ಉದ್ಯಾನ ನಗರಿಯಿಂದ ಅಧ್ವಾನ ನಗರಿಯೆಡೆಗೆ....!

ಉದ್ಯಾನ ನಗರಿಯಿಂದ ಅಧ್ವಾನ ನಗರಿಯೆಡೆಗೆ....!

ನಾನು ದಿನಾ, ನಮ್ಮ ಆಫೀಸಿನ ಕ್ಯಾಬ್ ನಲ್ಲಿ, ಸರ್ಜಾಪುರ ರಸ್ತೆ - ಅಗರ ಮುಖಾಂತರವಾಗಿ ಹೊರ ವರ್ತುಲ ರಸ್ತೆಯಲ್ಲಿರುವ ನಮ್ಮ ಕಚೇರಿಗೆ ಹೋಗ್ತೀನಿ. ಈ ಕೆಲವು ತಿಂಗಳುಗಳವರೆಗೂ ಆ ರಸ್ತೆಯಲ್ಲಿ ಓಡಾಡೋವಾಗ, ಇಡೀ ರಸ್ತೆಗೆ ಚಪ್ಪರ ಹಾಕಿದಂತಿದ್ದ ಮರಗಳನ್ನ ನೋಡಿ ಮನಸ್ಸಿಗೆ ತುಂಬ ಖುಷಿ ಆಗ್ತಿತ್ತು. ಆದ್ರೆ ಈಗ ಈ ಮಾರ್ಗಾನ ದ್ವಿಮುಖ ರಸ್ತೆ ಮಾಡೋಕೆ ಅಂತ ಅಲ್ಲಿ ಇದ್ದ ಎಲ್ಲ ಮರಗಳನ್ನ ಕಡಿದು ರಸ್ತೆ ಅಗಲ ಮಾಡಿದ್ದಾರೆ. ಅಲ್ಲಿ ಇಲ್ಲಿ ಸೂರ್ಯ ಇಣುಕ್ತಾ ಇದ್ದ ಆ ರಸ್ತೆ ಈಗ ಬಯಲು ಮರುಭೂಮಿ ಥರ ಕಾಣಿಸೋಕೆ ಶುರು ಆಗಿದೆ. ಇದು ಮುಂಚೆ ದ್ವಿಮುಖ ರಸ್ತೆಯಾಗೆ ಇತ್ತಂತೆ, ರಸ್ತೆಗೆ ಇಳಿಯೋ ಬಂಡಿಗಳು ಜಾಸ್ತಿ ಆದಂತೆ ಇದನ್ನ ಏಕ ಮುಖ ಮಾಡಿದರಂತೆ. ಇದನ್ನ ಮತ್ತೆ ದ್ವಿಮುಖ ರಸ್ತೆ ಮಾಡುವ ಕಾರಣಕ್ಕೆ, ಇಲ್ಲಿ ವರ್ಷಗಳಿಂದ ಬೆಳೆದು ನಮಗೆ ಉಸಿರು ಕೊಡ್ತಿದ್ದ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಅಲ್ಲದೆ ಇದೆಲ್ಲ ನಡಿತ ಇರೋದು ಸರ್ಕಾರದ ಕಡೆಯಿಂದಾನೆ ಅನ್ನೋದು ಇನ್ನೊಂದು ವಿಪರ್ಯಾಸ.

ಇದು ಕೆಂಪೇಗೌಡ ಕಟ್ಟಿದ, ಒಂದಾನೊಂದು ಕಾಲದಲ್ಲಿ 'ಉದ್ಯಾನ ನಗರಿ'ಅಂತ ಹೆಸರು ತಗೊಂಡಿದ್ದ ಬೆಂಗಳೂರಿಗೆ ಬಂದಿರೋ ಗತಿ!. ಕಾರಣ ಯೋಚನೆ ಮಾಡ್ತಾ ಹೋದರೆ ಎಲ್ಲರಿಗೂ ತಿಳಿಯುತ್ತೆ ಇದು ಇಲ್ಲಿಗೆ ಬರುತ್ತಿರುವ ವಲಸಿಗರು ಹಾಗು ಅವರು ರಸ್ತೆಗೆಳಿಸುವ ವಾಹನಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇರೋದೇ ಕಾರಣ ಅಂತ. ಕೆಲವರಂತೂ ಕೇವಲ ಪ್ರತಿಷ್ಠೆ ಪ್ರದರ್ಶನಕ್ಕೊಸ್ಕರ ಒಂದು ದೊಡ್ಡ ಗಾಡಿ ತಗೆದುಕೊಂಡು ಒಬ್ಬರೇ ರಸ್ತೆಗಿಳಿತಾರೆ, ಇಂಥಹವರು ಬೆಂಗಳೂರಿನಲ್ಲಿ ಲಕ್ಷಾಂತರ ಜನ. ಇಂಥವರ ಶೋಕಿಗೆ ನಮ್ಮ ಬೆಂಗಳೂರಿನ ಮರಗಳು, ಕೆರೆಗಳು ಬಲಿಯಾಗುತ್ತಿವೆ. ಸರ್ಕಾರದವರು ಇವುಗಳಿಗೆ ಕುಮ್ಮಕ್ಕು ಕೊಡುವುದನ್ನು ಕಡಿಮೆ ಮಾಡಿ, ಹೆಚ್ಚುತ್ತಿರುವ ವಲಸಿಗರು, ಮಾರಾಟವಾಗುವ ವಾಹನಗಳ ಮೇಲೆ ತಕ್ಕ ಮಟ್ಟಿಗೆ ನಿಷೇಧ ತರುವ ಬಗ್ಗೆ ಒಂದು ಗಟ್ಟಿ ನಿಲುವು ತಗೆದುಕೊಳ್ಳಬೇಕಾಗುತ್ತೆ. ನಾವು ಕೂಡ ಆಫೀಸ್ ಕ್ಯಾಬ್ ಬಳಸೋದು, ನಗರ ಸಾರಿಗೆನ ಹೆಚ್ಚಾಗಿ ಬಳಸೋದು, ಕಾರ್ ಪೂಲಿಂಗ್ ಮಾಡೋದನ್ನ ಮಾಡಬೇಕಾಗುತ್ತೆ. ನಮ್ಮ ಬೆಂಗಳೂರನ್ನ ಅಧ್ವಾನ ನಗರಿ ಮಾಡಿಕೊಳ್ಳದೆ, ಉಳಿದಿರುವ 'ಉದ್ಯಾನ ನಗರಿ'ಯ ಕುರುಹುಗಳನ್ನ ಉಳಿಸಿಕೋಳ್ಳುವ ಪ್ರಯತ್ನ ಮಾಡೋಣ.

--------------------------
ಹೆತ್ತಮ್ಮನಿಗೂ ಹಿರಿಯವ್ವ,
ಈ ನಮ್ಮ ಭೂಮಿ,
ಕೊಲ್ಲದಿರು ಕಡಿಯದಿರು,
ಸ್ವಾರ್ಥದಲಿ ಓ ಕಾಮಿ.

ಕಾಣದ ಗುರಿ ಹಿಡಿವ ನಂಬಿಕೆಯ ಕೈಲ್ಹಿಡಿದು,
ಕಂಡ ದಿಕ್ಕುಗಳೆಡೆಗೆಲ್ಲಾ ಕಾಲ್ಚಾಚಿ ಮುನ್ನೆಡೆದು,
ಕೊನೆ ಕಳೆದ ಹಾದಿಯಲಿ ಬಂಧನವ ತೊರೆದೊಗೆದು,
ಮೊಟಾರಿನೊಳಗೆ ತಣ್ಣನೆ ಕುಳಿತ ನಿನ್ನ,
ಅಟ್ಟಹಾಸದ ಹೆಜ್ಜೆಗೆ ಸಿಲುಕಿ,
ಕೆರೆಯ ಕುರುಹುಗಳಿವು ಕಾಣದಾಯ್ತೆ!

ಸುಳ್ಳು ಸುಖವನು ಸ್ವಂತೈಸೋ ಆತುರದಿ,
ಕಾಂಚಾಣದ ಕರಿ ಮಾಯೆಗೆ ಮೂಢನಂತೆ ಮರುಳಾಗಿ,
ಗರ್ವದಲಿ ಮೆರೆಯುತ ಪರ್ವಗಳ ಮರೆತು,
ಹಾದಿಯಲಿ ಹಾರಲು ಅಮ್ಮನಿಗೆ ಇರಿದು,
ಬಾಯ್ಚಾಚಿ ಬಂದ ಕಬ್ಬಿಣದ ಕೊಕ್ಕರೆಗೆ,
ಮೂಕ ಮರಗಳಿವು ತುತ್ತಾಗಿಹೋಯ್ತೆ!

ಹೆತ್ತಮ್ಮನಿಗೂ ಹಿರಿಯವ್ವ,
ಈ ನಮ್ಮ ಭೂಮಿ,
ಇನ್ನಾದರು ಕಿವಿಹಿಡಿದು,
ಆಗೋ ಪ್ರಕೃತಿ ಪ್ರೇಮಿ.
--------------------------

Rating
No votes yet