ಋಣಾನುಬಂಧ - ಭಾಗ ೩

ಋಣಾನುಬಂಧ - ಭಾಗ ೩

ಹಾಗೆ ದಿನಗಳು ಕಳೆಯುತ್ತಿದ್ದವು. ಶಾಲು ತನ್ನ ಪ್ರೀತಿಯ ಬಗ್ಗೆ ಯಾವುದೇ ನಿರ್ಧಾರ ಹೇಳದಿದ್ದರೂ ಅವರಿಬ್ಬರ ಒಡನಾಟದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಅವರ ಅಪ್ಪನಿಗೆ ಗೊತ್ತಾಗದ ಹಾಗೆ ಆಚೆ ಓಡಾಡುತ್ತಿದ್ದರು. ಅವರು ಮನೆಯಲ್ಲಿ ಇಲ್ಲದಿರುವಾಗ ಹೋಗಿ ಬಂದು ಮಾಡುತ್ತಿದ್ದ. ಇತ್ತ ಮನೆಯಲ್ಲಿ ಮತ್ತೆ ಮದುವೆಯ ವಿಷಯ ಬಂದಾಗ ಸಿದ್ದು ತನ್ನ ಅಮ್ಮನ ಬಳಿ ಶಾಲು ವಿಷಯ ತಿಳಿಸಿದ. ಸಿದ್ದುವಿನ ತಾಯಿಗೆ ಇದರ ಬಗ್ಗೆ ಯಾವುದೇ ಅಭ್ಯಂತರವಿರಲಿಲ್ಲ. ಸರಿ ಸಿದ್ದು ನಾನು ನಿಮ್ಮಪ್ಪನ ಬಳಿ ಮಾತಾಡಿ ನೋಡುತ್ತೇನೆ. ಅದು ಸರಿ ಈ ವಿಷಯ ಶಾಲಿನಿಗೆ ಗೊತ್ತ?


ಇಲ್ಲಮ್ಮ ನಾನಿನ್ನೂ ಈ ವಿಷಯ ಶಾಲಿನಿಗೆ ಹೇಳಿಲ್ಲ. ಹೋಗಲಿ ಶಾಲಿನಿ ನಿನ್ನನ್ನು ಪ್ರೀತಿಸುತ್ತಿದ್ದಾಳ? ಅಮ್ಮ...ಅದೂ ನಾನು ಅವಳನ್ನು ನೇರವಾಗಿ ಕೇಳಿಲ್ಲ. ಆದರೆ ನನ್ನ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಕೇಳಿದ್ದಕ್ಕೆ ಒಳ್ಳೆಯ ಸ್ನೇಹಿತ ಎಂದಷ್ಟೇ ಹೇಳಿದಳು ಎಂದು ತಲೆ ತಗ್ಗಿಸಿದ. ಅಲ್ಲ ಸಿದ್ದು ವಿಷಯ ಹೀಗಿರಬೇಕಾದರೆ ನಾನು ಯಾವ ಧೈರ್ಯದ ಮೇಲೆ ನಿಮ್ಮಪ್ಪನ ಬಳಿ ಮಾತನಾಡಲಿ ಹೇಳು. ಅಮ್ಮ ನನಗೇನೋ ಅವಳು ಅವರ ಅಪ್ಪನಿಗೆ ಹೆದರಿಕೊಂಡು ನನ್ನ ಬಳಿ ಹೇಳುತ್ತಿಲ್ಲ ಎಂದು ಅನಿಸುತ್ತದೆ. ಸರಿನಪ್ಪ ನಾನು ಒಂದು ಸಲ ನಿಮ್ಮಪ್ಪನ ಕೇಳುತ್ತೀನಿ. ಒಂದು ವೇಳೆ ಅವರು ಏನಾದರೂ ಒಪ್ಪದಿದ್ದರೆ ಸುಮ್ಮನೆ ನಾವು ತೋರಿಸಿದ ಹುಡುಗಿಯನ್ನು ಮದುವೆ ಆಗಬೇಕು. ಹಾಗಿದ್ರೆ ಮಾತ್ರ ನಾನು ಕೇಳುತ್ತೀನಿ ಏನನ್ನುತ್ತೀಯ? ಹಾಗೆ ಆಗಲಿ ಅಮ್ಮ ಒಂದು ವೇಳೆ ಅವರು ಏನಾದರೂ ಒಪ್ಪದಿದ್ದರೆ ನೀವು ತೋರಿಸಿದ ಹುಡುಗಿಯನ್ನೇ ಮದುವೆ ಆಗುತ್ತೇನೆ. ಸರಿ ಹಾಗಾದರೆ ಈ ವಿಷಯದ ಬಗ್ಗೆ ಯಾರೊಂದಿಗೂ ಮಾತಾಡಬೇಡ.


ಒಂದೆರಡು ದಿನ ಕಳೆದಿತ್ತು. ಸಿದ್ದು ಅಡಿಗೆ ಮನೆಯಲ್ಲಿದ್ದ ಅವರ ಅಮ್ಮನ ಬಳಿ ಬಂದು ಅಮ್ಮ ಏನಾಯ್ತು? ಅಪ್ಪನ ಬಳಿ ಮಾತಾಡಿದೆಯ?. ಹಾ ಸಿದ್ದು ನಿಮ್ಮಪ್ಪನಿಗೆ ವಿಷಯ ತಿಳಿಸಿದೆ ಆದರೆ ಅವರು ಶಾಲಿನಿಯ ಮನೆಗೆ ಹೋಗಿ ಮಾತಾಡಲು ನಿರಾಕರಿಸಿದರು. ಅವರಿಗೆ ಅವರ ಪ್ರತಿಷ್ಠೆ ಮುಖ್ಯವಂತೆ. ಅವರು ಹಾಗೆಲ್ಲ ಹೋಗಿ ಹೆಣ್ಣನ್ನು ಕೇಳುವುದಿಲ್ಲವಂತೆ. ಅದೂ ಅಲ್ಲದೆ ಆ ಮನುಷ್ಯ ಅಂದರೆ ಶಾಲಿನಿಯ ತಂದೆ ವಿಚಿತ್ರ ಮನುಷ್ಯ. ಆತನ ಬಳಿ ಖಂಡಿತ ಹೋಗಿ ಕೇಳುವುದಿಲ್ಲ ಎಂದು ಬಿಟ್ಟರು. ಸಿದ್ದು ಅದು ಬಿಡು. ಅಸಲಿಗೆ ಶಾಲಿನಿಗೆ ನಿನ್ನ ಮೇಲೆ ಪ್ರೀತಿ ಇಲ್ಲ ಎನ್ನುತ್ತಿದ್ದೀಯ, ಇನ್ನು ಹೇಗೆ ಹೋಗಿ ಅವರನ್ನು ಕೇಳುವುದು. ನನ್ನ ಮಾತು ಕೇಳು ಸಿದ್ದು ನಿಮ್ಮಪ್ಪ ತೋರಿಸಿದ ಹುಡುಗಿಯನ್ನು ಮದುವೆ ಆಗುವುದೇ ಒಳ್ಳೆಯದು ಎನಿಸುತ್ತದೆ. ಆಯ್ತಮ್ಮ ನಾನು ಇನ್ನೊಂದು ಸಲ ಶಾಲಿನಿ ಹತ್ತಿರ ಮಾತಾಡಲು ಪ್ರಯತ್ನಿಸುತ್ತೇನೆ ಈ ಬಾರಿಯೂ ಅವಳು ಅದೇ ಉತ್ತರ ಕೊಟ್ಟರೆ ನಾನು ನೀವು ತೋರಿಸಿದ ಹುಡುಗಿಯನ್ನೇ ಮದುವೆ ಆಗುತ್ತೇನೆ.


ಒಂದೆರಡು ತಿಂಗಳು ಕಳೆದಿತ್ತು. ಒಮ್ಮೆ ಶಾಲಿನಿ ಹಾಗೂ ಸಿದ್ದು ಯಾವುದೋ ಸಿನೆಮಾಗೆ ಬಂದಿದ್ದರು. ಸಿನೆಮಾ ಮಧ್ಯದಲ್ಲಿ ಸಿದ್ದು ಶಾಲಿನಿಯ ಕೈ ಹಿಡಿದು ಶಾಲು ನಿನಗೆ ಒಂದು ವಿಷಯ ಹೇಳಬೇಕು ಕಣೆ ಎಂದ. ಏನು ಹೇಳು ಸಿದ್ದು. ಶಾಲು ನಿನಗೆ ನನ್ನ ಬಗ್ಗೆ ಏನು ಅಭಿಪ್ರಾಯ ಇದೆಯೋ ಗೊತ್ತಿಲ್ಲ ಆದರೆ ನಾನಂತೂ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಶಾಲು. ತಕ್ಷಣ ಶಾಲಿನಿ ಅವನ ಕೈಯಿಂದ ಕೈ ಬಿಡಿಸಿಕೊಂಡು ಸಿದ್ದು ನನಗೆ ಸದ್ಯಕ್ಕೆ ಇದರ ಬಗ್ಗೆ ಎಲ್ಲ ಯೋಚನೆ ಮಾಡಲು ಸಮಯವಿಲ್ಲ. ಸಧ್ಯಕ್ಕೆ ನನ್ನ ಪೂರ್ಣ ಗಮನ ನನ್ನ ಓದಿನ ಬಗ್ಗೆ ಮಾತ್ರ. ಸರಿ ಶಾಲು ನಿನಗೆ ಎಷ್ಟು ಸಮಯ ಬೇಕೋ ಅಷ್ಟು ತೆಗೆದುಕೋ ಆಮೇಲಾದರೂ ನನ್ನನ್ನು ಪ್ರೀತಿಸುತ್ತೀಯ? ಸಿದ್ದು ನನಗೆ ಈಗಲೇ ಏನೂ ಹೇಳಲು ಆಗಲ್ಲ. ಆಗಿನ ಪರಿಸ್ಥಿತಿ ಹೇಗಿರುತ್ತದೋ ನನಗೆ ಗೊತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸು.


ಅಯ್ಯೋ ಶಾಲು ಅದಕ್ಕೆ ಯಾಕೆ ಕ್ಷಮಿಸು ಎನ್ನುತ್ತೀಯ? ನಿನ್ನ ಮನಸಲ್ಲಿ ಇದ್ದಿದ್ದನ್ನು ನೀನು ಹೇಳಿದ್ದೀಯ. ಪರವಾಗಿಲ್ಲ ನನಗೇನೂ ಬೇಸರವಿಲ್ಲ ಎಂದಾಗ ಸಿದ್ದಾರ್ಥನ ಗಂಟಲು ತುಂಬಿ ಬಂತು. ಸಿನೆಮಾ ಮುಗಿಸಿಕೊಂಡು ಮನೆಗೆ ಬಂದ ಶಾಲಿನಿ ತನ್ನ ಕೋಣೆಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಳು. ಛೆ ನಾನು ಅವನನ್ನು ಪ್ರೀತಿಸುತ್ತಿದ್ದರು ನಾನು ಯಾಕೆ ಹಾಗೆ ಮಾತಾಡಿದೆ. ಅವನಾಗೇ ಬಾಯಿ ಬಿಟ್ಟು ಹೇಳಿದರೂ ಕೂಡ ನಾನ್ಯಾಕೆ ಹಾಗೆ ವರ್ತಿಸಿದೆ. ಇದರಿಂದ ಅವನ ಮನಸಿಗೆ ಎಷ್ಟು ನೋವಾಗಿದೆಯೋ ಏನೋ. ನನ್ನ ಓದು ಮುಗಿದ ತಕ್ಷಣ ನಾನೇ ಹೋಗಿ ನನ್ನ ಮನಸಿನ ವಿಷಯವನ್ನು ತಿಳಿಸುತ್ತೇನೆ ಎಂದು ನಿರ್ಧರಿಸಿದಳು.


ಇತ್ತ ಸಿದ್ದಾರ್ಥನ ಮನಸು ಚೂರು ಚೂರಾಗಿತ್ತು. ರೂಮಿನಲ್ಲಿ ಕುಳಿತು ದುಖ ತಾಳಲಾರದೆ ಅಳುತ್ತಿದ್ದ. ಏತಕ್ಕೋ ರೂಮಿಗೆ ಬಂದ ಅವನ ತಾಯಿ ಅವನು ಅಳುವುದನ್ನು ನೋಡಿ ಗಾಭರಿಯಾಗಿ ಯಾಕೆ ಸಿದ್ದು ಏನಾಯಿತು? ಯಾಕೆ ಅಳ್ತಾ ಇದ್ದೀಯ? ಏನಾಯ್ತು? ತಾಯಿಯನ್ನು ನೋಡಿದ ಕೂಡಲೇ ಸಿದ್ದುವಿನ ದುಖ ಮತ್ತಷ್ಟು ಹೆಚ್ಚಾಗಿ ಅವರ ಮಡಿಲಲ್ಲಿ ಮಲಗಿ ನಡೆದ ವಿಷಯವನ್ನು ತಿಳಿಸಿದ. ಹೋಗ್ಲಿ ಬಿಡು ಸಿದ್ದು ನಿನ್ನನ್ನು ಮದುವೆ ಆಗುವ ಯೋಗ ಅವಳಿಗಿಲ್ಲ ಅಷ್ಟೇ. ನಿನಗೇನೂ ಕಮ್ಮಿ ಆಗಿಲ್ಲ. ನಿಮ್ಮಪ್ಪನಿಗೆ ಹೇಳಿ ಆದಷ್ಟು ಬೇಗ ಅವರ ಸ್ನೇಹಿತರ ಬಳಿ ಮಾತಾಡಲು ಹೇಳುತ್ತೇನೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮದುವೆ ಮಾಡಿ ಬಿಡೋಣ. ಆಗ ನೀನು ಇದೆಲ್ಲದರಿಂದ ಆಚೆ ಬರಬಹುದು ಎಂದು ಅವನ ತಲೆಯನ್ನು ಸವರಿ ಎದ್ದು ಹೋದರು.


ಸಿದ್ದುವಿನ ತಾಯಿ ನಡೆದ ವಿಷಯವನ್ನು ಅವರ ಯಜಮಾನರ ಬಳಿ ತಿಳಿಸಿ ಅವರ ಸ್ನೇಹಿತರ ಮಗಳನ್ನು ವಿಚಾರಿಸಲು ಹೇಳಿದರು. ಕೂಡಲೇ ಅವರ ತಂದೆ ಹುಡುಗಿಯ ತಂದೆಯ ಬಳಿ ಮಾತನಾಡಿ ನಾಳೆಯೇ ಹೆಣ್ಣು ನೋಡುವ ಶಾಶ್ತ್ರ ಮಾಡಿಬಿಡೋಣ ಎಂದು ನಿರ್ಧರಿಸಿದರು. ಅದರಂತೆ ಮರುದಿನ ಹುಡುಗಿಯ ಕಡೆಯವರು ಬಂದು ಹುಡುಗನನ್ನು ನೋಡಿ ಮಾತುಕತೆ ಎಲ್ಲ ಮುಗಿಸಿ ನಿಶ್ಚಿತಾರ್ಥದ ದಿನಾಂಕ ನಿಗದಿ ಮಾಡಿಕೊಂಡು ಹೋದರು. ಅಂದಿನಿಂದ ಸರಿಯಾಗಿ ಒಂದು ತಿಂಗಳಿಗೆ ನಿಶ್ಚಿತಾರ್ಥ ನಿಗದಿ ಆಗಿತ್ತು. ಕಾಕತಾಳೀಯವೆಂಬಂತೆ ಅದೇ ದಿನ ಸಿದ್ದಾರ್ಥನ ಹುಟ್ಟಿದ ಹಬ್ಬ ಇತ್ತು. ಸಿನೆಮಾ ಘಟನೆ ನಡೆದಾಗಿನಿಂದ ಸಿದ್ದಾರ್ಥ ಶಾಲಿನಿಯ ಮನೆಗೆ ಹೆಚ್ಚು ಹೋಗುತ್ತಿರಲಿಲ್ಲ. ಫೋನಿನಲ್ಲೂ ಜಾಸ್ತಿ ಹೊತ್ತು ಮಾತನಾಡುತ್ತಿರಲಿಲ್ಲ. ಹುಡುಗಿ ನೋಡಿದ ವಿಷಯವನ್ನೂ ಅವರ ಮನೆಯಲ್ಲಿ ತಿಳಿಸಿರಲಿಲ್ಲ. ಇನ್ನೇನು ನಿಶ್ಚಿತಾರ್ಥಕ್ಕೆ ಎರಡು ದಿನ ಇರುವಾಗ ಸಿದ್ದಾರ್ಥನ ತಂದೆ ಹಾಗೂ ತಾಯಿ ಶಾಲಿನಿಯ ಮನೆಗೆ ಹೋಗಿ ವಿಷಯ ತಿಳಿಸಿ ಆಹ್ವಾನಿಸಿದರು. ಶಾಲಿನಿಗೆ ವಿಷಯ ಕೇಳಿ ದುಃಖ ಉಮ್ಮಳಿಸಿ ಬಂದು ರೂಮಿಗೆ ಹೋಗಿ ಮನ ಹಗುರಾಗುವವರೆಗೂ ಅತ್ತಳು. ನಂತರ ಸಮಾಧಾನ ಮಾಡಿಕೊಂಡು ಸಿದ್ದಾರ್ಥನಿಗೆ ಫೋನ್ ಮಾಡಿ ಮಾಮೂಲಿನಂತೆ ಮಾತಾಡಿ ಶುಭಾಷಯ ತಿಳಿಸಿದಳು.


ಹುಡುಗಿಯ ಬಗ್ಗೆ ಎಲ್ಲ ವಿಷಯ ತಿಳಿದುಕೊಂಡು ಏನು ಸಿದ್ದು ಇಷ್ಟು ಬೇಗ ಮದುವೆ ಆಗ್ತೀಯ ಎಂದುಕೊಂಡಿರಲಿಲ್ಲ ಕಣೋ ಎಂದಳು. ಏನು ಮಾಡಲಿ ಶಾಲು ನೀನಂತೂ ನನ್ನ ಪ್ರೀತಿಯನ್ನು ಒಪ್ಪಲಿಲ್ಲ, ಹಾಗೆಂದು ನಾನು ಬೇರೆಯವರ ಹಾಗಿ ಹುಚ್ಚು ಕೆಲಸಗಳನ್ನು ಮಾಡಲು ತಯಾರಿಲ್ಲ. ನನ್ನನ್ನೇ ನಂಬಿಕೊಂಡಿರುವ ಅಪ್ಪ ಅಮ್ಮ ಇದ್ದಾರೆ. ಅವರ ಮನಸಿಗೆ ನೋವುಂಟು ಮಾಡಬಾರದೆಂದು ಅವರು ತೋರಿಸಿದ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ ಅಷ್ಟೇ. ಯಾಕೋ ಸಿದ್ದು ಇಷ್ಟು ಕಟುವಾಗಿ ಮಾತಾಡ್ತಾ ಇದ್ದೀಯ? ಹೌದು ಶಾಲು ಈಗ ನಾನು ಏನು ಮಾತಾಡಿದರೂ ನಿನಗೆ ಹಾಗೆ ಅನಿಸುತ್ತದೆ. ಆದರೆ ನನ್ನ ಮನಸಿನ ಭಾವನೆಗಳನ್ನು ನಾನು ಯಾರ ಬಳಿ ಹೇಳಿಕೊಳ್ಳಲಿ. ಬಿಡು ಆಗಿದ್ದು ಆಯಿತು. ತಪ್ಪದೆ ನಿಶ್ಚಿತಾರ್ಥಕ್ಕೆ ಬಾ. ಅದೂ ನಿನ್ನ ಹುಡುಗನ ನಿಶ್ಚಿತಾರ್ಥಕ್ಕೆ ಬೈ.


ಸಿದ್ದಾರ್ಥನ ಮಾತಿನಿಂದ ಶಾಲಿನಿ ಮತ್ತಷ್ಟು ಕುಗ್ಗಿ ಹೋದಳು. ಛೆ ಎಂಥಹ ಕೆಲಸ ಮಾಡಿಬಿಟ್ಟೆ. ನನ್ನ ಕೈಯಾರೆ ನಾನೇ ಹಾಳು ಮಾಡಿಕೊಂಡೆ. ನಾನೇಕೆ ದ್ವಂದ್ವದಲ್ಲಿ ಇದ್ದೆ? ನನ್ನ ಮನಸು ನನ್ನ ಹಿಡಿತದಲ್ಲಿ ಇರಲಿಲ್ಲವ?  ಅಷ್ಟು ಚಂಚಲವಾಗಿತ್ತ ನನ್ನ ಮನಸು? ಒಂದು ದಿಟ್ಟವಾದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ವಿಫಲವಾಯಿತ ನನ್ನ ಮನಸು? ಅವನಿಗೆ ನನ್ನ ಪ್ರೀತಿಯ ವಿಷಯ ತಿಳಿಸಿ ನನ್ನ ಓದು ಮುಗಿದ ಮೇಲೆ ಮದುವೆ ಆಗೋಣ ಎಂದಿದ್ದರೆ ಅವನು ಬೇಡ ಎನ್ನುತ್ತಿರಲಿಲ್ಲ, ಹಾಗಿದ್ದರೂ ನಾನೇಕೆ ಹಾಗೆ ಮಾತಾಡಿದೆ? ಇನ್ನು ಅಪ್ಪನ ವಿಷಯ, ಅಮ್ಮನಿಗೆ ಹೇಗಿದ್ದರೂ ಸಿದ್ದುವನ್ನು ಕಂಡರೆ ಇಷ್ಟ ಇತ್ತು ಅವಳೇ ಒಪ್ಪಿಸುತ್ತಿದ್ದಳು. ನಾನೇಕೆ ಅದರ ಬಗ್ಗೆ ಯೋಚಿಸಲಿಲ್ಲ ಎಂದು ಮತ್ತೆ ಮತ್ತೆ ಆಲೋಚಿಸಿ ಕಣ್ಣೀರಿಡುತ್ತಿದ್ದಳು.

Rating
No votes yet

Comments