ಶಾಲಿನಿ ಸಿದ್ದಾರ್ಥನ ತಂದೆಯ ತಂಗಿಯ ಮಗಳು ಅಂದರೆ ಅತ್ತೆಯ ಮಗಳು. ಚಿಕ್ಕಂದಿನಲ್ಲಿ ಶಾಲಿನಿಯ ಕುಟುಂಬ ಚೆನ್ನೈ ನಲ್ಲಿ ನೆಲೆಸಿದ್ದರೆ ಸಿದ್ದಾರ್ಥನ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಅವರ ಪರಸ್ಪರ ಕುಟುಂಬಗಳ ಭೇಟಿ ಆಗುತ್ತಿದ್ದದ್ದು ವರುಷಕ್ಕೊಮ್ಮೆ ಬರುವ ಬೇಸಿಗೆ ರಜೆಗೋ, ದಸರಾ ರಜೆಗೋ ಇಲ್ಲವಾದರೆ ಯಾವುದಾದರೇ ಶುಭ ಸಮಾರಂಭಗಳು ಇದ್ದಾಗ ಮಾತ್ರ. ಹಾಗಾಗಿ ಸಿದ್ದು ಹಾಗು ಶಾಲುವಿನ ನಡುವೆ ಹೆಚ್ಚಿನ ಒಡನಾಟ ಇರಲಿಲ್ಲ.
ಶಾಲುವಿನ ತಾಯಿಗೆ ಅಣ್ಣನ ಮೇಲೆ ಅಪಾರ ಪ್ರೀತಿ ಆದ್ದರಿಂದ ತಮ್ಮ ಮಗಳನ್ನು ಅಣ್ಣನ ಮಗನಿಗೆ ಕೊಡಬೇಕೆಂದು ನಿರ್ಧರಿಸಿ ಕೊಂಡಿದ್ದಳು. ಅದೇ ರೀತಿ ಇಬ್ಬರ ಕುಟುಂಬಗಳು ಭೇಟಿ ಆದಾಗ ಸುಮ್ಮನೆ ಸಿದ್ದುವಿಗೆ ನೋಡೋ ಇವಳೇ ಕಣೋ ನಿನ್ನ ಹೆಂಡತಿ ಎಂದು ಅವಳನ್ನು ಅಳಸಬಾರದೆಂದು, ಚೆನ್ನಾಗಿ ನೋಡಿಕೊಳ್ಳಬೇಕೆಂದು ರೇಗಿಸುತ್ತಿದ್ದರು.
ಶಾಲು ಹತ್ತನೇ ತರಗತಿಯಲ್ಲಿ ಇದ್ದಾಗ ಅವರ ತಂದೆಗೆ ಬೆಂಗಳೂರಿಗೆ ವರ್ಗವಾಯಿತು. ಶಾಲುವಿನ ತಾಯಿಗೆ ಹೇಳಲಾರದಷ್ಟು ಸಂತೋಷವಾಗಿತ್ತು. ಅಣ್ಣನ ಮನೆಗೆ ಹತ್ತಿರದಲ್ಲೇ ಮನೆಯನ್ನು ಹುಡುಕಿದ್ದರು. ಶಾಲುವಿನ ಕುಟುಂಬ ಬೆಂಗಳೂರಿಗೆ ವರ್ಗವಾದ ಮೇಲೆ ಎರಡು ಕುಟುಂಬಗಳ ನಡುವೆ ಒಡನಾಟ ಹೆಚ್ಚಾಯಿತು. ಹಾಗೆಯೇ ಸಿದ್ದು ಮತ್ತು ಶಾಲುವಿನ ಗೆಳೆತನವೂ ಗಟ್ಟಿಯಾಗತೊಡಗಿತು. ಆದರೆ ಇವರ ಗೆಳೆತನ ಶಾಲುವಿನ ತಂದೆಗೆ ಹಿಡಿಸುತ್ತಿರಲಿಲ್ಲ. ಕಾರಣ ಏನೆಂದರೆ ಸಿದ್ದು ಓದಿನಲ್ಲಿ ಹಿಂದಿದ್ದ. ಎರಡನೇ ಪೀಯುಸಿಗೆ ಓದನ್ನು ನಿಲ್ಲಿಸಿ ತಂದೆಯ ಪ್ರಿಂಟಿಂಗ್ ಪ್ರೆಸ್ ನೋಡಿಕೊಳ್ಳುತ್ತಿದ್ದ. ಒಳ್ಳೆಯ ಸಂಪಾದನೆಯೇನೋ ಇತ್ತು ಆದರೆ ಓದಿಲ್ಲ ಎಂಬ ಕಾರಣಕ್ಕೆ ಶಾಲುವಿನ ತಂದೆಗೆ ಸಿದ್ದುವನ್ನು ಕಂಡರೆ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಇನ್ನು ಹೆಂಡತಿಯ ಹತ್ತಿರ ಮಾತಾಡಿದರೆ ಸುಮ್ಮನೆ ಅಳುತ್ತಾಳೆ ಇಲ್ಲ ಕೂಗಾಡುತ್ತಾಳೆ ಎಂದು ಸುಮ್ಮನೆ ಇದ್ದರು. ಆದರೂ ಶಾಲುಗೆ ಸೂಕ್ಷ್ಮವಾಗಿ ತಿಳಿಸಿದ್ದರು.
ಮೂರು ವರ್ಷ ಕಳೆಯುವುದರೊಳಗಾಗಿ ಸಿದ್ದು ಬಿಸಿನೆಸ್ ನಲ್ಲಿ ಒಳ್ಳೆಯ ಅಭಿವೃದ್ಧಿ ಕಂಡಿದ್ದ. ಈಗ ಅವನೇ ಸ್ವಂತವಾಗಿ ಪ್ರೆಸ್ ನಡೆಸಬಲ್ಲ ಸಾಮರ್ಥ್ಯ ಹೊ೦ದಿದ್ದ. ಶಾಲು ತನ್ನ ಪೀಯುಸಿ ಮುಗಿದ ಮೇಲೆ ಅವರ ಅಪ್ಪನ ಆಸೆಯಂತೆ ಪ್ರತಿಷ್ಟಿತ ಕಾಲೇಜಿನಲ್ಲಿ MBBS ಮಾಡುತ್ತಿದ್ದಳು.
ಒಂದೊಳ್ಳೆ ಘಳಿಗೆಯಲ್ಲಿ ಶಾಲುಗೆ ಸಿದ್ದುವಿನ ಮೇಲೆ ಪ್ರೀತಿ ಹುಟ್ಟಿತ್ತು. ಆದರೆ ಸಿದ್ದುವಿನ ಬಳಿ ಹೇಗೆ ಹೇಳಬೇಕೋ ಅವಳಿಗೆ ಗೊತ್ತಾಗಲಿಲ್ಲ. ಅಪ್ಪನ ಭಯವೋ ಅಥವಾ ಹೆಣ್ಣೆಂಬ ಸಹಜ ಹಿ೦ಜರಿಕೆಯೋ ಒಟ್ಟಿನಲ್ಲಿ ಸಿದ್ದುವಿನ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಕಾಕತಾಳೀಯ ಎಂಬಂತೆ ಇತ್ತ ಸಿದ್ದುವಿಗೂ ಶಾಲುವಿನ ಮೇಲೆ ಪ್ರೀತಿ ಹುಟ್ಟಿತ್ತು. ಪ್ರೆಸ್ ಕೆಲಸ ಮುಗಿಸಿ ಸೀದಾ ಶಾಲುವನ್ನು ನೋಡಲು ಅವರ ಮನೆಗೆ ಹೋಗುತ್ತಿದ್ದ. ಅವನು ಬಂದೊಡನೆ ಶಾಲುವಿನ ಮುಖದಲ್ಲಿ ಲವಲವಿಕೆ ತು೦ಬಿಕೊಳ್ಳುತ್ತಿತ್ತು. ಆದರೆ ಅವನು ಬರುವ ಹೊತ್ತಿಗೆ ಮನೆಯಲ್ಲಿ ಶಾಲುವಿನ ತಂದೆ ಇರುತ್ತಿದ್ದರಾದ್ದರಿಂದ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ.
ಸಿದ್ದುವಿಗೂ ಶಾಲುವಿನ ತಂದೆಯ ವರ್ತನೆ ಸರಿಹೋಗಲಿಲ್ಲ. ಆದ್ದರಿಂದ ಸಂಜೆಯ ಹೊತ್ತು ಸ್ವಲ್ಪ ಹೊತ್ತು ಬಿಡುವು ಮಾಡಿಕೊಂಡು ಶಾಲು ಬಂದ ಮೇಲೆ ಅವರ ತಂದೆ ಬರುವ ಮುಂಚೆ ಒಮ್ಮೆ ಹೋಗಿ ಬರುತ್ತಿದ್ದ. ಶಾಲುವಿನ ತಾಯಿಗೆ ಮುಂಚಿನಿಂದಲೂ ಸಿದ್ದುವನ್ನು ಕಂಡರೆ ಬಹಳ ಪ್ರೀತಿ ಇದ್ದದ್ದರಿಂದ ಅವರಿಗೆ ಇವನು ಬಂದರೆ ಸಂತೋಷವಾಗುತ್ತಿತ್ತು. ಯಾವಾಗಲಾದರೂ ಶಾಲುಗೆ ಕಾಲೇಜ್ ಇಲ್ಲದಿದ್ದಾಗ ಸಿದ್ದುಗೆ ಫೋನ್ ಮಾಡಿ ಇಬ್ಬರೂ ಆಚೆ ಸುತ್ತಾಡಿ ಬರುತ್ತಿದ್ದರು. ಆದರೆ ಇಬ್ಬರೂ ಪರಸ್ಪರ ತಮ್ಮ ಪ್ರೀತಿಯನ್ನು ವಿನಿಮಯ ಮಾಡಿಕೊಂಡಿರಲಿಲ್ಲ.
ಒಂದು ದಿನ ಸಿದ್ದು ಪ್ರೆಸ್ ಮುಗಿಸಿಕೊಂಡು ಮನೆಗೆ ಬಂದಾಗ ಹಾಲಿನಲ್ಲಿ ಯಾರೋ ಅಪ್ಪನ ಸ್ನೇಹಿತರು ಕುಳಿತು ಮಾತಾಡುತ್ತಿದ್ದರು. ಸಿದ್ದು ಒಮ್ಮೆ ಅವರ ಕಡೆ ನೋಡಿ ನಕ್ಕು ಒಳಗೆ ಹೋಗಿ ಅವರಮ್ಮನ ಬಳಿ ಅಮ್ಮ ಯಾರಮ್ಮ ಅದು ಎಂದು ಕೇಳಿದಾಗ, ಸಿದ್ದು ಅವರು ನಿಮ್ಮ ತಂದೆಯ ಸ್ನೇಹಿತರು. ಅವರ ಮಗಳಿಗೆ ಹುಡುಗನನ್ನು ಹುಡುಕುತ್ತಿದ್ದಾರೆ ಅದಕ್ಕೆ ನಿನ್ನನ್ನು ಕೇಳೋಣ ಎಂದು ಬಂದಿದ್ದಾರೆ. ಇಲ್ಲಿ ನೋಡು ಅವಳ ಫೋಟೋ. ನೋಡಕ್ಕೆ ಲಕ್ಷಣವಾಗಿ ಇದ್ದಾಳೆ. ನೀನು ಹೂ ಎಂದರೆ ಆದಷ್ಟು ಬೇಗ ಮದುವೆ ಮಾಡಿಬಿಡೋಣ. ಏನಂತೀಯ?
ಸಿದ್ದು ಒಮ್ಮೆ ಅವರ ಕೈಲಿದ್ದ ಫೋಟೋ ನೋಡಿ ಅಮ್ಮ ನನಗೆ ಈಗಲೇ ಮದುವೆ ಇಷ್ಟ ಇಲ್ಲ. ಈಗ ತಾನೇ ನಾನು ಕೆಲಸದಲ್ಲಿ ಸ್ವಲ್ಪ ಪಕ್ವವಾಗುತ್ತಿದ್ದೇನೆ. ನನಗೆ ಇನ್ನೊಂದು ವರ್ಷ ಸಮಯ ಬೇಕು. ಅದಾದ ಮೇಲೆ ಅಷ್ಟೇ ಮದುವೆ ವಿಷಯ ಅಲ್ಲಿವರೆಗೂ ಬೇಡಮ್ಮ ಎಂದು ತನ್ನ ರೂಮಿಗೆ ಹೋಗಿ ಯೋಚಿಸಲು ಶುರು ಮಾಡಿದ. ಇನ್ನು ತಡಮಾಡಿದರೆ ಕೆಲಸ ಕೆಡುತ್ತದೆ ಆದಷ್ಟು ಬೇಗ ಶಾಲು ಬಳಿ ನನ್ನ ಪ್ರೀತಿಯ ವಿಷಯ ಮಾತಾಡಬೇಕು ಎಂದುಕೊಂಡು ನಿರ್ಧರಿಸಿ ಶಾಲು ಗೆ ಫೋನ್ ಮಾಡಿದ. ಶಾಲು ಫೋನ್ ಎತ್ತಲಿಲ್ಲ. ಬಹುಶಃ ಮನೆಯಲ್ಲಿ ಅವರಪ್ಪ ಇದ್ದಾರೆ ಎನಿಸುತ್ತೆ ಅದಕ್ಕೆ ಫೋನ್ ಎತ್ತುತ್ತಿಲ್ಲ. ನಾಳೆ ಅಲ್ಲೇ ಹೋಗಿ ಮಾತಾಡಬೇಕು ಎಂದು ಮಲಗಿದ.
ಮರುದಿನ ಸಂಜೆ ಅವರ ಮನೆಗೆ ಹೋದಾಗ ಶಾಲು ಯಾವುದೋ ಪುಸ್ತಕ ಇಟ್ಟುಕೊಂಡು ಓದುತ್ತಿದ್ದಳು. ಹಾಯ್ ಶಾಲು ಎಲ್ಲಿ ಅತ್ತೆ ಇಲ್ವಾ? ಇಲ್ಲ ಕಣೋ ಅಮ್ಮ ಎಲ್ಲೋ ಹೋಗಿದಾರೆ. ಬಾ ಕೂತ್ಕೋ ನನಗೇನು ತರಲಿಲ್ವಾ ತಿನ್ನಕ್ಕೆ. ಇಲ್ಲ ಶಾಲು ನಾನು ಬೇರೆ ಏನೋ ಯೋಚನೆಯಲ್ಲಿದ್ದೆ ಹಾಗಾಗಿ ಸೀದಾ ಬಂದು ಬಿಟ್ಟೆ. ಹೌದು ನೆನ್ನೆ ರಾತ್ರಿ ಫೋನ್ ಮಾಡಿದ್ದೆ ಯಾಕೆ ಎತ್ತಲಿಲ್ಲ. ಇಲ್ಲ ಕಣೋ ನಮಗೆ ಪರೀಕ್ಷೆಗಳು ನಡೆಯುತ್ತಿದೆ ಹಾಗಾಗಿ ಓದುತ್ತಿದ್ದೆ. ಸಾರಿ ಕಣೋ ಏನೂ ಅನ್ಕೊಬೇಡ. ಪರವಾಗಿಲ್ಲ ಬಿಡು..ಶಾಲು ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಕಣೆ.
ಹೇಳೋ ಏನದು? ಅದೂ...ಶಾಲು ನಿನಗೆ ನನ್ನ ಮೇಲೆ ಏನು ಅಭಿಪ್ರಾಯ ಇದೆ? ತಕ್ಷಣ ಶಾಲು ಮನಸಿನಲ್ಲಿ ತನ್ನ ಪ್ರೀತಿಯ ವಿಷಯ ಹೇಳಿ ಬಿಡೋಣ ಎಂಬ ಆಲೋಚನೆ ಬಂತು...ಆದರೆ ಈಗಲೇ ಹೇಳಿಬಿಟ್ಟರೆ ತನ್ನ ಓದಿನ ಬಗ್ಗೆ ಗಮನ ಕಡಿಮೆ ಆಗಿಬಿಡುತ್ತದೆ. ಒಮ್ಮೆ MBBS ಮುಗಿಯಲಿ ಆಮೇಲೆ ಹೇಳೋಣ ಎಂದುಕೊಂಡು, ಅದೇನೋ ಹೊಸದಾಗಿ ಕೇಳ್ತೀಯ, ನೀನು ನನ್ನ ಬೆಸ್ಟ್ ಫ್ರೆಂಡ್ ಕಣೋ. ನೀನು ತುಂಬಾ ಒಳ್ಳೆಯವನು..ಆಮೇಲೆ...ಅಷ್ಟೇ ಕಣೋ...ಅದು ಸರಿ ಈಗ್ಯಾಕೆ ಅದನ್ನು ಕೇಳಿದೆ? ಏನಿಲ್ಲ ಶಾಲು ಸುಮ್ಮನೆ ಕೇಳಬೇಕು ಎನಿಸಿತು ಕೇಳಿದೆ ಅಷ್ಟೇ....ಅಷ್ಟೆನ ಬೇರೆ ಏನು ಇಲ್ವಾ...ಇಲ್ಲ ಕಣೋ ಅಷ್ಟೇ ಎಂದು ಒಂದು ತುಂಟ ನಗೆ ಬೀರಿ ಮತ್ತೆ ಓದುವುದರಲ್ಲಿ ಮಗ್ನಳಾದಳು.
ಸಿದ್ದುಗೆ ಶಾಲುವಿನ ಉತ್ತರ ಕೇಳಿ ಯಾಕೋ ಮನಸು ಚುರ್ ಎಂದಿತು. ಸರಿ ಶಾಲು ನಾನು ಹೊರಡುತ್ತೀನಿ ಎಂದು ಎದ್ದು ನಿ೦ತ. ಯಾಕೋ ಇಷ್ಟು ಬೇಗ ಹೊರಡುತ್ತಿದ್ದೀಯ? ಇನ್ನೇನು ಅಮ್ಮ ಬರುತ್ತಾರೆ ಕಾಫಿ ಕುಡಿದುಕೊಂಡು ಹೋಗು ಎಂದಳು. ಬೇಡ ಶಾಲು ನನಗೆ ಸ್ವಲ್ಪ ಕೆಲಸ ಇದೆ ಭಾರವಾದ ಮನಸಿನಿಂದ ಆಚೆ ಬಂದ. ಛೇ ಶಾಲುವಿನ ಮನಸಿನಲ್ಲಿ ನಾನೊಬ್ಬ ಒಳ್ಳೆಯ ಸ್ನೇಹಿತ ಎಂಬ ಭಾವನೆ ಬಿಟ್ಟರೆ ಬೇರೆ ಯಾವ ಭಾವನೆಯೂ ಇಲ್ಲ. ಈಗ ಏನು ಮಾಡುವುದು...ಹೇಗಿದ್ದರೂ ಮನೆಯಲ್ಲಿ ಒಂದು ವರುಷ ಸಮಯ ಕೇಳಿದ್ದೇನೆ. ಅಷ್ಟರಲ್ಲಿ ಶಾಲುವಿನ ಬಳಿ ಮತ್ತೊಮ್ಮೆ ನನ್ನ ಪ್ರೇಮದ ಪ್ರಸ್ತಾಪ ಮಾಡೋದು. ಆಗಲೂ ಅವಳಿಂದ ಇದೆ ಉತ್ತರ ಬಂದರೆ ಮನೆಯಲ್ಲಿ ಅಪ್ಪ ನೋಡಿದ ಹುಡುಗಿಯನ್ನು ಮದುವೆ ಆಗುವುದು ಅಷ್ಟೇ ಎಂದು ನಿರ್ಧರಿಸಿದ
Comments
ಉ: ಋಣಾನುಬಂಧ - ಭಾಗ 2
In reply to ಉ: ಋಣಾನುಬಂಧ - ಭಾಗ 2 by makara
ಉ: ಋಣಾನುಬಂಧ - ಭಾಗ 2