ಋತುಗಾನ

ಋತುಗಾನ

ಚಿತ್ರ

**ಋತುಗಾನ**
------------------
      ಪ್ರಶ್ನೆಯಾಗಿಯೇ ಉಳಿದ ಅವಳ ಆಂತರ್ಯದ ಭಾವಗಳ ಬೆಸುಗೆಯು ಅವಳಿಗರಿವಿಲ್ಲದೆಯೇ ಕಳೆದ ದಿನಗಳ‌ ಎಣಿಕೆಯೊಳಗೆ ಕುಸಿದು ಹೋದ ಬದುಕು ...ಅವಳೊಳಗಿನ ನೋವನ್ನ  ಮರೆಮಾಚಿ ಕಾಣದ ಸುಳಿಯತ್ತ ಸೆಳೆಯುತಿಹ ಪಯಣದ ಪದಗಳ ಜೋಡಣೆ ಈ ಬರಹ....

      ಅವಳು ಬಾಲ್ಯವ ಬಯಸಿದವಳು, ತಾನೇ ಚೆಂದ ಎಂದು ಕುಣಿದಾಡಿದವಳು. ಬೆಳೆದಾಗ ಬದುಕು ಚಿಂತೆ ಎಂದು ನೊಂದವಳು. ಅವಳಿಗರಿವಿಲ್ಲದೆಯೇ ನೆನಪಾಗಿ ಉಳಿವಂತೆ ಕಳೆದು ಹೋದದ್ದು ಬಾಲ್ಯ. ಯಾರಲ್ಲಿಯೂ ಬೇಡಿಕೊಳ್ಳದೇ ಧುತ್ ಎಂದು ಬಂದು ನಿಂತದ್ದು ಯವ್ವನ. ಎರಡರ ನಡುವಿನ ಗೊಂದಲದ ಗೂಡು ಬಾಳೆಂಬ ನಿರರ್ಥಕ ಪಯಣ‌.
         ದಿನದಿನವೂ ರೋಮಾಂಚಕವಾಗುತ್ತ ಪ್ರತಿ ನಿಮಿಷದಿ ಮಿಡಿವ ಭಾವಗಳಲ್ಲಿ ಹಿಗ್ಗಿದ ದೇಹ ಕಂಡು ಬೆರಗಾದಳು. ಎಲ್ಲರ ಕಣ್ಣು ಕುಕ್ಕುವಂತೆ ಬಿರಿದ ಮೌಂಸ ಖಂಡಗಳ ನಡುವೆ ಸೋತು ನಿಂತಳು. ಕೆಂಪಾಗಿ ಮೂಡಿದ ಮೊಡವೆಗಳು ಮುಖದ ಸೌಜನ್ಯವ ಕೆಡವಿದಾಗ ಧಿಕ್ಕಾರದಿ ಭಾವಾವೇಶಕ್ಕೆ ಒಳಗಾದವಳು.
         ಕಾಣದೆ ಸವೆದ ದಿನಗಳಲ್ಲಿ ಮಾವಿನ ಹಣ್ಣಂತೆ ಮಾಗಿದ ಅವಳ ದೇಹಕ್ಕೆ ಪರರ ಬಾಯಲ್ಲಿ 'ದೊಡ್ಡವಳಾದಳು' ಎಂದು ಹೆಸರಿಟ್ಟಿದ್ದ ಕಂಡು ಬೆಚ್ಚಿದಳು, ಬೆವರಿದಳು. ಅದೇ ದಿನ , ಅದೇ ಕ್ಷಣ ಆರಂಭವಾದದ್ದು ಅವಳ ' ಋತುಗಾನ'.
        ಅಲ್ಲಿಗೆ ಕಸಿದು ಹೋಯ್ತು ಅವಳದೆಲ್ಲ ಸ್ವಾತಂತ್ರ್ಯ. ಕೂತರೂ, ನಿಂತರೂ, ಆಟವಾಡಲೂ ಹೋದರೂ, ಊರು ಸುತ್ತಿದರೂ ಎಲ್ಲದಕ್ಕೂ ಪ್ರಶ್ನೆಗಳ ಸುರಿಮಳೆ...ಅವಳೋ ನಿರುತ್ತರೆ. ಮೌನಿಯಾಗುವಳು ಋತುಮತಿಯಾದ ನಂತರ ಅವಳು.
         ಇಷ್ಟವೋ, ಕಷ್ಟವೋ ಓದಿದ್ದಾಯ್ತು. ಬೇಕೋ, ಬೇಡವೋ ಮನೆಕೆಲಸಕ್ಜೆ ಅಣಿಯಾದದ್ದಾಯ್ತು. ನಾಲಿಗೆಯ ರುಚಿ ತಣಿಸಲು ಅಡುಗೆ ಕಲಿತದ್ದಾಯ್ತು. ತನ್ನ ಗೂಡನೂ ಕಟ್ಟುವ ಕಾಲ ಅವಳ ಕಾಲಡಿಗೆ ಬಂದು ನಿಂತು  ' ಮದುವೆ' ಎಂಬ ಮೂರಕ್ಷರದ ಬಾಗಿಲು ತೆರೆದು ಅವಳ ಬರುವಿಕೆಗೆ ಹೂಹಾಸಿ ನಿಂತಾಯ್ತು...
       ಏಣಿಸದೇ ದಿನಗಳ ಕಳೆಯುತಿರಲು ಆಗೇ ಹೋಯ್ತು ಮದುವೆ‌. ಅವಳೊಳಗೂ ಇಹರು ರತಿ-ಕಾಮ ದೇವರು. ಪ್ರೀತಿ- ಪ್ರೇಮ , ಪ್ರಣಯಗಳು ನಾವು ನೋಡುವ ಸಿನಿಮಾಗಳಲ್ಲಿ ಮೂರು ತಾಸು ಮಾತ್ರ ...ಮುಗಿದ ಮೇಲೆ ನಿಜವಾದ ಬಣ್ಣದಾಟ ಎಂದು ನಕ್ಕಳು ಒಳಗೊಳಗೆ. ಅವಳ ನಗುವಿನ‌ಮರ್ಮವ ಅರಿಯದವನಾಗಿದ್ದ ಅವನು.
       ಅವಳ ಏಣಿಕೆ ತಪ್ಪಿತ್ತು. ಮೂರು ನಿಮಿಷದೊಳಗೆ ಮುಗಿದು ಹೋಗುವ ಅವನ ಪ್ರೀತಿ ಕಂಡು ಕಂಗಾಲಾದಳು. ಮದುವೆಯ ಸುಖವಿಷ್ಟೇ, ಪ್ರೀತಿಯ ಪರಮಾರ್ಥವಿಷ್ಟೇ ಎಂದು ಮನದೊಳಗೆ ಹಲುಬಿದಳು. ಹೆಣ್ಣಿಗೆ ಕಾಮ- ಪ್ರೇಮ ಎರಡೂ ದೇಹದ ತುಂಬೆಲ್ಲಾ ಇರುವಂತೆ ತಣಿಸಿದರೂ ತಣಿಯದಂತೆ. ಗಂಡಿನ ಕಾಮ ಕಾರ್ಯ ಸಿದ್ಧಿಯಂತೆ. ಮೂರು - ಆರರ ಮಧ್ಯೆ ಅಡಗಿಹುದಂತೆ ನಿಜವೇನೋ.....??? ಇವಳ ಬದುಕ ಕಂಡರೆ ತಿಳಿವುದಂತೆ.
       ವರ್ಷಗಳಿಂದ ಅವನಿಗಾಗಿ ರಂಗೋಲಿ ಬರೆದಳು. ಕಂಡು ಕಾಣದಂತಿದ್ದ. ಅದರ ಮೇಲೆಯೇ ನಡೆದ,‌ತನ್ನ‌ ಬೈಕ್ ಚಲಿಸಿದ, ಎಂದೂ ಅವಳ ಕಲೆಯ ಕಣ್ಣೆತ್ತಿ ನೋಡಲಿಲ್ಲ. ಅದ ಕಂಡು ಅವಳ ಎದೆ ಘಾಸಿಗೊಂಡರು ಸುಮ್ಮನಾದಳು. ಅಡುಗೆ ಮಾಡಿ ನಾಯಿಯಂತೆ ಕಾದಳು. ಊಟ ಮಾಡದೇ ಬಳಲಿದಳು. ಅಷ್ಟೊತ್ತು ಕಾದವಳಿಗೆ 'ಪಾಪ' ಎನ್ನದ ಅವನ ಕಂಡು ಕಣ್ಣೀರಿಟ್ಟಳು‌.
           ಈ ಗಂಡಸಿಗೆ ಮನಸ್ಸಿಲ್ಲವೇ, ಭಾವನೆಗಳಿಲ್ಲವೇ? ಅವನೇಕೆ ತನ್ನತನವ ತೋರಲಾರ ? ತನ್ನೆದೆಯ ತೆರೆದುಕೊಳ್ಳಲಾರ? ....ಕತ್ತಲಲ್ಲಿ ಬೆತ್ತಲಾಗುವ ಗಂಡಿಗೆ ಹಗಲಲ್ಲಿ ತನ್ನ ಮನಸ್ಸು ತರೆದಿಡಲು ನಾಚಿಕೆಯೇ?? ತನಗಾಗಿ ಹಗಲಿರುಳು ದುಡಿವ ಹೆಣ್ಣಿನ  ಮುಟ್ಟಿನಲ್ಲಿ ಹೇಸಿಗೆಯೇ? ತನ್ನ ವಂಶ ಬೆಳಗುವವಳ ' ಮೂರು ದಿನದ' ಬದುಕಿಗೆ ಸ್ಪಂದಿಸಲಾರನೇ??
           ಎಲ್ಲ ಗಂಡಸರೂ ಹೀಗೆಯೇ? ಅಥವಾ ತನ್ನ ಗಂಡ ಮಾತ್ರ ಹೀಗೆಯೇ ಎಂದು ಅವಳ ಮೇಲೆಯೇ ಅವಳಿಗೆ ಮುನಿಸು.
      ಪ್ರೀತಿಸಲು ದುಡ್ಡು ಬೇಕಿಲ್ಲ. ಓಲೈಸಿ ಮುದ್ದಿಸಲು ಟ್ಯಾಕ್ಸ್ ಕಟ್ಟ ಬೇಕಿಲ್ಲ. ಕಷ್ಟದ ' ಋತುಗಾನ' ಕ್ಕೆ ಸ್ಪಂದಿಸಲು ಯಾವ ಬಡ್ಡಿಯನ್ನೂ ನೀಡಬೇಕಿಲ್ಲ. ಹೀಗೆ ದಿನೇ ದೀನೇ ಕುಗ್ಗತಿರುವ ಯವ್ವನ ಅವಳದೊಬ್ಬಳದೇನಾ?? ಚಿಂತೆಯ ಚಿತೆ ಅವಳದಾಗಿತ್ತು.
       ಅವಳ ಬಾಲ್ಯ, ಯವ್ವನ , ಭವಿಷ್ಯತ್ತುಗಳ ನಡುವೆಯೂ ಅವನ ಆಸರೆಯಿದ್ದೂ ಇಲ್ಲದಂತಿರುವ ಜಗದೊಳಗೆ ಉತ್ತರಗಳಿಲ್ಲದ ಪ್ರಶ್ನೆಗಳೇ. ಅಂತ ಲೋಕದೊಳಗೆ ಕಾಲಚಕ್ರದಡಿಯಲ್ಲಿ ನಡೆದಿತ್ತು ಅವಳ        'ಋತುಗಾನ' ಮಾಸದೇ ಮಾಸಿಕವಾಗಿ ಅವಳನ್ನ ಮಾನಸಿಕವಾಗಿ ಕುಗ್ಗಿಸುತ್ತ.
       ಅವಳ ಆಂತರ್ಯವಿಷ್ಟೇ,
ಅವನು ಅವಳ ಮುಂಗುರುಳ ನೇವರಿಸಬೇಕು
ಬಾಗಿದ ನೆನ್ನ ಮೇಲೆ ಚಿತ್ತಾರ ಬಿಡಿಸಬೇಕು
ಬಳಕುವ ಸೊಂಟವ ನೇವರಿಸಿ ಕಾಡಬೇಕು
ಮುಟ್ಟೊಳಗೆ ಅವನು ಅಮ್ಮನಾಗಬೇಕು
ಮುಟ್ಟಿದರೆ ಅವನು ಅವಳು ನುಲಿಯಬೇಕು
ಮುಖದ ಮುಂದೆ ಸದಾ ಕನ್ನಡಿಯಂತಿರಬೇಕು
ತುಟಿಯ ದಾಹ ತಿದ್ದಿ ತಿದ್ದಿ ತೀರಿಸಬೇಕು
ಎದೆಯ ಅಹಂಕಾರ ಮುರಿಯಬೇಕು
ಅವ ನನ್ನಾವರಿಸಲಿ, ಮಾತಿನಲಿ ಮೈಮರೆಸಲಿ
ಎಂಬ ಅವಳ ಸ್ವಯಂ ರಚಿತ ಸಾಲುಗಳಲ್ಲಿ ಅವಳೊಬ್ಬಳೇ ನಿಂತಿದ್ದಳು.
       ವರ್ಷಗಳಲ್ಲಿನ ಹನ್ನೆರಡು ಋತುಗಳು ನೆಲೆಯಿಲ್ಲದೇ ಓಡುತಿರುವಾಗ ಅವಳ 'ಋತು'ಗಳು ಅವಳಿಗರಿವಿಲ್ಲದೇ ಹೊಸಗಾನವ ಹಾಡುತಿದ್ದವು.....

Rating
Average: 4 (1 vote)