ಈ ಮನಸ್ಸೇಕೆ ಹೀಗೆ?

ಈ ಮನಸ್ಸೇಕೆ ಹೀಗೆ?

ಸಖೀ,
ಎಲ್ಲವನೂ, ಎಲ್ಲರನೂ,
ಅರಿತರೂ ಅರಿಯಬಹುದೇನೋ;
ಆದರೆ,
ನಮ್ಮ ಮನಸ್ಸನ್ನೇ ಅರಿಯಲಾಗದು.

ಒಂದೊಂದು ದಿನವೂ,
ಒಂದೊಂದು ತೆರನಾಗಿ,
ಅದು ನಮ್ಮನ್ನು
ಚಕಿತಗೊಳಿಸುತ್ತಲೇ ಇರುತ್ತದೆ.

ಕೆಲವೊಮ್ಮೆ,
ಕಾರಣವಿಲ್ಲದೇ
ದಿನವಿಡೀ ಅಳಿಸುತ್ತದೆ,
ಇನ್ನು ಕೆಲವೊಮ್ಮೆ,
ಹುಮ್ಮಸ್ಸಿನಿಂದ ತುಂಬಿ ತುಳುಕುತ್ತದೆ.

ಕೆಲವೊಮ್ಮೆ,
ಯಾರ ಮಾತಿಗೂ ಕಿವಿಗೊಡದೇ,
ಎಲ್ಲರೊಂದಿಗೂ ಮುನಿಯುತ್ತದೆ,
ಇನ್ನು ಕೆಲವೊಮ್ಮೆ
ಮಾತೇ ಆಡದವರನ್ನೂ,
ಹೋಗಿ ಮಾತಿಗೆ ಎಳೆಯುತ್ತದೆ.

ಕೆಲವೊಮ್ಮೆ,
ನಮಗೆ ಪ್ರಿಯರಾದವರ
ಮನಸ್ಸನ್ನೇ ನೋಯಿಸುತ್ತದೆ,
ಇನ್ನು ಕೆಲವೊಮ್ಮೆ,
ವೈರಿಗಳ ಮೇಲೂ,
ಪ್ರೀತಿಯ ಮಳೆಗರೆಯುತ್ತದೆ.

ಕೆಲವೊಮ್ಮೆ,
ಹಗಲಲ್ಲೂ ರಗ್ಗೆಳೆದುಕೊಂಡು
ಮಲಗಿರಲೆಳಸುತ್ತದೆ,
ಇನ್ನು ಕೆಲವೊಮ್ಮೆ,
ರಾತ್ರಿಯಿಡೀ, ರೆಪ್ಪೆ ಮುಚ್ಚಲೂ
ಬಿಡದೆ ಎಚ್ಚರವಾಗಿರಿಸುತ್ತದೆ.

ಕೆಲವೊಮ್ಮೆ,
ಪ್ರಿಯ ವಿಷಯಗಳನ್ನೇ ಮರೆತಿರುತ್ತದೆ,
ಇನ್ನು ಕೆಲವೊಮ್ಮೆ,
ನೆನಪುಗಳ ಸರಪಣಿಯನ್ನೇ ಬಿಚ್ಚುತ್ತಿರುತ್ತದೆ.

"ಈ ಮನಸ್ಸೇಕೆ ಹೀಗೆ?"
ಎಂಬುದಕೆ ಉತ್ತರವನು
ಹುಡುಕಲೆತ್ನಿಸಿದಷ್ಟೂ
ಅದು ನಿಗೂಢವಾಗುತ್ತಲೇ ಹೋಗುತ್ತದೆ!

ಎಲ್ಲವನೂ, ಎಲ್ಲರನೂ,
ಅರಿತರೂ ಅರಿಯಬಹುದೇನೋ;
ಆದರೆ,
ನಮ್ಮ ಮನಸ್ಸನ್ನೇ ಅರಿಯಲಾಗದು.
*******************

Rating
No votes yet

Comments