ಊರಿಗೆ ಪ್ರೀತಿಯ ಕರೆಯೋಲೆ
ಜನವರಿಯ ಜಾತ್ರೆ. ನೆಹರೂ ಬಟರ್ ಸ್ಟೋರ್. ಮಂಗಳವಾರ ಸಂತೆ. ಚಳಿಗಾಲದ ಕಾವಳ. ಅದರ ಜೊತೆಗೆ ಸೊಗಡಿನ ಅವರೇಕಾಯಿ.ರಾತ್ರಿ ಓಡಾಡುವಾಗ ಜೀವವೇ ಬಾಯಿಗೆ ಬರುವಂತೆ ಬೊಗಳುವ ಬೀದಿ ನಾಯಿಗಳು. ಸುಧಾ ಹೋಟೆಲ್ಲಿನ ಮಸಾಲೆ ದೋಸೆ. ಕಟ್ಟಿನ ಕೆರೆಯ ಬಸ್ ಸ್ಟಾಂಡ್. ಜಾತ್ರೆ ಮಾಳಕ್ಕೆ ಹೋಗುವ ಅಲಂಕಾರ ಮಾಡಿರುವ ರಾಸುಗಳು. ಪಿಕ್ಚರ್ ಪ್ಯಾಲೇಸ್ ಮುಂದೆ ಚೌಕಾಸಿ ವ್ಯಾಪಾರ. ಗಂಧದ ಕೋಟಿ. ಸಂಪಿಗೆ ರಸ್ತೆ. ವರುಷದಲ್ಲಿ ಒಮ್ಮೆ ಮಾತ್ರ ಹತ್ತು ದಿನ ತೆಗೆಯುವ ಊರ ದೇವತೆಯ ಗುಡಿ. ಮೂರು ತಿಂಗಳ ಸೋನೆ ಮಳೆ. ಗಣಪತಿ ಪೆಂಡಾಲಿನಲ್ಲಿ ಕದ್ರಿ ಗೋಪಾಲನಾಥ್ ಸ್ಯಾಕ್ಸಫೋನ್ ಕಚೇರಿ. ಡಬಲ್ ಟ್ಯಾಂಕ್ ಬಳಿ ಆಡುವ ಹುಡುಗರು. ಆಂಜನೇಯನ ದೇವಸ್ಥಾನದಲ್ಲಿ ಸಂಸ್ಕೃತ ಶಾಲೆ. ವರ್ಷಗಟ್ಟಲೆ ಟಾರು ಕಾಣದೇ ಮಳೆಗಾಲದಲ್ಲಿ ಕೆಸರಿನ ಓಟಕ್ಕೆ ಲಾಯಕ್ಕಾದ ರಸ್ತೆಗಳು. ಪಾರ್ಕಿನ ನಡುವೆ ಯಾರೂ ನೋಡಲು ಬರದ ಮ್ಯೂಸಿಯಂ ನಲ್ಲಿ ಸುಂದರ ಶಿಲ್ಪಗಳು. ಮಂಗಳೂರು ಪಾತ್ರೆ ಅಂಗಡಿಯ ಮುಂದೆ ಹೊಳೆಯುವ ತಾಮ್ರದ ಕೊಡಗಳು. ಹಳದೀ ಬಣ್ಣದ ನದೀ ದೇವತೆಯ ಕೈಯಲ್ಲಿ ಒಣಗಿನಿಂತ ನೀರಿನ ಕೊಡ. ಎಳೇ ಸೌತೇಕಾಯ್ ಎಳೇ ಸೌತೇಕಾಯ್ ಅಂತ ಬಸ್ ಕಿಟಕಿಗೇ ತಂದು ತಂದು ಮಾರುವ ಮಾರಾಟಗಾರರು. ರಾಮಚಂದ್ರ ಶೆಟ್ಟರ ಚಿನ್ನದಂಗಡಿ. ಮಠದ ಕಟ್ಟೆಯಲ್ಲಿ ಬಟ್ಟೆಯನ್ನೇ ಬಲೆ ಮಾಡಿ ಮೀನು ಹಿಡಿಯ ಹೋಗುವ ಶಾಲೆಯ ಹುಡುಗರು. ಮಹಾರಾಜ ಪಾರ್ಕಿನಲ್ಲಿರುವ ಪಾಪದ ಜಿಂಕೆಗಳು. ಅಡ್ಲಿ ಮನೆ ರಸ್ತೆ ಆಚೆಯ ಹುಣಸಿನ ಕೆರೆ. ’ಅಲ್ಲಿ ಕರಡಿ ಇದೆಯಂತೆ ಮೇಲೆ’ ಅಂತ ಹುಡುಗರು ಹೆದರಿಸೋ ಸೀಗೇ ಗುಡ್ಡ. ಉಪಗ್ರಹ ನಿಯಂತ್ರಣಾ ಕೇಂದ್ರ. ಬಸ್ ಒಳಗೂ ಹೊರಗೂ ಮೇಲೂ ತುಂಬಿಕೊಂಡು ಹೋಗುವ ಹಳ್ಳಿಗರು. ಬೀದಿಯಲ್ಲೇ ಜಗಳಕ್ಕಿಳಿವ ರಂಗೋಲಿ ಗುಂಡಿಯ ಹೆಂಗಸರು. ಇರಾನಿ ಬಂಗಲೆ. ಶಂಕರ ಮಠ. ಐಡಿಯಲ್ ಫೋಟೋ ಸ್ಟುಡಿಯೋ. ಕಸ್ತೂರಿ ಹೋಟೆಲ್. ಘಮಘಮ ಹುರಿಗಾಳು,ಖಾರದ ರೊಟ್ಟಿ ಸಿಗುವ ಬೇಕರಿ. ಹಾಸನ ಬೇಕರಿ. ಊರು. ನನ್ನ ಊರು. ನೂರು ಊರು ನೋಡಿದರೂ, ನನಗೆ ಯಾವತ್ತೂ ನನ್ನ ಊರಾಗೇ ಉಳಿಯುವ ಹಾಸನ. ಜೀವನದ ಮೊದಲರ್ಧವನ್ನು ಕಳೆದ ಹಾಸನ. ಹಾಸನಾಂಬೆಯ ಹಾಸನ. ಹೇಮಾವತಿಯ ಹಾಸನ. ಆಲೂಗೆಡ್ಡೆಯ ಹಾಸನ. ಹೊಯ್ಸಳ ರಾಜರ ಹಾಸನ. ಈಗ ವೇದಸುಧೆಯ ಹಾಸನ.
ಹೌದಂತೆ. ವೇದ ಸುಧೆ ಬ್ಲಾಗ್ ನಡೆಸುವ ಶ್ರೀಧರ್ ಅವರು ಈ ಶನಿವಾರ ಭಾನುವಾರ (೨೯ ಜನವರಿ, ೩೦ ಜನವರಿ, ೨೦೧೧) ವಿಶೇಷವಾದ ಕಾರ್ಯಕ್ರಮಗಳನ್ನ ಆಯೋಜಿಸಿದ್ದಾರಂತೆ.ನನ್ನ ಊರಿನಲ್ಲಿ. ಹಾಸನದಲ್ಲಿ. ನಾನಂತೂ ಹೋಗಕ್ಕಾಗ್ತಿಲ್ಲ.ಏನು ಮಾಡೋದು, ದೂರದಲ್ಲಿದ್ದೇನಲ್ಲ?
ನೀವು ಆದ್ರೆ ಹೋಗಿ. ಮೇಲಿನ ಕೊಂಡಿಯಲ್ಲಿ ನಿಮಗೆ ಎಲ್ಲ ವಿವರಗಳೂ ಸಿಗುತ್ತವೆ. ಆಮೇಲೆ ನನಗೂ ಹೇಗಿತ್ತು ಅಂತ ಹೇಳ್ತೀರಲ್ವಾ?
-ಹಂಸಾನಂದಿ
ಕೊ: ಹಿಂದೊಮ್ಮೆ ’ವಿಕಾಸವಾದ’ದಲ್ಲಿ ಭದ್ರಾವತಿಯ ಬಗ್ಗೆ ಒಂದು ಬರಹ ಓದಿದ್ದೆ. ನನ್ನೂರಿನ ಮನಸ್ಸಿಗೆ ಬಂದ ನೆನಪುಗಳನ್ನು ಹಾಗೆ ಹಾಗೇ ಬರೆಯುತ್ತ ಹೋಗಿದ್ದು ಸುಮಾರು ಆ ಬರಹದ ಶೈಲಿಯಲ್ಲೇ ಇದೆ ಅಂತ ಕಾಣುತ್ತೆ.