ಉಪಮಾ ಕಾಳಿದಾಸಸ್ಯ.

ಉಪಮಾ ಕಾಳಿದಾಸಸ್ಯ.

ನಿನ್ನೆ ಊಟ ಮಾಡ್ಕೊಂಡು ಹಂಗೇ ಗಾದಿಯ ಮೇಲೆ ಪವಡಿಸ್ಕೊಂಡಿದ್ದೆ. ಕರ್ನಾಟಕ ವಿದ್ಯುತ್ ಮಂಡಳಿಯವರು ಯಾಕೋ ವಿಶ್ರಾಂತಿ ತಗೊಂಡಿದ್ರಿಂದ,ಟಿವಿ ಸುಮ್ಮನೆ ಕುಳಿತಿತ್ತು. ಹಂಗೇ ಹೈಸ್ಕೂಲಲ್ಲಿ ಮೇಷ್ಟ್ರು ಕಾಳಿದಾಸ ಹೇಳಿದ ಶ್ಲೋಕ ನೆನಪಾಯ್ತು,
ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ
ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ
ಬಹಳ ಸುಂದರವಾದ ಶ್ಲೋಕ ಇದರ ಭಾವಾರ್ಥವನ್ನು ಹೇಳೋದಾದ್ರೆ, ಕಮಲದ ಒಳಗೆ ಕಮಲ ಹುಟ್ಟಿರುವದನ್ನು ಯಾರೂ ಕೇಳೂ ಇಲ್ಲ,ನೋಡೂ ಇಲ್ಲ ಆದ್ರೆ ಕನ್ಯೆ ನಿನ್ನ ಮುಖವೆಂಬ ಕಮಲದಲ್ಲಿ ಇನ್ನೆರಡು ಕಮಲಗಳು ಹೇಗೆ ಅರಳಿವೆ?. ಎಷ್ಟು ಸುಂದರವಾಗಿದೆ ಅಲ್ವಾ? ಕಾಳಿದಾಸ ನಿಜವಾಗಿಯೂ ಆ ಶಾರದಾಂಬೆಯ ಪುತ್ರನೇ
ಇದರ ಹಿಂದಿನ ಕಥೆ ನನಗೆ ತಿಳಿದಷ್ಟು ಹೇಳೋದಾದ್ರೆ, ಭೋಜರಾಜನ ಆಸ್ಥಾನ ವಿದ್ವಾಂಸರುಗಳ ಕಾಶಿಯಾಗಿತ್ತು. ಅಲ್ಲಿ ಸಾಹಿತ್ಯ ಪ್ರಪಂಚದ ಅಥಿರಥ ಮಹಾರಥಿಗಳಿದ್ರು. ಒಮ್ಮೆ ಒಬ್ಬ ವಿದ್ವಾಂಸ ಬಂದು ಸವಾಲು ಹಾಕಿದ, ’ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ’ ಇದರ ದ್ವಿತೀಯ ಚರಣವನ್ನ ಪೂರ್ತಿ ಮಾಡಿ.ಇದನ್ನ ಪೂರ್ತಿ ಮಾಡಿದ್ರೆ ನಾನು ಅವರ ದಾಸ ಆಗ್ತೀನಿ ಇಲ್ಲ ಅಂದ್ರೆ ಆಸ್ಥಾನದಲ್ಲಿರುವ ಎಲ್ಲ ವಿದ್ವಾಂಸರೂ ಅವನಿಗೆ ಶರಣಾಗ್ಬೇಕು ಮತ್ತು ರಾಜ್ಯದಲ್ಲಿ ಅರ್ಧ ಭಾಗ ಕೊಡ್ಬೇಕು ಅಂತ ಸವಾಲು ಹಾಕಿದ. ಆಸ್ಥಾನ ವಿದ್ವಾಂಸರೆಲ್ಲ ಮೂಕವಿಸ್ಮಿತರಾದ್ರು ಯಾರ ಹತ್ರಾನೂ ಇದಕ್ಕೆ ಉತ್ತರ ಇರ್ಲಿಲ್ಲ. ಇದನ್ನ ನೋಡಿ ಭೋಜ ಸಂಪೂರ್ಣವಾಗಿ ವಿಚಲಿತನಾಗಿ ಹೋದ. ಆಸ್ಥಾನದಲ್ಲಿ ಕಾಳಿದಾಸನ ಅನುಪಸ್ಥಿತಿ ಎದ್ದು ಕಾಣ್ತಾ ಇತ್ತು. ಭೋಜ ಕಾಳಿದಾಸನ ನಡುವೆ ಆದ ಕೆಲವು ತಪ್ಪು ಕಲ್ಪನೆಗಳಿಂದ ಕಾಳಿದಾಸನನ್ನ ದೇಶದ ಹೊರಗಟ್ಟಿದ್ದ. ಸಮಸ್ಯೆಯ ಗಂಭೀರತೆಯನ್ನು ನೋಡಿ ಭೋಜ ಡಂಗುರ ಸಾರಿಸ್ದ. ಯಾರು ಸಮಸ್ಯೆನಾ ಪರಿಹರಿಸ್ತಾರೋ ಅವರಿಗೆ ಅರ್ಧ ರಾಜ್ಯ ಕೊಡೋದಾಗಿ. ಇದನ್ನ ಕೇಳಿದ ಕಾಳಿದಾಸನಿಗೆ ಆಶ್ರಯ ಕೊಟ್ಟಿದ್ದ ವೇಶ್ಯೆಯೊಬ್ಬಳು ಕಾಳಿದಾಸನ ಹತ್ತಿರ ಈ ಸಮಸ್ಯೆಯನ್ನ ಪೂರ್ಣಗೊಳಿಸ್ತಾಳೆ.ಅದನ್ನ ಓದಿದಾಗ ಭೋಜನಿಗೆ ಇದು ಕಾಳಿದಾಸನೇ ಬರೆದ ವಾಕ್ಯ ಎಂದು ಅರ್ಥ ಆಗುತ್ತೆ ಮತ್ತು ಅವರ ಪುನರ್ಮಿಲನ ಆಗುತ್ತೆ.
ಈ ಶ್ಲೋಕವನ್ನ ಸೂಕ್ಷ್ಮವಾಗಿ ಗಮನಿಸ್ದ್ರೆ ’ಮುಖಾಂಭೋಜೇ’ಅಲ್ಲಿ ಭೋಜರಾಜ ಕಾಣ್ತಾನೆ. ಎಷ್ಟು ಸುಂದರವಾಗಿ ಪೋಣಿಸಿದ ವಾಕ್ಯ ಅಲ್ವಾ. ಅಂತಹ ಸುಂದರ ಶಬ್ದಗಳ ಹಾರವನ್ನು ಸೃಷ್ಟಿಸಿದ ಆ ಕಲಾವಿದನ್ನ ಎಷ್ಟು ಹೊಗಳಿದ್ರೂ ಸಾಲ್ದು ಅಲ್ವಾ?ಕಾಳಿದಾಸನ ಬಗ್ಗೆ ಮಾತಾಡೋಕ್ಕೆ ಹೋದ್ರೆ ಶಬ್ದಗಳೇ ಸಾಲಲ್ಲ. ಅಭಿಜ್ನಾನ ಶಾಕುಂತಲೆಯಲ್ಲಿ ಅವ ಸೃಷ್ಟಿಸಿದ ವಾಕ್ಯಸರಪಳಿಗಳಿಗೆ ಸಮನಾದ್ದು ಯಾವುದೂ ಇಲ್ಲ ಅನ್ಸುತ್ತೆ.ಅದರಲ್ಲಿ ಶಾಕುಂತಲೆ ಋಷ್ಯಾಶ್ರಮವನ್ನು ಬಿಟ್ಟು ಹೋಗುವಾಗ ಬರೆದ ನಾಲ್ಕು ಶ್ಲೋಕಗಳು ಜಗತ್ತಿನ ಅತಿಸುಂದರ ಶ್ಲೋಕ ಅಂತಾರೆ. ಸಂಸ್ಕೃತ ಭಾಷೆ ಇಷ್ಟು ಸುಂದರವಾಗಿ ಕಾಣೋದಕ್ಕೆ ಬಹುಶಃ ಇಂಥ ಮಹನೀಯರು ಬರೆದ ನುಡಿಮುತ್ತುಗಳೇ ಕಾರಣ ಅನ್ಸುತ್ತೆ.
ಇದೆಲ್ಲಾ ಆಲೋಚನೆ ಮಾಡ್ತಾ ಇರ್ಬೇಕಾದ್ರೆ ಕರಂಟು ಬಂತು. ಉಷೆ ಟಿವಿ ಯಲ್ಲಿ ನಮ್ಮ ಅಣ್ಣ ದರ್ಶನ್ ಅವ್ರು ರಕ್ಷಿತಾ ಅವ್ರಿಗೆ ’ತಬಲ ತಬಲ ತಬಲ ನನ್ನ ಮುದ್ದಿನ ತಬಲ...’ ಅಂತಾ ಹಾಡು ಹಾಡ್ತಾ ಇದ್ರು. ತಬಲ ಬದ್ಲು ಆನೆ ಅಂತಾ ಅಂದಿದ್ರೆ ಉಪಮಾನ ಸರಿಯಾಗಿ ಆಗ್ತಾ ಇತ್ತೋ ಏನೊ. ನಮ್ಮ ಕನ್ನಡ ಚಲನಚಿತ್ರ ಸಾಹಿತಿಗಳ ಉಪಮಾನ ಪರಾಕ್ರಮಕ್ಕೆ ಸುಸ್ತಾಗಿ ಮುಸ್ಕಾ ಎಳ್ಕೊಂಡೆ...
Rating
Average: 4 (1 vote)

Comments