ಉರುಂಬಿ ಜಲಪಾತ

ಉರುಂಬಿ ಜಲಪಾತ

ಪತ್ರಿಕೆಯಲ್ಲಿ ಬಂದ ಮಾಹಿತಿ ನನ್ನನ್ನು ಈ ಜಲಪಾತದೆಡೆಗೆ ಸೆಳೆಯುತ್ತಿತ್ತು. ಸಮಯದ ಅಭಾವ, ಮಗನ ಉಪನಯನದ ಕಾರ್ಯಕ್ರಮಗಳು ನಂತರ ನಮ್ಮ ಮನೆಯ ಹಿರಿಯ ಸದಸ್ಯ ವಿಕ್ಕಿಗೆ ಬಂದ ಖಾಯಿಲೆ ನನ್ನನ್ನು ಈ ಬಾರಿ ಬೆಂಗಳೂರಿನಿಂದ ಕಾಲ್ತೆಗೆಯಲು ಬಿಟ್ಟಿರಲಿಲ್ಲ. ಈ  ಭಾನುವಾರ  ಅದೇನೇ ಆದರೂ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದೆ. ಸಮೀಪದ ದೇವಸ್ತಾನ ನಗರಿಗೆ ಶನಿವಾರ ಜನಸ್ತೋಮವೇ ನೆರೆಯುವುದರಿಂದ ವಸತಿ ಸಿಗುವುದು ಕಷ್ಟ. ಅಲ್ಲಿನ ಹತ್ತಿರದ ಊರಿನ ರವಿಕುಮಾರ್ ಅವರ ತಂಗಿಯ ಗಂಡ ಕೃಷ್ಣರಾಜ ನನ್ನ ಸಹೋದ್ಯೋಗಿ. ಅವನ ಮೂಲಕ ಹೋಂ ಸ್ಟೇ ಒಂದನ್ನು ಕಾದಿರಿಸಿದೆ. ತುಂಬಾ ದುಬಾರಿ :( ಎಂದು ಹಣ ತೆತ್ತ ಮೇಲೆ ತಿಳಿದದ್ದು.  ಶನಿವಾರ ೧ ಗಂಟೆಗೆ ಮನೆಬಿಟ್ಟಾಗಲೇ ನಾನು ಹೊರಡುತ್ತಿದ್ದೇನೆಂದು ಅರಿವಾದದ್ದು. ೨ ಗಂಟೆಯಾದರೂ ಗೊರಗುಂಟೆ ಪಾಳ್ಯದಿಂದ ಹೊರಹೋಗಲು ಬೆಂಗಳೂರಿನ ವಾಹನದಟ್ಟಣೆಯಿಂದ ಸಾಧ್ಯವಾಗಲಿಲ್ಲ. ೭ ಗಂಟೆಗೆ ಗಮ್ಯ ತಲುಪಿದೆವು. ಬೆಳಿಗ್ಗೆ ೮ ಗಂಟೆಗೆ ಜಲಪಾತದೆಡೆ ಪಯಣ. ದೇವಸ್ತಾನ ನಗರಿಯಲ್ಲಿ ಯಾರಿಗೂ ಈ ಜಲಪಾತದ ಬಗ್ಗೆ ಅರಿವಿರಲಿಲ್ಲ. ಪತ್ರಿಕೆಯ ಮಾಹಿತಿಯನ್ನೆ ಆಧರಿಸಿ ಆ ಶಾಲೆಯ ಬಳಿ ಎಡಕ್ಕೆ ತಿರುಗಿದಾಗ ಕಂಡು ಬಂದ ಹಳ್ಳದ ಸೇತುವೆಯ ಬಳಿ ಕಂಡ ಜೀಪ್ ಚಾಲಕ ಇಲ್ಲಿ ಎಂತದೂ ಅರ್ಬಿ ಇಲ್ವಲ್ಲ ಎಂದಾಗ ನಿರಾಶೆ. ಮತ್ತೆ ಸಿಕ್ಕ ಇನ್ನಿಬ್ಬರು ಹೌದಲ್ಲ!! ಹೀಗೆ ಹೋಗಿ ಎಂದು ಮಾರ್ಗದರ್ಶನ ನೀಡಿದಾಗ ನೆಮ್ಮದಿ. ಆ ಮನೆ ತಲುಪಿ ಅವರ ಸಹಾಯದಿಂದ ತೋಟವನ್ನು ಹಾಯ್ದು ನಿಂತದ್ದು ಈ ಜಲಪಾತ ಬಳಿ. ಇಷ್ಟು ಸುಲಭದ ದಾರಿಯ ಕ್ರಮಿಸಿ ಇಂತಹ ಸುಂದರ ಜಲಪಾತ ತಲುಪಿದ್ದು ಖುಷಿಯಾಗಿದ್ದೇ ಎಲ್ಲರಿಗೂ ನಿರಿಗಿಳಿದೇ ಬಿಟ್ಟರು. ನಮ್ಮ ನಿರೀಕ್ಷೆಯಂತೆ ಮಳೆಯೂ ಇರಲಿಲ್ಲ, ಹೆಚ್ಚು ನಡಿಗೆಯಂತೂ ಇಲ್ಲವೇ ಇಲ್ಲ, ಆದರೂ ಸುಂದರ ತಾಣವೊಂದನ್ನು ಸಂದರ್ಶಿಸಿ ಬೆಂಗಳೂರು ತಲುಪಿದಾಗ ಸಂಜೆ ೫ ಗಂಟೆ.

ಅರವಿಂದರ ಬ್ಲಾಗ್ ನೋಡಿದಾಗ ಖಂಡಿಕಾ ಎಂದಿರುವುದು ಇದೇ ಜಲಪಾತವಿರಬೇಕೆಂದೆನೆಸಿತು. ಇರಬಹುದೇನೊ?
ತುಂಬಾ ದಿನಗಳ ನಂತರ ಚಿಕ್ಕದಾದರೂ ಚೊಕ್ಕದಾದ ಪ್ರವಾಸ ಮನಸ್ಸಿಗೆ ಮುದ ನೀಡಿತು.

Rating
No votes yet

Comments