ಉದ್ಯೋಗ ಮಾಡುವ ಯೋಗ್ಯತೆಯೂ ಪದ್ಧತಿಯೂ

ಉದ್ಯೋಗ ಮಾಡುವ ಯೋಗ್ಯತೆಯೂ ಪದ್ಧತಿಯೂ

ಹಳೆಯ ಪುಸ್ತಕ( ರದ್ದಿ ಪುಸ್ತಕ ಅನ್ನುವದು ಅಪಚಾರ!) ದ ಅಂಗಡಿಯಲ್ಲೊಮ್ಮೆ ೧೯೩೫ ರ ಶಾಲಾ ಪಠ್ಯಪುಸ್ತಕ( "ಕನ್ನಡ ಏಳನೇ ಪುಸ್ತಕ") ವೊಂದನ್ನು ನೋಡಿ ತೆಗೆದುಕೊಂಡೆ. ಅದರಲ್ಲಿ ಅಂದಿನ ರಾಜಭಕ್ತಿಯ ದಿನಗಳನ್ನು ಪ್ರತಿಫಲಿಸುವ ಪಾಠಗಳು ಇದ್ದವು . ಅಂದಿನ ವಿಜ್ಞಾನ , ಅಂದಿನ ಭೂಗೋಲ , ಅಂದಿನ ಇತಿಹಾಸ ಪಾಠಗಳೂ ಇದ್ದವು! . ಒಳ್ಳೇ ಕುತೂಹಲಕರ ಓದು! ಅಲ್ಲಿನ ಒಂದು ಪಾಠ ಏಕೋ ನನ್ನನ್ನು ಆಕರ್ಷಿಸಿತು. ಆ ಪುಟಗಳನ್ನಷ್ಟೇ ತೆಗೆದಿಟ್ಟುಕೊಂಡೆ.ಅಲ್ಲಿನ ಆಯ್ದ ಕೆಲ ಭಾಗಗಳನ್ನು ನೀವೂ ನೋಡಿ.

ಉದ್ಯೋಗ ಮಾಡುವ ಯೋಗ್ಯತೆಯೂ ಪದ್ಧತಿಯೂ
---------------------------
ಒಬ್ಬ ಮನುಷ್ಯನು ಬಹುತರ ಒಂದಿಲ್ಲೊಂದು ಉದ್ಯೋಗವನ್ನು ಮಾಡುತ್ತಾನೆ. ಆದರೆ ಉದ್ಯೋಗದಿಂದ ಉಚ್ಚಪದವಿಯನ್ನು ಹೊಂದಿದ ಜನರ ಉದಾಹರಣೆಗಳು ಸ್ವಲ್ಪ ಇರುತ್ತವೆ . ಯಾಕಂದರೆ ಕೈಕೊಂಡ ಉದ್ಯೋಗವನ್ನು ಸಾಗಿಸಲಿಕ್ಕೆ ಬಹುಜನರು ತಕ್ಕವರಿರುವದಿಲ್ಲ . ಉದ್ಯೋಗ ಮಾಡುವವನಲ್ಲಿ ವಿಶಿಷ್ಟವಾದದ್ದೊಂದು ಯೋಗ್ಯತೆಯೂ ಪದ್ಧತಿಯೂ ಇರಬೇಕಾಗುತ್ತದೆ. ಅವುಗಳಿಲ್ಲದಿದ್ದರೆ ದುಡಿಯುವವನ ಶ್ರಮವು ಸಫಲವಾಗುವದಿಲ್ಲ. ಉದ್ಯೋಗದ ಯೋಗ್ಯತೆಯ ಅಂಗಗಳು ಹಲವು ಇರುತ್ತವೆ.ಎಲ್ಲಕ್ಕೂ ಮೊದಲು ಉದ್ಯೋಗದ ಮನುಷ್ಯನು ಪ್ರಾಮಾಣಿಕನಿರಬೇಕು. ಪ್ರಾಮಾಣಿಕತನದಿಂದ ಪತ್ತು ಬೆಳೆಯುತ್ತದೆ. ಪತ್ತುಳ್ಳ ಉದ್ಯೋಗಸ್ಥನಲ್ಲಿ ಜನರ ನಂಬಿಕೆಯು ಹೆಚ್ಚಾಗಿ ಆತನ ಉದ್ಯೋಗವು ಭರಕ್ಕೆ ಬರುವದು. ಇದರಂತೆ ಉದ್ಯೋಗಸ್ಥನು ತನ್ನ ಹೋರೆಯ ಜ್ಞಾನವುಳ್ಳವನೂ , ವ್ಯವಹಾರಜ್ಞಾನ ಧೋರಣೆಯುಳ್ಳವನೂ ಆಗಿರಬೇಕು . ಉದ್ಯೋಗದ ಜ್ಞಾನವಿಲ್ಲದವನು ತನ್ನ ಉದ್ಯೋಗದಲ್ಲಿ ಮುಂದುವರಿಯಲಾರನು. ವ್ಯವಹಾರಜ್ಞಾನ ಧೋರಣಗಳಿಲ್ಲದಿದ್ದರೆ ವ್ಯವಹಾರವು ಸುಸೂತ್ರವಾಗಿ ಸಾಗದು . ಧೋರಣವುಳ್ಳವನು ತನ್ನ ಕೈಕೆಳಗಿನ ಜನರ ಪ್ರೀತಿಯನ್ನು ಸಂಪಾದಿಸುವನು.( ಮುರಾರಜಿ ಗೋಕುಲದಾಸನೆಂಬ ಉದ್ಯೋಗಸ್ಥನು ಸನ್ ೧೮೭೭ನೇ ಇಸವಿಯ ಬರಗಲದಲ್ಲಿ ಆದಿತ್ಯವಾರಕ್ಕೊಮ್ಮೆ ತನ್ನ ಗಿರಣಿಯವರಿಗೆ ಊಟಕ್ಕೆ ಹಾಕುತ್ತಿದ್ದುದರಿಂದ ಅವರು ಯಂತ್ರದ ಸಾಮಾನುಗಳನ್ನು ಜತನದಿಂದ ಕಾಯ್ದು ಕೆಲಸದಲ್ಲಿ ಬೇಸರಮಾಡದೆ ಮಮತ್ವದಿಂದ ದುಡಿಯಹತ್ತಲು ಅವನಿಗಾದ ವೆಚ್ಚಕ್ಕಿಂತ ಆದಾಯವು ಹೆಚ್ಚಾಯಿತಂತೆ.)
ಉದ್ಯೋಗದ ಮನುಷ್ಯನು ತನ್ನ ವೇಳೆಯೇ ತನಗೆ ಧನರೂಪವಾಗಿರುತ್ತದೆಂದು ಪೂರಾ ನಂಬುತ್ತಿರಲಿಕ್ಕೆ ಬೇಕು. ಅವನು ತನ್ನ ಕೆಲಸದಲ್ಲಿ ಆಸಕ್ತನಾಗಿ ಬೇರೆಬೇರೆ ಕಾರ್ಯಗಳನ್ನು ಚಟುವಟಿಕೆಯಿಂದ ಮಾಡುತ್ತಿರಬೇಕು. ಅಲ್ಪಸ್ವಲ್ಪ ಕೆಲಸಮಾಡಿ ಆಲಸ್ಯಕ್ಕೆ ಆಸ್ಪದ ಮಾಡಿ ಹರಟೆ ಕೊಚ್ಚುತ್ತಿರಬಾರದು. ಸಣ್ಣ ಕಣಗಳ ರೂಪವಾಗಿ ಪ್ರತಿಕ್ಷಣವೂ ಧನವನ್ನೂ ಜ್ಞಾನವನ್ನೂ ಸಂಪಾದಿಸಬೇಕು.
ಉದ್ಯೋಗ ಮಾಡುವವನು ಹಿಡಿದದ್ದನ್ನು ಸುಲಭವಾಗಿ ಬಿಡದವನಿರಬೇಕು. ಆರಂಭ ಮಾಡಿದ್ದನ್ನು ಕೊನೆಗೆ ಮುಟ್ಟಿಸದೆ ಬಿಡಲಿಕ್ಕಿಲ್ಲೆಂದು ಹಟಹಿಡಿದು ತಾಳ್ಮೆಯಿಂದ ಕೆಲಸ ಮಾಡುವ ಮನುಷ್ಯನ ಕೈಯಿಂದ ಘನತರ ಕಾರ್ಯಗಳಾಗುತ್ತವೆ. ವಿಘ್ನಕ್ಕೆ ಹೆದರಿ ಹಿಡಿದ ಕೆಲಸವನ್ನು ಬಿಡುವವನ ವೇಳೆ , ಶ್ರಮ , ಹಣ ಮೂರೂ ವ್ಯರ್ಥವಾಗುತ್ತವೆ . ಚಂಚಲ ಸ್ವಭಾವದವರು ಈ ಹೊತ್ತು ಒಂದು , ನಾಳೆ ಮತ್ತೊಂದು ಹೀಗೆ ಹೊಸ ಹೊಸ ಕೆಲಸಗಳಿಗೆ ಕೈಹಾಕಿ ಯಾವದನ್ನೂ ಕೊನೆಗಾಣಿಸಲಿಕ್ಕೆ ಯತ್ನಿಸುವದಿಲ್ಲ. ಈ ಚಾಂಚಲ್ಯವು ನಮ್ಮ ದಕ್ಷಿಣದ ಜನರಲ್ಲಿ ಹೆಚ್ಚಾಗಿರುವದರಿಂದ ನಮಗೆ ಆರಂಭಶೂರರೆಂಬ ಬಿರುದು ಬಂದಿರುತ್ತದೆ. ಇದಕ್ಕೆ ವಿಪರೀತವಾಗಿ ಮಾರವಾಡಿಗಳ ದೃಷ್ಟಾಂತವನ್ನು ಕೊಡಬಹುದು. ಇವರು "ವ್ಯಾಪಾರದಿಂದ ದೃವ್ಯ ಸಂಪಾದನೆ ಮಾಡಿಯೇ ತೀರೇವು" ಎಂಬ ಹಟದಿಂದ ದೂರ ದೇಶಕ್ಕೆ ಹೋಗಿ ನಾನಾಪ್ರಕಾರದ ಸಂಕಟಗಳನ್ನು ಭೋಗಿಸಿ ಭಿಕ್ಷಾಪತಿ ಹೋಗಿ ಲಕ್ಷಾಪತಿಯಗುತ್ತಾನೆ.
ಉದ್ಯೋಗ , ತಾರತಮ್ಯ , ವಿದ್ಯಾ , ಶೋಧಕ ಬುದ್ಧಿ , ಸಾಹಸ , ಇವುಗಳ ಬಗ್ಗೆ ಹೆಸರಾದ ನಮ್ಮ ಇಂಗ್ಲೀಷ್ ರಾಜ್ಯಾಧಿಕಾರಿಗಳ ದೃಷ್ಟಾಂತವನ್ನು ಉದ್ಯೋಗಿ ಎಂಬ ಹೆಸರು ಪಡೆಯುವ ಅಪೇಕ್ಷೆಯುಳ್ಳವರು ಯಾವಾಗಲೂ ಕಣ್ಣ ಮುಂದೆ ಇಟ್ಟುಕೊಳ್ಳಬೇಕು.
ಒಟ್ಟಿನಲ್ಲಿ ಪ್ರಾಮಾಣಿಕತನ , ಉದ್ಯೋಗದ ಜ್ಞಾನ ,ವ್ಯವಹಾರ್ತ ಜ್ಞಾನ , ಧೋರಣ , ವೇಳೆಯ ಬೆಲೆಯ ಜ್ಞಾನ , ಧೃಢ ನಿಶ್ಚಯ , ಇವು ಉದ್ಯೋಗದ ಯೋಗ್ಯತೆಯ ಮುಖ್ಯ ಅಂಗಗಳಾಗಿರುತ್ತವೆ . ಇವುಗಳುಳ್ಳವನಲ್ಲಿ ಉದ್ಯೋಗ ಮಾಡುವ ಯೋಗ್ಯತೆಯು ಪೂರಾ ಇರುತ್ತದೆಂದು ಅನ್ನಬಹುದು. ಆದರೆ ಒಲವೆಂಬುದೊಂದು ಅಗಸೇ ಬಾಗಿಲಿರುವದು. ಆ ಬಾಗಿಲದಿಂದ ಹೋಗದವನಲ್ಲಿ ಉದ್ಯೋಗದ ಯೋಗ್ಯತೆಯ ಅಂಗಗಳೆಲ್ಲ ಇದ್ದರೂ ಪುರುಷಾರ್ಥವಾಗುವದಿಲ್ಲ. ಕೈಕೆಲಸದ ಒಲವುಳ್ಳವನು ಗಾಯಕನಾಗಲಾರನು , ಗಾಯನದ ಒಲವುಳ್ಳವನು ಗ್ರಂಥಕಾರನಾಗಲಾರನು , ವ್ಯಾಪರಾದ ಒಲವುಳ್ಳವನು ಚಿತ್ರಗಾರನಾಗಲಾರನು . ಒಲವು ದೃಷ್ಟಿಲಾಘವದ ಬೀಜ ಮಂತ್ರವಿರುತ್ತದೆ . ಈ ಒಲವು ಆರೇಳೂ ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ಪ್ರಕಟವಾಗುತ್ತದೆ.ಆಗ ಬಾಲಕರ ಪಾಲಕರು ಅಥವಾ ಶಿಕ್ಷಕರು ಅವರ ಮನಸ್ಸಿನ ಒಲವನ್ನು ಚೆನ್ನಾಗಿ ಪರೀಕ್ಷಿಸಿ ಅದಕ್ಕೆ ತಕ್ಕ ಹೋರೆಯನ್ನೇ ಅವರಿಗೆ ಕಲಿಸಿದರೆ ಆ ಹುಡುಗರು ಪ್ರೌಢಾವಸ್ಥೆಯಲ್ಲಿ ಬಹುತರ ಬಡತನ್ನಕ್ಕೆ ಬೀಡಾಗುವದಿಲ್ಲ. ಇಂಥವರಲ್ಲಿ ಮೇಲೆ ಹೇಳಿದ ಉದ್ಯೋಗದ ಯೋಗ್ಯತೆಯ ಅಂಗಗಳೆಲ್ಲ ಇದ್ದರೆ ರತ್ನಕ್ಕೆ ಕುಂದಣ ಹಾಕಿದ ಹಾಗಾಗುವದು.
ವ್ಯಾಪಾರದ ಪದ್ಧತಿಯಲ್ಲಿ ಮೊದಲು ಅದರ ಕ್ರಮವು ಗೊತ್ತಾಗಲಿಕ್ಕೆ ಬೇಕು; ಇದಲ್ಲದೆ ಯೋಗ್ಯ ಮನುಷ್ಯರನ್ನು ಕೆಲಸಕ್ಕೆ ಹಚ್ಚಬೇಕು; ಅವರಿಗೆ ಅವಶ್ಯವಾದ ಸಾಮಾನುಗಳನ್ನು ಹೊತ್ತುಹೊತ್ತಿಗೆ ಒದಗಿಸಿಕೊದಬೇಕು ; ಮೇಲ್ವಿಚಾರಣೆಯ ಕೆಲಸವನ್ನು ಜಾಣತನದಿಂದಲೂ ಜಾಗೃತೆಯಿಂದಲೂ ಸಾಗಿಸುತ್ತಿರಲಿಕ್ಕೆ ಬೇಕು . ಹೀಗೆ ಮಾಡದಿದ್ದರೆ ಕೆಲಸವು ನೆಟ್ಟಗೆ ಸಾಗದು. ......

Rating
No votes yet