ಋತುಗಾನ

ಋತುಗಾನ

ಋತು ಚಕ್ರ ಒಂದು ರೀತಿಯ ರಾಕೆಟ್ ಸೈನ್ಸ್ ಕೆಲವರಿಗೆ. ಒಬ್ಬಗಂಡು ಋತು ಚಕ್ರದ ಬಗ್ಗೆ ಬರೆದಾಗ ಸಹಜವಾಗಿಯೇ ಹುಬ್ಬುಗಳು ಮೇಲೇರುತ್ತವೆ. ಏಕೆಂದರೆ ಇದು ಪುರುಷರ domain ಅಲ್ಲ. writer’s block ನಿಂದ ಹೊರಬರಲು ವಿಷಯವೊಂದನ್ನು ಹುಡುಕುತ್ತಿದ್ದಾಗ ಹೊಳೆಯಿತೀ ವಿಷಯ, ಹಳೇ ಲಾಪ್ ಟಾಪ್ ಬದಲಿಸಿ ಮೊನ್ನೆ ತಾನೇ ಕೊಂಡ ಹೊಸ ಅತಿ ತೆಳುವಾದ “ಅಲ್ಟ್ರಾ ಬುಕ್’ ಲಾಪ್ ಟಾಪ್ ನಿಂದ ಹೊರಹೊಮ್ಮಿದ ಲೇಖನ ಓದಿ.
ನಾನು ಬೆಂಗಳೂರಿನಲ್ಲಿ ಮೆಡಿಕಲ್ ಟ್ರಾನ್ಸ್ ಕ್ರಿಪ್ಶನ್ ಮಾಡುತ್ತಿರುವಾಗ ಟ್ರೈನರ್ ಒಬ್ಬರು ಅಮೇರಿಕನ್ಮಹಿಳೆ. ಆಕೆ human anatomy ವಿಷಯ ಕಲಿಸುವಾಗ ಋತು ಚಕ್ರದ ವಿಷಯ ಬಂತು. ಕೆಣಕಲೆಂದೇ ಏನೋಹುಡುಗರನ್ನು ಒಬ್ಬೊಬ್ಬರಾಗಿ ಎಬ್ಬಿಸಿ you know how long menstruation lasts ಎಂದು ಕೇಳಿದಾಗ ಇಡೀ ತರಗತಿಯೇನಗೆಗಡಲಲ್ಲಿ ಮುಳುಗುವ ಉತ್ತರ ಬರುತ್ತಿತ್ತು. ಒಬ್ಬ ಹತ್ತು ದಿನ ಎಂದರೆ, ಮತ್ತೊಬ್ಬ ಇನ್ನೂಮುಂದಕ್ಕೆ ಹೋಗಿ ಆರು ತಿಂಗಳು ಎಂದು ಬಿಟ್ಟ. ಆಕೆ ನಗುತ್ತಾ ಮಹಿಳೆಯರ ಈ ಮಾಸಿಕ ವಿದ್ಯಮಾನವನ್ನುವಿವರಿಸಿ knives fly in the kitchen and this is the time guys have to leave town ಎಂದು ಹೇಳಿದಾಗ ಹೆಣ್ಣು ಮಕ್ಕಳು ಗಹಗಹಿಸಿ ನಕ್ಕಿದ್ದರು.

ನಾನು ಚಿಕ್ಕವನಿದ್ದಾಗ ಕೆಲವರು ಹೇಳಿದ್ದು ಕೇಳಿದ್ದೇನೆ, ಅವಳು ದೊಡ್ಡವಳಾದಳು ಎಂದು.ನಿನ್ನೆ ನಾನು ಹೇಗೆ ನೋಡಿದ್ದೇನೋ ಹಾಗೆಯೇ ಇದ್ದಾಳಲ್ಲಾ ಇವಳು, ಮತ್ತೆ ದೊಡ್ಡವಳಾದಳು ಎಂದರೆಏನರ್ಥ ಎನ್ನುವ ನನ್ನ ಹುಡುಗು ಜಿಜ್ಞಾಸೆಗೆ ಉತ್ತರ ಸಿಕ್ಕಿರಲಿಲ್ಲ. ಈಗಿನ ಥರ ಉತ್ತರ ಕೊಡುವಷ್ಟು ಬೆಳೆದಿರಲಿಲ್ಲ ಸಮಾಜ ಆಗ.

ಸೌದಿ ಅರೇಬಿಯಕ್ಕೆ ಬಂದಾಗ ಇಲ್ಲಿ ಕಾಣುವುದೆಲ್ಲಾ ಹೊಸತು ನನಗೆ. ಒಮ್ಮೆ ಒಂದು ಮನೆಯ ಮೇಲೆಸೌದಿ ದೇಶದ ಧ್ವಜ ಹಾರಿದ್ದನ್ನು ಕಂಡೆ. ನಮ್ಮ ದೇಶದಲ್ಲಿ ಮನೆಗಳ ಮೇಲೆ, ಅಲ್ಲಿ ಇಲ್ಲಿ ಎಂದು ಬಾವುಟಹಾರಿಸುವ ಹಾಗಿಲ್ಲವಲ್ಲ. ಹಾಗಾಗಿ ಕುತೂಹಲದಿಂದ ಒಬ್ಬ ಶ್ರೀಲಂಕೆಯ ವ್ಯಕ್ತಿಯ ಹತ್ತಿರ ಕೇಳಿದಾಗ ಆತಹೇಳಿದ ಆ ಮನೆಯ ಹುಡುಗಿ ವಯಸ್ಸಿಗೆ ಬಂದಿದ್ದಾಳೆ, ಅದನ್ನು ತಿಳಿಸುವುವ ಉದ್ದೇಶದಿಂದ ಬಾವುಟಹಾರಿಸುತ್ತಾರೆ ಎಂದಿದ್ದ ಕುಚೋದ್ಯಭರಿತ ಹಾಸ್ಯದ ಯಾವುದೇ ಸುಳಿವನ್ನೂ ಕೊಡದೆ. ನಮ್ಮ ದೇಶದಲ್ಲಿಕೆಲವರು ಮನೆಯ ಜಗುಲಿಯ ಸುತ್ತ ಒಂದು ಬೆಡ್ ಶೀಟ್ ಮರೆ ಮಾಡಿ ಅಲ್ಲಿ ಹುಡಗಿಯನ್ನು ಕೂರಿಸುವುದನ್ನುನಾನು ನೋಡಿದ್ದೇನೆ. ಇನ್ನೂ ಒಂದು ಸಮುದಾಯದವರು ಚಪ್ಪರ ಹಾಕಿ ಹುಡುಗಿ ಸಿಂಗರಿಸಿ ಯನ್ನು ಕೂರಿಸುತ್ತಾರೆ. ಈಗ ಇದೆಲ್ಲಾ ಬದಲಾಗಿರಬೇಕು. ಇದು ಬದಲಾಗಿದೆಯೇ, ಇಲ್ಲವೇ ಎಂದು ಗಮನಿಸಲೇ ಬೇಕಾದ, ಕುತೂಹಲ ಭರಿತ ವಿಷಯವೂ ಅಲ್ಲಅನ್ನಿ ಇದು. ಏನೇ ಇರಲಿ, ಮಹಿಳೆಯರಿಗೆ ಆಗುವ ಈ ಜೈವಿಕ ಬದಲಾವಣೆ ವಿವಿಧ ಸಮಾಜಗಳಲ್ಲಿ ವಿವಿಧರೂಪಗಳಲ್ಲಿ ಕಾಣಿಸುತ್ತದೆ. ಕ್ರೈಸ್ತರ ಹಳೆ ಒಡಂಬಡಿಕೆ ಪ್ರಕಾರ ಋತು ಚಕ್ರ ಅರ್ಧ ಸಾವಿನಂತೆ.ಪವಿತ್ರ ವಾದುದನ್ನು ಅಪವಿತ್ರ ಗೊಳಿಸುತ್ತದೆ ಋತು ಚಕ್ರ ಎನ್ನುವ ಅಭಿಪ್ರಾಯದೊಂದಿಗೆ ಅದು ಒಂದುಶಾಪ ಎನ್ನುವ ಅಭಿಪ್ರಾಯ ಹಳೆ ಒಡಂಬಡಿಕೆ ಕಾಲದ ಜನರದ್ದಾಗಿತ್ತು.
ಇಥಿಯೋಪಿಯಾ ದೇಶದಲ್ಲಿ ಈ ಅವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಅದಕ್ಕೆಂದೇ ನಿರ್ಮಿಸಲಾಗಿದ್ದಗುಡಿಸಿಲಿಗೆ ಹೋಗಿ ವಾಸವಾಗುವ ಪದ್ಧತಿ ಇದೆಯಂತೆ.
ದೇವತೆಯರನ್ನು ಆರಾಧಿಸುವ ಪ್ರಾಚೀನ ಸಮಾಜಗಳಲ್ಲಿ ಋತು ಚಕ್ರ ಒಂದು ಪವಿತ್ರ ಕ್ರಿಯೆ. ಹಾಗೂತಿಂಗಳಿನ ಆ ಅವಧಿಯಲ್ಲಿ ಮಹಿಳೆ ಹೆಚ್ಚು ಬಲಶಾಲೀ ಎನ್ನುವ ಅಭಿಪ್ರಾಯವೂ ಇತ್ತು. ಅಷ್ಟೇ ಅಲ್ಲ ಈಅವಧಿಯಲ್ಲಿ ಮಹಿಳೆ ಗದ್ದೆ ಹೊಲದಲ್ಲಿ ಓಡಾಡಿದರೆ ಬೆಳೆ ಚೆನ್ನಾಗಿ ಆಗುವ ನಂಬಿಕೆ ಇತ್ತಂತೆ
ಇಸ್ಲಾಮಿನಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ, ಈಸಮಯದಲ್ಲಿ ಮಹಿಳೆ ನಮಾಜ್ ನಿರ್ವಹಿಸುವಂತಿಲ್ಲ , ಪವಿತ್ರ ಕುರಾನ್ ಪಠಿಸುವಂತಿಲ್ಲ, ವೃತಾಚಾರಣೆಪಾಲಿಸುವಂತಿಲ್ಲ. ಒಮ್ಮೆ ಪ್ರವಾದಿಗಳು ತಮ್ಮ ಪತ್ನಿಗೆ ನೀರು ಕೊಡೆಂದು ಕೇಳಿದಾಗ, ನಾನು ಋತುಮತಿಯಾಗಿದ್ದೇನೆ ಎನ್ನುವ ಉತ್ತರ ಬಂತು. ಆಗ ಪ್ರವಾದಿಗಳು ಕೇಳಿದರು, ಅದರಲ್ಲೇನು ತಪ್ಪು? ಋತು ಚಕ್ರಆಗೋದು ಬಿಡೋದು ನಿನ್ನ ಕೈಯಲ್ಲಿಲ್ಲವಲ್ಲ ಎಂದು ಉತ್ತರಿಸಿದ್ದರು. ಅಂದರೆ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ದೈನಂದಿನ ಚಟುವಟಿಕೆ ಸಾಂಗವಾಗಿ ನಡೆಸಬಹುದು ಎಂದಾಗಿತ್ತು ಪ್ರವಾದಿಗಳ ಅಭಿಪ್ರಾಯ.
ಸ್ಟೀವ್ ಜಾಬ್ಸ್ ರವರ ಆಪಲ್ ಕಂಪೆನಿ ಮೊದಲ ಬಾರಿಗೆ i pad ತಯಾರಿಸಿ ಅದಕ್ಕೆ ಹೆಸರೇನೆಂದುಇಡಬೇಕು ಎಂದು i pad ಒಳಗೊಂಡು ಒಂದೆರಡು ಹೆಸರುಗಳನ್ನು ಕೊಟ್ಟು ಜನರ ಅಭಿಪ್ರಾಯ ನೋಡಿದಾಗ ಬಹಳ ಜನಹೇಳಿದ್ದು i pad ಹೆಸರು ಬೇಡ, ಇದು ಸ್ತ್ರೀಯರ ಋತುಚಕ್ರವನ್ನು ನೆನಪಿಸುತ್ತದೆ, kotex pad, 'always ' pad  ಗಳ ತೆರನಾದ ಹೆಸರು ಬೇಡ  ಥರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೂ ಆಪಲ್ ಸಂಸ್ಥೆ ಇವುಗಳನ್ನು ಕಿವಿಗೆಹಾಕಿ ಕೊಳ್ಳದೆ ವಿಶ್ವಕ್ಕೆ ನೀಡಿದರು i pad . ಎಲ್ಲರೊಳಗೊಂದಾಗು ಎನ್ನುವ ಮಾತಿನಲ್ಲಿ ಆಪಲ್ ಗೆ ನಂಬಿಕೆಯಿಲ್ಲ. ಸ್ವಲ್ಪ ಸರಿದು ನಿಂತು ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಕಾಲಿಡುತ್ತಾರೆ ಆಪಲ್ ಜನ. ಹಾಗಾಗಿ ಅಷ್ಟೊಂದು ಯಶಸ್ವಿ ಈ ಕಂಪೆನಿ.  

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಬಂದು ಕೇಳಿದಳು, ಬೆಳಗ್ಗಿನಿಂದ ಲಾಪ್ ಟಾಪ್ ಅನ್ನ ಅಂಟಿಸಿ ಕೊಂಡು ಕೂತಿದ್ದೀರಾ (ಶುಕ್ರವಾರ ರಜೆ ಯಾದ್ದರಿಂದ), ಸಾಕು ಏಳಿ ಈಗ  ಎಂದಾಗ ನಾನು, ತಡಿಯೇ ಋತು ಚಕ್ರದ ಬಗ್ಗೆ ಬರೆಯುತ್ತಿದ್ದೇನೆ ಎಂದಿದ್ದೇ ತಡ, ಓಹೋ, ನಿಮಗೂ ಶುರು ಆಗ್ಬಿಡ್ತಾ ಅದು...ಅಲ್ಲಾ ಮತ್ತೆ... ಎಂದು ಸಿಡುಕಿಮರೆಯಾದಳು.

 

Rating
No votes yet

Comments