ಈ ಮರ ನನ್ನನ್ನು ಬಿಡ್ತಾ ಇಲ್ಲಾ

ಈ ಮರ ನನ್ನನ್ನು ಬಿಡ್ತಾ ಇಲ್ಲಾ

           ಒಂದು ದೊಡ್ದ ಮೂಟೆ ಹೊತ್ಕೊಂಡು ಒಬ್ಬ ದಾರೀಲಿ ಹೋಗ್ತಾ ಇದ್ದ. ಎದುರು ಸಿಕ್ಕಿದ  ಮತ್ತೊಬ್ಬ ಅವನನ್ನು ಕೇಳಿದ.

- ಎಲ್ಲಿಗೆ ಹೋಗ್ತಾ ಇದ್ದೀಯಾ? ಈ ಮೂಟೆಯಲ್ಲೇನಿದೆ?

-ಸುಮ್ನೇ ಹಾಗೇ ಹೊರಟೆ, ದಾರೀಲಿ ಸಿಕ್ಕಿದವರೆಲ್ಲಾ ಏನೇನೋ ಕೊಟ್ಟರು. ಅದೆಲ್ಲಾ ಮೂಟೆಯಲ್ಲಿದೆ. ಹೋಗ್ತಾ ಇದ್ದೀನಿ.

-ಎಲ್ಲಿಗೆ ಹೋಗ್ತಾ ಇದ್ದೀಯಾ?

-ಎಲ್ಲಿಗೆ! ಎಲ್ಲಿಗೆ! ಯೋಚನೇ ನೇ ಮಾಡಲಿಲ್ಲ. ಹೊರಟುಬಿಟ್ಟೆ. ಹೋಗ್ತಾ ಇದ್ದೀನಿ.

- ಮೂಟೆಯಲ್ಲೇನಿದೆ?

-ನಂಗೊತ್ತಿಲ್ಲಪ್ಪ. ಅವ್ರು ಕೊಟ್ಟಿದ್ದ ತುಂಬಿಕೊಂಡು ಹೊರಟೇ ಬಿಟ್ಟೆ. ಮತ್ತೆ ಮೂಟೆ ಬಿಚ್ಚಿ ನೋಡೇ ಇಲ್ಲ.

                   ಇನ್ನೊಬ್ಬ ರಸ್ತೆ ಬದಿಯಲ್ಲಿ ಮರವೊಂದನ್ನು ತಬ್ಬಿ ನಿಂತಿದ್ದ.ಒಬ್ಬ ದಾರಿಹೋಕ ಅಲ್ಲಿ ಬಂದ.

-ಇದೇನು ಮರ ತಬ್ಬಿ ನಿಂತಿದ್ದೀಯಾ?

-ಬಿಡು ಅಂದ್ರೆ ಬಿಡ್ತಾ ಇಲ್ಲಾ ನೋಡಿ.

-ಅಲ್ವೋ ಮಹಾರಾಯ ಆ ಮರ ನಿನ್ನನ್ನು ತಬ್ಬಿಕೊಂಡಿಲ್ಲ. ನೀನೇ ಅದನ್ನು ತಬ್ಬಿ ಕೊಂಡಿದ್ದೀಯಾ.ನೋಡು ಹೀಗೆ ಮಾಡು, ಅದು ನಿನ್ನನ್ನು ಬಿಟ್ ಬಿಡುತ್ತೆ, ಅಂತಾ ಹೇಳುತ್ತಾ ತನ್ನ ಎರಡೂ ಕೈಗಳನ್ನು ಎರಡೂ ಪಕ್ಕಕ್ಕೆ ಚಾಚುತ್ತಾನೆ. ಮರ ತಬ್ಬಿದ್ದವನೂ ಹಾಗೇ ಮಾಡ್ತಾನೆ.

- ನೋಡು ಈಗ ಮರ ನಿನ್ನನ್ನು ಬಿಟ್ಟು ಬಿಡ್ತು.

- ಹೌದಲ್ವಾ ನಾನು ಎಷ್ಟು ಹೊತ್ನಿಂದ ಹೀಗೇ ನಿಂತಿದ್ದೇ ಗೊತ್ತಾ? ನೀವು ಬರದೇ ಹೋಗಿದ್ರೆ ಈ ರಾತ್ರಿಯೆಲ್ಲಾ ಇಲ್ಲೇ ಕಳೀ ಬೇಕಾಗಿತ್ತು

           ಅಜ್ಞಾನದಿಂದ ಕೂಡಿದರೆ ರಾತ್ರಿಯೇನೂ ಇಡೀ ಜೀವನವನ್ನೇ ಕಳೆಯಬೇಕಿತ್ತು, ಅಂದುಕೊಂಡು ದಾರಿಹೋಕ ಮುಂದೆ ಸಾಗಿದ.

                   ಈ ತರಹ ಜನ ನಿಮ್ಗೆ ಸಿಕ್ಕಿದ್ದಾರಾ? ಸಿಕ್ಕಿರದೇ ಇರಬಹುದು. ಆದರೆ ತುಂಬಾ ಜನರು ಎದುರಿಸುತ್ತಿರುವ ಸಮಸ್ಯೆಗಳು ಇಂತಹವೇ ಅಂದ್ರೆ ಆಶ್ಚರ್ಯವಾಗಬಹುದು. ತನ್ನದಲ್ಲದ  ಅನೇಕ ಸಮಸ್ಯೆಗಳನ್ನು ತಲೆಮೇಲೆ ಹೊತ್ಕೊಂಡು ಒದ್ದಾಡ್ತಾ ಇರ್ತಾರೆ. ಅದರ ಪರಿಹಾರವೂ ಗೊತ್ತಿರುವುದಿಲ್ಲ. ಅಲ್ಲದೇ ಮುಖ್ಯವಾಗಿ ಅದು ಅವರ ಸಮಸ್ಯೆಯಲ್ಲ.ಆದರೂ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ನೀವು ಖಂಡಿತಾ ನೋಡಿರುವಿರಲ್ಲವೇ?

                  ಯಾವ ಸಮಸ್ಯೆಗಳೂ ಅವುಗಳೇ ತಾನಾಗಿಯೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ. ಕೆಲವು  ಸ್ವಯಂ ಕೃತಾಪರಾಧಗಳು.ಅವುಗಳನ್ನು  ನಾವು ಬಿಡಬೇಕಷ್ಟೆ.  ಜೀವನ ಹಗುರ ಮಾಡಿಕೊಳ್ಳುವುದು ಬಿಡುವುದು ನಮ್ಮ ಕೈಲೇ ಇದೆ.

Rating
No votes yet

Comments