್ನನು ಕಟ್ಟಿಕೊಂಡು ನಡೀ ಎಂದು ದುರುಗುಟ್ಟುವ ನೈಕೀ ಶೂ ನೋಡಿದ ಕೂಡಲೇ ಕಟುಕನ ಕೈಯ ಕತ್ತಿ ನೆನಪಾಗುತ್ತದೆ ನನಗೆ. ಮಡದಿ ಎಷ್ಟೇ ಗೋಗರೆದರೂ ಊಹೂಂ ಎನ್ನುವ ಮೊಂಡುತನ. ನಡಿಗೆ monotonous ಎಂದು ಹೇಳಿ ಸೈಕಲ್ ಕೊಂಡು ಕೊಂಡೆ. ಪರ್ಸ್ ನ ಭಾರ ಕಡಿಮೆಯಾಯಿತೇ ವಿನಃ ಬೊಜ್ಜಿನ ಪ್ರಮಾಣ ಇಳಿಯಲಿಲ್ಲ. ಸೈಕಲ್ ನ ಗಾಳಿ ಹೋದಾಗ ಗಾಳಿ ತುಂಬಿಸೋದು ಮಗನ ರೂಮಿನ ಮೂಲೆಗೆ ಅದನ್ನು ವಾಲಿಸಿ ಇಡೋದು, ಈ ಕೆಲಸವನ್ನ ಆವರ್ತಿಸಿ, ಆವರ್ತಿಸಿ ಸಾಕಾಗಿ ಹೋದರೂ ಇದುವರೆಗೆ ಒಂದೈದು ಕಿ. ಮೀ ದೂರ ಕ್ರಮಿಸಿಲ್ಲ. ದಿನಕ್ಕೆ ಸುಮಾರು ನಾಲ್ಕರಿಂದ ಐದು ಕೀ. ಮೀ. ಸೈಕ್ಲಿಂಗ್ ಮಾಡಿದರೆ ಹೃದ್ರೋಗದಿಂದ ಗೊಟಕ್ ಆಗುವ ಚಾನ್ಸ್ ಸುಮಾರು ಶೇಕಡಾ ಐವತ್ತು ಕಡಿಮೆಯಂತೆ. ಜಾಗಿಂಗ್ ಮಾಡಲು ಆಗದಿದ್ದರೂ, ಬಿರುಸಾದ ನಡಿಗೆ ಜಾಗಿಂಗ್ ಗಿಂತ ಒಳ್ಳೆಯದಂತೆ. ಒಟ್ಟಿನಲ್ಲಿ ಸೋಫಾದ ಮೇಲೆ ಕುಕ್ಕರು ಬಡಿಯುವುದಕ್ಕಿಂತ ಸೊಂಟ ನೆಟ್ಟಗೆ ಮಾಡಿ ಕಾರು, ಬೈಕಿನ ಕೀಲಿ ಮನೆಯಲ್ಲಿ ಬಿಟ್ಟು ಮನೆಯಿಂದ ಹೊರಹೋದರೆ ಅಷ್ಟೊಂದು ಲಾಭ ನಮ್ಮ ಶರೀರಕ್ಕೆ. ಮೇಲೆ ಹೇಳಿದ ೯೩ ವರ್ಷದ ಬ್ರಿಟಿಶ್ ಡಾಕ್ಟರ್ ಥರ ವಲ್ಲದಿದ್ದರೂ ನಮ್ಮ ಕೈಗೋ, ಕಾಲಿಗೋ ಆಗುವ ಅಷ್ಟಿಷ್ಟು ಸಾಹಸದಲ್ಲಿ ನಾವು ತೊಡಗಿಸಿ ಕೊಳ್ಳದಿದ್ದರೆ ನಷ್ಟ ಮಾತ್ರ ತುಂಬಲಾರದ್ದು.

ನೈಕೀ ಶೂ ಗಳ ದುರುಗುಟ್ಟುವಿಕೆಯಿಂದ ಮೆಲ್ಲಗೆ ಪಾರಾಗಿ ಸೈಕಲ್ ಹತ್ತಿರ ಬಂದರೆ ಮತ್ತೊಮ್ಮೆ ಹೋಗಿದೆ ಅದರ ಗಾಳಿ. ಗಾಳಿ ತುಂಬಿಸಿ ಈ ಸಂಜೆಯಿಂದಲೇ ಶುರು ಮಾಡುತ್ತೇನೆ ನನ್ನ ಮನೆಯ ಹೊರಗಿನ ವರ್ಕ್ ಔಟ್ ಯಾತ್ರೆ. ನೀವೂ ರೆಡಿ ತಾನೇ?

ಚಿತ್ರ ಕೃಪೆ: yahoo.com

 

 

Rating
No votes yet