ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ .. (ರಾಗ ಮೋಹನ - ಭಾಗ ನಾಲ್ಕು)
ಅಂತೂ ಮತ್ತೊಮ್ಮೆ ಮೋಹನದ ಬಗ್ಗೆ ನಾಲ್ಜು ಸಾಲು ಬರೆಯುವ ಹೊತ್ತು ಬಂದೇ ಬಂದಿತು. ಈ ಸಲ ಇನ್ನು ಕೆಲವು ಮೋಹಕ ಚಿತ್ರ ಗೀತೆಗಳನ್ನು ಕೇಳಿ, ಆಮೇಲೆ ಕೆಲವು ಇತರ ಪ್ರಕಾರಗಳನ್ನೂ ನೋಡೋಣ. ನಾನು ಮೊದಲೇ ಹೇಳಿದ ಹಾಗೆ, ಮೋಹನ ಆ ಕಾಲದ ಟಿ.ಜಿ.ಲಿಂಗಪ್ಪ ಅವರಿಂದ ಈ ಕಾಲದ ಗುರುಕಿರಣ್ ತನಕ ಎಲ್ಲರೂ ಕೈಯಾಡಿಸಿರುವ ರಾಗ. ಈಗ ಮೊದಲು ೬೦ರ ದಶಕದಲ್ಲಿ ಬಂದ ಚಿತ್ರ ಗೌರಿಯಿಂದಾಯ್ದ ಗೀತೆ. ಜಿ.ಕೆ.ವೆಂಕಟೇಶ್ ಅವರ ನಿರ್ದೇಶನದಲ್ಲಿ ಕುವೆಂಪು ಅವರ ಒಂದು ಭಾವಗೀತೆ, ಜಾನಕಿಯವರ ಧ್ವನಿಯಲ್ಲಿ ಎಷ್ಟು ಸುಂದರವಾಗಿ ಮೂಡಿಬಂದಿದೆ!
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ಮೋಹನ ರಾಗ ಹಲವು ಭಾವನೆಗಳನ್ನು, ರಸಗಳನ್ನು ಉಂಟು ಮಾಡಬಲ್ಲದು. ಬಹುಶಃ ದುಃಖ,ಶೋಕರಸವನ್ನುಳಿದು, ಎಲ್ಲಾ ಭಾವನೆಗಳಿಗೂ ಈ ರಾಗವನ್ನು ಉಪಯೋಗಿಸಲಾಗಿದೆ ಎನ್ನಿಸುತ್ತೆ. ಆದರೂ, ಶೃಂಗಾರ, ವೀರ ರಸಗಳಿಗೆ, ಮಾದುರ್ಯ, ಶಾಂತ ಭಾವನೆಗಳಿಗೆ ಈ ರಾಗ ಹೇಳಿಸಿದ್ದೇ.
ಚಿತ್ರಗೀತೆಗಳಲ್ಲಿ, ಹಲವು ಬಾರಿ, ಒಂದು ರಾಗದಿಂದ ಆರಂಭಿಸಿ ಮತ್ತೆ ಬೇರೆ ಬೇರೆ ರಾಗಗಳಿಗೆ (ಅಥವಾ ಕೆಲವು ಬಾರಿ ಯಾವ ರಾಗವೆಂದೂ ತಿಳಿಯುವಂತಿರುವುದಿಲ್ಲ). ಈಗ ಕುವೆಂಪು ಅವರ ಇನ್ನೊಂದು ಗೀತೆ. ಮಾವನ ಮಗಳು ಚಿತ್ರದಿಂದ. ಚಲಪತಿ ರಾವ್ ಅವರ ಸಂಯೋಜನೆಯಲ್ಲಿ ಹಾಡಿರುವವರು ಪಿ.ಬಿ.ಶ್ರೀನಿವಾಸ್ ಮತ್ತು ಜಾನಕಿ. ಈ ಹಾಡಿನ ಕೆಲವು ಭಾಗಗಳು ಮೋಹನರಾಗದಲ್ಲಿವೆ. ಈಗ ಓದುಗರಿಗೆ (ಕೇಳುಗರಿಗೆ) ಒಂದು ಪ್ರಶ್ನೆ. ಯಾವ ಭಾಗ ಮೋಹನದಲ್ಲಿದೆ ಎಂದು ಗುರುತಿಸಬಲ್ಲಿರಾ?
ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ
ಪುಟ್ಟಣ್ಣ ಕಣಗಾಲರು ತಮ್ಮ ಚಿತ್ರಗಳಲ್ಲಿ ಹಾಡುಗಳನ್ನು ಬಹಳ ಚೆನ್ನಾಗಿ ಅಳವಡಿಸಿದ್ದಕ್ಕೆ ಹೆಸರು ಪಡೆದವರು. ಎಪ್ಪತ್ತರ ದಶಕದಲ್ಲಿ ಅವರ ಧರ್ಮಸೆರೆ ಚಿತ್ರದ ಒಂದು ಗೀತೆ ಕೇಳೋಣ. ಇದು ಪೂರಾ ಮೋಹನ ರಾಗದಲ್ಲೇ ಇರುವ ಸುಂದರ ಗೀತೆ. ಸಂಗೀತ ಸಂಯೋಜನೆ ಉಪೇಂದ್ರಕುಮಾರ್ ಅವರದು.
ಈ ಸಂಭಾಷಣೇ ನಮ್ಮ ಈ ಪ್ರೇಮ ಸಂಭಾಷಣೆ
ಇನ್ನು ಸ್ವಲ್ಪ ಮುಂದಕ್ಕೆ ಬರೋಣ. ಸುನಿಲ್ ಕುಮಾರ್ ದೇಸಾಯಿ ಅವರ ನಮ್ಮೂರ ಮಂದಾರ ಹೂವೇ ಚಿತ್ರ ದಲ್ಲಿ ಮೋಹನರಾಗವನ್ನು ಉದ್ದಕ್ಕೂ ಬಹಳ ಸಮರ್ಥವಾಗಿ ಬಳಸಲಾಗಿತ್ತು. ಈಗ ಇಳೈಯರಾಜ ಅವರ ಸಂಯೋಜನೆಯಲ್ಲಿ ಚಿತ್ರಾ ಅವರ ಧ್ವನಿಯಲ್ಲಿ ಕೇಳಿ ಒಂದು ಗೀತೆ. ಮಧ್ಯದ ವಾದ್ಯಸಂಯೋಜನೆ ಮೋಹನದಿಂದ ಹೊರಗೆ ಹೋದರೂ, ಹಾಡು ಮೋಹನದಲ್ಲೇ ಇದೆ.
ಈಗ ಮತ್ತೆ, ಅದೇ ಚಿತ್ರದಲ್ಲಿ ಮೂಡಿಬಂದ, ಇನ್ನೊಂದು ಗೀತೆ. ಇದೂ ಕೂಡ ಕೆಲವೆಡೆಗಳಲ್ಲಿ, ಮೋಹನದ ಪರಿಧಿಯಿಂದ ಹೊರಹೋಗುವುದಾದರೂ, ಈ ಗೀತೆಯನ್ನು ಮೋಹನದ ಆಸರೆಯಲ್ಲೇ ಇಡಬಹುದು :) ಈ ಹಾಡಿನಲ್ಲಿ ಮುಕ್ಕಾಲು ಪಾಲು ವಾದ್ಯ ಸಂಯೋಜನೆ ಮೋಹನದ ಸ್ವರಗಳೊಳಗೇ ಸಂಚಾರ ಮಾಡುತ್ತದೆ.
ಈ ಚಿತ್ರವನ್ನು ನೋಡಿದ್ದರೆ ನಿಮಗೆ ಒಂದು ದೃಶ್ಯ ನೆನಪಿರಬಹುದು. ನಾಯಕಿ ಸಂಗೀತಾಭ್ಯಾಸ ನಡೆಸುತ್ತಿರುವಾಗ, ನಾಯಕ ಅಲ್ಲಿ ಬಂದು ಅವಳು ಹಾಡುತ್ತಿರುವುದೆಲ್ಲ ತಪ್ಪೆಂದು ಸುಮ್ಮನೆ ಜರೆಯುವುದು; ನಂತರ ನಾಯಕಿ ಅದನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿ ಸುರಿಯುವ ಮಳೆಯಲ್ಲಿ ಅವನ ಮನೆಯ ಮುಂದೆ ಹೋಗಿ ಬೀದಿಯಲ್ಲಿ ನಿಂತು ಅದನ್ನು ಹಾಡಿ, ಅದರಲ್ಲಿ ತಪ್ಪೆಲ್ಲಿ ಎಂದು ಪ್ರಶ್ನಿಸುವುದು. ಗಾಗ ರಿರಿ ಗಾಗ ಎಂದು ಪ್ರಾರಂಭವಾಗುವ ಈ ಸ್ವರ ಸಂಚಾರ ಮೋಹನದ್ದೇ. ಇದರ ಯಾವುದೇ ಕೊಂಡಿ ನನ್ನಲ್ಲಿಲ್ಲ ಹಾಕಲು. ಯಾರಾದರೂ ವಿಡಿಯೋ ಇಂದ ಆಡಿಯೋ ತೆಗೆದು ಹಾಕಿದರೆ ಸಂತೋಷ :) ಮೋಹನದ ಸ್ವರಗಳನ್ನು ಪರಿಚಯಿಸಿಕೊಳ್ಳಲು ಒಳ್ಳೆ ಉದಾಹರಣೆ ಅದು.
ಹಿಂದೊಮ್ಮೆ ಹೇಳಿದ್ದೆ ನಾನು. ಮೋಹನವನ್ನು ಜಾನಪದ ಗೀತೆ, ಯಕ್ಷಗಾನ, ಗಮಕವಾಚನ ಎಲ್ಲೆಡೆಯಲ್ಲೂ ಕಾಣಬಹುದು ಅಂತ. ಈಗ ಈ ಕೊಂಡಿಗೊಮ್ಮೆ ಹೋಗಿ. ಇದು ಸಂಗೀತ ರೂಪಕವೊಂದರಿಂದಾಯ್ದ ಕೆಲವು ದೃಶ್ಯಗಳು.
ಗಮಕವಾಚನ ಮತ್ತು ಯಕ್ಷಗಾನ ಎರಡನ್ನೂ ಒಂದೇ ಕಡೆ ತೋರಿಸಬಹುದೆಂದು ಇದನ್ನು ಹಾಕಿದೆ. ಇದರಲ್ಲಿ, ಪ್ರಾರಂಭದಿಂದ ೫೫ ಸೆಕಂಡ್ ನಂತರ ಬರುವ ಮಗಳೆ ಬಾ ಕೊಳ್ ಎಂಬ ಷಟ್ಪದಿ ಮೋಹನರಾಗದಲ್ಲೇ ಸಂಯೋಜಿತವಾಗಿದೆ. ಕರ್ನಾಟಕಕ್ಕೇ ವಿಶೇಷವಾದ ಕಾವ್ಯ ವಾಚನ ಅಥವಾ ಗಮಕ ವಾಚನದ ಉದಾಹರಣೆ ಇದು. ಅಲ್ಲಿಂದ ಮುಂದೆ ಬಂದರೆ, ೨ ನಿಮಿಷ ೧೫ ಸೆಕೆಂಡಿನಲ್ಲಿ ಪ್ರಾರಂಭವಾಗುವ ಬಂದನೋ ದೇವರ ದೇವಾ ಎಂಬ ಯಕ್ಷಗಾನದ ಮಟ್ಟು ಕೂಡ ಮೋಹನದ್ದೇ!
ಇವತ್ತಿಗೆ ಇಷ್ಟು ಸಾಕು ಅನ್ನಿಸುತ್ತೆ. ಅಂದ ಹಾಗೆ, ಸಂಪದದಲ್ಲಿ, ಅರೆಬರೆಯಾಗಿ ಬರೆದರೆ, ಅದನ್ನು ಉಳಿಸಿಕೊಳ್ಳುವ ದಾರಿಯೇನಾದರೂ ಇದೆಯೇ? ಆಗ, ನಾನು, ಆದಾಗಲೆಲ್ಲ ಸ್ವಲ್ಪಸ್ವಲ್ಪವಾಗಿ ಬರೆಯಬಹುದು.
ಏನನ್ನಿಸಿತು ಎರಡು ಮಾತು ಬರೆಯಿರಿ. ಮುಂದಿನ ಬಾರಿ ಸುಗಮ ಸಂಗೀತಕ್ಕೆ ಹೋಗೋಣ.
-ಹಂಸಾನಂದಿ
Comments
ಉ: ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ .. (ರಾಗ ಮೋಹನ - ಭಾಗ ನಾಲ್ಕು)