ಉಸಿರಾಡುವುದು ಗೊತ್ತು

ಉಸಿರಾಡುವುದು ಗೊತ್ತು

ಗಾಳಿ ಇರುವುದು ಗೊತ್ತು
ನಾವು ಉಸಿರಾಡುವುದರಿಂದ
ಗಿಡ,ಮರ ಎಲೆಗಳು ಅಲುಗಾಡುವುದರಿಂದ.

ಬೆಂಕಿ ಇರುವುದು ಗೊತ್ತು
ಬೂದಿ ಮುಚ್ಚಿದ್ದರೂ ಬಿಸಿ ತಟ್ಟುವುದರಿಂದ
ತರಗೆಲೆ,ಪುಳ್ಳೆ,ಬರಲುಗಳೆಲ್ಲ
ತಟ್ಟನೆ ಬುರ್ರನೆ ಉರಿದು ಬೂದಿಯಾಗುವುರಿಂದ.

ನೀರು ಇರುವುದು ಗೊತ್ತು
ಬಳಲಿ ಬಾಯಾರಿಕೆಯಾಗುವುದರಿಂದ
ಮೂಳೆ ಪಂಜರದ ದೇಹದಲ್ಲೂ ರಕ್ತ ಹರಿಯುವುದರಿಂದ.
 
-2-
ಪ್ರೇಮ ಇರುವುದು ಗೊತ್ತು
ಕಾಮ ಅಣಕಿಸುವುದರಿಂದ
ಬಯಕೆ ಬಟ್ಟಲು ಹುಳಿಯೆನಿಸಿದಾಗ
ಒಳಗಿನ ದೇವನವನು ಕಾಯುವುದರಿಂದ.
 
ಪ್ರೀತಿ ಇರುವುದು ಗೊತ್ತು
ನಮಗೆ ಭಾವಗಳು ಹತ್ತಿಕ್ಕುವುದರಿಂದ
ಬೆಲೆಯೆ ಕಟ್ಟಲಾಗದ ವಸ್ತುಗಳು ಕೈಬಿಟ್ಟು ಹೋಗುವುದರಿಂದ.
 
ಜಾತಿ ಇರುವುದು ಗೊತ್ತು
ನಮಗೆ ಮುದುವೆ ಆಗುವುದರಿಂದ
ಪ್ರತಿ ಚುನಾವಣೆಯಲಿ ಓಟು ಹಾಕ ಬೇಕಾಗಿರುವುದರಿಂದ.
 
ಹಣ ಇರುವುದು ಗೊತ್ತು
ಕೊಡು-ಕೊಳ್ಳುವುದರಿಂದ
ಕೈಕಟ್ಟಿದರು ಎದೆಗಟ್ಟಿ ಮಾಡಿಕೊಂಡು
ದುಡಿಮೆಗೆ ದಾರಿ ಹುಡುಕುವುದರಿಂದ.
 
-3-
ಹೆಂಡ ಇರುವುದು ಗೊತ್ತು
ಅಮಲು ಏರುವುದರಿಂದ
ಅಧಿಕಾರ ವಿರಲಿ ಬಿಡಲಿ
ತಿಕ್ಕಲು ತನಗಳು ಕಾಡುವುದರಿಂದ.
 
ಹೆಂಡತಿ ಇರುವುದು ಗೊತ್ತು
ಸೆರಗಿನ ಮರೆಯಲಿ ಸಂತೈಸುವುದರಿಂದ
ಸೋತಾಗಲೂ ನೂರಾನೆ ಬಲದ ಸ್ಫೂರ್ತಿ ನೀಡುವುದರಿಂದ.
 
ಸತ್ಯ ಇರುವುದು ಗೊತ್ತು
ವಂಚಕರಿರುವುದರಿಂದ
ದುರುಳರು ದುರ್ಗತಿ ಕಂಡಾಗ
ಲೋಕವೆ ನಗುವುದರಿಂದ.

ಜೀವ ಇರುವುದು ಗೊತ್ತು
ನಾವು ನಡೆದಾಡುವುದರಿಂದ
ಹೇಗೋ ಬದುಕು ಸಾಗಿಸಲು ಹೊಡೆದಾಡುವುದರಿಂದ.
 
ಸಾವು ಇರುವುದು ಗೊತ್ತು
ಇಲ್ಲೇ ಬಂಧನಗಳು ಕಳಚುವುದರಿಂದ
ಎಲ್ಲ ಭ್ರಮೆಗಳು ತೊಲಗಿ ಹೋಗುವುದರಿಂದ
ಬುದ್ಧಿಯೂ ಸಮಾಧಿಯಾಗಿಬಿಡುವುದರಿಂದ.

ನನ್ನ ಕವನ ಸಂಕಲನ *ಮಾರ್ದನಿ

ನನ್ನ ಇನ್ನಷ್ಟು ಕವನಗಳಿಗೆ- [http://riterlines.blogspot.com|Riter Lines]

-ಎಚ್.ಶಿವರಾಂ

Rating
No votes yet