ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧

ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧

ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ವಯಿಸುತ್ತದೆ.

ವಿಜಯನಗರದ ತರುವಾಯ ಕನ್ನಡ ಸಂಸ್ಕೃತಿಯ ದೋಷಗಳು ಪ್ರಧಾನವಾಗಿ ನಾಡಿಗೆ ಒಂದು ಬಗೆಯ ಸಾಂಸ್ಕೃತಿಕ ಅನಾರೋಗ್ಯವುಂಟಾಯಿತು. ಮೈಸೂರೊಂದರಲ್ಲಿ ದೃಷ್ಟಿ ಸಂಕುಚಿತವಾದರೂ ಕನ್ನಡಿಗರ ಶಕ್ತಿ ಕುಂಠಿತವಾಗಲಿಲ್ಲ . ಇನ್ನೂರು ವರ್ಷಕ್ಕೂ ಹೆಚ್ಚಿನ ಕಾಲ ಕನ್ನಡ ಜೀವನವು ದಿಗ್ಮೂಢವೂ ಅಗತಿಕವೂ ಆತ್ಮಪ್ರಜ್ಞೆ ಇಲ್ಲದುದೂ ಆಗಿ ಬಾಳಿತು .

೧೮೧೮ ರಲ್ಲಿ ಪೇಶವೆಯವರ ಆಳಿಕೆ ಮುಗಿದು ಹೋದರೂ ಉತ್ತರಕರ್ನಾಟಕವನ್ನು ಪಟವರ್ಧನ ಮನೆತನದವರು , ಭಾವೆ ಮನೆತನದವರು , ಘೋರ್ಪಡೆ ಮನೆತನದವರು ಕಾಯಿಪಲ್ಲೆ ಹಂಚಿಕೊಂದ ಹಾಗೆ ಹಂಚಿಕೊಂಡರು. ಕನ್ನಡಿಗರು ವಿಜಯನಗರ ಕಾಲಕ್ಕೇ ತಮ್ಮ ರಾಜವೈಭವವನ್ನು ಕಳೆದುಕೊಂಡಿದ್ದರು. ಅನಂತರ ಅವರು ಕಳೆದ ಜೀವನ ಹೊರಮನೆಯ ಭಾಣಸಿಗರಾಗಿಯೇ. ಮರಾಠಿಗರಾದರೋ ೧೮೧೮ ರವರೆಗೆ ರಾಜ್ಯವಾಳಿದವರು . ಹೀಗಾಗಿ ತಾವು ಆಳರಸರೆಂಬ ಪ್ರಜ್ಞೆ , ಅಹಂಕಾರ ಅವರಲ್ಲಿ ಇನ್ನೂ ಜಾಗೃತವಾಗಿದ್ದವು. ತಾವು ಆಳಲಿಕ್ಕೆ ಬಂದವರೆಂಬ ಭಾವನೆ ಅವರಲ್ಲಿ ಇತ್ತು. ಅದೂ ಅಲ್ಲದೆ ಮುಂಬೈ ಭಾರತದ ಹೆಬ್ಬಾಗಿಲಾದ್ದರಿಂದ ಬ್ರಿಟಿಷರು ಮೊದಲು ಅಲ್ಲಿ ತಳವೂರಿದರು . ತನ್ಮೂಲಕ ವಿದ್ಯೆಯ ಅವಕಾಶವೂ ಅಲ್ಲಿಯ ಜನತೆಗೇ ಮೊದಲು ಲಭಿಸಿತು. ಪುಣೆಯೂ ಸರಕಾರದ ಪೀಠಸ್ಥಾನವಾಯಿತು . ಉತ್ತರ ಕರ್ನಾಟಕದ ಜನ ತಮ್ಮ ವಿದ್ಯೆಗಾಗಿ ಪುಣೆಗೋ ಮುಂಬೈಗೋ ಹೋಗಬೇಕಾಗುತ್ತಿತ್ತು. ಹೀಗೆ ಮುಂಬೈ , ಪುಣೆಗಳಿಗೆ ಹೋಗಿ ಬಂದ ಕನ್ನಡಿಗರು ಪರದೇಶಿಗಳಾಗಿಯೇ ಬರುತ್ತಿದ್ದರು . ಅವರಲ್ಲಿ ಕೆಲವರು ಮರಾಠೀ ಹೆಣ್ಣುಮಕ್ಕಳನ್ನೂ ಕಟ್ಟಿಕೊಂಡೇ ಬರುತ್ತಿದ್ದರು. ಹೀಗಾಗಿ ಮಾತೃಭಾಷೆಯ ಸ್ಥಾನದಲ್ಲಿ ಈ ಭಾರ್ಯಾಭಾಷೆ ರಾರಾಜಿಸಹತ್ತಿತು. ಹಲವು ಜಹಗೀರುದಾರರಂತೂ ಪುಣೆಯ ನೀರಿನಿಂದ ತಮ್ಮ ಬಟ್ಟೆ ಸ್ವಚ್ಛವಾಗುತ್ತಿದ್ದುದನ್ನು ಗಮನಿಸಿ ಅಗಸರನ್ನೂ ಪುಣೆಯಿಂದಲೇ ಕರೆತಂದರು!. ಹೀಗಾಗೀ ಆರೇ ( ಮರಾಠಿ ಭಾಷೆ) ಅರಸವಾಯಿತು. ಈ ರಾಜಕೀಯ , ಸಾಮಾಜಿಕ ಹೊಡೆತಕ್ಕೆ ಕನ್ನಡಿಗ ನಿರ್ವಿಣ್ಣನಾದನು. ಸೋತ ಬಾಳು ಸಪ್ಪೆ ಬಾಳಾಯಿತು. ಮರಾಠಿಗರ ಕೃಪಾದೃಷ್ಟಿಯಲ್ಲಿ ಬಾಲ ಅಲ್ಲಾಡಿಸುವ ನಾಯಿಬಾಳು ಅವನದಾಯಿತು . ಕುರಿಯ ಹಿಂಡಿನಲ್ಲಿದ್ದ ಹುಲಿಮರಿಗೆ ಸ್ವಯಂಜ್ಞಾನವಾಗಲು ವೇಳೆ ಹಿಡಿದಂತೆ ಕನ್ನಡಿಗರಿಗೆ ತಮ್ಮ ಭಾಷೆ ಕನ್ನಡವೆಂದು ತಿಳಿದುಕೊಳ್ಳಲು ಅನೇಕ ವರುಷಗಳು ಹಿಡಿದವು . ಈ ಬಗೆಗೆ ಶ್ರೀ ದ.ರಾ.ಬೇಂದ್ರೆಯವರು ಹೀಗೆ ಬರೆಯುತ್ತಾರೆ ......
(ಮುಂದುವರೆಯುವದು)

Rating
No votes yet