ಉಗಿದು ಉಪ್ಪಿನಕಾಯಿ ಹಾಕಿದರು
ಉಗಿದು ಉಪ್ಪಿನಕಾಯಿ ಹಾಕಿದರು
ಹಿಂದೆ ನಾವೆಲ್ಲಾ ಶಾಲೆಗೆ ಹೋಗುವಾಗ ಮೇಷ್ಟ್ರು ಹೊಡೆದರೆ ಮನೆಯಲ್ಲಿ ಹೇಳುವಂತಿರಲಿಲ್ಲ. ಹೇಳಿದರೆ ನಾವೆ ತಪ್ಪು ಮಾಡಿರಬಹುದೆಂದು ವಿಚಾರಣೆ ಸಹಾ ಇಲ್ಲದೆ ಮನೆಯಲ್ಲೂ ಶಿಕ್ಷೆ ಕಾದಿರುತ್ತಿತ್ತು. ಹಾಗಿರುವಾಗ ಮೈ ಮನೆ ಎರಡೂ ಸಾಮಾನ್ಯ ಪೆಟ್ಟಿಗೆ ಬಗ್ಗುತ್ತಿರಲಿಲ್ಲ. ನಾವೆಲ್ಲರೂ ಪ್ರೌಢಶಾಲೆಗೆ ಸುಮಾರು 5-6 ಕಿ. ಮೀ ನಡೆದುಕೊಂಡೇ ಹೋದವರು. ಆಕಾಲದಲ್ಲಿ ಶಾಲಾ ಮಕ್ಕಳೆಂದರೆ ಕುಮದ್ವತಿ ಬಸ್ಸು, ಬಿಆರ್ಕೆ, ಎಸ್.ವಿ.ಎಂ.ಎಸ್., ಸಿಪಿಸಿಬಸ್ಸು ಮುಂತಾದ ಕೆಲವು ಖಾಸಗಿ ಬಸ್ಸುಗಳ ನಿರ್ವಾಹಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ನಡೆದುಕೊಂಡು ಬರುತ್ತಿದ್ದ ಮಕ್ಕಳನ್ನು ಉಚಿತವಾಗಿ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಅವರವರ ನಿಲ್ಚಾಣಗಳಲ್ಲಿ ಇಳಿಸಿ ಹೋಗುತ್ತಿದ್ದರು. ಹಾಗಾಗಿ ನಮಗಂತೂ ಇಷ್ಟು ವರ್ಷಗಳ ನಂತರವೂ ಸಹ ಸಹ ಕುಮದ್ವತಿ ಬಸ್ ( ಈಗ ಸಿ.ಪಿ.ಸಿ. ಬಸ್ ನಮ್ಮ ಕಡೆ ಇಲ್ಲ ನಿಲ್ಲಿಸಿ ಬಿಟ್ಟಿದ್ದಾರೆ) ಎಂದರೆ ಒಂದುರೀತಿಯಲ್ಲಿ ನಮ್ಮದೇ ಬಸ್ ಎಂಬ ಅಭಿಮಾನ. ಹಾಗೆ ಅಂದಿನ ದಿನಗಳಲ್ಲಿ ಕಾನ್ವೆಂಟ್ ಶಾಲಾ ಮಕ್ಕಳು ಮಾತ್ರ ಯೂನಿಫಾರಂ ಧರಿಸಿ ಬಸ್ ಗಳಲ್ಲಿ ಖಾಯಂ ಓಡಾಡುವವರಾಗಿದ್ದರು. ಇವರೆಲ್ಲ ಕಂಪನಿ ಬಸ್ ಗಳಲ್ಲಿ ರಿಯಾಯಿತ ದರದ ಪಾಸ್ ಮಾಡಿಸಿಕೊಂಡವರಾಗಿದ್ದರು. ನಿರ್ವಾಹಕರ, ಚಾಲಕರಿಗಿರುವ ಮಕ್ಕಳ ಮೇಲಿನ ಗೌರವವೋ ಅಥವಾ ಕಲಿಯುತ್ತಿರುವ ಶಾಲಾ ಹೆಚ್ಚುಗಾರಿಕೆಯ ಗರ್ವವೋ, ನಾವು ದುಡ್ಡುಕೊಟ್ಟು ಓಡಾಡುವವರೆಂಬ ಅಹಮ್ಮೋ, ಒಟ್ಟಾರೆ ಬಸ್ಸಿನಲ್ಲಿ ಬೇರೆ ಶಾಲಾ ಮಕ್ಕಳ ಬಗ್ಗೆ ಹಳ್ಳಿ ಜನರ ಬಗ್ಗೆ ಅಸಡ್ಡೆ ತೋರುವುದರ ಜೊತೆಗೆ ಸೊಕ್ಕುರಿಯುತ್ತಿದ್ದುದು ನಾವು ನೋಡುತ್ತಿದ್ದೆವು.
ಆದರೆ ಇಂದಿನ ಮಕ್ಕಳ ಮನಸ್ಥಿತಿ ಹಾಗಿಲ್ಲ. ಹೆಚ್ಚಿನ ಎಲ್ಲ ಮಕ್ಕಳೂ ಯೂನಿಫಾರಂ ನವರೆ ಆಗಿದ್ದಾರೆ.ಎಲ್ಲರೂ ರಿಯಾಯಿತಿ ಪಾಸ್ ಮಾಡಿಸಿಕೊಂಡು ಓಡಾಡುವವರೆ. ಹಾಗಾಗಿ ಅವರಲ್ಲಿ ಯಾರಲ್ಲಿಯೂ ಹೆಚ್ಚುಗಾರಿಕೆ ಅಷ್ಟಾಗಿ ಸೊಕ್ಕುವುದು ಕಾಣಿತ್ತಿಲ್ಲ. ಇಂದು ಚಿಕ್ಕ ಕುಟುಂಬ, ಚೊಕ್ಕ ಕುಟುಂಬ ಹೀಗಾಗಿ ಒಬ್ಬರಿ ಒಂದೋ ಎರಡೋ ಮಕ್ಕಳು, ನಾವು ಪಟ್ಟ ಪಾಡು ಮಕ್ಕಳಿಗೆ ಬೇಡ ಎಂಬ ಪೋಷಕರ ನಡೆ. ಮುದ್ದಾಗಿ ಸಾಕಿದ ಮಕ್ಕಳು. ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಬಸ್ಸಿನಲ್ಲಿಯೇ ಪ್ರಯಾಣಿಸುವ ಮಕ್ಕಳು. ಹೀಗಾಗಿ ನಮ್ಮಲ್ಲಿಯ ಮಕ್ಕಳ ಮನಸ್ಸು ಇಂದು ಅಕ್ಷರಷಃ ಹೂವಿನ ಮನಸ್ಸೆಂಬಂತಾಗಿದೆ.
ಇಂತಹ ಸಂದರ್ಭದಲ್ಲಿ ಮೊನ್ನೆ ನಡೆದ ಚಿಕ್ಕ ಘಟನೆ (ನಮ್ಮ ಕಾಲದಲ್ಲಿ ಚಿಕ್ಕದೆನಿಸುತ್ತಿತ್ತು) ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುವುದೆಂಬ ಬಗ್ಗೆ ನಿದರ್ಶನವಾಗಿದೆ. ನಮ್ಮ ಪಕ್ಕದ ಮನೆಯ ಪುಟ್ಟಕ್ಕ ( ನಾನು ಮುದ್ದಿನಿಂದ ಕರೆಯುವ ಹೆಸರು) 9ನೇ ತರಗತಿ, ಕಾರ್ಗಲ್ ಶಾಲೆಗೆ ಹೋಗುತ್ತಾಳೆ. ಇದ್ದಕ್ಕಿದ್ದಂತೆ ನನ್ನ ಬಳಿ ಬಂದು ಇಂದು ಶರಾವತಿ ಬಸ್ಸಿನಲ್ಲಿ ನಮ್ಮನ್ನಿಂದು ಉಗಿದು ಉಪ್ಪಿನ ಕಾಯಿ ಹಾಕಿದರು. ಅದಕ್ಕಾಗಿ ನಾವಿನ್ನು ಬಸ್ಸಿನಲ್ಲಿ ಜಾಗ ಖಾಲಿ ಇದ್ದರೂ ಕುಳಿತುಕೊಳ್ಳ ಬಾರದೆಂದು ಮಾಡಿದ್ದೇವೆ. ಎಂದು ತನ್ನ ಬೇಸರ ವ್ಯಕ್ತ ಪಡಿಸಿದಳು. ಏಕೆ ಏನಾಯಿತು ಎಂದು ಕೇಳಿದರೆ. ನಮಗೆ ಬಸ್ಸಿಗೆ ಹತ್ತುವವರು ಯಾರ್ಯಾರು ಎಲ್ಲಿಗೆ ಹೋಗುವವರೆಂದು ತಿಳಿಯುವುದಿಲ್ಲ ಅದಕ್ಕೆ ಎಂದು ಹೇಳಿದಳು. ಅದಕ್ಕೂ ನಿನ್ನ ತೀರ್ಮಾನಕ್ಕೂ ಸಂಬಂಧ ಏನು ಎಂದಾಗ ಅವಳು ವಿವರಿಸಿದ್ದು ಹೀಗೆ.
ನಾವು ಇಂದು ಶಾಲೆ ಬಿಟ್ಟು ಬಂದು ಬಸ್ಸ್ ಹತ್ತುವಾಗಿ ಸೀಟ್ ಗಳು ಖಾಲಿಇದ್ದವು. ಅದಕ್ಕೆ ನಾವು ಸೀಟಿನಲ್ಲಿ ಕುಳಿತು ಕೊಂಡೆವು. ಸ್ವಲ್ಪ ದೂರ ಬಂದ ನಂತರ ಇನ್ನೊಂದೆರೆಡು ಜನ (ಪ್ಯಾಸೆಂಜರ್) ಬಸ್ ಹತ್ತಿದರು. ನಾವು ಕುಳಿತೇ ಇದ್ದೆವು. ಕಂಡೆಕ್ಟರ್ ಬಂದು ನಮಗೆ ಉಗಿಯಲು ಪ್ರಾರಂಭಿಸಿದ. ಅವರು ಶಿವಮೊಗ್ಗಾಕ್ಕೆ ಹೋಗುವವರು. ಅವರಿಗೆ ಸೀಟ್ ಬಿಡಬೇಕೆಂಬುದು ಗೊತ್ತಾಗುವುದಿಲ್ಲವೇ. ನೀವು ಅವರು ಬಂದಾಕ್ಷಣ ಎದ್ದು ಅವರಿಗೆ ಜಾಗಿ ಬಿಡಬೇಕು. ಇತ್ಯಾದಿ.
ನಮಗೇನು ಗೊತ್ತು ಅವರು ಶಿವಮೊಗ್ಗಕ್ಕೆ ಹೋಗುವವರೆಂದು?
ಅದಕ್ಕೆ ಯಾರ್ಯಾರು ಎಲ್ಲಿಗೆ ಹೋಗುವರೆಂಬುದು ನಮಗೆ ತಿಳಿಯುವುದಿಲ್ಲ. ಹಾಗಾಗಿ ಅವರಹತ್ತಿರ ಉಗಿಸಿಕೊಳ್ಳುವ ಬದಲು ನಿಂತುಕೊಂಡು ಹೋಗುವುದೇ ಒಳ್ಳೆಯದೆಂಬುದು ನನ್ನ ತೀರ್ಮಾನ ಎಂದಾಗ ನಮ್ಮ ಕಾಲದ ಆ ಕುಮದ್ವತಿ ಬಸ್ ಸಿಪಿಸಿ ಬಸ್ ಗಳ ಡ್ರೈವರ್ ಕಂಡಕ್ಟರ್ ಗಳು ನೆನಪಿಗೆ ಬಂದರು. ಶಾಲಾ ಮಕ್ಕಳೆಂಬ ಕಕ್ಕುಲಾತಿಯಿಂದ ನಡೆದುಕೊಂಡು ಶಾಲೆಗೆ ಹೋಗಿ ಬರುವವರನ್ನು ನೋಡಿ ಅವರಾಗಿಯೇ ಬಸ್ ನಿಲ್ಲಿಸಿ ಹಚ್ಚಿಸಿಕೊಂಡು ಬರುವ ಕಂಡಕ್ಟರ್ ಎಲ್ಲಿ. ಈಗ ರಿಯಾಯಿತಿ ಪಾಸ್ ಹೊಂದಿರುವ ಮಕ್ಕಳ ಬಗ್ಗೆಯೂ ಹೀಗೆ ಹರಿಹಾಯುವ ಕಂಪನಿ ಬಸ್ ಗಳ ಡ್ರೈವರ್ ಕಂಡಕ್ಟರ್, ಹಿಂದೆ ಸಾಗರ ಸ್ಟ್ಯಾಂಡ ನಲ್ಲಿದ್ದ ಬಾಳಿಗರಂತಹ ಏಜೆಂಟರುಗಳೆಲ್ಲಿ?
ಬಾಳಿಗರ ಬಗ್ಗೆ ಬರೆಯಲು ಕಾರಣ ಇಷ್ಟೆ. ಅವರು ಸಾಗರದಲ್ಲಿ ನಾವು ಕಾಲೇಜಿಗೆ ಹೋಗುವ ದಿನಗಳಲ್ಲಿ ಈತ ಸಾಗರದಲ್ಲಿ ಗಜಾನನ ಕಂಪನಿ ಬಸ್ ಏಜೆಮಟರಾಗಿದ್ದರು. ಇವರು ಕಂಪನಿಯ ಪಾರ್ಟನರ್ ಸಹ ಆಗಿದ್ದರು ಎನ್ನುತ್ತಿದ್ದರು. ಅದು ಹೌದೋ ಅಲ್ಲವೋ ಗೊತ್ತಿಲ್ಲ. ಅವರಿಗೂ ಸಹ ಬಸ್ ಪಾಸ್ ಹೊಂದಿದ ಶಾಲಾ ಕಾಲೇಜಿಗೆ ಹೋಗುವ ಮಕ್ಕಳೆಂದರೆ ಎಲ್ಲಿಲ್ಲದ ತಾತ್ಸಾರ. ಕಾರಣ ಇಷ್ಟೆ ಪಾಸ್ ಹೊಂದಿದ ವಿದ್ಯಾರ್ಥಿಗಳು ಅರ್ಧ ಚಾರ್ಜ ಕೊಡುವವರು. ಇದರಿಂದಾಗಿ ಇವರಿಗೆ ಬರುವ ಕಮಿಷನ್ ಒಂದು ಸೀಟಿಗೆ ದೊಡ್ಡವರ ಒಂದು ಸೀಟಿಗೆ ಬರುವ ಅರ್ಧ ಮಾತ್ರ. ಹಾಗಾಗಿ ಶಾಲಾ ವಿದ್ಯಾರ್ಥಿಗಳೆಂದರೆ ಅವರಿಗೆ ನಾಲ್ಕನೇ ದರ್ಜೆ ಟ್ರೀಟ್ಮೆಂಟ್ ಇರುತ್ತಿತ್ತು. ಆದರೆ ಶಾಲೆಗೆ ಹೋಗುವ ಅವರ ಮಗನನ್ನು ಹೇಗೆ ನೋಡುತ್ತಿದ್ದರೋ ಗೊತ್ತಿಲ್ಲ. ಆತ ಈಗ ಅದೇ ಬಸ್ ಗಳಿಗೆ ಏಜೆಂಟನಾಗಿದ್ದಾನೆ. ಆ ಕಾಲದ ಎರಡು ಘಟನೆಗಳು ನನಗೆ ನೆನಪಿಗೆ ಬರುತ್ತಿದೆ.
ಒಮ್ಮೆ ಏಜಂಟರು ಚೀಲದ ತುಂಬ ಚಿಲ್ಲರೆ ಇದ್ದರೂ ಚಿಲ್ಲರೆ ವಿದ್ಯಾರ್ಥಿನಿಯೊಬ್ಬಳಿಗೆ ಚಿಲ್ಲರೆ ಇಲ್ಲ ಎಂದು ಸತಾಯಿಸ ತೊಡಗಿದ. ಇದನ್ನು ನೋಡುತ್ತಿದ್ದ ಸೀತಾರಾಮ ಎನ್ನುವ ನಮ್ಮೂರಿನವನೇ ಒಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯ ಪರವಾಗಿ ವಾದಿಸತೊಡಗಿದ. ಏಜೆಂಟ ನೋಡಿ ಚಿಲ್ಲರೆ ಇಲ್ಲ ಎಂದು ಚೀಲವನ್ನೇ ಸೀತಾರಾಮನ ಕೈಗೆ ಕೊಟ್ಟ. (ಯಾವ ಧೈರ್ಯದ ಮೇಲೆ ಕೊಟ್ಟನೋ ಗೊತ್ತಿಲ್ಲ) ಸೀತಾರಾಮ ಮಾತ್ರ ಹುಡುಗಿಗೆ ಅದರಲ್ಲಿನ ಚಿಲ್ಲರೆ ಕೊಟ್ಟು ಚೀಲ ಹಿಡಿದು ಕುಳಿತೇ ಬಿಟ್ಟ. ಈಗ ಮತ್ತೆ ಗಲಾಟೆ ಚೀಲಕ್ಕಾಗಿ. ಇನ್ನೂ ವಾದಿಸಿದರೆ ಚೀಲವನ್ನೇ ಹೊರಗೆ ಎಸೆಯುವುದಾಗಿ ಹೇಳಿದಾಗ ಗಲಾಟೆ ನಿಂತಿತ್ತು.
ಹೀಗೆ ಮತ್ತೊಂದು ಸಂದರ್ಭದಲ್ಲಿ ಏಜೆಂಟ್ ವಿದ್ಯಾರ್ಥಿಯೋರ್ವನಿಗೆ ಬಯ್ಯಲು ಪ್ರಾರಂಭಿಸಿದ. ಆಗ ವಿದ್ಯಾರ್ಥಿ ಅವನನ್ನೆ ಕೆಕ್ಕರಿಸಿ ನೋಡತೊಡಗಿದಾಗ, ಏನು ನೀನು ಹಾಗೆ ಕಣ್ಣು ಬಿಟ್ಟು ನೋಡುವುದು? ಎಂದ. ವಿದ್ಯಾರ್ಥಿಗೂ ಅದೆಲ್ಲಿತ್ತೋ ಸಿಟ್ಟು ಅವನು ಅಂದೇ ಬಿಟ್ಟ " ಕಣ್ಣಲ್ಲಲ್ಲದೆ ಏನು ತು. . . ಯಲ್ಲಿ ನೋಡಲೇ ಎಂದು ಬಿಟ್ಟ. ಹೀಗೆ ಅನೇಕ ಘಟನೆಗಳು ನೆನಪಿಗೆ ಬರುತ್ತವೆ. ಆದರೆ ಬರೆಯಲು ವ್ಯವಧಾನ ಇಲ್ಲ ಅಷ್ಟೆ.
ಹಬ್ಬ ಹರಿದಿನಗಳ, ಪರೀಕ್ಷೆಗಳ ಕಾಲದಲ್ಲಿ ಬಸ್ ರಶ್ ಇರುವ ಸಂದರ್ಭಗಳಲ್ಲಂತೂ ಇವರ ಆಟಾಟೋಪ ಹೇಳಲೆ ಸಾಧ್ಯವಿಲ್ಲ. ಅದನ್ನು ಅನುಭವಿಸಿದವರಿಗೆ ಗೊತ್ತು.
Comments
ಉ: ಉಗಿದು ಉಪ್ಪಿನಕಾಯಿ ಹಾಕಿದರು