ಉತ್ತರ ಕರ್ನಾಟಕದಲ್ಲಿ ಕನ್ನಡದ ಕಥೆ -೩
ಶ್ರೀ ಮುದವೀಡು ಕೃಷ್ಣರಾಯರು ಹೀಗೆ ಹೇಳಿದ್ದಾರೆ :
"ಈ ಪ್ರದೇಶವು ಕನ್ನಡ ನಾಡಿನ ಭಾಗವೆಂಬ ಅರಿವೂ ಇಲ್ಲಿಯ ಜನರಿಗಿಲ್ಲದಾಗಿ 'ದಕ್ಷಿಣ ಮಹಾರಾಷ್ಟ್ರ'ವೆಂಬ ಅಸಂಬದ್ಧ ಹಣೆಪಟ್ಟಿಯು ಇದರ ಪಾಲಿಗೆ ಬಂದಿತು. ೧೮೮೫ರಿಂದ ೧೯೧೫ರವರೆಗಿನ ಅವಧಿಯಲ್ಲಿ ಪರಿಸ್ಥಿತಿ ಬಹಳೇ ಕೆಟ್ಟಿತು. ಮುಂಬಯಿ ಅಧಿಕಾರದ ಕೇಂದ್ರವಾಗಿದ್ದ ಮಹಾರಾಷ್ಟ್ರದ ಕಡೆಯಿಂದ ಮರಾಠೀ ಭಾಷೆಯ ಅಧಿಕಾರಿಗಳೇ ಹೆಚ್ಚಾಗಿ ಬರತೊಡಗಿದರು. ಶಿಕ್ಷಣ ವಿಭಾಗವು ಅವರ ಗುತ್ತಿಗೆಯಾಯಿತು. ವಕೀಲಿಯಂತಹ ಹೊಸವರ್ಚಸ್ಸಿನ ಧನೋತ್ಪಾದಕ ಉದ್ಯೋಗಗಳಿಗೆ ಈ ಹೊಸ ಪ್ರದೇಶವು ಅವರಿಗೆ ತೆರೆದಿಟ್ಟಂತಾಯಿತು. ರೇಲ್ವೆಯ ಕಛೇರಿಗಳು ಇಲ್ಲಿಗೆ ಬಂದವು. ವ್ಯಾಪಾರೋದ್ಯೋಗದ ಬೆನ್ನು ಹತ್ತಿ ಅನೇಕ ಮರಾಠರು ಇಲ್ಲಿ ಬಂದು ನೆಲೆಸಿದರು. ಮಹಾರಾಷ್ಟ್ರದಲ್ಲಿಯ ನಾಟಕ ಕಂಪನಿಗಳಿಗೆ ಇದೊಂದು ಹೊಸ ಕ್ಷೇತ್ರವೇ ಲಭ್ಯವಾಗಿ ಅವರ ನಾಟಕಗಳು ತೆರಪಿಲ್ಲದೆಯೇ ಆಗಹತ್ತಿದವು. ಅಲ್ಲಿಯ ವ್ಯಾಖ್ಯಾನಕಾರರು , ಪುರಾಣಿಕರು , ಕೀರ್ತನಕಾರರು , ಗಾಯಕರು , ನರ್ತಕಿಯರು ಇಲ್ಲಿ ಬಂದು ನೆಲೆಸಹತ್ತಿದರು . ಇವರಿಗೆಲ್ಲ ಇಲ್ಲಿದ್ದ ಮರಾಠೀ ಅಧಿಕಾರಿಗಳಿಂದಲೂ ಇಲ್ಲಿಯೇ ನೆಲೆಯೂರಿದ ಮರಾಠಿಗರಿಂದಲೂ ಚೆನ್ನಾಗಿ ಆಶ್ರಯ ದೊರೆತು ಮತ್ತೂ ಹೊಸಬರಿಗೆ ಇತ್ತ ಕಡೆಗೆ ದುಡ್ಡು ಗಳಿಸಲಿಕ್ಕೆ ಬರಲು ಪ್ರೋತ್ಸಾಹ ದೊರೆಯಹತ್ತಿತು. ಇದೆಲ್ಲ ಕಾರಣಗಳಿಂದಾಗಿ ಪಂಪ, ರನ್ನ , ಕುಮಾರವ್ಯಾಸರ ತಿರುಳ್ಗನ್ನಡ ನಾಡಾದ ಈ ಸೀಮೆಯಲ್ಲಿ ಕನ್ನಡ ನುಡಿಯ ಹಿಂದೆ ಬಿದ್ದು ಮರಾಠೀ ಭಾಷೆಯು ಬೆಳೆಯಹತ್ತಿತು. ಅಭಿಮಾನೀ ಮರಾಠಿಗರು ತಮ್ಮ ವರ್ಚಸ್ಸಿನಿಂದ ಇಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮರಾಠೀ ಶಾಲೆಗಳನ್ನು ಸ್ಥಾಪಿಸಿಕೊಂಡರು. ಇನು ಸುಸಂಸ್ಕೃತ ಕನ್ನಡಿಗರು ಮೇಲ್ತರಗತಿಯ ಶಿಕ್ಷಣಕ್ಕೆ ಪುಣೆ , ಮುಂಬೈಗೆ ಹೋದಾಗ ತಮ್ಮ ಮಕ್ಕಳಿಗೆ ಸಾಮಾನ್ಯ ವ್ಯವಹಾರಕ್ಕೆ ಅನಾನುಕೂಲವಾಗಬಾರದೆಂಬ ವಿಚಾರದಿಂದ , ಅತ್ತಕಡೆಯ ಹೆಣ್ಣು ಗಂಡಿನ ವಿವಾಹ ಸಂಬಂಧ ಬಂದಾಗ 'ಆರೇ'* ಅರಿಯದವರೆಂಬ ಅಪಮಾನಕ್ಕೆ ಗುರಿಯಾಗಬಾರದೆಂಬ ವಿವೇಕಶೂನ್ಯ ಹಂಬಲದಿಂದ ತಮ್ಮ ಮಕ್ಕಳನ್ನೂ ಮರಾಠೀ ಶಾಲೆಗಳಿಗೇ ಕಳಿಸಹತ್ತಿದರು. ಹೀಗೆ ಪುಣೆ , ಮುಂಬೈ ಕಡೆಗೆ ಹೋಗಿ ಬಂದ ಸುಶಿಕ್ಷಿತ ಕನ್ನಡಿಗರು ತಮ್ಮ ತಾಯಿನುಡಿಯಾದ ಕನ್ನಡವನ್ನೇ ಮರೆತು ಮರಾಠಿಯನ್ನೇ ಮನೆಯ ಮಾತನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದರು. ಮೈಸೂರಿನ ಕಡೆಯಿಂದ ಮನೆಗೆ ಬಂದ ಅಚ್ಚಗನ್ನಡದ ಗೃಹಿಣಿಯರನ್ನು ಮರಾಠಿಯನ್ನು ಕಲಿಯಹಚ್ಚಿ ಅವರ ಅಬದ್ಧ ಸುಬದ್ಧ 'ಆರೇ'ದಿಂದಲಾದರೂ ಮನೆತನವನ್ನೇ ಮರಾಠೀಮಯ ಮಾಡುವ ಮೋಹಕ್ಕೆ ಒಳಗಾದರು. ಹೀಗೆ ಅನೇಕ ಕಾರಣಗಳಿಂದ ಇತ್ತ ಕಡೆಯ ಕನ್ನಡಿಗರ ಸ್ವಾಭಿಮಾನ , ಸ್ವಭಾಷಾಭಿಮಾನವು ಕುಗ್ಗುತ್ತ ನಡೆದು , ಕನ್ನಡವು ಮುಗ್ಗರಿಸಿ ಬಿದ್ದು ಮರಾಠಿಯ ಪ್ರಾಬಲ್ಯವೇ ಹೆಚ್ಚಾಗಿ ಅದರ ವರ್ಚಸ್ಸೇ ಬೆಳೆಯಲಾರಂಬಿಸಿತು. ' ಓದಿದರೆ ಮರಾಠಿ ಪುಸ್ತಕಗಳನ್ನೇ ಓದಬೇಕು , ತರಿಸಿದರೆ ಮರಾಠಿ ವರ್ತಮಾನಪತ್ರ ಮಾಸಪತ್ರಿಕೆಗಳನ್ನೇ ತರಿಸಬೇಕು. ನೋಡಿದರೆ ಮರಾಠಿ ನಾಟಕಗಳನ್ನೇ ನೋಡಬೇಕು. ಕೇಳಿದರೆ ಮರಾಠಿ ಹಿಂದೂಸ್ಥಾನೀ ಸಂಗೀತವನ್ನೇ ಕೇಳಬೇಕು' ಎಂಬ ಸೊಲ್ಲೇ ಎಲ್ಲೆಲ್ಲಿಯೂ ಹರಡಿಕೊಂಡ ವಿಪರೀತ ಪರಿಸ್ಥಿತಿಯಿಂದ ಈ ಕನ್ನಡನಾಡು ಜರ್ಜರಿತವಾಗಿ ಹೋಯಿತು. "
(* ಆರ್ಯನ್ , ಆರೇ ಭಾಷೆ - ಮರಾಠೀ - ಇಂದಿಗೂ ಇಲ್ಲಿ ಆರೇ ಹೆಸರಿನ ಹಾಲಿನ ಡೈರಿ ಇದೆ . ಅದರ ಹೆಸರೂ ಇದೇ 'ಆರೇ' ಇರಬಹುದು. ಮರಾಠೀ ಮಿತ್ರರಿಗೆ ಕೇಳಿದೆ. ಗೊತ್ತಿಲ್ಲವೆಂದರು )
(ಮುಂದುವರೆಯುವದು)