ಉಡುಗೆ - ತೊಡುಗೆ ವಿದೇಶೀಯಾದ್ರೂ, ಅಡುಗೆ ಮಾತ್ರ ಸ್ವದೇಶಿಯೇ ಚೆನ್ನ ಏನಂತೀರಾ ?

ಉಡುಗೆ - ತೊಡುಗೆ ವಿದೇಶೀಯಾದ್ರೂ, ಅಡುಗೆ ಮಾತ್ರ ಸ್ವದೇಶಿಯೇ ಚೆನ್ನ ಏನಂತೀರಾ ?

               ನಾಗರೀಕತೆ ಬೆಳೆದಂತೆಲ್ಲ ನಮ್ಮ ಜೀವನ ಶೈಲಿ, ಆಹಾರಪದ್ಧತಿಗಳಲ್ಲಿಯೂ ಸಹ ಬದಲಾವಣೆ ಕಾಣುತ್ತಿದೆ. ವೇಗದ ಜೀವನ, ಬದಲಾದ ಜೀವನ ಗುಣಮಟ್ಟ, ಬಿಡುವಿಲ್ಲದ ದುಡಿತ, ಸಮಯದ ಅಭಾವ ಸುಲಭವಾಗಿ ದಕ್ಕುವ ಆಹಾರಗಳತ್ತ ನಮ್ಮನ್ನು ಸೆಳೆಯುತ್ತಿವೆ.  

               ಬೆಳಗಿನ ಕಾಫಿಯಿಂದ ಹಿಡಿದು ಬ್ರೆಡ್ ಜಾಮ್, ಪಿಜ್ಜಾ, ಪಾಸ್ತಾ, ಬರ್ಗರ್ಗಳಂತಹ ಆಹಾರೋತ್ಪನ್ನಗಳು ಭಾರತೀಯರನ್ನು ಅಪ್ಪಿಕೊಳ್ಳುತ್ತಿವೆ.  ಈ ಕಾರಣ ಅತಿ ಬೊಜ್ಜು,ಏರು ರಕ್ತದೊತ್ತಡ,ಹೃದಯಬೇನೆ,ಕಿನ್ನತೆ ಮುಂತಾದ ರೋಗಗಳು ನಮ್ಮನ್ನು ಕಾಡುತ್ತಿವೆ. 

               ನಮ್ಮಪಾರಂಪಾರಿಕ ಆಹಾರಪದ್ದತಿಯುಪ್ರಪಂಚದಲ್ಲಿಯೇ ಶ್ರೇಷ್ಟವಾದುದು.  ರುಚಿ,ಶುಚಿಯಲ್ಲಿಯೂ ಅಷ್ಟೇ ಎತ್ತರದ ಸ್ತಾನ ಕಾಯ್ದುಕೊಂಡಿದೆ. ವೈಜ್ಞಾನಿಕವಾಗಿ ಒಳ್ಳೆಯ ಸಮತೋಲನ ಆಹಾರದಲ್ಲಿಇರಬೇಕಾದ ಎಲ್ಲ ಅಂಶಗಳು ಭಾರತೀಯ ಆಹಾರ ಪದ್ದತಿಯಲ್ಲಿದೆ. 
                                                                           
               ಅನ್ನ, ಚಪಾತಿ,ತರಕಾರಿ,ಬೇಳೆಕಾಳು,ಹಸಿತರಕಾರಿ,ಸೊಪ್ಪು,ಹಣ್ಣು-ಹಂಪಲು ಎಲ್ಲ ಜೀವಸತ್ವಗಳಿಂದ ಕೂಡಿದ್ದು ಆರೋಗ್ಯವರ್ದಕಗಳಾಗಿವೆ. ಗೋಧಿ ಯಿಂದ ತಯಾರಿಸಲ್ಪಟ್ಟ ಚಪಾತಿಹಿಟ್ಟಿಗೆ ಸೋಯಾಬೀನ್ ಹಿಟ್ಟು ಸೇರಿಸಿ ಇನ್ನಷ್ಟು ಉತ್ತಮಗೊಳಿಸಬಹುದಾಗಿದೆ. ವಿದೇಶೀಯ ಆಹಾರದಲ್ಲಿ (ಬ್ರೆಡ್,ಬರ್ಗರ್ ) ಮೈದಾ ಮತ್ತು ಕೊಬ್ಬಿನ ಉಪಯೋಗ ಹೆಚ್ಚು. ಇದು ಅತಿ ಬೊಜ್ಜಿಗೆ ಕಾರಣವಾಗಿ ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ.  ಬೇಳೆ ಕಾಳು ಗಳಲ್ಲಿ ಸಿಗುವ  ಪ್ರೊಟೀನ್ ,ಕಾರ್ಬೋಹೈಡ್ರೇಟ್ಸ್ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ನಮ್ಮ ಪಾರಂಪಾರಿಕ ಸಿರಿ ಧಾನ್ಯ ಗಳಾದ ರಾಗಿ, ಜೋಳ, ಮುಸುಕಿನ ಜೋಳ ,ಸಜ್ಜೆ ,ನವಣೆಗಳಿಂದ ತಯಾರಿಸಿದ ರೊಟ್ಟಿ, ಮುದ್ದೆ, ಕಿಚಡಿ ಗಳಂತೂ ಅತುತ್ತಮ ಆಹಾರಗಳೆಂದು ಪರಿಗಣಿಸಲಾಗಿದೆ. ಎಳ್ಳು ,ಶೇಂಗ ,ತೆಂಗು, ಸೋಯಾ, ಸೂರ್ಯಕಾಂತಿ ಮುಂತಾದ ಎಣ್ಣೆ ಕಾಳುಗಳು ಜೀವಸತ್ವಗಳ ಕಣಜಗಳು. ಹಣ್ಣು-ಹಂಪಲು ಹಸಿತರಕಾರಿಗಳ ಸೇವನೆ ರೋಗ ನಿರೋದಕ ಶಕ್ತಿ ಹೆಚ್ಚಿಸುತ್ತದೆಯಲ್ಲದೆ ಪಚನ ಕ್ರಿಯೆ ಸುಲಭಗೊಳಿಸುತ್ತದೆ. 

             "ಊಟ ಬಲ್ಲವನಿಗೆ ರೋಗವಿಲ್ಲ".  ಎಂಬ ನಾಣ್ನುಡಿ ಯಂತೆ ನಮ್ಮ ಹಿರಿಯರು ಅಳವಡಿಸಿಕೊಂಡಿದ್ದ ಆಹಾರ ಪದ್ದತಿಯಿಂದಾಗಿ ಅತ್ಯಂತ ಧೃಡಕಾಯರೂ ಶ್ರಮ ಜೀವಿಗಳೂ ಆಗಿದ್ದು ನಿರೋಗಿಗಳಾಗಿ  ಜೀವನ ಸಾಗಿಸಿದರು. ಆದರೆ ನಮ್ಮ ದೋಷಪೂರಿತ ಆಹಾರ ಪದ್ಧತಿಯಿಂದಾಗಿ ಅಕಾಲಿಕ ವೃದ್ದಾಪ್ಯ, ಮೂಳೆಗಳ ಅಶಕ್ತತೆ ಮೊದಲಾದ ಕಾಹಿಲೆಗಳು ನಮ್ಮ ಬೆನ್ನತ್ತಿವೆ. ಜಿಹ್ವಾ ಚಾಪಲ್ಯಕ್ಕೆ ಯಾವ ಆಹಾರವಾದರೂ ಸರಿ ಆದರೆ ಸ್ವಾಸ್ಥ್ಯದ ವಿಚಾರ ಬಂದಾಗ ಉತ್ತಮವಾದ ಗುಣಮಟ್ಟದ ಆಹಾರ ಪದ್ದತಿಯನ್ನೇ ಅನುಸರಿಸಬೇಕು. 

            "ಆರೋಗ್ಯವೇ ಭಾಗ್ಯ ". "ಆರೋಗ್ಯವಂತರು ದೇಶದ ಆಸ್ತಿ ". (ಸೌಂಡ್ ಮೈಂಡ್ ಇನ್ ಸೌಂಡ್ ಬಾಡಿ) ಅನ್ನುವಂತೆ ಮಾನಸಿಕ ಸ್ವಾಸ್ಥ್ಯ ಕೂಡಾ ದೈಹಿಕ ಸ್ವಾಸ್ಥ್ಯವನ್ನು ಅವಲಂಬಿಸಿದೆ. ಸ್ವಸ್ಥ ಕುಟುಂಬದ , ಸ್ವಸ್ಥ ಸಮಾಜದ ನಿರ್ಮಾಣದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ . ಅಮ್ಮನ ಕೈಯಡುಗೆ ತಿನ್ನುತ್ತಾ ಧೃಡ ಕಾಯರಾಗಿ ಬಲಿಷ್ಠ ರಾಷ್ಟ್ರ ನಿರ್ಮಿಸುವತ್ತ ಹೆಜ್ಜೆ ಹಾಕೋಣವೆ?

ಕಮಲಾ ಬೆಲಗೂರ್ 
 

Rating
No votes yet

Comments

Submitted by Manjunatha D G Sat, 10/19/2013 - 22:33

ಉಡುಗೆ ತೊಡುಗೆಯೂ, ಅಡುಗೆಯೂ ಎಲ್ಲವೂ ಸ್ವದೇಶಿಯೇ ಉತ್ತಮವೆಂಬುದರಲ್ಲಿ ಎರಡು ಮಾತಿಲ್ಲ‌. ಆದರೂ ವಿದೇಶೀ ವ್ಯಾಮೋಹಕ್ಕೆ ನಾವು ಭಾರತೀಯರು ಬಲಿಯಾಗುವುದಕ್ಕೆ ಅತಿ ಮುಖ್ಯ‌ ಕಾರಣವೆಂದರೆ ವಿದ್ಯೆ ನಮ್ಮದಲ್ಲ‌. ಹೋಳಿಗೆ ನಮ್ಮದು, ಹೂರಣ‌ ಬೇರೆಯವರದ್ದು ಆಗಿದೆ !